varthabharthi


ಸಂಪಾದಕೀಯ

ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ಜೀರ್ಣೋದ್ಧಾರ ನಡೆಯಲಿ

ವಾರ್ತಾ ಭಾರತಿ : 13 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆಹಾರದಷ್ಟೇ ಶಿಕ್ಷಣವೂ ಮನುಷ್ಯನ ಮೂಲಭೂತ ಹಕ್ಕು. ನಮ್ಮ ಸಂವಿಧಾನವು ಇದನ್ನೇ ಪ್ರತಿಪಾದಿಸುತ್ತದೆ. ಈ ದೃಷ್ಟಿಯನ್ನಿಟ್ಟುಕೊಂಡೇ ಯುಪಿಎ ಅಧಿಕಾರಾವಧಿಯಲ್ಲಿ ಆರ್‌ಟಿಇ ಕಾಯ್ದೆ ಜಾರಿಗೆ ಬಂತು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಈ ಕಾಯ್ದೆಯ ಆಶಯವಾಗಿತ್ತು. ಆದರೆ ಕಳೆದ ಏಳೆಂಟು ವರ್ಷಗಳಿಂದ ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕುಗಳಿಗೆ ಬೇರೆ ಬೇರೆ ಕಾರಣಗಳಿಂದ ಚ್ಯುತಿ ಬಂದಿದೆ. ದೇಶದಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳು ಖಾಸಗಿ ತೆಕ್ಕೆಗೆ ಜಾರುತ್ತಿವೆ. ಕೊರೋನ ದಿನಗಳಿಂದ ಸರಕಾರ ಆಹಾರ ಮತ್ತು ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿಯನ್ನಾದರೂ ವಹಿಸಿದೆ. ಆದರೆ ಶಿಕ್ಷಣಕ್ಕೆ ಸಂಬಂಧಿಸಿ ಸಂಪೂರ್ಣ ನಿರ್ಲಕ್ಷವನ್ನು ತಾಳಿದೆ. ಕಳೆದೆರಡು ವರ್ಷಗಳಿಂದ ಶಿಕ್ಷಣ ಮೊಬೈಲ್ ಉಳ್ಳವರ ಸೊತ್ತಾಗಿ ಪರಿವರ್ತನೆಯಾಗಿದೆ. ಉಳ್ಳವರಷ್ಟೇ ತಮ್ಮ ಆರ್ಥಿಕ ಶಕ್ತಿಯ ಮೂಲಕ ಬೇರೆ ಬೇರೆ ಮಾರ್ಗಗಳಿಂದ ಶಿಕ್ಷಣವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಬಡವರು ಶಿಕ್ಷಣ ಕ್ಷೇತ್ರದಿಂದ ಸಂಪೂರ್ಣ ಹೊರ ದಬ್ಬಲ್ಪಟ್ಟಿದ್ದಾರೆ. ಕೊರೋನ ಸೋಂಕು ನಿಯಂತ್ರಿಸುವ ಕ್ರಮವಾಗಿ ಭಾರತ ಸರಕಾರ ಆರಂಭದಲ್ಲಿ ಜಾರಿಗೊಳಿಸಿದ ಲಾಕ್‌ಡೌನ್‌ನ ಪರಿಣಾಮ ಶಾಲೆಗಳನ್ನು ಮುಚ್ಚಿದ್ದರಿಂದ ಸುಮಾರು 250 ಮಿಲಿಯ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಅಬ್ಸರ್ವರ್ ರಿಸರ್ಚ್ ಫೌಂಡೇಷನ್ ಹೇಳಿದೆ.

ಅವಕಾಶ ವಂಚಿತ ಮತ್ತು ದುರ್ಬಲ ವರ್ಗದ ಸಹಸ್ರಾರು ಮಕ್ಕಳು ಶಾಲೆಗೆ ಹೋಗುವ ಅವಕಾಶ ಕಳೆದುಕೊಂಡರು. ಇನ್ನು ಕೆಲವು ಮಕ್ಕಳು ಸೋಂಕಿಗೆ ಸಂಬಂಧಿಸಿದ ಸಾವು ಹಾಗೂ ಆರ್ಥಿಕ ನಷ್ಟದಿಂದ ಕಂಗೆಟ್ಟಿದ್ದ ಕುಟುಂಬಕ್ಕೆ ನೆರವಾಗಲು ಬಾಲಕಾರ್ಮಿಕ ವ್ಯವಸ್ಥೆಗೆ ಬಲಿಯಾದರು. ನಗರ ಪ್ರದೇಶದ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಯಂತಹ ಆಧುನಿಕ ವ್ಯವಸ್ಥೆಗೆ ಸೂಕ್ತವಾಗಿ ಒಗ್ಗಿಕೊಂಡರೂ ಸರಕಾರಿ ಶಾಲೆಗಳು, ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಆನ್‌ಲೈನ್ ವ್ಯವಸ್ಥೆಗೆ ಬದಲಾವಣೆ ಹೊಂದಲು ಹೆಣಗಾಡುವಂತಾಯಿತು. ಡಿಜಿಟಲ್ ಮೂಲಕ ಸೌಕರ್ಯದ ಲಭ್ಯತೆಯ ಕೊರತೆ, ವಿದ್ಯುತ್ ಪೂರೈಕೆಯಲ್ಲಿ ತೊಂದರೆ, ಪವರ್ ಕಟ್, ಮನೆಯ ಪರಿಸರ, ಮನೆಯಲ್ಲಿ ಅಧ್ಯಯನಕ್ಕೆ ಇರುವ ಸ್ಥಳಾವಕಾಶ ಇವೆಲ್ಲವೂ ಗ್ರಾಮೀಣ ಪ್ರದೇಶದ ಹಿಂದುಳಿದ ಮತ್ತು ದಲಿತ ವರ್ಗದ ಮಕ್ಕಳನ್ನು ತೀವ್ರವಾಗಿ ಬಾಧಿಸಿವೆ. ಕೆಲವು ರಾಜ್ಯಗಳಲ್ಲಿ ಕೊರೋನ ಸಂಬಂಧಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಉನ್ನತ ತರಗತಿಗಳನ್ನು ಆರಂಭಿಸಲಾಗಿದೆ.

ಆದರೆ 3ನೇ ಅಲೆಯ ತೂಗು ಕತ್ತಿ ಇದರ ನೆತ್ತಿಯ ಮೇಲಿದೆ. 12ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಪ್ರಸ್ತಾವನೆಯು ಇನ್ನೂ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದ ಪರಿಶೀಲನೆಯಲ್ಲಿದೆ. ಪ್ರಾಥಮಿಕ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ವ್ಯವಸ್ಥೆ ಹಾಗೂ ಪರೀಕ್ಷೆಗೆ ಹಾಜರಾಗಲು ಸಂಚಾರ ವ್ಯವಸ್ಥೆಯ ಬಗ್ಗೆ ಹಲವು ಬಾರಿ ಪರಿಶೀಲನೆ ನಡೆದಿದ್ದರೂ, ಅಂತಿಮ ಪರೀಕ್ಷೆಗೆ ಹಾಜರಾಗಲು ದೇಶದಾದ್ಯಂತ ಕಾರ್ಯವಿಧಾನ ರೂಪಿಸುವುದಕ್ಕೆ ಈಗಿನ ಅಸಾಮಾನ್ಯ ಪರಿಸ್ಥಿತಿ ಆಸ್ಪದ ನೀಡುತ್ತಿಲ್ಲ. ಇದರ ಪರಿಣಾಮ ಹಲವು ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಧಿಕೃತವಾಗಿ ಇನ್ನೂ ಪೂರ್ಣಗೊಳಿಸಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಮಯಾವಕಾಶ ಇಲ್ಲವಾಗಿದೆ. ಕೊರೋನ ಸೋಂಕು ಪ್ರಾರಂಭವಾದಂದಿನಿಂದ ವಿಶ್ವದಲ್ಲಿ ಸುಮಾರು 15 ಲಕ್ಷ ಮಕ್ಕಳು ಅನಾಥರಾಗಿದ್ದು ಇದರಲ್ಲಿ 1.2 ಲಕ್ಷ ಮಕ್ಕಳು ಭಾರತದವರು. ಇಂತಹ ಮಕ್ಕಳ ಶಿಕ್ಷಣಾವಕಾಶಕ್ಕೆ ಅಪಾಯ ಎದುರಾಗಿದೆ. ದಿಲ್ಲಿ, ಆಂಧ್ರಪ್ರದೇಶದಂತಹ ಕೆಲವು ರಾಜ್ಯಗಳು ಇಂತಹ ಮಕ್ಕಳಿಗಾಗಿ ಮಕ್ಕಳ ರಕ್ಷಾ ಕೇಂದ್ರಗಳನ್ನು ಆರಂಭಿಸಿವೆಯಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮಕ್ಕಳನ್ನು ಗುರುತಿಸುವ ಕೆಲಸ ನಡೆಯುವ ಮೊದಲೇ, ಅವರು ಜೀತ ವ್ಯವಸ್ಥೆಯಂತಹ ಅಮಾನುಷ ಪದ್ಧತಿಗೆ ಬಲಿಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಮಕ್ಕಳ ಸಂಖ್ಯೆಯೆಷ್ಟು ಎನ್ನುವ ಸ್ಪಷ್ಟ ದಾಖಲೆಯೇ ಸರಕಾರದ ಬಳಿಯಿಲ್ಲ.

 ಇದೀಗ ದೇಶಾದ್ಯಂತ ಶಾಲೆಗಳು ಆರಂಭವಾಗುತ್ತಿವೆೆ. ಆದರೆ ಮಕ್ಕಳ ಹಾಜರಾತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳು ಕೂಡ ಹಾಜರಾತಿಯ ಬಗ್ಗೆ ಪಾಲಕರ ಮೇಲೆ ಒತ್ತಡ ಹಾಕದಂತಹ ಪರಿಸ್ಥಿತಿಯಿದೆ. ಗ್ರಾಮೀಣ ಪ್ರದೇ ಶದಲ್ಲಿ, ಶಾಲೆಗಳು ತೆರೆದರೂ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಇವೆಲ್ಲವೂ ಭವಿಷ್ಯದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಲಿದೆ.

ಕೊರೋನ, ಲಾಕ್‌ಡೌನ್‌ಗಳು ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ ಬೀರಿದ ಪರಿಣಾಮಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸಮಿತಿಯೊಂದನ್ನು ನೇಮಿಸಿ, ಶಿಕ್ಷಣ ಕ್ಷೇತ್ರದಲ್ಲಿ ನಡೆದ ನಾಶ ನಷ್ಟಗಳನ್ನು ಕಲೆ ಹಾಕುವ ಪ್ರಯತ್ನ ನಡೆಸಬೇಕು. ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಣದಿಂದ ಹೊರತಳ್ಳಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆಯನ್ನು ಗುರುತಿಸಿ ಅವರನ್ನು ಮತ್ತೆ ಶಿಕ್ಷಣದೆಡೆಗೆ ಕರೆತರುವ ಯೋಜನೆಗಳನ್ನು ರೂಪಿಸಬೇಕು. ಈ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಶಿಕ್ಷಣ ಕ್ಷೇತ್ರದ ಈ ಬಿಕ್ಕಟ್ಟು ಭಾರತದ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಹುದು ಎನ್ನುವುದರ ಬಗ್ಗೆಯೂ ಅಧ್ಯಯನ ನಡೆಯಬೇಕಾಗಿದೆ. ಭಾರತದ ಶಿಕ್ಷಣದ ಟೊಳ್ಳುತನದ ಬಗ್ಗೆ ವ್ಯಾಪಕ ಆರೋಪಗಳಿವೆ. ಈ ಆರೋಪಗಳ ನಡುವೆಯೇ, ಲಾಕ್‌ಡೌನ್ ಸಂದರ್ಭದಲ್ಲಿ ಮತ್ತು ಆ ಬಳಿಕ ಶಿಕ್ಷಣದ ಗುಣಮಟ್ಟ ಇನ್ನಷ್ಟು ಕುಸಿದಿದೆ. ಆದುದರಿಂದ ಬರೇ ಶಾಲೆ ಆರಂಭದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಶಿಕ್ಷಣ ತಳಸ್ತರದಲ್ಲಿ ತಲುಪುವಂತೆ ಮಾಡಲು, ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಹೊಸದಾಗಿ ಕೆಲಸ ಆರಂಭಿಸಬೇಕಾಗಿದೆ. ಕೊರೋನ ಸೋಂಕು ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಹದಗೆಡಿಸಿದರೂ, ಈ ಪರಿಸ್ಥಿತಿಯನ್ನು ಬದಲಾವಣೆಯ ಅವಕಾಶ ಎಂದು ನಾವು ಪರಿಗಣಿಸಬೇಕಾಗಿದೆ. ನೂತನ ಅಧ್ಯಯನ ಮತ್ತು ಬೋಧನಾ ಕ್ರಮವನ್ನು ಖಾಸಗಿ ಕ್ಷೇತ್ರದ ಸಂಘಸಂಸ್ಥೆಗಳ ನೆರವಿನಿಂದ ಭಾರತ ಸರಕಾರ ಜಾರಿಗೆ ತಂದರೆ ಮತ್ತು ಈ ವ್ಯವಸ್ಥೆ ಎಲ್ಲಾ ಮಕ್ಕಳಿಗೂ ಲಭ್ಯವಾಗುವಂತೆ ಕ್ರಮ ಕೈಗೊಂಡರೆ ಭಾರತದ ಮುಂದಿನ ಪೀಳಿಗೆ ಉತ್ತಮ ಜೀವನಕ್ರಮವನ್ನು ಸಶಕ್ತಗೊಳಿಸಲು ಸಾಧ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)