varthabharthi


ಕಾಲಂ 9

‘ಜೈ ಭೀಮ್’ ಮತ್ತು ಮಧ್ಯಮವರ್ಗದ ಎಡ-ಬಲಗಳು

ವಾರ್ತಾ ಭಾರತಿ : 10 Nov, 2021
ಶಿವಸುಂದರ್

ಜಗತ್ತಿನ ಇತಿಹಾಸದಲ್ಲಿ ಫ್ಯಾಶಿಸಂ ಅರ್ಥಾತ್ ದಮನಿತ ಜಾತಿ-ವರ್ಗ-ಲಿಂಗಗಳ ಮೇಲಿನ ಕ್ರೂರ ದಮನಗಳು ಸರ್ವ ಮಾನ್ಯಗೊಳ್ಳುವುದು ಮಧ್ಯಮವರ್ಗದ ರುಜುವಿನೊಂದಿಗೆ..ಅದು ಸಕ್ರಿಯವಾಗಿ ಬಲಕ್ಕೆ ವಾಲುವುದರೊಂದಿಗೆ ಮತ್ತು ತಮ್ಮ ಮೌನಸಮ್ಮತಿಯನ್ನು ಬಲಕ್ಕೆ ಧಾರೆಯೆರೆಯುವುದರೊಂದಿಗೆ.. ಅದಕ್ಕೆ ಪ್ರತಿಯಾಗಿ ಪ್ರಜ್ಞಾವಂತ ಮಧ್ಯಮ ವರ್ಗ ಹೋರಾಟಗಳಲ್ಲಿ, ಬೀದಿಗಳಲ್ಲಿ, ನೈಜ ರಣಕಣಗಳಲ್ಲಿ ದಮನಿತ ಜನರೊಡನೆ ನಿಂತಾಗ ಇತಿಹಾಸದ ಹೊಸಪುಟಗಳು ತೆರೆದುಕೊಂಡಿವೆ. ‘ಜೈಭೀಮ್’ ಚಿತ್ರದ ಓರೆಕೋರೆಗಳ ಬಗ್ಗೆ ಹಾಗೂ ಅದರ ಮಿತಿಗಳ ಬಗೆಗಿನ ವಿಮರ್ಶೆಗಳೊಂದಿಗೆ ಈ ತುರ್ತು ಪ್ರಶ್ನೆಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲ, ಬೀದಿಗಳಲ್ಲಿ ಉತ್ತರಗಳನ್ನು ಹುಡುಕಬೇಕಿದೆ..


‘ಜೈ ಭೀಮ್’ ಸಿನೆಮಾ ಬಗ್ಗೆ ಮಾಧ್ಯಮಗಳಲ್ಲಿ ಅದರಲ್ಲೂ ವಿಶೇಷವಾಗಿ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ವ್ಯಾಪಕವಾಗಿ ಮತ್ತು ಹಲವಾರು ದೃಷ್ಟಿಕೋನಗಳಲ್ಲಿ ಚರ್ಚೆಯಾಗುತ್ತಿದೆ. ಕೆಲವೊಮ್ಮೆ ಈ ಚರ್ಚೆಗಳು ಸಿಪ್ಪೆಯ ಜೊತೆ ಹಣ್ಣನ್ನೂ ಎಸೆದುಬಿಡುವ ಅತಿರೇಕಗಳನ್ನು ತೋರುತ್ತಿದ್ದರೂ ಒಟ್ಟಾರೆಯಾಗಿ ಈ ಸಿನೆಮಾದ ಬಗ್ಗೆ ಅಪರೂಪದ ಮನ್ನಣೆ ವ್ಯಕ್ತವಾಗಿದೆ. ಅದಕ್ಕೆ ಬಹುಮುಖ್ಯ ಕಾರಣ ಬಹಳ ದಿನಗಳ ನಂತರ ಒಂದು ಕಮರ್ಷಿಯಲ್ ಚೌಕಟ್ಟಿನಲ್ಲೂ, ಕಮರ್ಷಿಯಲ್ ಮಿತಿಗಳಲ್ಲೂ ಈ ಸಿನೆಮಾ ‘ಜನಗಣಮನ’ದಲ್ಲಿ ದಾಖಲಾಗದ ಅಲಕ್ಷಿತ-ದಮನಿತ ಭಾರತೀಯರ ಬದುಕಿನ ಕಥೆಯನ್ನು ಮತ್ತು ಆಳುವವರ್ಗಗಳು ಬಚ್ಚಿಡ ಬಯಸುವ ಭಾರತೀಯ ಪ್ರಜಾತಂತ್ರದ ಮತ್ತೊಂದು ಕರಾಳ ಮುಖವನ್ನು ಪರಿಣಾಮಕಾರಿಯಾಗಿ ತೆರೆದಿಡುವುದರಲ್ಲಿ ಸಫಲವಾಗಿದೆ. ಈ ಪ್ರಕ್ರಿಯೆಯಲ್ಲಿ ಈ ಸಿನೆಮಾವು ಸ್ಥಾಪಿತ ಕಮರ್ಷಿಯಲ್ ವ್ಯಾಕರಣವನ್ನೇ ಬಳಸಿಕೊಂಡಿದೆ ಎನ್ನುವುದೂ ನಿಜವೇ. ಆದರೂ ಬ್ರಾಹ್ಮಣೀಯ ಸಾಂಸ್ಕೃತಿಕ ಅಭಿರುಚಿಗಳು, ಹುಸಿ ಮೇಲರಿಮೆಯ ಹುಸಿ ಹಿಂಸಾವಾದಿ ರಾಷ್ಟ್ರೀಯ ಹೂರಣಗಳ ಸಿನೆಮಾಗಳನ್ನು ನೋಡಿ, ನೋಡಿ ಬ್ರೈನ್‌ವಾಷ್ ಆಗಿದ್ದ ಭಾರತೀಯ ಪ್ರೇಕ್ಷಕನಿಗೆ ಈ ಸಿನೆಮಾ ಕೆನ್ನೆಗೆ ಹೊಡೆದು ಸ್ವಲ್ಪಹೊತ್ತಾದರೂ ಎಬ್ಬಿಸಿಕೂರಿಸುತ್ತದೆ. ಇದು 1993ರಲ್ಲಿ ತಮಿಳುನಾಡಿನಲ್ಲಿ ನಡೆದ ನೈಜ ಕಥೆಯೂ ಆಗಿರುವುದರಿಂದ ಹಾಗೂ ಅದರ ನೈಜಪಾತ್ರಧಾರಿಗಳು ಇನ್ನೂ ಬದುಕಿರುವುದರಿಂದ ಈ ಸಿನೆಮಾಗೆ ಹೊಸ ಆಯಾಮವೂ ದಕ್ಕಿದೆ.

ಭಾರತೀಯ ಸಿನೆಮಾಗಳು ಅದರಲ್ಲೂ ಕಮರ್ಷಿಯಲ್ ಸಕ್ಸಸ್ ಎಂದು ಕರೆಸಿಕೊಳ್ಳುವ ಸಿನೆಮಾಗಳು ಸಾಮಾನ್ಯವಾಗಿ ಮಧ್ಯಮ ಅಥವಾ ಮೇಲ್ ಮಧ್ಯಮ ವರ್ಗಗಳ ಬದುಕನ್ನೂ, ಮೇಲ್ಜಾತಿ ಅಥವಾ ಬ್ರಾಹ್ಮಣೀಯ ಅಭಿರುಚಿ ಮತ್ತು ಸಂಸ್ಕೃತಿ-ಸಂಸ್ಕಾರಗಳನ್ನು ಪ್ರತಿಪಾದನೆ ಮಾಡುತ್ತಾ ಅಬ್ರಾಹ್ಮಣೀಯದ ಪ್ರತ್ಯಕ್ಷ ಅಥವಾ ಪರೋಕ್ಷ ಅವಹೇಳನ ಮಾಡುವ ಸಿನೆಮಾಗಳೇ ಆಗಿಬಿಟ್ಟಿವೆ. ಇನ್ನು ರಾಜಕೀಯ ಚಿತ್ರವೆಂದರೆ ಪ್ರಜಾತಂತ್ರವನ್ನು ಅವಹೇಳನ ಮಾಡುತ್ತಾ ಪೊಲೀಸ್ ಸಿಂಗಂಗಳನ್ನು ಸೇವಿಯರ್‌ಗಳನ್ನಾಗಿ ಚಿತ್ರಿಸುವ, ಎನ್‌ಕೌಂಟರ್‌ಗಳನ್ನು, ಪೊಲೀಸ್ ಚಿತ್ರಹಿಂಸೆಗಳನ್ನು ಅತ್ಯಗತ್ಯ ಎಂದು ಒಪ್ಪಿಸುವ, ಪ್ರತಿಯಾಡಿದವರನ್ನು ಕಂಡಕಂಡಲ್ಲಿ ಕೊಂದುಹಾಕುವ ಸರ್ವಾಧಿಕಾರದ ಅಗತ್ಯವಿದೆ ಎಂದು ಒಪ್ಪಿಸುವ ಸಿನೆಮಾಗಳು ಮಧ್ಯವರ್ಗೀಯ ಪ್ರೇಕ್ಷಕರ ಡಾರ್ಲಿಂಗ್ ಆಗಿವೆ. ಇಂತಹ ಸಿನೆಮಾಗಳು ಇತಿಹಾಸದಲ್ಲೂ, ಈಗ ಭಾರತದಲ್ಲೂ ಒಂದು ಫ್ಯಾಶಿಸ್ಟ್ ಸರ್ವಾಧಿಕಾರಕ್ಕೆ ಬೇಕಾಗುವ ಜನಸಮ್ಮತಿಯನ್ನು ರೂಢಿಸುವ ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಭಾರತದ ಮೂಲನಿವಾಸಿ ಸಮುದಾಯಗಳಾದ ಇರುಳಿಗ ಹಾಗೂ ಕುರುವ ಅಲೆಮಾರಿ ಬುಡಕಟ್ಟು ಸಮುದಾಯವನ್ನು ಸವರ್ಣೀಯ ಸಮಾಜ, ಆಳುವವರ್ಗ ಮತ್ತು ಸ್ವತಂತ್ರ ಭಾರತದ ಆಡಳಿತ ವರ್ಗ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎಂಬುದನ್ನು ಈ ಚಿತ್ರ ಅನಾವರಣ ಮಾಡುತ್ತಾ ಭವ್ಯ ಭಾರತವೆಂಬ, ದೊಡ್ದ ಪ್ರಜಾತಂತ್ರವೆಂಬ ಹಿಪಾಕ್ರಸಿಯ ಬಲೂನಿಗೆ ಸತ್ಯದ ಸೂಜಿ ಚುಚ್ಚುತ್ತದೆ.

1993ರಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದ ಸತ್ಯ ಘಟನೆಯ ಚಿತ್ರಣ ಈ ಸಿನೆಮಾ. ರಾಜಕಣ್ಣ ಎಂಬ ಹಾವು ಹಿಡಿಯುವ ಕುಲಕಸುಬು ಮಾಡುತ್ತಾ, ತನ್ನಂತೆ ಶ್ರಮಜೀವಿಯಾದ ಹೆಂಡತಿಯೊಡನೆ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಕನಸಿನ ಸ್ವಾಭಿಮಾನಿ ಯುವಕುರುವ, ಆತನ ಮೇಲೆ ಸುಳ್ಳು ಕೇಸು ಹೊರಿಸಿ, ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಚಿತ್ರಹಿಂಸೆ ಕೊಟ್ಟು ಕೊಂದುಹಾಕುವ ಪೊಲೀಸರು ಮತ್ತು ಈ ಅನ್ಯಾಯದ ವಿರುದ್ಧ ಗಟ್ಟಿಯಾಗಿ ಹೋರಾಡುವ ಆತನ ಅನಕ್ಷರಸ್ಥ ಹೆಂಡತಿ ಸೆಂಗಿಣಿ, ಆ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಎಡಪಂಥೀಯ ಸಂಘಟನೆಗಳು ಹಾಗೂ ನ್ಯಾಯಾಲಯದಲ್ಲಿ ರಾಜಕಣ್ಣನ ಕಣ್ಮರೆಯ ಬಗ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ, ಮದ್ರಾಸ್ ಹೈಕೋರ್ಟಿನಲ್ಲಿ ಈ ಅನ್ಯಾಯದ ವಿರುದ್ಧ ದಿಟ್ಟವಾದ ಐತಿಹಾಸಿಕ ಹೋರಾಟ ನಡೆಸಿ ನ್ಯಾಯಕೊಡಿಸುವ ಎಡಪಂಥೀಯ (ಸಿಪಿಎಂ ಪಕ್ಷದ ಸದಸ್ಯ) ಚಿಂತನೆಯುಳ್ಳ ವಕೀಲ ಚಂದ್ರು. ಆ ಯುವ ವಕೀಲ ಚಂದ್ರು ನಂತರದಲ್ಲಿ ಹೈಕೋರ್ಟಿನ ನ್ಯಾಯಾಧೀಶರೂ ಆಗಿ ಹಲವಾರು ಜನಪರ ಆದೇಶಗಳನ್ನು ನೀಡಿ ಈಗ ನಿವೃತ್ತರಾಗಿದ್ದಾರೆ.

ಚಿತ್ರದ ಈ ಘಟನೆಗಳು ಮತ್ತು ಪಾತ್ರಗಳು ವಾಸ್ತವದಲ್ಲಿ ಆಳದಲ್ಲಿ ಅಡಗಿರುವ ಇನ್ನೂ ಹಲವು ಸ್ವಾತಂತ್ರ್ಯೋತ್ತರ ಸತ್ಯಗಳನ್ನು ಬಿಚ್ಚಿಡುತ್ತವೆ. ಸಂವಿಧಾನವು ಎಷ್ಟೇ ಹಕ್ಕುಗಳನ್ನು ನೀಡಿದ್ದರೂ, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ರಾಜಕಣ್ಣ- ಸೆಂಗಿಣಿಯಂಥ ಕೋಟ್ಯಂತರ ಜನರು ಅಂಗೈ ಅಗಲ ಭೂಮಿಯೂ ಇಲ್ಲದೆ, ಅವಮಾನಿತರಾಗಿ, ಅವಲಂಬಿತರಾಗಿ ಸಮಾಜದ ಅಂಚಿನಲ್ಲೇ ಬದುಕುವಂತೆ ಮಾಡಿರುವ ರಾಜಕೀಯ-ಆರ್ಥಿಕ ವ್ಯವಸ್ಥೆ, ಎಲ್ಲೇ ಕಳ್ಳತನ, ದರೋಡೆ ನಡೆದರೂ ಹೇಳುವವರು-ಕೇಳುವವರಿಲ್ಲದ, ಈ ಅನಕ್ಷರಸ್ಥ ಅಮಾಯಕ ಸಮುದಾಯದವರ ಮೇಲೆ ಹೊರಿಸಿ, ಜೈಲಿಗೆ ತಳ್ಳಿ ಕೇಸ್ ಕ್ಲೋಸ್ ಮಾಡುವ ಅಮಾನುಷ ಪೊಲೀಸ್-ಆಡಳಿತ ವ್ಯವಸ್ಥೆ, ಇವೆಲ್ಲವನ್ನೂ ಸಹಜವೆಂದು ಒಪ್ಪಿಕೊಳ್ಳುವ ನಾಗರಿಕ ಸಮಾಜ. ಇವರು ಈ ಚಿತ್ರದ ವಿಲನ್‌ಗಳು. ಆದರೆ ಈ ಚಿತ್ರದ ಹೀರೋಗಳು ಯಾರು ಎಂಬ ಬಗ್ಗೆ ಒಂದಷ್ಟು ಕುತೂಹಲಕರ ಚರ್ಚೆಗಳು ನಡೆಯುತ್ತಿವೆ. ನ್ಯಾಯಾಲಯದಲ್ಲಿ ಚಂದ್ರು ನಡೆಸುವ ಹೋರಾಟ, ಬಳಸುವ ತಂತ್ರಗಳಿಗೆ ಹಾಗೂ ಅದರ ಪಾತ್ರ ಪೋಷಣೆಗೆ ನೀಡಿರುವ ಸಮಯ, ಅದರ ಪಾತ್ರವನ್ನು ನಾಯಕ ನಟ ಹಾಗೂ ಚಿತ್ರ ನಿರ್ಮಾಪಕ ಸೂರಿಯಾನೇ ನಿರ್ವಹಿಸುವುದರಿಂದಲೂ ಈ ಸಿನೆಮಾದ ನಾಯಕ ಚಂದ್ರು ಎಂಬ ಅಭಿಪ್ರಾಯ ಸಹಜವಾಗಿ ಬರುತ್ತದೆ. ಆದರೆ ಈ ಚಿತ್ರವು ನಿಜ ಘಟನೆಯನ್ನು ಆಧರಿಸಿರುವುದರಿಂದ ಹಾಗೂ ಈ ಘಟನೆ ಒಂದು ಐತಿಹಾಸಿಕ ವಿದ್ಯಮಾನಗಳಿಗೆ ಕಾರಣವೂ ಆಗಿದ್ದರಿಂದ ಈ ನೈಜ ಘಟನೆಗಳ ನಾಯಕರು ಯಾರು ಎಂಬುದು ಅಷ್ಟು ಸುಲಭವಾಗಿ ಬಗೆಹರಿಯುವ ಪ್ರಶ್ನೆಯಲ್ಲ. ಹಾಗೆ ನೋಡಿದರೆ ಅದು ಒಂದು ರಾಜಕೀಯವಾದ ಮತ್ತು ಇತಿಹಾಸ ಹಾಗೂ ಭವಿಷ್ಯಕ್ಕೆ ಎರಡಕ್ಕೂ ಸಂಬಂಧಪಟ್ಟ ಪ್ರಶ್ನೆಯೂ ಆಗಿದೆ. ಏಕೆಂದರೆ ಪೊಲೀಸರು ಎಷ್ಟೇ ಆಮಾನುಷ ಹಾಗೂ ಬರ್ಬರ ಚಿತ್ರಹಿಂಸೆಯನ್ನು ನೀಡಿದರೂ ರಾಜಾಕಣ್ಣ ತನ್ನಮೇಲೆ ಪೊಲೀಸರು ಹೊರಿಸಿದ ಸುಳ್ಳು ಆಪಾದನೆಯನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ತಾನು ಮಾಡದ ತಪ್ಪನ್ನು ಚಿತ್ರಹಿಂಸೆಯಿಂದ ಬಚಾವಾಗುವ ಸಲುವಾಗಿ ಒಪ್ಪಿಕೊಂಡರೆ ಅದು ತನ್ನ ಮೇಲೆ ಮಾತ್ರವಲ್ಲದೆ ತನ್ನ ಇಡೀ ಸಮುದಾಯದ ಮೇಲೆ ಒಂದು ದೊಡ್ಡ ಕಳಂಕವಾಗಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ ಎಂಬ ಕಾಳಜಿ ಮತ್ತು ಸ್ವಾಭಿಮಾನ. ಈ ಆದರ್ಶಗಳಿಗಾಗಿಯೇ ರಾಜಾಕಣ್ಣ ಹುತಾತ್ಮನಾಗುತ್ತಾನೆ. ಎಲ್ಲಿಯಾದರೂ ಆತ ಸುಳ್ಳು ಆಪಾದನೆಯನ್ನು ಒಪ್ಪಿಕೊಂಡಿದ್ದರೆ ನಂತರದ ಯಾವ ವಿದ್ಯಮಾನಗಳಿಗೂ, ವಕೀಲ ಚಂದ್ರುವಿನ ನ್ಯಾಯಾಂಗ ಹೋರಾಟಕ್ಕೂ ಅವಕಾಶವಿರುತ್ತಿರಲಿಲ್ಲ.

ಹಾಗೆಯೇ, ಸೆಂಗಿಣಿ ಗರ್ಭಿಣಿಯಾಗಿದ್ದರೂ, ಸತತವಾಗಿ ಪೊಲೀಸರ ಹಾಗೂ ಮೇಲ್ಜಾತಿಗಳ ಕಿರುಕುಳ ಮತ್ತು ಒತ್ತಡಗಳಿಗೆ ಗುರಿಯಾಗುತ್ತಿದ್ದರೂ, ಒಮ್ಮೆ ಡಿಜಿಪಿಯೇ ಖುದ್ದು ದೊಡ್ಡ ಮೊತ್ತದ ಹಣದ ಆಮಿಷ ಒಡ್ಡಿದರೂ ಅಂಜದೆ, ಅಳುಕದೆ, ಬಲಿಯಾಗದೆ ಗಟ್ಟಿಯಾಗಿ ನಿಂತಿದ್ದಕ್ಕೆ ಮಾತ್ರ ಈ ಪ್ರಕರಣ ತಾರ್ಕಿಕ ಅಂತ್ಯ ಮುಟ್ಟುತ್ತದೆ. ಅಷ್ಟೆ, ಕೀಲಕ ಪಾತ್ರವನ್ನು ಸೆಂಗಿಣಿಯ ಜೊತೆಗೆ ನಿಂತ ಎಡಪಂಥೀಯ ಹೋರಾಟಗಾರರ ಸಹಕಾರ, ಬೆಂಬಲಗಳು ಕೂಡ ಈ ಪ್ರಕರಣದಲ್ಲಿ ವಹಿಸಿವೆ. ಇದರಲ್ಲಿ ಯಾವೊಂದೂ ಅದರಲ್ಲೂ, ಮುಖ್ಯವಾಗಿ ರಾಜಾಕಣ್ಣ ಹಾಗೂ ಸೆಂಗಿಣಿಯರ ಸ್ವಾಭಿಮಾನ, ಹೋರಾಟದ ಕೆಚ್ಚು, ಆಮಿಷಕ್ಕಾಗಲೀ, ಬೆದರಿಕೆಗಳಿಗಾಗಲೀ ಬಲಿಯಾಗದ ಬದ್ಧತೆಗಳು ಇಲ್ಲದಿದ್ದರೆ ಈ ಪ್ರಕರಣ ನ್ಯಾಯಾಂಗದ ತನಕವೂ ಬರುತ್ತಿರಲಿಲ್ಲ. ಆದರೆ ಒಮ್ಮೆ ನ್ಯಾಯಾಂಗದ ಬಾಗಿಲು ಬಡಿದ ಮೇಲೆ ಮಧ್ಯಮವರ್ಗದ ಹಿನ್ನೆಲೆಯ ಎಡಪಂಥೀಯ ಚಿಂತನೆಯ ವಕೀಲ ಚಂದ್ರು ವಹಿಸಿದ ಪಾತ್ರ ಚಿತ್ರದಲ್ಲಿ ಸುಸ್ಪಷ್ಟವಾಗಿಯೇ ದಾಖಲಾಗಿದೆ. ಹೀಗಾಗಿ ಕಮರ್ಷಿಯಲ್ ವ್ಯಾಕರಣವನ್ನು ಹೊರತುಪಡಿಸಿ ಒಂದು ಸಾಮಾಜಿಕ-ರಾಜಕೀಯ ವಿದ್ಯಮಾನವಾಗಿ ಈ ಚಿತ್ರವನ್ನು ಅರ್ಥಮಾಡಿ ಕೊಳ್ಳುವುದಾದರೆ ಈ ಚಿತ್ರಕ್ಕೆ ಒಬ್ಬರು ಮಾತ್ರ ಹೀರೋ ಅಲ್ಲ. ಸಮಾಜವು ಮನ್ನಣೆಯಿಂದ ಕಾಣುವ ಕೆಲಸ ಮತ್ತು ಪಾತ್ರ ಮಾಡುವುದನ್ನು ಸ್ಪಷ್ಟವಾಗಿ ಪ್ರತಿಪಾದಿಸಬಲ್ಲ ಭಾಷೆ ಮತ್ತು ಅವಕಾಶಗಳು ಇರುವ ಮಧ್ಯಮವರ್ಗದ ಪಾತ್ರ ಯಾವುದೇ ಸಮಾಜದಲ್ಲೂ, ಆದ್ದರಿಂದ ಸಿನೆಮಾಗಳಲ್ಲೂ ಎದ್ದುಕಾಣುವುದು ಸಹಜ.

ಇವರಲ್ಲದೆಯೂ ರಾಜಕಣ್ಣ, ಸೆಂಗಿಣಿಯಂತಹ ನಿಜವಾದ ಹೀರೋಗಳು ಇರುತ್ತಾರೆ. ‘ಜೈ ಭೀಮ್’ ಚಿತ್ರದಲ್ಲಿ ಅವರ ವೀರೋಚಿತ ಪಾತ್ರಗಳನ್ನು ವಕೀಲ ಚಂದ್ರುವಿನ ಪಾತ್ರ ಹಿಂದಕ್ಕೆ ಸರಿಸಿದೆ ಎಂದೇನೂ ಅನಿಸುವುದಿಲ್ಲ. ಆದರೆ ‘ಜೈ ಭೀಮ್’ ಚಿತ್ರ ಸಮಕಾಲೀನ ಸಂದರ್ಭದಲ್ಲಿ ಇನ್ನೂ ಕೆಲವು ಪ್ರಮುಖ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಏಕೆಂದರೆ ಇತ್ತೀಚೆಗೆ ಲೋಕಸಭೆಯಲ್ಲಿ ಮಂತ್ರಿಗಳೇ ಕೊಟ್ಟಿರುವ ಹೇಳಿಕೆಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 1,189 ಪೊಲೀಸ್ ಚಿತ್ರಹಿಂಸೆಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 348 ಜನ ರಾಜಾಕಣ್ಣಗಳು ಪೊಲೀಸ್ ಚಿತ್ರಹಿಂಸೆಗೆ ಬಲಿಯಾಗಿ ಪ್ರಾಣಬಿಟ್ಟಿದ್ದಾರೆ. ‘ನ್ಯಾಷನಲ್ ಕಾಂಪೇನ್ ಎಗೆನ್ಸ್ಟ್‌ಟಾರ್ಚರ್’ ಸಂಸ್ಥೆ ದಾಖಲಿಸಿರುವ ಅಂಕಿ-ಅಂಶಗಳ ಪ್ರಕಾರವೇ ಕೇವಲ 2019ರಲ್ಲೇ 117 ಲಾಕಪ್ ಸಾವುಗಳೂ, 1,606 ಜೈಲು ಸಾವುಗಳೂ ಸಂಭವಿಸಿವೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ನೀಡಿರುವ ಅಂಕಿ-ಅಂಶಗಳ ಪ್ರಕಾರ 2006-2018ರ ನಡುವೆ ಸಂಭವಿಸಿರುವ 500 ಲಾಕಪ್ ಸಾವುಗಳ ಪ್ರಕರಣದಲ್ಲಿ ಯಾವೊಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಅಷ್ಟು ಮಾತ್ರವಲ್ಲ. ಹೈಕೋರ್ಟುಗಳು ಮತ್ತು ಸುಪ್ರೀಂ ಕೋರ್ಟ್ ಕೂಡಾ ಈಗ ಈ ಹಿಂದಿನಂತೆ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಪುರಸ್ಕರಿಸುತ್ತಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಚಿತ್ರದ ನೈಜಪಾತ್ರವಾದ ನಿವೃತ್ತ ನ್ಯಾಯಮೂರ್ತಿ ಚಂದ್ರು ಅವರೇ ಹೇಳಿದ್ದಾರೆ. ಹೇಬಿಯಸ್ ಕಾರ್ಪಸ್ ಅರ್ಜಿಗಳಲ್ಲಿ ನ್ಯಾಯಾಲಯವು ಪ್ರಾಣ ಹಾಗೂ ಮಾನವನ್ನು ಕಾಪಾಡುವ ತುರ್ತನ್ನು ಅರ್ಥಮಾಡಿಕೊಂಡು ಕೊಡಲೇ ಕಾರ್ಯಪ್ರವೃತ್ತವಾದರೆ ಮಾತ್ರ ನಾಗರಿಕರಿಗೆ ಸಂವಿಧಾನವು ಕೊಟ್ಟಿರುವ ಹಕ್ಕುಗಳಿಗೆ ನಿಜವಾದ ಅರ್ಥ ಒದಗುತ್ತದೆ.

ಆದರೆ ಕಾಶ್ಮೀರವೊಂದರಲ್ಲೇ 800ಕ್ಕೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿಗಳು ಸುಪ್ರೀಂ ಕೋರ್ಟ್‌ನ ಮುಂದೆ ದಾಖಲಾಗಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದೆ. ಆದರೂ ಸುಪ್ರೀಂ ಕೋರ್ಟ್ ಅದನ್ನು ವಿಚಾರಣೆಗೂ ಕೈಗೆತ್ತಿಕೊಂಡಿಲ್ಲ. ಉತ್ತರ ಪ್ರದೇಶ, ಗುಜರಾತ್, ನಮ್ಮ ಮಂಗಳೂರು ಇತ್ಯಾದಿ ಕಡೆಗಳಲ್ಲಿ ದಿನನಿತ್ಯ ಪೊಲೀಸರು ಸಂಘೀ ಸೈನಿಕರಂತೆ ಅಮಾಯಕ ಮುಸ್ಲಿಮರ ಮೇಲೆ ದಾಳಿ ಮಾಡುತ್ತಿದ್ದಾರೆ. ಸಾಯಿಸುತ್ತಿದ್ದಾರೆ. ಚತ್ತೀಸ್‌ಗಡ, ಜಾರ್ಖಂಡ್ ಇನ್ನಿತರ ಕಡೆಗಳಲ್ಲಿ ಸಹಸ್ರಾರು ಆದಿವಾಸಿಗಳನ್ನು ನಕ್ಸಲರೆಂಬ ಹೆಸರಲ್ಲಿ ಎನ್‌ಕೌಂಟರ್ ಮಾಡುತ್ತಿದ್ದಾರೆ. ನೂರಾರು ಆದಿವಾಸಿಗಳು ಈಗಲೂ ಕಣ್ಮರೆಯಾಗಿದ್ದಾರೆ. ಇತ್ತೀಚೆಗೆ ಅಸ್ಸಾಮಿನಲ್ಲಿ ನಿರಾಶ್ರಿತ-ನಿರಾಯುಧ ರೈತಾಪಿಯ ಮೇಲೆ ಮುಸ್ಲಿಮ ರೆಂಬ ಏಕೈಕ ಕಾರಣಕ್ಕೆ ಪೊಲೀಸರು ಗೋಲಿಬಾರ್ ಮಾಡಿ ಸಾಯಿಸಿದ್ದರೂ ನ್ಯಾಯಾಂಗ, ನಾಗರಿಕ ಸಮಾಜ ಹೆಚ್ಚೂ ಕಡಿಮೆ ಮೌನವಾಗಿಯೇ ಕುಳಿತಿದೆ. ಸರಕಾರದ ಅನ್ಯಾಯಗಳ ವಿರುದ್ಧ ಹಾಗೂ ತಮ್ಮ ಬದುಕಿಗಾಗಿ ಹೋರಾಡುತ್ತಿರುವ ಈ ದಮನಿತ ಜನರ ಹಕ್ಕುಗಳಿಗೆ ಧ್ವನಿಯಾಗಿದ್ದಕ್ಕೆ 83 ವರ್ಷದ ಹಿರಿಯ ಜೀವ ಸ್ಟಾನ್‌ಸ್ವಾಮಿಯನ್ನು ಜೈಲಿನಲ್ಲಿ ಸಾಯುವಂತೆ ಮಾಡಿದ್ದಲ್ಲದೆ, ಹಿರಿಯರಾದ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ..ಹಾಗೂ ಇನ್ನಿತರ 15 ಜನರನ್ನು ಕಳೆದ ಮೂರು ವರ್ಷಗಳಿಂದ ಜಾಮೀನನ್ನು ಕೊಡದೆ ಜೈಲಿಗೆ ದೂಡಲಾಗಿದೆ. ಸಿಎಎ ಹೋರಾಟ, ದಿಲ್ಲಿಯ 2020ರ ಬಿಜೆಪಿಯ ಪ್ರಾಯೋಜಿತ ಹಿಂಸಾಚಾರಗಳಲ್ಲೂ ನೂರಾರು ಅಮಾಯಕರನ್ನು ಸುಳ್ಳು ಕೇಸುಗಳಲ್ಲಿ ಜೈಲಿಗೆ ದೂಡಲಾಗಿದೆ. ಸಾರಾಂಶದಲ್ಲಿ ಪರಿಸ್ಥಿತಿ ಮೊದಲಿಗಿಂತಲೂ, ರಾಜಾಕಣ್ಣ-ಸೆಂಗಿಣಿಯರ ಕಾಲಕ್ಕಿಂತಲೂ ಭೀಕರವಾಗಿದೆ. ಆದರೂ ರಾಜಾಕಣ್ಣರು ಹೋರಾಟ ಮಾಡುತ್ತಲೇ ಇದ್ದಾರೆ. ಸಾಯುತ್ತಲೇ ಇದ್ದಾರೆ. ಈಗ ಮೊದಲಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ಚಂದ್ರುಗಳು, ಅರ್ಥಾತ್ ಪ್ರಜ್ಞಾವಂತ ಮಧ್ಯಮವರ್ಗದ ಅಗತ್ಯವಿದೆ. ಆದರೆ ಅದರ ಕೊರತೆ ತೀವ್ರವಾಗಿ ಕಾಡುತ್ತಿದೆ.

ಹಾಗೆ ನೋಡಿದರೆ, ಐತಿಹಾಸಿಕವಾಗಿಯೂ ಎಲ್ಲಾ ದೇಶಗಳಲ್ಲೂ, ಸಮುದಾಯಗಳಲ್ಲೂ, ಜಾತಿಗಳಲ್ಲೂ, ಅದರ ಮಧ್ಯಮವರ್ಗಕ್ಕೆ ಮೊದಲು ಅರಿವು ಮತ್ತು ಅವಕಾಶಗಳು ಒದಗಿ ಬರುತ್ತವೆ. ಅದನ್ನು ಪಡೆದುಕೊಂಡ ಮಧ್ಯಮವರ್ಗ ಅದನ್ನು ಹೇಗೆ ಬಳಸುತ್ತದೆ ಎಂಬುದು ಅತ್ಯಂತ ಮುಖ್ಯವಾದುದು. ಏಕೆಂದರೆ ರಾಷ್ಟ್ರೀಯ ವಿಮೋಚನೆ ಚಳವಳಿ, ಕಾರ್ಮಿಕ-ರೈತ ಚಳವಳಿ, ಜಾತಿ ವಿಮೋಚನಾ ಚಳವಳಿ, ಮಹಿಳಾ ವಿಮೋಚನಾ ಚಳವಳಿ, ಲಿಂಗಾಂತರಿಗಳ ಹಕ್ಕುಗಳ ಚಳವಳಿ, ಆದಿವಾಸಿಗಳ ಚಳವಳಿ, ಪರಿಸರ ಚಳವಳಿಗಳ ಪ್ರಾರಂಭಿಕ ದೆಸೆಗಳಲ್ಲಿ ಅದಕ್ಕೆ ನಾಯಕತ್ವ, ಅರಿವು, ದಿಕ್ಕು-ದಿಸೆಗಳನ್ನು ಒದಗಿಸಿದ್ದರಲ್ಲಿ ಆಯಾ ಸಮುದಾಯಗಳ ಒಂದು ಸಣ್ಣ ಆದರೆ ಪ್ರಭಾವಶಾಲಿ ಮಧ್ಯಮವರ್ಗವೇ ಪ್ರಧಾನ ಪಾತ್ರ ವಹಿಸಿದೆ. ಇನ್ನುಳಿದ ಮಧ್ಯಮವರ್ಗದಲ್ಲಿ ಬಹುದೊಡ್ದ ಭಾಗ ಶೋಷಕರ ಪರವಾದ ನಿಲುವು ವಹಿಸಿದ್ದರೂ ತಟಸ್ಥವಾಗಿ ಉಳಿದಿದೆ. ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಪ್ರಬಲವಾದ ಎಡಪಂಥೀಯ ಚಳವಳಿಗಳು ಈ ಪ್ರಜ್ಞಾವಂತ ಮಧ್ಯಮವರ್ಗದ ಜೀವನ ದೃಷ್ಟಿ ಧೋರಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದು ನಿಜವೇ. ಅದರ ಪರಿಣಾಮವೇ ಚಂದ್ರು, ನ್ಯಾಯಮೂರ್ತಿ ಕೃಷ್ಣ ಅಯ್ಯರ್, ನಮ್ಮ ನಾಗಮೋಹನ್ ದಾಸ್, ಗೋಪಾಲ ಗೌಡ ಹಾಗೂ ಇನ್ನಿತರ ಜನಮುಖಿ ನ್ಯಾಯಮೂರ್ತಿಗಳು. ಇಂತಹ ಸಣ್ಣದೇ ಆದರೂ ಪ್ರಜ್ಞಾವಂತವಾದ ರೈತ-ದಲಿತ ಮಧ್ಯಮವರ್ಗ ಅಥವಾ ಸುಶಿಕ್ಷಿತ ತಳಮಧ್ಯವರ್ಗಗಳು ಸ್ವಾರ್ಥರಹಿತವಾಗಿ, ದಿಟ್ಟವಾಗಿ ದಮನಿತ ಜನತೆಯೊಡನೆ ಬೆರೆತಿದ್ದರಿಂದಲೇ 1970-80ರ ದಶಕಗಳಲ್ಲಿ ಕರ್ನಾಟಕದಲ್ಲೂ ಡಿಎಸ್ಸೆಸ್, ರೈತ ಸಂಘ, ಕಾರ್ಮಿಕ, ಕಮ್ಯುನಿಸ್ಟ್ ಜನಚಳವಳಿಗಳನ್ನು ಕಟ್ಟಲು ಸಾಧ್ಯವಾಯಿತು.

ಸ್ವಾತಂತ್ರ್ಯಾನಂತರದ ಮೊದಲ ದಶಕಗಳಿಗೆ ಹೋಲಿಸಿದಲ್ಲಿ ಈಗ ಮಧ್ಯಮವರ್ಗದ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ದಮನಿತ ಸಮುದಾಯಗಳಲ್ಲೂ ಒಂದು ಸಣ್ಣ ಶಿಕ್ಷಿತ ಮಧ್ಯಮವರ್ಗ ಅಥವಾ ತಳಮಧ್ಯಮವರ್ಗ ಹುಟ್ಟಿಕೊಂಡಿದೆ. ಆದರೆ ದುರದೃಷ್ಟವಶಾತ್ 1991ರ ನಂತರದ ದಶಕಗಳಲ್ಲಿ ಈ ಮಧ್ಯಮವರ್ಗದ ಬಹುದೊಡ್ಡ ಭಾಗ ಸ್ವಲೋಲುಪತೆಯಲ್ಲಿ ಕಳೆದುಹೋಗಿದೆ. ಇತ್ತೀಚಿನ ದಿನಗಳಲ್ಲಂತೂ ಇರುವ ಸಣ್ಣ ಪ್ರಜ್ಞಾವಂತ ಮಧ್ಯಮವರ್ಗದ ಕ್ರಿಯಾಶೀಲತೆಯೂ ಫೇಸ್‌ಬುಕ್-ಕ್ಲಬ್ ಹೌಸ್‌ಗಳಲ್ಲೇ ಸ್ಖಲನವಾಗಿಹೋಗುತ್ತಿದೆ. ಜಗತ್ತಿನ ಇತಿಹಾಸದಲ್ಲಿ ಫ್ಯಾಶಿಸಂ ಅರ್ಥಾತ್ ದಮನಿತ ಜಾತಿ-ವರ್ಗ- ಲಿಂಗಗಳ ಮೇಲಿನ ಕ್ರೂರ ದಮನಗಳು ಸರ್ವ ಮಾನ್ಯಗೊಳ್ಳುವುದು ಮಧ್ಯಮ ವರ್ಗದ ರುಜುವಿನೊಂದಿಗೆ..ಅದು ಸಕ್ರಿಯವಾಗಿ ಬಲಕ್ಕೆ ವಾಲುವುದರೊಂದಿಗೆ ಮತ್ತು ತಮ್ಮ ಮೌನಸಮ್ಮತಿಯನ್ನು ಬಲಕ್ಕೆ ಧಾರೆಯೆರೆಯುವುದರೊಂದಿಗೆ.. ಅದಕ್ಕೆ ಪ್ರತಿಯಾಗಿ ಪ್ರಜ್ಞಾವಂತ ಮಧ್ಯಮ ವರ್ಗ ಹೋರಾಟಗಳಲ್ಲಿ, ಬೀದಿಗಳಲ್ಲಿ, ನೈಜ ರಣಕಣಗಳಲ್ಲಿ ದಮನಿತ ಜನರೊಡನೆ ನಿಂತಾಗ ಇತಿಹಾಸದ ಹೊಸಪುಟಗಳು ತೆರೆದುಕೊಂಡಿವೆ.. ‘ಜೈಭೀಮ್’ ಚಿತ್ರದ ಓರೆಕೋರೆಗಳ ಬಗ್ಗೆ ಹಾಗೂ ಅದರ ಮಿತಿಗಳ ಬಗೆಗಿನ ವಿಮರ್ಶೆಗಳೊಂದಿಗೆ ಈ ತುರ್ತು ಪ್ರಶ್ನೆಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಲ, ಬೀದಿಗಳಲ್ಲಿ ಉತ್ತರಗಳನ್ನು ಹುಡುಕಬೇಕಿದೆ.. ಅಲ್ಲವೇ?

ಇಷ್ಟೆಲ್ಲಾ ಹೇಳಿದ ಮೇಲೂ ಬ್ರೆಕ್ಟ್ ನ ಗೆಲಿಲಿಯೋ ನಾಟಕದಲ್ಲಿ ಆಂಡ್ರಿಯಾ ಮತ್ತು ಗೆಲಿಲಿಯೊಗಳ ನಡುವೆ ಈ ಸಂಭಾಷಣೆ ನೆನೆಪಿನಲ್ಲಿಟ್ಟುಕೊಳ್ಳಲೇ ಬೇಕು ಎನಿಸುತ್ತದೆ:

ಆಂಡ್ರಿಯಾ : ನಾಯಕನಿಲ್ಲದ ನಾಡು ಪರಮ ದುಃಖಿ. ಗೆಲಿಲಿಯೋ: ಇಲ್ಲ ..ನಾಯಕರ ಅಗತ್ಯವಿರುವ ನಾಡು ಪರಮದುಃಖಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)