varthabharthi


ಕಾಲಮಾನ

ಪತ್ರಿಕಾ ಸ್ವಾತಂತ್ರ್ಯದ ಮಹಾ ಪ್ರತೀಕ: ಬಿ.ಜಿ. ಹಾರ್ನಿಮನ್

ವಾರ್ತಾ ಭಾರತಿ : 13 Nov, 2021
ರಾಮಚಂದ್ರ ಗುಹಾ

ಸುದ್ದಿಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳು ಆಡಳಿತದ ಪರವಹಿಸಿ ನಿಲ್ಲುವ, ಸರಕಾರವು ವಿಚಾರಣೆ ನಡೆಸದೆಯೇ ಬಂಧನಗಳನ್ನು ನಡೆಸುತ್ತಿರುವ ಮತ್ತು ಸುಳ್ಳುಗಳನ್ನು ಹರಡುತ್ತಿರುವ, ವರ್ಗೀಯ ದ್ವೇಷವನ್ನು ಪ್ರಚೋದಿಸುವ ಈ ಸಂದರ್ಭದಲ್ಲಿ ದಿಟ್ಟತನ ಹಾಗೂ ಆತ್ಮಸಾಕ್ಷಿಯನ್ನು ಹೊಂದಿರುವ ಭಾರತೀಯ ಪತ್ರಕರ್ತರು, ''ತಪ್ಪು ಕಂಡಾಗಲೆಲ್ಲಾ ಆತ ಅದನ್ನು ನಿರ್ಭೀತಿಯಿಂದ ಬಯಲಿಗೆಳೆಯುತ್ತಿದ್ದರು'' ಎಂದು ಸ್ವತಃ ಗಾಂಧೀಜಿಯವರೇ ಪ್ರಶಂಸಿಸಿರುವ ಈ ಸಂಪಾದಕನಿಂದ ಸ್ಫೂರ್ತಿಯನ್ನು ಪಡೆದುಕೊಳ್ಳಬೇಕಾಗಿದೆ.


1995ರಲ್ಲಿ ಬಾಂಬೆ ನಗರವನ್ನು ಮುಂಬೈ ಎಂಬುದಾಗಿ ಮರುನಾಮಕರಣಗೊಳಿಸಲಾಯಿತು. ಆನಂತರ ಆ ನಗರದ ಕಟ್ಟಡಗಳು, ರಸ್ತೆಗಳು, ಉದ್ಯಾನವನಗಳು ಹಾಗೂ ರೈಲು ನಿಲ್ದಾಣಗಳ ಮರುನಾಮಕರಣದಲ್ಲಿ ತೀರಾ ಹೆಚ್ಚಳವಾಯಿತು. ಆದಾಗ್ಯೂ ಕೆಲವು ದಿವಂಗತ ವಿದೇಶೀಯರ ಹೆಸರುಗಳು ಇತಿಹಾಸದ ಕಸದಬುಟ್ಟಿಯನ್ನು ಸೇರುವುದರಿಂದ ತಪ್ಪಿಹೋದವು. ಅವರಲ್ಲಿ ಕೇಂದ್ರ ಮುಂಬೈನ ಮುಖ್ಯ ರಸ್ತೆಗೆ ಇರಿಸಲಾದ ಆ್ಯನಿಬೆಸೆಂಟ್ ಅವರ ಹೆಸರು ಈಗಲೂ ಉಳಿದುಕೊಂಡಿದೆ ಮತ್ತು ನಗರದ ದಕ್ಷಿಣ ಭಾಗದಲ್ಲಿ ಹಳೆಯ ಕಟ್ಟಡಗಳಿಂದ ಆವೃತವಾದ ಆಕರ್ಷಕವಾದ ಮರಗಳಿಂದ ಕೂಡಿದ ಉದ್ಯಾನವನವು ಬಿ.ಜಿ. ಹಾರ್ನಿಮನ್ ಅವರ ಹೆಸರನ್ನು ಹೊಂದಿದೆ.

ಮುಂಬೈ ಮಾತ್ರವಲ್ಲದೆ ಇಂದಿನ ಭಾರತದಲ್ಲಿ ಬೆಸೆಂಟ್ ಅವರ ಹೆಸರು ಹಾರ್ನಿಮನ್‌ಗಿಂತಲೂ ಹೆಚ್ಚು ಮಾನ್ಯತೆ ಹಾಗೂ ಗೌರವಾದರವನ್ನು ಪಡೆದುಕೊಂಡಿದೆ. ಬನಾರಸ್ ಹಿಂದೂ ವಿವಿಯ ಸಂಸ್ಥಾಪಕರಾದ ಮದನ್ ಮೋಹನ್ ಮಾಲವೀಯ, ಹೋಂ ರೂಲ್ ಚಳವಳಿಯ ಸಂಸ್ಥಾಪಕ ಬಾಲ ಗಂಗಾಧರ ತಿಲಕ್ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷತೆಯನ್ನು ಆಲಂಕರಿಸಿದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಆ್ಯನಿಬೆಸೆಂಟ್ ಅವರು ಶಾಲಾ ಪಠ್ಯಪುಸ್ತಕಗಳಲ್ಲಿ ಹಾಗೂ ಸಾಮಾನ್ಯ ಜ್ಞಾನದ ಪ್ರಶ್ನೆಗಳಲ್ಲಿ ಈಗಲೂ ಹೆಸರಿಸಲ್ಪಡುತ್ತಿದ್ದಾರೆ. ಮುಂಬೈನ ಹಾರ್ನಿಮನ್ ವೃತ್ತದ ಹೆಸರಿನಿಂದಾಗಿ ಈಗಲೂ ಜನಸಾಮಾನ್ಯರ ನೆನಪಿನಲ್ಲಿ ಉಳಿದಿರುವ ಸಂಪಾದಕ ಬಿ.ಜಿ. ಹಾರ್ನಿಮನ್ ಅವರ ಸಾಧನೆಯು ನಮ್ಮ ಕಾಲದಲ್ಲಿ ಹಿಂದೆಂಗಿತಲೂ ಹೆಚ್ಚು ಪ್ರಸ್ತುತವಾಗಿದೆ.

1913ರಲ್ಲಿ ಭಾರತದ ಉದಾರವಾದಿಗಳ ಗುಂಪೊಂದು 'ಬಾಂಬೆ ಕ್ರಾನಿಕಲ್' ಎಂಬ ಹೆಸರಿನ ಪತ್ರಿಕೆಯನ್ನು ಆರಂಭಿಸಿತು. ಸರಕಾರದ ಪರವಾದ ಪತ್ರಿಕೆಯಾದ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ರಾಷ್ಟ್ರೀಯವಾದಿ ಪರ್ಯಾಯ ಪತ್ರಿಕೆಯಾಗಿ ಅದು ಮೂಡಿಬಂದಿತ್ತು. ಆಗ ಬಿ.ಜಿ. ಹಾರ್ನಿಮನ್ ಅವರು ಕೋಲ್ಕತಾದ 'ದಿ ಸ್ಟೇಟ್ಸ್‌ಮನ್' ಪತ್ರಿಕೆಗೆ ಸಹಾಯಕ ಸಂಪಾದಕರಾಗಿದ್ದರು. ಆನಂತರ ಅವರು 'ದಿ ಕ್ರಾನಿಕಲ್' ಪತ್ರಿಕೆಯ ಪ್ರಪ್ರಥಮ ಸಂಪಾದಕರಾಗಲು ಬಾಂಬೆಗೆ ತೆರಳಿದ್ದರು. ಜನಾಂಗೀಯ ಸೀಮೆಗಳನ್ನು ನಿರಾಯಾಸವಾಗಿ ಮೀರಿನಿಂತ ವರ್ಚಸ್ಸು ಅವರದ್ದಾಗಿತ್ತು. ಬಂಗಾಳದ ವಿಭಜನೆಯನ್ನು ವಿರೋಧಿಸಿ ಚಳವಳಿ ಆರಂಭವಾದಾಗ ಹಾರ್ನಿಮನ್ ಅವರು ಈ ಪ್ರತಿಭಟನೆಯೊಂದಿಗೆ ಗುರುತಿಸಲ್ಪಟ್ಟಿದ್ದರು. ಶೋಕತಪ್ತ ಬಂಗಾಳಿಗಳಿಗೆ ಸಹಾನುಭೂತಿಯನ್ನು ಸೂಚಿಸಲು ಹಾರ್ನಿಮನ್ ಅವರು ಬಿಳಿ ಧೋತಿ, ಕುರ್ತಾ ಹಾಗೂ ಚಾದರವನ್ನು ಧರಿಸಿ ಪಕ್ಕಾ ದೇಶಭಕ್ತ ಭಾರತೀಯನಂತೆ ಕೋಲ್ಕತಾದ ಬೀದಿಗಳಲ್ಲಿ ಬರಿಗಾಲಿನಲ್ಲಿ ನಡೆದರು.

'ಬಾಂಬೆ ಕ್ರಾನಿಕಲ್' ಪತ್ರಿಕೆಯ ಸಂಪಾದಕರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಹಾರ್ನಿಮನ್ ಅವರು 'ಪ್ರೆಸ್ ಅಸೋಸಿಯೇಶನ್ ಆಫ್ ಇಂಡಿಯಾ'ವನ್ನು ಸ್ಥಾಪಿಸಿದರು. ಏಕಪಕ್ಷೀಯ ಕಾನೂನುಗಳು ಹಾಗೂ ಆಡಳಿತದ ಹಿಡಿತದಿಂದ ದೇಶದ ಪತ್ರಿಕೋದ್ಯಮವನ್ನು ಎಲ್ಲಾ ಕಾನೂನುಸಮ್ಮತ ವಿಧಾನಗಳ ಮೂಲಕ ರಕ್ಷಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾದ ಕಾರ್ಯನಿರತ ಪತ್ರಕರ್ತರ ಸಂಘ ಅದಾಗಿತ್ತು. ಪತ್ರಿಕಾ ಸ್ವಾತಂತ್ರವನ್ನು ಅತಿಕ್ರಮಿಸುವ ಶಾಸಕಾಂಗದ ಪ್ರಯತ್ನಗಳನ್ನಾಗಲಿ ಅಥವಾ ಪತ್ರಿಕೆಯ ಮುಕ್ತ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುವ ಅಥವಾ ಶಾಸಕಾಂಗದ ಹಾಗೂ ಪತ್ರಕರ್ತರ ಮುಕ್ತ ಸ್ವಾತಂತ್ರಕ್ಕೆ ಅಡ್ಡಿಪಡಿಸುವ ಅಧಿಕಾರಶಾಹಿಗಳ ಎಲ್ಲಾ ರೀತಿಯ ಪ್ರಯತ್ನಗಳಿಂದ ಪತ್ರಕರ್ತರನ್ನು ರಕ್ಷಿಸುವ ಉದ್ದೇಶವನ್ನು ಈ ಸಂಘಟನೆ ಹೊಂದಿತ್ತು. ಭಾರತದ ಕಾರ್ಯನಿರತ ಪತ್ರಕರ್ತರ ಪ್ರಪ್ರಥಮ ಅಧ್ಯಕ್ಷರಾಗಿ ಹಾರ್ನಿಮನ್ ಅವರು ಪತ್ರಿಕಾ ಸ್ವಾತಂತ್ರಕ್ಕಾಗಿ ನಿರ್ಭೀತಿಯಿಂದ ಹೋರಾಡಿದರು. ಪತ್ರಿಕಾ ಕಾಯ್ದೆಯನ್ನು ಸರಕಾರವು ದುರುಪಯೋಗಪಡಿಸುವುದರ ವಿರುದ್ಧ ಪ್ರತಿಭಟಿಸಿ ವೈಸ್‌ರಾಯ್ ಹಾಗೂ ಗವರ್ನರ್ ಅವರಿಗೆ ದೂರುಗಳನ್ನ್ನು ಸಲ್ಲಿಸಿದ್ದರು. ಪ್ರಥಮ ಜಾಗತಿಕ ಮಹಾಯುದ್ಧದ ನೆಪ ಹೇಳಿಕೊಂಡು ಬ್ರಿಟಿಷ್ ರಾಜ್ ಆಡಳಿತವು ತನ್ನ ರಾಜಕೀಯ ವಿರೋಧಿಗಳನ್ನು ಬಂಧಿಸಲು ಪತ್ರಿಕಾ ಕಾಯ್ದೆಯನ್ನು ಬಳಸಿಕೊಳ್ಳುತ್ತಿದ್ದುದು ಮತ್ತು ಪತ್ರಕರ್ತರ ಸುರಕ್ಷತೆ, ಅವರ ವಾಕ್‌ಸ್ವಾತಂತ್ರ ಹಾಗೂ ಬರವಣಿಗೆ ಸ್ವಾತಂತ್ರವನ್ನು ಹತ್ತಿಕ್ಕುವುದರ ವಿರುದ್ಧ ಹಾರ್ನಿಮನ್ ಅವರಿಗೆ ಪತ್ರವನ್ನು ಬರೆಯಲು ಪ್ರೇರೇಪಿಸಿತು.

ಇಂಗ್ಲಿಷ್‌ನಲ್ಲಿ ಪ್ರಕಟವಾದ 'ದಿ ಕ್ರಾನಿಕಲ್' ಪತ್ರಿಕೆಯು ಇಂಗ್ಲಿಷ್ ಭಾಷೆಯನ್ನು ಓದಲು ಅಥವಾ ಮಾತನಾಡಲು ಬಾರದ ಬಡವರ್ಗಗಳ ಪರವಾಗಿ ನಿಂತಿತ್ತು. ಇತಿಹಾಸಕಾರ ಸಂದೀಪ್ ಬರೆದಿರುವಂತೆ, ಹಾರ್ನಿಮನ್ ಅವರ ಪತ್ರಿಕೆಯು ಕಾರ್ಮಿಕರನ್ನು ಹಾಗೂ ನಗರ ಪ್ರದೇಶದ ಬಡವರನ್ನು ಒಳಪಡಿಸುವ ಮೂಲಕ ನಗರದ ಅಧಿಕೃತ ಸಮಾಜಶಾಸ್ತ್ರವನ್ನು ತಿದ್ದುಪಡಿಗೊಳಿಸಿತ್ತು. ಹತ್ತಿಗಿರಣಿ ಉದ್ಯೋಗಿಗಳು, ಕಾರ್ಮಿಕರು, ರೈಲ್ವೆ ಕಾರ್ಮಿಕರು ಹಾಗೂ ಕಡಿಮೆ ವೇತನದಲ್ಲಿ ದುಡಿಯುವ ಸರಕಾರಿ ಗುಮಾಸ್ತರು, ಮುನ್ಸಿಪಲ್ ಹಾಗೂ ಖಾಸಗಿ ಕಚೇರಿಗಳಲ್ಲಿ ನೌಕರರು, ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಬೆಲೆಯೇರಿಕೆ ಹಾಗೂ ಅವಶ್ಯಕ ಸಾಮಗ್ರಿಗಳ ಕೊರತೆಯಿಂದ ಬಾಧಿತರಾದವರ ಬದುಕು ಬವಣೆಗಳನ್ನು ಅವರು ತನ್ನ ಪತ್ರಿಕೆಯಲ್ಲಿ ಅನಾವರಣಗೊಳಿಸಿದ್ದರು.

ತನ್ನ ಸಂಪಾದಕೀಯದಲ್ಲಿ ಹಾರ್ನಿಮನ್ ಅವರು ಭಾರತೀಯರ ಕ್ಷೇಮದ ಬಗ್ಗೆ ಕಾಳಜಿಯಲ್ಲದೆ ಕೇವಲ ಲಾಭದ ಆಸೆಯಿಂದ ಭಾರತಕ್ಕೆ ಬಂದಿರುವ ಮತ್ತು ಸಾಕಷ್ಟು ಹಣವನ್ನು ಸಂಪಾದಿಸಿದ ಬಳಿಕ ಲಂಡನ್‌ನ ವಿಲಾಸಿ ಪ್ರದೇಶಗಳಾದ ಕ್ಯಾಲ್‌ಫಮ್ ಅಥವಾ ಡ್ಯೂಂಡಿಯಲ್ಲಿ ವಾಸಿಸಲು ತಮ್ಮ ದೇಶಕ್ಕೆ ವಾಪಸಾಗುವ ಬ್ರಿಟಿಷ್ ಅಂಗಡಿ ಮಾಲಕರು ಹಾಗೂ ವರ್ತಕರ ವಿರುದ್ಧ ಕಟುವಾದ ದಾಳಿಗಳನ್ನು ನಡೆಸುತ್ತಿದ್ದರು. 1918ರಲ್ಲಿ ಖೇಡಾದಲ್ಲಿ ನಡೆದ ರೈತ ಹೋರಾಟವನ್ನು ಪ್ರಬಲವಾಗಿ ಬೆಂಬಲಿಸಿದರು. ಫಿಜಿ ಹಾಗೂ ಕೆರೀಬಿಯನ್‌ನ ಹೊಲಗದ್ದೆಗಳಲ್ಲಿ ಜೀತದಾಳುಗಳಾಗಿ ದುಡಿಯಲು ಭಾರತೀಯರನ್ನು ಸಾಗಾಟಮಾಡುವ ಅಸಹ್ಯಕರ ವ್ಯವಸ್ಥೆಯ ವಿರುದ್ಧವೂ ಅವರು ಧ್ವನಿಯೆತ್ತಿದ್ದರು.

1919ರಲ್ಲಿ ಎಪ್ರಿಲ್ ಮೊದಲ ವಾರದಲ್ಲಿ ರೌಲತ್ ಕಾಯ್ದೆಯ ವಿರುದ್ಧ ಬಾಂಬೆಯಲ್ಲಿ ಮಹಾತ್ಮಾ ಗಾಂಧೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಹಾರ್ನಿಮನ್ ಅವರು ಕೈಜೋಡಿಸಿದ್ದರು. ಅದೇ ತಿಂಗಳ ಕೊನೆಯಲ್ಲಿ ಅವರ ಪತ್ರಿಕೆಯು ಜಲಿಯಾನ್‌ವಾಲಾಬಾಗ್ ಹತ್ಯಾಕಾಂಡ ಹಾಗೂ ಪಂಜಾಬ್‌ನಲ್ಲಿ ಸ್ವಾತಂತ್ರ ಚಳವಳಿಯ ದಮನದ ಬಗ್ಗೆ ಸವಿಸ್ತಾರವಾದ ಲೇಖನ, ವರದಿಗಳನ್ನು ಪ್ರಕಟಿಸಿತ್ತು. ಇದು ಬಾಂಬೆ ಸರಕಾರವನ್ನು ಕೆರಳಿಸಿತು. ಹಾರ್ನಿಮನ್ ಅವರನ್ನು ಹಡಗಿನ ಮೂಲಕ ಬ್ರಿಟನ್‌ಗೆ ಕಳುಹಿಸಿಕೊಟ್ಟಿತು. ಈ ಗಡಿಪಾರಿನ ಹಿಂದೆ ಸ್ಥಾಪಿತ ವರ್ಗ ಹಾಗೂ ಜನಾಂಗೀಯ ಹಿತಾಸಕ್ತಿಯಿರುವುದಾಗಿ ಗುಜರಾತಿ ದಿನಪತ್ರಿಕೆಯೊಂದು ಅಭಿಪ್ರಾಯಿಸಿತ್ತು. ಅಧಿಕಾರಶಾಹಿಗೆ ಹಾಗೂ ಸ್ವಾರ್ಥಿಗಳಾದ ಆಂಗ್ಲೋ- ಇಂಡಿಯನ್ ವ್ಯಾಪಾರಿಗಳ ಪಾಲಿಗೆ ಹಾರ್ನಿಮನ್ ಅವರ ಹೆಸರು ಭೀತಿಯನ್ನು ಹುಟ್ಟಿಸಿತು.
 ಸಂಪಾದಕ ಹಾರ್ನಿಮನ್ ಅವರನ್ನು ಬ್ರಿಟಿಷ್ ಸರಕಾರವು ಬರ್ಬರವಾಗಿ ನಡೆಸಿಕೊಂಡ ಬಗ್ಗೆ ಗಾಂಧೀಜಿಯವರು ಹೇಳಿಕೆಯೊಂದನ್ನು ಹೊರಡಿಸಿದರು. ಹಾರ್ನಿಮನ್ ಅವರು ಅತ್ಯಂತ ಶೂರ ಹಾಗೂ ಉದಾರಿ ಆಂಗ್ಲ ವ್ಯಕ್ತಿಯೆಂದು ಗಾಂಧೀಜಿ ತಿಳಿಸಿದರು. ''ಅವರು ಸ್ವಾತಂತ್ರದ ಮಂತ್ರವನ್ನು ನಮಗೆ ನೀಡಿದರು. ತನಗೆ ಕಂಡ ತಪ್ಪುಗಳನ್ನು ಅವರು ನಿರ್ಭಿಡೆಯಿಂದ ಬಯಲುಗೊಳಿಸಿದ್ದರು. ಹೀಗೆ ಅವರು ತನ್ನ ಜನಾಂಗಕ್ಕೆ ಭೂಷಣವೆನಿಸಿದರು ಹಾಗೂ ಅಗಾಧವಾದ ಸೇವೆಯನ್ನು ಸಲ್ಲಿಸಿದರು. ಭಾರತಕ್ಕೆ ಅವರು ನೀಡಿದ ಸೇವೆಯನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದಿದ್ದಾನೆ'' ಎಂದರು.

ಬಾಂಬೆಗೆ ವಾಪಸಾಗುವುದಕ್ಕೆ ಸಾಧ್ಯವಾಗುವುದಕ್ಕಾಗಿ ಪಾಸ್‌ಪೋರ್ಟ್ ಪಡೆಯಲು ಹಾರ್ನಿಮನ್ ಅವರು ಹಲವಾರು ವರ್ಷಗಳ ಕಾಲ ವಿಫಲ ಪ್ರಯತ್ನ ನಡೆಸಿದರು. ಹೀಗೆ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಅವರು ನೇರವಾಗಿ ಹಡಗೊಂದನ್ನು ಏರಿದರು ಹಾಗೂ 1926ರಲ್ಲಿ ಭಾರತದ ದಕ್ಷಿಣ ಕರಾವಳಿಗೆ ಬಂದಿಳಿದರು. ಆಗ ಅವರಿಗೆ ಭಾರತದಲ್ಲಿ ಉಳಿಯಲು ಅನುಮತಿ ನೀಡಲಾಯಿತು ಹಾಗೂ ಅವರು ತನ್ನ ಜೀವನದ ಉಳಿದ ವರ್ಷಗಳನ್ನು ಭಾರತೀಯ ಮಾಲಕತ್ವದ ಸರಣಿ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದರು. 'ಬಾಂಬೆ ಕ್ರಾನಿಕಲ್' ಪತ್ರಿಕೆಗೆ ಮತ್ತೊಮ್ಮೆ ಸಂಪಾದಕರಾದರು. 'ಇಂಡಿಯನ್ ನ್ಯಾಶನಲ್ ಹೆರಾಲ್ಡ್' ಎಂಬ ಅಲ್ಪಾವಧಿಯವರೆಗೆ ಬದುಕಿದ ಪತ್ರಿಕೆಯ ಸಾರಥ್ಯವನ್ನೂ ಅವರು ನಿರ್ವಹಿಸಿದ್ದರು ಮತ್ತು ಅಂತಿಮವಾಗಿ ಅವರು ಕ್ರೊನಿಕಲ್ ಪತ್ರಿಕೆ ಆರಂಭಿಸಿದ 'ಬಾಂಬೆ ಸೆಂಟಿನೆಲ್' ಎಂಬ ಸಂಜೆ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದರು.

ಬಿ.ಜಿ.ಹಾರ್ನಿಮನ್ ಅವರಿಗೆ ಪತ್ರಿಕೋದ್ಯಮವು ಒಂದು ಪ್ರವೃತ್ತಿಯಾಗಿತ್ತೇ ಹೊರತು ಉದ್ಯಮವಾಗಿರಲಿಲ್ಲ. 1932ರ ಸೆಪ್ಟಂಬರ್‌ನಲ್ಲಿ ಬಾಂಬೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹಾರ್ನಿಮನ್ ಅವರು ''ಒಂದು ಮಾದರಿ ದಿನಪತ್ರಿಕೆಯು ಜಾಹೀರಾತು ಅಥವಾ ಅಂತಹದೇ ರೀತಿಯ ಎಲ್ಲಾ ವಿಧದ ಔದ್ಯಮಿಕ ಪರಿಗಣನೆಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಪಾಶ್ಚಾತ್ಯ ಮಾಧ್ಯಮಗಳಲ್ಲಿ ವಾಣಿಜ್ಯಿಕ ಅಂಶಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಇದರ ಪರಿಣಾಮವಾಗಿ ದಿನಪತ್ರಿಕೆಗಳು ವಸ್ತುಶಃ ಜಾಹೀರಾತುದಾರರ ಹಂಗಿನಲ್ಲಿ ಬೀಳುವಂತೆ ಮಾಡುತ್ತದೆ'' ಎಂದು ಪ್ರತಿಪಾದಿಸಿದ್ದರು. ಆದರೆ ಭಾರತದಲ್ಲಿ ಆ ಸಮಸ್ಯೆ ಎದುರಾಗದು ಎಂದವರು ಹೇಳಿದ್ದರು.

ಜೀವನದಲ್ಲಿ ಪ್ರಾಪಂಚಿಕ ಸುಖಗಳಿಗಾಗಿ ಹಂಬಲಿಸುವ ಯಾರಿಗೂ ಕೂಡಾ ತಾನು ಪತ್ರಿಕೋದ್ಯಮವನ್ನು ವೃತ್ತಿಯಾಗಿ ತೆಗೆದುಕೊಳ್ಳುವುದಕ್ಕೆ ಶಿಫಾರಸು ಮಾಡುವುದಿಲ್ಲವೆಂದು ಹಾರ್ನಿಮನ್ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಇನ್ನೊಂದೆಡೆ, ಜೀವನದಲ್ಲಿ ಆದರ್ಶಗಳನ್ನು ಹೊಂದಿರುವ ವ್ಯಕ್ತಿಯು ಅದರಲ್ಲಿಯೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸಲು ಬಯಸುವ ಭಾರತದ ಯಾವುದೇ ವ್ಯಕ್ತಿಗೆ ತಾನು ಪತ್ರಿಕೋದ್ಯಮವನ್ನು ಬಲವಾಗಿ ಶಿಫಾರಸು ಮಾಡುವುದಾಗಿ ತಿಳಿಸಿದ್ದರು. ಯಾಕೆಂದರೆ ಜನಪರ ಪತ್ರಿಕೋದ್ಯಮವು ಉಳಿದೆಲ್ಲದ್ದಕ್ಕಿಂತಲೂ ಅಧಿಕವಾಗಿ ಭಾರತದ ಹಿತಾಸಕ್ತಿಗಳನ್ನು ಹಾಗೂ ರಾಷ್ಟ್ರೀಯ ಧ್ಯೇಯವನ್ನು ರಕ್ಷಿಸಬಲ್ಲದು ಮತ್ತು ಭಾರತವು ಅದರ ಇಚ್ಛಿತ ಗುರಿಗಳೆಡೆಗೆ ಸಾಗುವಂತೆ ಮಾಡಬಲ್ಲದು ಎಂದವರು ಹೇಳಿದ್ದರು.

ಶ್ರೀಮಂತರು ಹಾಗೂ ಪ್ರಭಾವಿಗಳ ಬಣ್ಣವನ್ನು ಬಯಲಿಗೆಳೆಯು ತ್ತಿದ್ದುದರಿಂದ, ಹಾರ್ನಿಮನ್ ಅವರು ಆಗಾಗ ನಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದಿತ್ತು. ಬಾಂಬೆಯಲ್ಲಿ ಸುದ್ದಿಪತ್ರಿಕೆಗಳ ಸಂಪಾದಕನಾಗಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾಗ ಅವರಿಂದ ಅಥವಾ ಅವರ ಪತ್ರಿಕೆಯಿಂದ ನಿಂದಿತರಾದವರಿಂದ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಒಂದೊಮ್ಮೆ ಹಾರ್ನಿಮನ್ ಅವರ ಪರ ನ್ಯಾಯಾಲಯದಲ್ಲಿ ವಾದಿಸಿದ ವಕೀಲರೊಬ್ಬರು ಹೀಗೊಂದು ಪತ್ರ ಬರೆದಿದ್ದರು. ''ಕೇವಲ ಸಣ್ಣಮಟ್ಟದ ತಾಂತ್ರಿಕ ಅಂಶವನ್ನು ಆಶ್ರಯಿಸಿಕೊಂಡು ಮೊಕದ್ದಮೆಯಿಂದ ತಪ್ಪಿಸಿಕೊಳ್ಳುವವರಲ್ಲಿ ಹಾರ್ನಿಮನ್ ಅವರು ಕೊನೆಯ ವ್ಯಕ್ತಿಯಾಗಲಿದ್ದಾರೆ. ಅವರು ನಾಲ್ಕು ಚದರ ಅಡಿ ಜಾಗದಲ್ಲಿ ನಿಂತುಕೊಂಡು, ತನ್ನ ಪರವಾಗಿ ದಿಟ್ಟವಾಗಿ ವಾದಿಸುವವರು ಮತ್ತು ಪ್ರತಿಯೊಂದು ನೆಲಗಟ್ಟನ್ನೂ ಬಳಸಿಕೊಂಡು ಹೋರಾಡುವರು'' ಎಂದು ಪ್ರಶಂಸಿಸಿದ್ದರು. ''ಸಂಪಾದಕನಾಗಿ ಕರ್ತವ್ಯ ನಿರ್ವಹಿಸಿದ್ದರಿಂದ ಅತ್ಯಂತ ಘೋರವಾದ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಲು ಅವರು ತಳೆಯುತ್ತಿದ್ದ ಧೈರ್ಯವು ಜಗತ್ತಿನ ಬೇರೆಲ್ಲಿಯೂ ಕಾಣಸಿಗದು. ತನ್ನ ನ್ಯಾಯವಾದಿಯು ಅಧೀರನಾದಂತಹ ಕೆಟ್ಟ ಸನ್ನಿವೇಶವನ್ನು ಕೂಡಾ ಹಾರ್ನಿಮನ್ ಅವರು ದಿಟ್ಟತನದಿಂದ ಎದುರಿಸಿದ್ದರು'' ಎಂದು ಅವರ ವಕೀಲರು ಬರೆದಿದ್ದರು.

ಭಾರತವನ್ನು ತನ್ನ ಸ್ವಂತ ಮನೆಯನ್ನಾಗಿ ಮಾಡಿಕೊಂಡಿದ್ದ ಹಾರ್ನಿಮನ್ ಅವರು ಈ ದೇಶವು ಬ್ರಿಟಿಷ್ ರಾಜ್ಯದಿಂದ ಮುಕ್ತಗೊಳ್ಳುವುದನ್ನು ಕಾಣುವಷ್ಟು ದೀರ್ಘಕಾಲ ಬದುಕಿದ್ದರು. 1948ರ ಅಕ್ಟೋಬರ್‌ನಲ್ಲಿ ಹಾರ್ನಿಮನ್ ಅವರು ನಿಧನರಾದಾಗ ಕೋಲ್ಕತಾ, ಮದ್ರಾಸ್, ಹೊಸದಿಲ್ಲಿ ಹಾಗೂ ಲಕ್ನೋದ ಸುದ್ದಿಪತ್ರಿಕೆಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದವು. ಬಾಂಬೆ ಮಹಾನಗರದ ಸುದ್ದಿಪತ್ರಿಕೆಗಳು ಕೂಡಾ ಹಾರ್ನಿಮನ್‌ರ ಸೇವೆಯನ್ನು ಪ್ರಶಂಸಿಸುವ ಲೇಖನಗಳನ್ನು ಪ್ರಕಟಿಸಿದ್ದವು. ಬಾಂಬೆ ಸೆಂಟಿನೆಲ್ ಪತ್ರಿಕೆಯು ತನ್ನ ಲೇಖನದಲ್ಲಿ, ಹಾರ್ನಿಮನ್ ಅವರಂತಹ ದಮನಿತರ ಪರ ಹೋರಾಟಗಾರನನ್ನು ಕಾಣವುದು ಕಷ್ಟಕರ. ನ್ಯಾಯಸಮ್ಮತವಾದ ಅಹವಾಲನ್ನು ಮುಂದಿಡುವಾತನನ್ನು ಆತ ಎಷ್ಟೇ ನಗಣ್ಯನಾಗಿರಲಿ, ಅದನ್ನು ಅವರು ತಾಳ್ಮೆಯಿಂದ ಆಲಿಸುತ್ತಿದ್ದರು. ಅಹವಾಲು ಅಪ್ಪಟವಾದುದೆಂದು ಅರಿವಾದಲ್ಲಿ ಅದರ ಪರವಾಗಿ ಹೋರಾಡಲು ಅವರು ಯಾವುದೇ ದೂರದವರೆಗೂ ಹೋಗಬಲ್ಲರು. ಕಾನೂನುಕ್ರಮಗಳ ಹಾಗೂ ಮೊಕದ್ದಮೆಗಳ ಸುಳಿಗೆ ತಾನು ಸಿಲುಕಬಹುದೆಂಬ ಅರಿವಿದ್ದರೂ ಅದನ್ನು ಅವರು ಲೆಕ್ಕಿಸದೆ ನ್ಯಾಯಕ್ಕಾಗಿ ಹೋರಾಡುತ್ತಿದ್ದರು. ಸಂಪಾದಕನಾಗಿ ಹಾರ್ನಿಮನ್ ಅವರ ವಿಶಿಷ್ಟವಾದ ಮಹಾನತೆ ಇದಾಗಿದೆ. ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕಾಗಿ ಇಂತಹ ರಿಸ್ಕ್‌ಗಳನ್ನು ತೆಗೆದುಕೊಳ್ಳಲು ಅವರು ಸದಾ ಸಿದ್ಧರಿರುತ್ತಿದ್ದರು ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅವರು ಚಿಂತಿಸುತ್ತಿರಲಿಲ್ಲ.

 ಇಂದಿನ ದಿನಗಳಲ್ಲಿ ಇಂತಹ ಪದಗಳು ಅತ್ಯಂತ ಹೃದಯಸ್ಪರ್ಶಿ ಹಾಗೂ ವಂದನೀಯವಾಗಿ ಕಾಣುತ್ತದೆ. ಸುದ್ದಿಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳು ಆಡಳಿತದ ಪರವಹಿಸಿ ನಿಲ್ಲುವ, ಸರಕಾರವು ವಿಚಾರಣೆ ನಡೆಸದೆಯೇ ಬಂಧನಗಳನ್ನು ನಡೆಸುತ್ತಿರುವ ಮತ್ತು ಸುಳ್ಳುಗಳನ್ನು ಹರಡುತ್ತಿರುವ, ವರ್ಗೀಯ ದ್ವೇಷವನ್ನು ಪ್ರಚೋದಿಸುವ ಈ ಸಂದರ್ಭದಲ್ಲಿ ದಿಟ್ಟತನ ಹಾಗೂ ಆತ್ಮಸಾಕ್ಷಿಯನ್ನು ಹೊಂದಿರುವ ಭಾರತೀಯ ಪತ್ರಕರ್ತರು, ''ತಪ್ಪು ಕಂಡಾಗಲೆಲ್ಲಾ ಆತ ಅದನ್ನು ನಿರ್ಭೀತಿಯಿಂದ ಬಯಲಿಗೆಳೆಯುತ್ತಿದ್ದರು'' ಎಂದು ಸ್ವತಃ ಗಾಂಧೀಜಿಯವರೇ ಪ್ರಶಂಸಿಸಿರುವ ಈ ಸಂಪಾದಕನಿಂದ ಸ್ಫೂರ್ತಿಯನ್ನು ಪಡೆದುಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)