varthabharthi


ಪ್ರಚಲಿತ

ಇವರು ಪಾತ್ರಧಾರಿಗಳು ಮಾತ್ರ

ವಾರ್ತಾ ಭಾರತಿ : 15 Nov, 2021
ಸನತ್ ಕುಮಾರ್ ಬೆಳಗಲಿ

ಬಿಜೆಪಿಯಲ್ಲಾಗಲಿ ಒಟ್ಟಾರೆ ಸಂಘ ಪರಿವಾರದಲ್ಲಾಗಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತರಿಗೆ ಗೊತ್ತಿಲ್ಲದೇ ಒಂದು ಕಡ್ಡಿಯೂ ಅಲುಗಾಡುವುದಿಲ್ಲ. ಅಕಸ್ಮಾತ್ ಯಾರಾದರೂ ಆಡಬಾರದ ಮಾತು ಆಡಿದರೆ ಅವರನ್ನು ಬೈದು ಬಾಯಿ ಮುಚ್ಚಿಸುವ ಸಾಮರ್ಥ್ಯ ಅವರಿಗಿದೆ. ಆದರೆ, ಯಾರಾದರೂ ಏನಾದರೂ ಮಾತಾಡಲಿ ಎಂದು ಮೌನ ತಾಳಿದ್ದಾರೆಂದರೆ ಇಂತಹ ವಿವಾದಾಸ್ಪದ ಮಾತುಗಳ ಬಗ್ಗೆ ಇವರಿಗೆ ಅಂಥ ಅಭ್ಯಂತರವೇನೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.ಸ್ವಾತಂತ್ರ ಹೋರಾಟದ ಬಗ್ಗೆ ನಟಿ ಕಂಗನಾ ರಣಾವತ್ ಆಡಿದ ಮಾತು ವಿವಾದದ ಅಲೆಯನ್ನೆಬಿಸಿದೆ. ಇದು ಆಕೆ ಆಡಿದ ಮಾತಿರಬಹುದು. ಆದರೆ, ಹೀಗೆ ಮಾತನಾಡಬೇಕೆಂದೇ ಕಣ್ಸನ್ನೆ ಮಾಡಿದ ಸೂತ್ರಧಾರರು ಬೇರೆ ಇದ್ದಾರೆ. ಇಂತಹ ವಿವಾದದ ಮಾತುಗಳೇ ಭಾರತದ ಅಧಿಕಾರ ಹಿಡಿದವರಿಗೆ ಮತ್ತು ಅವರ ಸೂತ್ರ ಹಿಡಿದವರಿಗೆ ಮೂಗುದಾಣ ಹಾಕಿದವರಿಗೆ ರಕ್ಷಾ ಕವಚಗಳಾಗಿವೆ. ಅಧಿಕಾರಕ್ಕೆ ಬಂದು 7 ವರ್ಷಗಳ ನಂತರವೂ ಏನನ್ನೂ ಸಾಧಿಸಲಾಗದೆ ಅಳಿದುಳಿದ ರಾಷ್ಟ್ರದ ಆಸ್ತಿಯನ್ನು ಮಾರುವ ಬಗ್ಗೆ ಮಾತಾಡಬೇಕಾದ ಜನ ಕಂಗನಾ ಮಾತಿನ ಸುತ್ತ ಸುತ್ತಾಡುತ್ತಿರುವುದು ಅವರ ಜಾಣತನವಾಗಿದೆ. ನಮ್ಮ ದಡ್ಡತನವಾಗಿದೆ.
 ಕೊರೋನ ಎರಡೂ ಅಲೆಗಳ ನಿರ್ವಹಣೆಯಲ್ಲಿ ವೈಫಲ್ಯ, ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ, ನೂರರ ಗಡಿ ದಾಟಿದ ಪೆಟ್ರೋಲ್ ಮತ್ತು ಡೀಸೆಲ್, ಸಾವಿರಕ್ಕೆ ಸಮೀಪಿಸಿದ ಅಡುಗೆ ಅನಿಲ, ಕೈಯಲ್ಲಿರುವ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಜನ, ಒಂದು ವರ್ಷದಿಂದ ಜಗ್ಗದೆ, ಕುಗ್ಗದೆ ನಡೆದ ರೈತರ ಹೋರಾಟ ಇವೆಲ್ಲವುಗಳ ಬಗ್ಗೆ ಮಾತಾಡಬೇಕಾದ ಜನರನ್ನು 17ನೇ ಶತಮಾನದ ಹೈದರ್, ಟಿಪ್ಪು ಸುಲ್ತಾನರ ಬಗ್ಗೆ, ಒನಕೆ ಓಬವ್ವನ ಬಗ್ಗೆ ಮಾತಾಡಲು ಹಚ್ಚಿದ್ದಾರಲ್ಲ. ಇದು ಕಡಿಮೆ ಚಾಲಾಕಿತನವಲ್ಲ!

ಬಿಜೆಪಿ ನಾಯಕರಿಂದ ವಿವಾದಾಸ್ಪದ ಮಾತುಗಳು ಬರುತ್ತಿರುವುದು ಇದೇನು ಮೊದಲ ಸಲವಲ್ಲ. ಇದು ಇಲ್ಲಿಗೆ ಕೊನೆಯಾಗುವುದೂ ಇಲ್ಲ. ಅವರು ತಿಳಿ ನೀರಿನಲ್ಲಿ ಕಲ್ಲೆಸೆದು ರಾಡಿ ಎಬ್ಬಿಸುತ್ತಾರೆ. ಉಳಿದವರು ರಾಡಿ ನೀರಿನಲ್ಲಿ ಮೀನು ಹಿಡಿಯಲು ಹೋಗಿ ಸುಸ್ತಾಗುತ್ತಾರೆ.

ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದ ‘ನಾಥೂರಾಮ್ ಗೋಡ್ಸೆ ನಿಜವಾದ ರಾಷ್ಟ್ರ ಭಕ್ತ’ ಎಂದು ಬಹಿರಂಗವಾಗಿ ಹೇಳಿದ ಸಾದ್ವಿ ಪ್ರಜ್ಞಾ ಸಿಂಗ್‌ಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರು. ಭೋಪಾಲದ ಜನ ಓಟು ಹಾಕಿದರು. ಆಕೆ ಲೋಕಸಭೆಯನ್ನು ಪ್ರವೇಶಿಸಿದಳು. (ಆಳುವ ಪಕ್ಷದ ಯಾರೂ ಆಕೆಯ ಹೇಳಿಕೆ ಖಂಡಿಸಲಿಲ್ಲ. ಹೀಗೆ ಮಾತಾಡಬಾರದಾಗಿತ್ತು ಎಂದು ಹೇಳಲಿಲ್ಲ.)

ಕೇಂದ್ರ ಮಂತ್ರಿಯಾಗಿದ್ದ ಅನಂತ ಕುಮಾರ್ ಹೆಗಡೆ ವಿವಾದಾಸ್ಪದ ಮಾತುಗಳನ್ನಾಡದ ದಿನವೇ ಇಲ್ಲ. ‘ಸಂವಿಧಾನವನ್ನು ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ’ ಎಂದು ಬಹಿರಂಗವಾಗಿ ಹೇಳಿದ ನಂತರವೂ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ದೊರೆಯಿತು. ಉತ್ತರ ಕನ್ನಡದ ಜನ ಓಟು ಹಾಕಿದರು. ಗೆದ್ದು ಮತ್ತೆ ಲೋಕಸಭೆಗೆ ಪ್ರವೇಶಿಸಿದರು.

ಹೀಗೆ ದಿನವೂ ವಿವಾದಾಸ್ಪದ ಹೇಳಿಕೆಗಳು ಬರುತ್ತಲೇ ಇರುತ್ತವೆ. ಜನರು ಅಂತಹ ಮಾತುಗಳ ಪರ ವಿರೋಧದ ಚರ್ಚೆಯಲ್ಲಿ ಮುಳುಗಿರುವಾಗಲೇ ಸಾರ್ವಜನಿಕ ಸಂಪತ್ತಿನ ಮಾರಾಟ ಯಾವ ಅಡೆ ತಡೆ ಇಲ್ಲದೆ ನಡೆದಿರುತ್ತದೆ. ಇಂತಹ ವಿಷಯಗಳನ್ನು ಚರ್ಚೆಗೆ ಬಿಟ್ಟು ಭಾರತದ ಮಹಾ ಚೇತನಗಳ ಮುಖಕ್ಕೆ ಮಸಿ ಬಳಸಿ ನಂತರ ಸಂವಿಧಾನವನ್ನು ಸಮಾಧಿ ಮಾಡುವುದು ನಾಜೂಕಾದ ಷಡ್ಯಂತ್ರದ ಭಾಗವೆಂದರೆ ಅತಿಶಯೋಕ್ತಿಯಲ್ಲ.

ಬಿಜೆಪಿಯಲ್ಲಾಗಲಿ ಒಟ್ಟಾರೆ ಸಂಘ ಪರಿವಾರದಲ್ಲಾಗಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತರಿಗೆ ಗೊತ್ತಿಲ್ಲದೇ ಒಂದು ಕಡ್ಡಿಯೂ ಅಲುಗಾಡುವುದಿಲ್ಲ. ಅಕಸ್ಮಾತ್ ಯಾರಾದರೂ ಆಡಬಾರದ ಮಾತು ಆಡಿದರೆ ಅವರನ್ನು ಬೈದು ಬಾಯಿ ಮುಚ್ಚಿಸುವ ಸಾಮರ್ಥ್ಯ ಅವರಿಗಿದೆ. ಆದರೆ, ಯಾರಾದರೂ ಏನಾದರೂ ಮಾತಾಡಲಿ ಎಂದು ಮೌನ ತಾಳಿದ್ದಾರೆಂದರೆ ಇಂತಹ ವಿವಾದಾಸ್ಪದ ಮಾತುಗಳ ಬಗ್ಗೆ ಇವರಿಗೆ ಅಂಥ ಅಭ್ಯಂತರವೇನೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದು ಅವರ ಸೈದ್ಧಾಂತಿಕ ನಂಬಿಕೆಯ ಪ್ರಶ್ನೆ. ಹೀಗಾಗಿ ಸಹಜ ಮೌನ ಸಮ್ಮತಿ ಇರುತ್ತದೆ.

ಅಪಾರ ತ್ಯಾಗ ಬಲಿದಾನ, ಹೋರಾಟಗಳ ಫಲವಾಗಿ 1947ರಲ್ಲಿ ಭಾರತಕ್ಕೆ ಬಂದ ಸ್ವಾತಂತ್ರ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳಿಗೆ ಇಷ್ಟವಿರಲಿಲ್ಲ. ಬ್ರಿಟಿಷರು ದೇಶದಿಂದ ಹೋದರೂ ಭಾರತದ ಆಡಳಿತ ವ್ಯವಸ್ಥೆ ಮುಂಚಿನಂತೆ ರಾಜ, ಮಹಾರಾಜರ ಕಾಲದಲ್ಲಿದ್ದಂತೆ ಇರಬೇಕು ಎಂಬುದು ಅವರ ಬಯಕೆಯಾಗಿತ್ತು. ಆದರೆ, ಮಹಾತ್ಮಾ ಗಾಂಧಿ, ಅಂಬೇಡ್ಕರ್ ಮತ್ತು ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿತು. ಈ ಪ್ರಜಾಪ್ರಭುತ್ವ ಮತ್ತು ಸಮಾಜವಾದ ಎಂಬ ಪದಗಳೇ ಅವರಿಗೆ ಅಪಥ್ಯವಾಗಿದ್ದವು. ಅಂತಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಳ್ವಲ್ಕರ್ ಅವರು ‘ಪ್ರಜಾಪ್ರಭುತ್ವ’ ಮತ್ತು ‘ಸಮಾಜವಾದ’ ಎಂಬ ಪದಗಳು ಹೊರದೇಶದಿಂದ ಆಮದಾಗಿ ಬಂದಿವೆ ಎಂದು ಟೀಕಿಸಿದ್ದರು. ಆದರೆ, ತಮ್ಮ ಸಂಘದ ಸಿದ್ಧಾಂತ ಇಟಲಿಯ ಮುಸ್ಸೋಲಿನಿಯಿಂದ ಮತ್ತು ಜರ್ಮನಿಯ ಹಿಟ್ಲರ್‌ನಿಂದ ಎರವಲು ಪಡೆದು ಅದಕ್ಕೆ ಹಿಂದುತ್ವದ ಲೇಪನ ಮಾಡಿದ ಸಿದ್ಧಾಂತ ಎಂಬುದನ್ನು ಅವರು ಮರೆ ಮಾಚುತ್ತಾರೆ.

ಸ್ವಾತಂತ್ರಾ ನಂತರ ಅರಸೊತ್ತಿಗೆ ಕಳೆದುಕೊಂಡ ರಾಜ ಮಹಾರಾಜರು ಸರಕಾರದಿಂದ ಲಕ್ಷಾಂತರ ರೂ. ರಾಜಧನ ಪಡೆಯುತ್ತಿದ್ದರು. ರಾಜಕೀಯವಾಗಿ ಅಂದಿನ ಜನಸಂಘದ ಜೊತೆ (ಇಂದಿನ ಬಿಜೆಪಿ) ಗುರುತಿಸಿಕೊಂಡಿದ್ದರು. ಆದರೆ 1969-70ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು. ರಾಜ ಮಹಾರಾಜರಿಗೆ ಕೊಡುತ್ತಿದ್ದ ರಾಜ ಧನವನ್ನು ರದ್ದುಗೊಳಿಸಿದರು. ಅಂದಿನಿಂದ ಅವರ ಮೇಲೆ ಕೋಮುವಾದಿಗಳು ಕೆಂಡ ಕಾರುತ್ತಿದ್ದಾರೆ.

ಗಾಂಧೀಜಿ ಮತ್ತು ನೆಹರೂ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಿರಂತರ ವಿಷ ಪ್ರಚಾರ ನಡೆಯುತ್ತಿದೆ. ಅದರಲ್ಲೂ ಬಿಜೆಪಿ ನಾಯಕರು ಅತ್ಯಂತ ಜಾಣತನದಿಂದ ತಂತ್ರ ರೂಪಿಸುತ್ತಾರೆ. ಸಂಘದ ಬಿಜೆಪಿಯ ನಾಯಕರು ನೇರವಾಗಿ ದಾಳಿಗಿಳಿಯುವುದಿಲ್ಲ. ಬದಲಾಗಿ ‘ಗಾಂಧಿ ಸಂಘದ ಶಾಖೆಗೆ ಭೇಟಿ ನೀಡಿದ್ದರು, ನೆಹರೂ ಗಣರಾಜ್ಯ ದಿನದ ಪರೇಡನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು’ ಎಂದೆಲ್ಲ ಹೇಳುತ್ತಲೇ ಇನ್ನೊಂದು ಕಡೆ ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ವಟುಗಳ ಮೂಲಕ ಗಾಂಧಿ, ನೆಹರೂ ತೇಜೋವಧೆ ಮಾಡುವ ಫೋಟೊ ಶಾಪಿಂಗ್ ಚಿತ್ರಗಳನ್ನು ಹಾಕಿಸುತ್ತಾರೆ.

ಆ ಮೂಲಕ ಜನರ ಪ್ರತಿಕ್ರಿಯೆ ಏನು ಬರುತ್ತದೇ ಎಂಬುದನ್ನು ನೋಡಿ ಕಾರ್ಯತಂತ್ರ ರೂಪಿಸುತ್ತಾರೆ. ಕಂಗನಾ ಹೇಳಿಕೆ ಇಂತಹ ತಂತ್ರ ಮಾತ್ರ. ಆಕೆ ಕೀಲು ಗೊಂಬೆ ಮಾತ್ರ .ಆಕೆಯ ಬಾಯಿಯಿಂದ ಇವರು ಮಾತಾಡಿಸಿದರು. ಮಾತಾಡಿಸಿದವರು ಮೌವಾಗಿದ್ದಾರೆ. ನಾವು ಜ್ವಲಂತ ಪ್ರಶ್ನೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಆಕೆಗೆ ಉತ್ತರ ಕೊಡಲು ಹೊರಟಿದ್ದೇವೆ. ನಮ್ಮನ್ನು ಇಂತಹ ಅರ್ಥಹೀನ ವಾಗ್ವಾದಗಳಲ್ಲಿ ಮುಳುಗಿಸಿ ಅವರು ತಮ್ಮ ಅಜೆಂಡಾ ಜಾರಿಗೆ ತರಲು ದಾರಿಯನ್ನು ಸುಗಮ ಮಾಡಿಕೊಳ್ಳುತ್ತಾರೆ.
ಟಿಪ್ಪು ಸುಲ್ತಾನ್ ಸುತ್ತ ವಿವಾದದ ಅಲೆಯೆಬ್ಬಿಸಿದ್ದು ಕೂಡ ಇಂತಹದೇ ತಂತ್ರ. ಟಿಪ್ಪು ಕುರಿತು ಅಪಪ್ರಚಾರ ಆರಂಭವಾಗಿದ್ದು ತೊಂಭತ್ತರ ದಶಕದ ನಂತರ. ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ನಂತರ ಕೋಮುವಾದದ ಮೂಲಕ ಓಟಿನ ಬೆಳೆ ತೆಗೆದು ಅಧಿಕಾರಕ್ಕೆ ಬರುವ ರುಚಿ ಹತ್ತಿತು. ಆಗಿನಿಂದ ಎಲ್ಲೆಲ್ಲಿ ಹಿಂದೂ-ಮುಸ್ಲಿಂ ವಿಭಜನೆ ಸಾಧ್ಯವೋ, ಅಲ್ಲೆಲ್ಲ ಚರಿತ್ರೆಯನ್ನು ತಿರುಚುತ್ತಾ ಬಂದರು. ಟಿಪ್ಪು ಸುಲ್ತಾನ್ ಕೂಡ ಈ ಮಸಲತ್ತಿಗೆ ಬಲಿಯಾದ.
  ನಾವು ಚಿಕ್ಕವರಾಗಿದ್ದಾಗ ಟಿಪ್ಪು ಸುಲ್ತಾನ್ ‘ಮೈಸೂರು ಹುಲಿ’ ಎಂದೇ ಹೆಸರಾಗಿದ್ದ. ಶಾಲಾ ಪಠ್ಯಪುಸ್ತಕಗಳಲ್ಲೂ ಓದಿದ್ದೆವು. ಟಿಪ್ಪು ಸುಲ್ತಾನ್ ಮೇಲೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಟಕಕಾರ ಹುಲಿಮನೆ ಸೀತಾರಾಮ ಶಾಸ್ತ್ರಿಗಳು ಬರೆದು ಆಡಿಸಿದ ನಾಟಕ ಆಗ ಕರ್ನಾಟಕದಲ್ಲಿ ಮನೆ ಮಾತಾಗಿತ್ತು. ರಾಷ್ಟ್ರೋತ್ಥಾನ ಪರಿಷತ್ತಿನ ಮಕ್ಕಳ ಪುಸ್ತಕ ಮಾಲಿಕೆಯಲ್ಲೂ ಟಿಪ್ಪು ಬಗ್ಗೆ ಪುಟ್ಟ ಪುಸ್ತಿಕೆ ಬಂದಿತ್ತು. ಆದರೆ, ಈಗ ಅದು ಸಿಗುವುದಿಲ್ಲ. ನಾನು ಅದರ ಒಂದು ಪ್ರತಿಗಾಗಿ ಹುಡುಕುತ್ತಿರುವೆ.
ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ರಾಜಿರಹಿತ ಹೋರಾಟ ಮಾಡಿ ರಣರಂಗದಲ್ಲಿ ಮಡಿದ ವೀರ. 1707ರಲ್ಲಿ ಔರಂಗಜೇಬನು ಸಾವಿಗೀಡಾದ ನಂತರ ದಿಲ್ಲಿಯ ಸಿಂಹಾಸನವನ್ನು ಅಲಂಕರಿಸಿದ ಮೊಗಲ್ ರಾಜರು ಹೆಸರಿಗೆ ಮಾತ್ರ ಚಕ್ರವರ್ತಿಗಳಾಗಿದ್ದರು. ಅವರು ಕುಡಿತ, ಕುಣಿತಗಳಲ್ಲಿ ಕಾಲ ವ್ಯಯ ಮಾಡುತ್ತಿದ್ದರು. ಅದೇ ಸಮಯಕ್ಕೆ ಉಪಾಯವಾಗಿ ಇಂಗ್ಲೆಂಡ್‌ನ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಕಾಲೂರಲು ಹವಣಿಸುತ್ತಿತ್ತು. ಭಾರತ ಆಗ ಒಂದು ರಾಷ್ಟ್ರ ವಾಗಿರಲಿಲ್ಲ.

ಊರೂರಿಗೆ ರಾಜ ಮಹಾರಾಜರಿದ್ದರು. ಚೋಟಾ ಸಂಸ್ಥಾನಿಕರಿದ್ದರು. ಇವರಿಗೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ತಮ್ಮ ಎದುರಾಳಿಗಳನ್ನು ಮುಗಿಸಲು ಈಸ್ಟ್ ಇಂಡಿಯಾ ಸೈನ್ಯದ ಸಹಾಯ ವನ್ನು ಪಡೆಯುತ್ತಿದ್ದರು. ಅತ್ಯಂತ ಶಿಸ್ತುಬದ್ಧವಾಗಿದ್ದ ಕಂಪೆನಿ ಸೇನೆಯನ್ನು ಎದುರಿಸಿ ಗೆಲ್ಲುವ ತಾಕತ್ತು ಇವರಿಗಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಹೈದರ್ ಮತ್ತು ನಂತರ ಟಿಪ್ಪು ಸುಲ್ತಾನ್ ಬ್ರಿಟಿಷ್ ಸೇನೆಗೆ ಸವಾಲು ಹಾಕಿ ನಿಂತರು. ಹೈದರಾಬಾದ್ ನಿಜಾಮನಂತೆ ಇವರು ಬ್ರಿಟಿಷರ ಚಮಚಾಗಿರಿ ಮಾಡಲಿಲ್ಲ. ತಮ್ಮ ಸೈನ್ಯದಲ್ಲಿ ಫ್ರೆಂಚರನ್ನು ಸೇರಿಸಿಕೊಂಡು ಬಲಿಷ್ಠ ಪಡೆಯನ್ನು ಕಟ್ಟಿದರು. ಹೀಗಾಗಿ ಬ್ರಿಟಿಷರನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು.

ಟಿಪ್ಪು ಸುಲ್ತಾನ್ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡಿದ್ದರೆ ಟಿಪ್ಪು ಮರಿ ಮೊಮ್ಮಕ್ಕಳು ಮೈಸೂರು ರಾಜರಾಗಿ ಮೊೆಯುತ್ತಿದ್ದರು. ಅತಂತ್ರವಾಗಿ ಕಲಕತ್ತೆಯ ಬೀದಿಗಳಲ್ಲಿ ಬದುಕುತ್ತಿರಲಿಲ್ಲ. ಇದೆಲ್ಲ ಯಾರೂ ಹೇಳಿದ ಕಟ್ಟುಕತೆಯಲ್ಲ ಮೈಸೂರು ಇತಿಹಾಸದ ಬಗ್ಗೆ ನಾಡಿನ ಹೆಸರಾಂತ ಪತ್ರಕರ್ತರಾಗಿದ್ದ, ಸಾಹಿತಿ ತಿ.ತಾ ಶರ್ಮರು ಬರೆದ ಪುಸ್ತಕದಲ್ಲಿ ದಾಖಲಾಗಿದೆ. ಈಗ ಕೋಮುವಾದಿ ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳು ಟಿಪ್ಪು ಬಗ್ಗೆ ತಳ ಬುಡವಿಲ್ಲದ ಹೊಸ ಕಟ್ಟು ಕತೆಗಳನ್ನು ಹರಡುತ್ತಿದ್ದಾರೆ. ಆ ಮೂಲಕ ಮಂಡ್ಯ, ಮೈಸೂರು ಭಾಗದ ಒಕ್ಕಲಿಗರ ಓಟಿನ ಬುಟ್ಟಿಗೆ ಜೈ ಹಾಕಿ ಚುನಾವಣೆಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ.

ಚಿತ್ರದುರ್ಗದ ಒನಕೆ ಓಬವ್ವಳನ್ನು ತಮ್ಮ ಕೋಮುವಾದಿ ಕಾರ್ಯಸೂಚಿಗೆ ಬಳಸಿಕೊಳ್ಳುತ್ತಿದ್ದಾರೆ. 200 ವರ್ಷಗಳ ಹಿಂದಿನ ಇತಿಹಾಸ ಕೆದಕಿ ಹೈದರ್ ಚಿತ್ರದುರ್ಗದ ಪಾಳೆಯಗಾರರ ಮೇಲೆ ಮಾಡಿದ ದಾಳಿಗೆ ಕೋಮು ಬಣ್ಣ ಬಳಿಯುವ ಮಸಲತ್ತು ಮಾಡುತ್ತಿದ್ದಾರೆ. ವಾಸ್ತವವಾಗಿ ಹೈದರ್, ಟಿಪ್ಪುಹಿಂದೂ ವಿರೋಧಿಗಳಲ್ಲ. ಚಿತ್ರದುರ್ಗದಪಾಳೆಯಗಾರರಾಗಲಿ ಒನಕೆ ಓಬವ್ವಳಾಗಲಿ ಮುಸ್ಲಿಂ ವಿರೋಧಿಗಳಲ್ಲ. ಇದು ಅವರವರ ಅರಸೊತ್ತಿಗೆ ಪಾಳೆಯ ಪಟ್ಟು ಉಳಿಸಿಕೊಳ್ಳಲು ನಡೆಸಿದ ಕಾದಾಟ ಮಾತ್ರ.

ಬಿಜೆಪಿಯನ್ನು ಜನ ಅಧಿಕಾರಕ್ಕೆ ತಂದದ್ದು ವರ್ತಮಾನದ ಸಮಸ್ಯೆಗಳನ್ನು ಬಗೆಹರಿಸಿ ನೆಮ್ಮದಿಯ ವಾತಾವರಣ ನಿರ್ಮಿಸಲಿ ಎಂದು. ಆದರೆ, ಇವರು ಮಾಡುತ್ತಿರುವುದೇನು?. ತಮ್ಮ ಕೈಯಲ್ಲಿ ಅಧಿಕಾರವಿದ್ದರೂ ಯಾವುದೇ ಸಮಸ್ಯೆಗಳನ್ನು ಬಗೆಹರಿಸದೆ ಬಡವರ ಹೊಟ್ಟೆಗೆ ಹೊಡೆದು ಅದಾನಿ, ಅಂಬಾನಿಗಳ ತಿಜೋರಿ ತುಂಬುವುದೇ ಇವರ ರಾಷ್ಟ್ರ ಸೇವೆಯಾಗಿದೆ. ತಮ್ಮ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರು ಯೋಚಿಸಬಾರದೆಂದು ಕಂಗನಾ ರಣಾವತ್, ಅನಂತ್ ಕುಮಾರ ಹೆಗಡೆ, ಮೊದಲಾದವರ ಮೂಲಕ ವಿವಾದಾಸ್ಪದ ಹೇಳಿಕೆ ಕೊಡಿಸುತ್ತಾರೆ.

 ತಮಗೆ ಮುಸ್ಲಿಮರು, ಕ್ರೈಸ್ತರು, ಕಮ್ಯುನಿಸ್ಟರು ಪ್ರಧಾನ ಶತ್ರುಗಳು ಎಂದು ಗೋಳ್ವಲ್ಕರ್ ಹೇಳಿದ್ದರು. ಆದರೆ ವಾಸ್ತವವಾಗಿ ಇವರಷ್ಟೇ ಅವರ ಶತ್ರು ಗಳಲ್ಲ. ನೆಹರೂ, ಗಾಂಧಿ, ಅಂಬೇಡ್ಕರ್ ಹೀಗೆ ಸಾಮಾಜಿಕ ನ್ಯಾಯ ಹಾಗೂ ಸಹಬಾಳ್ವೆಯ ಸಿದ್ಧಾಂತವನ್ನು ಪ್ರತಿಪಾದಿಸಿರುವ ಎಲ್ಲರೂ ಇವರ ಶತ್ರುಗಳಾಗಿದ್ದಾರೆ. ಸ್ವಾತಂತ್ರಾ ನಂತರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಸರ್ವರಿಗೂ ಸಮಾನಾವಕಾಶ ನೀಡುವ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆಗಳನ್ನು ಬದಲಿಸಿ ಮನುವಾದಿ ಹಿಂದೂ ರಾಷ್ಟ್ರ ನಿರ್ಮಿಸುವುದು ಇವರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ವಿರೋಧಿಸಬೇಕಾಗಿದ್ದು ಕಂಗನಾ ರಣಾವತರಂಥವರನ್ನ್ನಲ್ಲ. ಮನುಷ್ಯರ ನಡುವೆ ದ್ವೇಷದ ಬೆಂಕಿ ಹಚ್ಚುವ ಜೀವ ವಿರೋಧಿ ಸಿದ್ಧಾಂತವನ್ನು ವಿರೋಧಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)