varthabharthi


ಅನುಗಾಲ

ಬಡವರ ಬಿನ್ನಪ

ವಾರ್ತಾ ಭಾರತಿ : 11 Nov, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮನುಷ್ಯ ಸ್ವಾರ್ಥಿಯಾಗಬಾರದು, ವೈಯಕ್ತಿಕವಾಗಬಾರದು, ಸಮಾಜಮುಖಿಯಾಗಿರಬೇಕು, ನಿಜ. ಆದರೆ ಒಂದು ಸಮುದಾಯದ ಹಿತಕ್ಕೇ ಕುತ್ತು ಬರುವಂತಹ ವಿಚಾರದಲ್ಲೂ ಸಾಮಾನ್ಯರೆಂದು ಕರೆಸಿಕೊಳ್ಳುವವರು ತಳೆಯುವ ನಿಲುವು ತೀರ ಅಪಾಯಕಾರಿಯಾಗುತ್ತಿದೆ. ಇದು ಕೃಷಿ ಅಂತಲ್ಲ, ಉದ್ಯೋಗ, ವೃತ್ತಿ, ಸರಕು-ಸಾಮಗ್ರಿಗಳ ಬೆಲೆ, ಹೀಗೆ ಬದುಕಿನ ಎಲ್ಲ ಮಜಲುಗಳನ್ನು ವ್ಯಾಪಿಸುವ ಕ್ಷೇತ್ರಗಳಿಗೆ ಸಂಬಂಧಿಸಿದೆ.ಈಚೆಗೆ ಪದ್ಮಪ್ರಶಸ್ತಿಗಳ ಕುರಿತು ಹೊಗಳಿಕೆ ಮತ್ತು ಟೀಕೆ ಸಮಸಮನಾಗಿ ಪ್ರಕಟವಾಗಿದೆ. ಹರೇಕಳ ಹಾಜಬ್ಬರಂಥವರಿಗೆ ಪ್ರಶಸ್ತಿ ಸಿಕ್ಕಬಗ್ಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಕಂಗನಾ ರಣಾವತ್‌ಗೆ ಪ್ರಶಸ್ತಿ ಸಿಕ್ಕ ಬಗ್ಗೆ ಟೀಕೆಗಳೆದ್ದಿವೆ. ಈ ದೇಶದ ಜನಸಂಖ್ಯೆ ಎಷ್ಟಿದೆಯೆಂದರೆ ಯಾವುದೇ ವಿಚಾರದ ಕುರಿತು ಜನಾಭಿಪ್ರಾಯ ಕೇಳಹೊರಟರೆ ಅದು ಕೋವಿಡ್-19ರ ಲಸಿಕೆಗಿಂತಲೂ ಗೊಂದಲಮಯವಾಗಬಹುದು. ಪ್ರಾಯಃ ಈ ಕಾರಣಕ್ಕೇ ಇರಬಹುದು, ಐದು ವರ್ಷಗಳಿಗೊಮ್ಮೆ ನಡೆವ ಚುನಾವಣೆಯೇ ದೇಶದ ದಿಕ್ಕು-ಗತಿಗಳನ್ನು ನಿರ್ಧರಿಸುವ ಯೋಜನೆಯನ್ನು ನಮ್ಮ ಸಂವಿಧಾನ ನಿರ್ಮಾಪಕರು ಮಾಡಿದ್ದು. ಎಲ್ಲೋ ಒಂದು ಕಡೆ ಗುಮಾನಿಯಿದ್ದರೂ ನಂಬಿಕೆಯಿಂದಲೇ ಬದುಕಬೇಕಾದ ಅನಿವಾರ್ಯತೆಯನ್ನು ಕಾಪಾಡಿಕೊಂಡು ಬರಬೇಕು ಎಂಬ ಆಶಯವೇ ಈ ದೇಶದ್ದು. ಇದೊಂದು ಸ್ಯಾಂಪಲ್ ಮಾತ್ರ. ಬಡತನ ಎಂದರೆ ಆರ್ಥಿಕ ಅಗತ್ಯಗಳ ಕೊರತೆಯೆಂಬ ಸಾಮಾನ್ಯ ತಿಳಿವಳಿಕೆಯಿದೆ. ಆದರೆೆ ಎಲ್ಲ ಮಾದರಿಯ, ಎಲ್ಲ ಸ್ವರೂಪಗಳ ಅಸಹಾಯಕತೆಯೂ ಬಡತನವೇ. ಆರ್ಥಿಕ ತಜ್ಞರಲ್ಲದವರೂ ಕೃಷಿ ತಜ್ಞರಲ್ಲದವರೂ ಗ್ರಹಿಸಬಲ್ಲ ಕೆಲವು ಕಷ್ಟಕೋಟಲೆಗಳನ್ನು ಗಮನಿಸಿದರೆ ಈ ದೇಶದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಪ್ರಭಾವಿಗಳು, ಲಂಚಕೊಡಬಲ್ಲವರು ಮತ್ತು ದಲ್ಲಾಳಿಗಳ ಮೂಲಕ ತಮ್ಮ ಕಾರ್ಯಗಳನ್ನು ಮಾಡಬಲ್ಲವರು- ಇಂತಹ ವರ್ಗಗಳನ್ನು ಹೊರತುಪಡಿಸಿದರೆ ಉಳಿದೆಲ್ಲವರೂ ಬಡವರೇ. ಇಂತಹ ಮಂದಿ ಬೇಕಾಗುತ್ತದೆ. ಊಟಕ್ಕೆ ಎಲೆಯೋ ತಟ್ಟೆಯೋ ಇರುವಂತೆ. ತಟ್ಟೆಯನ್ನಾದರೂ ತೊಳೆದು ಬಳಸುತ್ತಾರೆ; ಆದರೆ ಎಲೆ ಉಂಡು ಎಸೆಯುವ ಸಾಧನ.

ದುರಂತವೆಂದರೆ ತಮ್ಮ ಕಷ್ಟಗಳ ಅರಿವಿದ್ದೂ, ಬಳಲುತ್ತಲೂ, ಸಮ್ಮೋಹನಕ್ಕೆ ಒಳಗಾದವರಂತೆ ಬಲಿಯಾಗುವ ಇಂತಹ ವರ್ಗ ತಾವು ವ್ಯವಸ್ಥೆಯನ್ನು ಬದಲಿಸಬಲ್ಲೆವೆಂಬ ಅರಿವನ್ನು ಹೊಂದದಿರುವುದು. ದಿಲ್ಲಿ ಮತ್ತು ಸುತ್ತಲಿನ ರಾಜ್ಯಗಳ ಕೃಷಿಕರ ಒಕ್ಕೂಟ ಸರಕಾರದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆಯನ್ನು ಆರಂಭಿಸಿ, ಮುಷ್ಕರಹೂಡಿ ವರ್ಷ ಸಂದರೂ ಆಳುವವರು ಇದು ತಮ್ಮ ಅಧಿಕಾರಕ್ಕೆ ಎದುರಾದ ಸವಾಲು, ಬಂದ ಕುತ್ತು ಎಂದು ತಿಳಿಯುತ್ತಿದ್ದಾರೆಯೇ ವಿನಾ ಇದೊಂದು ಸಮಸ್ಯೆ, ಇದನ್ನು ವಸ್ತುನಿಷ್ಠವಾಗಿ ಬಗೆಹರಿಸಬೇಕು ಎಂದು ಅನ್ನಿಸುವುದೇ ಇಲ್ಲ. ಕೃಷಿಕರ ಸತ್ಯಾಗ್ರಹ ಇನ್ನೂ ಅಹಿಂಸೆಯ ಹಾದಿಯಲ್ಲಿ ಇದೆಯೇ ಹೊರತು ಹಿಂಸಾತ್ಮಕವಾಗಿಲ್ಲ. ಸರಕಾರ ಕೃಷಿಕರು (ತನ್ನ) ಹಾದಿಗಡ್ಡವಾಗುತ್ತಿದ್ದಾರೆಂಬ ಸಬೂಬು ಹೇಳುತ್ತಿದೆ ಮತ್ತು ಅದನ್ನು ನಿವಾರಿಸುವ ಮೂಲಕ ಕೃಷಿಕರ ಪ್ರತಿಭಟನೆಯನ್ನು ಇಲ್ಲವಾಗಿಸುವ ದೀರ್ಘಾವಧಿ ಯೋಜನೆಯನ್ನು ಹಾಕಿದೆ. ವಿಷಾದದ ಸಂಗತಿಯೆಂದರೆ ದೇಶದ ಇನ್ನಿತರ ಭಾಗದ ಕೃಷಿಕರಿಗೆ ಕೃಷಿಕಾಯ್ದೆ ಒಂದು ಸಮಸ್ಯೆ, ತಮ್ಮ ಬದುಕಿಗೆ ಎರವಾದ ಅಪಾಯ ಎಂದು ಅನ್ನಿಸುವುದೇ ಇಲ್ಲ. ಈ ದೇಶದ ಜನರು ಇಷ್ಟೊಂದು ರಾಜಕೀಯವಾಗಿ ತೊಡಗಿಕೊಂಡದ್ದು ಇದೇ ಮೊದಲು. ತಮ್ಮ ಸಮಸ್ಯೆಗಳೇನೇ ಇರಲಿ, ತಾವು ರಾಜಕೀಯವಾಗಿ ತೆಗೆದುಕೊಂಡ ಒಲವು-ನಿಲುವುಗಳ ವಿರುದ್ಧವಾದ ಯಾವುದೇ ಸತ್ಯವನ್ನೂ ಧಿಕ್ಕರಿಸುವ ನೀತಿಯನ್ನು ಕೃಷಿಕರು ಅನುಸರಿಸುತ್ತಿರುವುದರಿಂದ ಸದ್ಯಕ್ಕೆ ಸರಕಾರದ ಸ್ಥಿತಿ ನಿರಾಳವಾಗಿದೆ.

ಒಂದು ವೇಳೆ ಸರಕಾರವು ಜನಾಭಿಪ್ರಾಯಕ್ಕೆ ನಿರ್ಧರಿಸಿದರೆ ಬಹುಮತ ಕೃಷಿಕಾಯ್ದೆಯ ಪರವಾಗಿರುತ್ತದೆಯೆಂಬುದಕ್ಕೆ ಸಂಶಯವಿಲ್ಲ. ಎಲ್ಲ ಕಾಲದಲ್ಲೂ ಹೀಗೆಯೇ: ಬಹುಮತ ಕೇಡಿನ ಕಡೆಗೇ. ರಾಮಾಯಣ, ಭಾರತದ ರೂಪಕಗಳನ್ನು ವಿಸ್ತರಿಸಿದರೂ, ಅಕ್ಷೋಹಿಣಿಯ ಬಲಾಬಲಗಳನ್ನು ಲೆಕ್ಕ ಹಾಕಿದರೂ ಕೇಡಿನ ಕಡೆಗೆ ಸಂಖ್ಯಾಬಲ ಹೆಚ್ಚಿತ್ತು. ನೂರರ ವಿರುದ್ಧ ಐದು, ಹತ್ತರ ವಿರುದ್ಧ ಒಂದು, ಹನ್ನೊಂದರ ವಿರುದ್ಧ ಏಳು- ಹೀಗೆ. ಇವೆಲ್ಲ ಸೂಚ್ಯಾರ್ಥದವು. ಇಂದು ಯಾವುದೇ ಮಸೂದೆಯನ್ನು ಜನರ ಅಂಗೀಕಾರಕ್ಕೆ ನೀಡಿದರೆ ಅ ಮೊದಲು ಯೋಚಿಸುವುದು ಅದು ತಾವು ಬೆಂಬಲಿಸುವ ರಾಜಕೀಯಕ್ಕೆ ಅನುಕೂಲವಾಗಿದೆಯೆಂದೇ; ತಮ್ಮ ಅನುಕೂಲದ ಅಗತ್ಯವೇ ಇಲ್ಲದಂತೆ ಈ ವ್ಯವಹಾರ ನಡೆಯುತ್ತಿದೆ. ಮನುಷ್ಯ ಸ್ವಾರ್ಥಿಯಾಗಬಾರದು, ವೈಯಕ್ತಿಕವಾಗಬಾರದು, ಸಮಾಜಮುಖಿಯಾಗಿರಬೇಕು, ನಿಜ. ಆದರೆ ಒಂದು ಸಮುದಾಯದ ಹಿತಕ್ಕೇ ಕುತ್ತು ಬರುವಂತಹ ವಿಚಾರದಲ್ಲೂ ಸಾಮಾನ್ಯರೆಂದು ಕರೆಸಿಕೊಳ್ಳುವವರು ತಳೆಯುವ ನಿಲುವು ತೀರ ಅಪಾಯಕಾರಿಯಾಗುತ್ತಿದೆ. ಇದು ಕೃಷಿ ಅಂತಲ್ಲ, ಉದ್ಯೋಗ, ವೃತ್ತಿ, ಸರಕು-ಸಾಮಗ್ರಿಗಳ ಬೆಲೆ, ಹೀಗೆ ಬದುಕಿನ ಎಲ್ಲ ಮಜಲುಗಳನ್ನು ವ್ಯಾಪಿಸುವ ಕ್ಷೇತ್ರಗಳಿಗೆ ಸಂಬಂಧಿಸಿದೆ. ಇತ್ತು ಒಂದು ಕಾಲ: ಸ್ವಾತಂತ್ರ್ಯ ಪಡೆಯುವಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿ ಬದುಕನ್ನು ಬಲಿಕೊಟ್ಟ ಇತಿಹಾಸವಿದೆ. ಅದೊಂದು ಮೌಲ್ಯರಕ್ಷಣೆಗೆ; ಬದುಕಿನ ಸತ್ಯದ ಸಾಕ್ಷಾತ್ಕಾರಕ್ಕೆ. ಆದರೆ ಇಂದು ಯಾವ ಮೌಲ್ಯವರ್ಧನೆಗಾಗಿ ಜನತೆ ಮೌನ ಅಥವಾ ರಾಜಕೀಯ ನಿಲುವನ್ನು ತಳೆದಿದೆ?

ಈಚೆಗೆ ಸತತವಾಗಿ ತೈಲೋತ್ಪನ್ನಗಳ ಬೆಲೆ ಹೆಚ್ಚಾಯಿತು; ಜನರ ಕೈ ಮೀರಿತು. ಆದರೆ ರಾಜಕೀಯವಾಗಿ ಕೆಲವು ಪಕ್ಷಗಳು ಸ್ವಲ್ಪವೇ ಪ್ರತಿರೋಧ ತಾಳಿದವು. ಉಳಿದ ಬಹುಸಂಖ್ಯಾತರು ತಮ್ಮ ಅಪಾರ ಅರ್ಥಹೀನ ಸಹನೆಯನ್ನು ತೋರಿದರು. ಯಾವ ಪಕ್ಷವೂ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ. ಬೆಲೆ ಏರಿತೆಂದು ಯಾರೂ ತಮ್ಮ ಚಟಗಳನ್ನು ಬಿಡಲಿಲ್ಲ. ಅದೇ ಪ್ರಯಾಣ; ಅದೇ ಸುಖ/ಉಪಭೋಗ. ಗುಟ್ಟಿನಲ್ಲಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರೇ ವಿನಾ ಅದು ಬಹಿರಂಗವಾಗಿ ಸ್ಫೋಟವಾಗಲಿಲ್ಲ. ಸರಕಾರ ಈ ಘೋರಮೌನವನ್ನು ಬೆಂಬಲವೆಂದೇ ತಿಳಿಯುತ್ತದೆ ಮತ್ತು ಅದೇ ಕಾರಣವಾಗಿ ಬೆಲೆಯನ್ನು ನಿಯಂತ್ರಿಸುವ ಯಾವ ಹೆಜ್ಜೆಯನ್ನೂ ಇಡಲಿಲ್ಲ. ಹಿಂದೊಮ್ಮೆ ನೀರುಳ್ಳಿ ಬೆಲೆಯೇರಿಕೆಯಿಂದ ದಿಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಪಕ್ಷವು ಚುನಾವಣೆಯಲ್ಲಿ ಸೋತಿತು. ಇಂದಾಗಿದ್ದರೆ ಈ ಸಂದರ್ಭ ಎದುರಾಗುವುದಿಲ್ಲ. ಬೆಲೆಯೇರಿಕೆ ತಮ್ಮ ಬದುಕನ್ನು ಬಾಧಿಸುವ ವಿಚಾರವೆಂದು ಜನರು ತಿಳಿಯುವುದಿಲ್ಲ. ಇದು ತಮ್ಮ ಹಣೆಬರಹವೆಂದು ಬಗೆಯುತ್ತಾರೆ. (ಆದರೂ ಈಚೆಗಿನ ಉಪಚುನಾವಣೆಯಲ್ಲಿ ಮತದಾರರು ತಳೆದ ನಿರ್ಧಾರವು ತೈಲಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಇಳಿಸಲು ಕಾರಣವಾಯಿತೆಂದು ನಂಬಬೇಕಾಗಿದೆ. ತಮ್ಮ ನಿಯಂತ್ರಣದಲ್ಲಿಲ್ಲವೆಂದು ಹೇಳಿ ಸರಕಾರ ದೀಪಾವಳಿಯ ಮೊದಲಿನ ನಾಲ್ಕು ದಿನಗಳಲ್ಲೂ ಬೆಲೆಯೇರಿಸಿ ಚುನಾವಣಾ ಫಲಿತಾಂಶ ಬಂದೊಡನೆಯೇ ನಿಯಂತ್ರಣ ಪಡೆದದ್ದು ಒಂದು ಸ್ಫೋಟವೇ ಸರಿ. ಉಪಚುನಾವಣೆಗಳ ಉಪಉತ್ಪತ್ತಿಯೆಂದು ಪಿ.ಚಿದಂಬರಂ ಹೇಳಿದ್ದು ಈ ಅರ್ಥದಲ್ಲೇ!)

ನಿರುದ್ಯೋಗದ (ಅಥವಾ ಉದ್ಯೋಗದ?) ಸಮಸ್ಯೆಯೂ ಹೀಗೆಯೇ. ನಿರುದ್ಯೋಗಿ ಯುವಜನತೆ ಇದು ತಮ್ಮ ಭವಿಷ್ಯಕ್ಕೆ ಒದಗಿದ ವಿನಾಶಕಾರೀ ಅಪಾಯವೆಂದು ತಿಳಿಯುವುದಿಲ್ಲ. ಬದಲಾಗಿ ರಾಜಕೀಯ ಸಭೆ, ಸಮಾರಂಭಕ್ಕೆ ಬಾಡಿಗೆಗೆ ಒದಗುವ ಮೂಲಕ ತಮ್ಮ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿಕೊಳ್ಳುತ್ತಾರೆ. ಸಿಕ್ಕುವ ಬಿಡಿಗಾಸು ಸಮಸ್ಯೆಯ ಮುಖವನ್ನೇ ವಿರೂಪಗೊಳಿಸುತ್ತದೆ. ಆಳುವವರಿಗೆ ಬೇಕಾದ್ದೂ ಇದೇ. ನಮ್ಮ ಜನರು ಎದುರಿಸುವ ಸಾಮಾನ್ಯ ಸಮಸ್ಯೆಗಳ ಕಡೆಗೆ ಗಮನ ಹರಿಸಿದರೆ ನಿಜಕ್ಕೂ ಯಾವ ಸರಕಾರವಾದರೂ ಜನಹಿತವನ್ನು ರಕ್ಷಿಸುತ್ತಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು. ದೇಶದ ಒಟ್ಟಾರೆ ಬಡತನವು ಅಧಿಕಾರದ ಅನಗತ್ಯ ವೆಚ್ಚಗಳನ್ನು ಕಡಿಮೆಮಾಡಿಲ್ಲ. ರಾಜಕಾರಣಿಗಳು ಬೇಕಾದಾಗ ಬೇಕೆಂಬ ರೀತಿಯಲ್ಲಿ ಸೌಕರ್ಯಗಳನ್ನು ಪಡೆಯುತ್ತಾರೆ. ಒಬ್ಬ ಮಂತ್ರಿಯೋ, ಹಿರಿಯ ಅಧಿಕಾರಿಯೋ ಮಾಡುವ ಪ್ರಯಾಣದ, ಭಾಗವಹಿಸುವ ಕಾರ್ಯಕ್ರಮಗಳ ವೆಚ್ಚವನ್ನು ಜನತೆ ತಿಳಿಯುವ ಪ್ರಯತ್ನವನ್ನು ಮಾಡುವುದಿಲ್ಲ. ಮಾಧ್ಯಮಗಳು ವರದಿಮಾಡುವುದಿಲ್ಲ. ರಾಜಕೀಯ (ಕು)ತಂತ್ರಗಳಾದ ಗ್ರಾಮವಾಸ್ತವ್ಯವೆಂಬ ಪ್ರಹಸನದಲ್ಲಿ ಎಷ್ಟೊಂದು ಬಡಜನ ಭಾಗವಹಿಸುತ್ತಾರೆ! ಒಬ್ಬ ಮಂತ್ರಿ ಒಂದು ಕಾರ್ಯಕ್ರಮದಲ್ಲೋ ಸಮಾರಂಭದಲ್ಲೋ ಭಾಗವಹಿಸುವುದೆಂದರೆ ಒಂದು ಊರಿನ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವಷ್ಟು ವೆಚ್ಚ ತಗಲುತ್ತದೆ.

ನಮ್ಮ ಅನೇಕ ಕಾರ್ಯಕ್ರಮ, ಸಮಾರಂಭಗಳಿಗೆ ರಾಜಕಾರಣಿಗಳು ಬಂದರೆ ಅವರೊಂದಿಗೆ ಅಧಿಕಾರಿಗಳ ದಂಡೇ ಬರುತ್ತದೆ. ಅನಗತ್ಯ ಪೊಲೀಸ್ ಬಂದೋಬಸ್ತ್ ಬೇರೆ. ಒಂದೇ ಸಭೆ-ಸಮಾರಂಭಕ್ಕೆ ಡಜನ್‌ಗಟ್ಟಲೆ ಮಂತ್ರಿಗಳು ಹಾಜರಾಗುವುದೂ ಇದೆ. ಇವರೆಲ್ಲ ‘ತಮ್ಮ ಬಿಡುವಿಲ್ಲದ ಕಾರ್ಯಗಳನ್ನು ಬದಿಗೊತ್ತಿ’ ಬರುವವರು ಮತ್ತು ಆತಿಥೇಯರು ಹಾಗೆ ಹೇಳಬೇಕೆಂದು ಬಯಸುವವರು ಮಾತ್ರವಲ್ಲ, ಹಾಗೆ ಹೇಳಲೇಬೇಕೆಂದು ಒತ್ತಾಯಿಸುವವರು. ಹಿರಿಯ ಅಧಿಕಾರಿಗಳು ಬಂದರೂ ಅಷ್ಟೇ: ಅವರೊಂದಿಗೆ ದಿಬ್ಬಣದಂತೆ ಎಲ್ಲ ಅಧೀನ ಅಧಿಕಾರಿಗಳೂ ಹಾಜರಾಗುತ್ತಾರೆ. ಆ ಸಂದರ್ಭದಲ್ಲಿ ಸಂಬಂಧಿತ ಕಚೇರಿಗಳು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವವರ ಗೈರುಹಾಜರಿಯಿಂದ ಪರಿತಪಿಸುತ್ತದೆ. ಗ್ರಾಮವಾಸ್ತವ್ಯಕ್ಕೆ ಮಂತ್ರಿಯೊಬ್ಬರು ಹೋಗುತ್ತಾರೆಂದರೆ ಅಲ್ಲಿನ ಸ್ವರೂಪವೇ ಒಂದು ಘಳಿಗೆಗೆ ಮಯಮಂಟಪದಂತೆ ಬದಲಾಗುತ್ತದೆ. ಗಾಂಧಿಯ ಬದುಕಿನ ಎಲ್ಲ ಮೌಲ್ಯಗಳನ್ನು ಗೌರವಿಸುವಾಗಲೂ ಯಾರೋ ಒಬ್ಬರು ಹೇಳಿದ್ದರು: ‘‘ಗಾಂಧಿಯನ್ನು ಹಾಗೆ ಬದುಕಿಸಲು ಸರಕಾರಕ್ಕಾದ ವೆಚ್ಚ ಅಪಾರವಾಗಿತ್ತು!’’ ವ್ಯವಸ್ಥೆಯ ಬಹುದೊಡ್ಡ ಲೋಪದೋಷ ಇದು. ಈಚೆಗೆ ಒಕ್ಕೂಟ ಸರಕಾರದ ಗೃಹಮಂತ್ರಿ ಅಮಿತ್‌ಶಾ ಬಡವನೊಬ್ಬನ ಮನೆಯಲ್ಲಿ ನೆಲೆಸಿದ್ದು ಅದ್ದೂರಿ ಪ್ರಚಾರ ಪಡೆದಿತ್ತು. ಆ ಮನೆಯ ವಾಸಿಗೆ ಇದರಿಂದ ಮೂರುಕಾಸೂ ಒದಗಲಿಲ್ಲ. ಆತನ ಗೋಳು ಹಾಗೆಯೇ ಉಳಿದಿದೆಯೆಂದು ವರದಿಯಾಗಿದೆ. ರಾಷ್ಟ್ರಪತಿ ಶೃಂಗೇರಿಗೆ ಬಂದರೆಂದರೆ ಅಲ್ಲಿನ ದಿನಗೂಲಿಗಳಿಗೆ, ಪುಟ್ಟ ವ್ಯಾಪಾರಿಗಳಿಗೆ ಎರಡು ದಿನ ಉಪವಾಸ. ರಾಜಕಾರಣವೆಂದರೆ ಇದೇ. ಅನಗತ್ಯವನ್ನು ಅನಿವಾರ್ಯವಾಗಿಸುವುದು!

ಹೋಗಲಿ, ಇಂತಹವು ಎಲ್ಲ ದೇಶಗಳಲ್ಲಿ, ರಾಜ್ಯಗಳಲ್ಲಿ ಪಕ್ಷಭೇದವಿಲ್ಲದೆ ನಡೆಯುತ್ತವೆಯೆಂದು ತಿಳಿಯಬಹುದು. ಒಕ್ಕೂಟ ಸರಕಾರದ, ಈಗ ಕುಖ್ಯಾತಿ ಪಡೆದ ಅಕ್ರಮಚಟುವಟಿಕೆಗಳನ್ನು ತಡೆಯುವ ಕಾಯ್ದೆ(ಯುಎಪಿಎ)ಯ ಅಂಗೀಕಾರಕ್ಕೆ ಭಾಜಪದೊಂದಿಗೆ ಇತರ ಪಕ್ಷಗಳೂ ಮತ್ತು ಮುಖ್ಯವಾಗಿ ಕಾಂಗ್ರೆಸ್‌ಕೂಡಾ ಕೈಜೋಡಿಸಿತ್ತು. ತಾವೇ ಸೇರಿ ಮಾಡಿದ ಈ ಅಪಚಾರವನ್ನು ಖಂಡಿಸುವಾಗ ಜನ ಇವನ್ನು ಅರ್ಥಮಾಡಿಕೊಂಡಾರೆಂಬ ಆತಂಕ ಅವರಿಗಿಲ್ಲ. ಅದು ಅಂದಿಗೆ; ಇದು ಇಂದಿಗೆ!

ನಮ್ಮ ಹತ್ತಿರದ ಜಿಲ್ಲಾ, ತಾಲೂಕು, ಗ್ರಾಮ ಕಚೇರಿಗಳಲ್ಲಿ ವ್ಯವಹರಿಸಬೇಕಾದರೆ ಜನರು ಪಡುವ ಪಾಡು ಹೇಗಿದೆ? ಸರಕಾರಕ್ಕೆ ಅಥವಾ ಯಾವುದೇ ಬ್ಯಾಂಕು ಇಲ್ಲವೇ ಪ್ರಾಧಿಕಾರಕ್ಕೂ ತನ್ನ ಭೂಮಿಯ, ನೆಲೆಯ ಮತ್ತಿತರ ವಿಚಾರಗಳ ಕುರಿತು ಏನೇ ನೆರವು ಕೇಳಬೇಕಾದರೂ ಕಂದಾಯ ದಾಖಲೆಗಳನ್ನು ಹಾಜರುಮಾಡಬೇಕೆಂಬ ವ್ಯವಸ್ಥೆಯಿದೆ. ತಾಲೂಕು ಮಟ್ಟದ ಕಚೇರಿಗಳಲ್ಲಿ ಇವನ್ನು ಪಡೆಯಲು ದೊಡ್ಡ ಸಾಲೇ ಇರುತ್ತದೆ. ಇದು ನಿರತ ನಿರಂತರ. ಅದನ್ನು ಅಷ್ಟು ಕಷ್ಟಪಟ್ಟು ಹಣ ನೀಡಿ ಪಡೆದು ಅದೇ ಕಚೇರಿಗೆ ನೀಡಬೇಕು. ಸರಕಾರಕ್ಕೆ ಹಣವಾಯಿತು. ನೆರವು ನೀಡಬೇಕೋ ಬೇಡವೋ ಎಂಬುದು ಆನಂತರದ ವಿಚಾರ! ಹೇಗೂ ಸರಕಾರದಲ್ಲಿ ಈ ದಾಖಲೆಗಳಿವೆ; ಅವನ್ನು ಉಲ್ಲೇಖಿಸಿದರೆ ಸಾಕು, ಇಂದಿನ ಅಂತರ್ಜಾಲ ವ್ಯವಸ್ಥೆಯಲ್ಲಿ ಅವನ್ನು ತಮ್ಮ ಕಚೇರಿಯಲ್ಲೇ ನೋಡಿಕೊಳ್ಳಬಹುದು, ಪರಿಶೀಲಿಸಬಹುದು, ದೃಢೀಕರಿಸಬಹುದು ಎಂಬ ಧೋರಣೆ ಯಾವಾಗ ಬರುತ್ತದೆಯೋ?
ಇದು ಕಂದಾಯ ವಿಚಾರಗಳಿಗೆ ಮಾತ್ರವಲ್ಲ, ಅರಣ್ಯ ಇಲಾಖೆಗೂ ಅನ್ವಯವಾಗುತ್ತದೆ. ನಿಮ್ಮದೇ ಜಾಗದಲ್ಲಿರುವ ಒಂದು ಮರವನ್ನು ನೀವು ಸ್ವಂತಕ್ಕೆ ಬಳಸಬೇಕಾದರೆ ಅದೆಷ್ಟು ಕೆಲಸವಿದೆಯೆಂದರೆ ಇದು ಸಾಧ್ಯವೇ ಇಲ್ಲ, ತಮ್ಮ ಹಿತ ಹಾಳಾಗಿಹೋಗಲಿ ಎಂಬಲ್ಲಿಗೆ ಬಂದು ನಿಂತ ರೈತ ಯಾವನೋ ಮರದ ವ್ಯಾಪಾರಿಗೆ ಇದನ್ನು ವಹಿಸಿ ಅವನ್ನು ನೀಡಿದ ಕಿಂಚಿತ್ ಹಣದಲ್ಲಿ ತೃಪ್ತನಾಗುತ್ತಾನೆ. ತೃಪ್ತನಾಗುತ್ತಾನೋ ಇಲ್ಲವೋ ಬೇರೆ ಮಾತು; ಅಂತೂ ಶನಿ ಬಿಟ್ಟಿತು ಎಂದು ನಿರಾಳವಾಗುತ್ತಾನೆ.

ಶಿಕ್ಷಣ, ಮದುವೆ ಇಂತಹ ವಿಚಾರಗಳಿಗೆ ಬ್ಯಾಂಕ್‌ನಿಂದ ಸಾಲ ಪಡೆಯುವವರು ಬ್ಯಾಂಕುಗಳ ಅಧಿಕಾರಿಗಳ ಮುಂದೆ ಅಸಹಾಯಕರಾಗಿ ನಿಂತದ್ದನ್ನು ಕಂಡಾಗ ಅವರ ದಾಸಾನುದಾಸ ದೈನ್ಯ ನಮ್ಮನ್ನು ಕಾಡಬೇಕು. ಕಾಡುತ್ತದೆಯೇ? ಇಲ್ಲ. ಅನೇಕ ಬಾರಿ ನೂರಕ್ಕೆ ನೂರು ಅಂಕ ಪಡೆದರೆ ಸಾಲದು; ಯಾವ ಪ್ರತಿಭೆ-ಪಾಂಡಿತ್ಯವೂ ಸಾಲದು; ಕೈಕಟ್ಟಿ ನಿಲ್ಲಲು, ಅವಮಾನವನ್ನು ತಾಳಿಕೊಳ್ಳಲು ಸಿದ್ಧರಿರಬೇಕು ಅನ್ನಿಸುತ್ತದೆ. ಜಗನ್ನಾಥ ರಥಯಾತ್ರೆಯಲ್ಲಿ ಜನ ಸಾಯುತ್ತಲೇ ಇರುತ್ತಾರೆ. ಇವನ್ನು ನಿತ್ಯ ಸಾಯುವವರಿಗೆ ಅಳುವವರು ಯಾರು ಎಂಬ ಒಂದೇ ಮಾತಿನಲ್ಲಿ ಗುಡಿಸಿ ಹಾಕಿ ಸುಮ್ಮನಾಗಬಹುದು. ತನ್ನನ್ನು ಇತರರು ಮೆಚ್ಚಿಕೊಳ್ಳಬೇಕೆಂಬ ಮನುಷ್ಯ ಸಹಜ ಬಯಕೆಯ ಈಡೇರಿಕೆಯಾದ ಪ್ರಶಸ್ತಿಗಳನ್ನು ಪಡೆಯುವಲ್ಲಿಯೂ ಬಹುಪಾಲು ಈ ಅರ್ಜಿಹಾಕುವ, ಪ್ರಭಾವಿಸುವ, ವ್ಯವಹಾರವಿದ್ದೇ ಇದೆ. ಆಳುವವರ ಪ್ರೀತಿಗಳಿಸಿದ ಕಂಗನಾ ರಣಾವತ್‌ಗೆ ಈ ಚಿಂತೆ ಇರಲಿಕ್ಕಿಲ್ಲ. ಅನಿವಾರ್ಯವಾಗಿ ಗುರುತಿಸಲೇಬೇಕಾದ ಹರೇಕಳ ಹಾಜಬ್ಬನಂಥವರಿಗೂ ಈ ಅಗತ್ಯವಿಲ್ಲದಿರ ಬಹುದು. ಆದರೆ ಈ ಎರಡು ಕೊನೆಗಳ ನಡುವೆ ಇರುವ ಅಪಾರ ಸಂಖ್ಯೆಯ ಮುಗ್ಧರಿಗೆ ಸಮಸ್ಯೆಗಳ ನಡುವೆ ಬಾಯಿಗೆ ಬೀಗ ಜಡಿದುಕೊಂಡು ಬದುಕಿ ಉಳಿಯುವುದೇ ಪ್ರಶಸ್ತಿ. ಪ್ರಜಾಪ್ರಭುತ್ವವು ಇಂತಹ ವಿಚಾರಗಳನ್ನು ಹೇಗೆ ಬಗೆಹರಿಸುತ್ತದೆಯೆಂಬುದನ್ನು ಇತಿಹಾಸ ಹೇಳಿಲ್ಲ; ಭವಿಷ್ಯ ಹೇಳೀತೇನೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)