varthabharthi


ನಿಮ್ಮ ಅಂಕಣ

ಇದು ಎಷ್ಟು ಸಮಂಜಸ?

ವಾರ್ತಾ ಭಾರತಿ : 15 Nov, 2021
-ಕೆ.ಎಸ್. ನಾಗರಾಜ್ ಹನುಮಂತನಗರ, ಬೆಂಗಳೂರು

ಮಾನ್ಯರೇ,

ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನಾವು ಕಾಣುತ್ತಿದ್ದರೂ ಇನ್ನೂ ಕೆಲವು ವಿಚಾರಗಳಲ್ಲಿ ನಮ್ಮ ಸಮಾಜ ಮತ್ತು ಸರಕಾರ ಎರಡೂ ಬದಲಾವಣೆ ಹೊಂದಿಲ್ಲ. ವಿಶೇಷವಾಗಿ ಬಡಜನರು ಮತ್ತು ದುಡಿಯುವ ವರ್ಗದ ಜನ ವಾಸಿಸುವಂತಹ ಬಡಾವಣೆಗಳನ್ನು ಅದರಲ್ಲಿಯೂ ನಗರ ಪ್ರದೇಶಗಳಲ್ಲಿಯೂ ಜಾತಿಯ ಹೆಸರಿನಲ್ಲಿ ಗುರುತಿಸುವುದು ಅದೆಷ್ಟು ಸಮಂಜಸವಾಗಿರುತ್ತದೆ.?
ನಗರಗಳು ಮತ್ತು ಗ್ರಾಮೀಣ ಭಾಗದಲ್ಲಿ ಬೋವಿಕಾಲನಿ, ದಲಿತರ ಕಾಲನಿ, ಮಾದಿಗರ ಬೀದಿ, ಹೊಲೆಯರ ಹಟ್ಟಿ ಮುಂತಾದ ಪದಗಳಿಂದ ಬಡಾವಣೆಗಳನ್ನು ಇನ್ನೂ ಗುರುತಿಸುವುದರ ಜೊತೆಗೆ ನಾಮಫಲಕಗಳನ್ನು ಹಾಕುವುದು, ಸರಕಾರದ ಆದೇಶಗಳನ್ನು ಹೊರಡಿಸುವುದು ಸರಿ ಎನಿಸದು. ಇದು ಸರಕಾರವೇ ಅಸ್ಪಶ್ಯತೆಯನ್ನು ಪ್ರೋತ್ಸಾಹಿಸಿ ಈ ವರ್ಗದ ಜನರನ್ನು ಪ್ರಮುಖವಾಹಿನಿಯಿಂದ ಪ್ರತ್ಯೇಕವಾಗಿ ಇಡುವಂತಹ ಮತ್ತೊಂದು ವ್ಯವಸ್ಥೆಯೂ ಆಗುತ್ತದೆ.

ಹಾಗೆಯೇ ಕುಲಕಸುಬುಗಳನ್ನು ಮಾಡುತ್ತಿದ್ದ ಜನರಿಂದ ತುಂಬಿದ್ದ ಪ್ರದೇಶಗಳನ್ನು ಆಯಾ ಕುಲಕಸುಬಿನ ಹೆಸರಿನ ಮೇಲೆ ಬಡಾವಣೆಗಳನ್ನು ಗುರುತಿಸಲಾಗುತ್ತದೆ. ಈಗ ಕಾಲವು ಬದಲಾಗಿದೆ. ಅನೇಕ ಕುಲಕಸುಬುಗಳು ಕಣ್ಮರೆಯಾಗುತ್ತಿವೆ. ಕುಲಗಳು ಮಾತ್ರ ಉಳಿದಿವೆ. ಯಾವ ಬಡಾವಣೆಯಲ್ಲಿಯೂ ಕೇವಲ ಆಯಾ ಕಸುಬುಗಳನ್ನು ಮಾಡುವ ಜನರು ವಾಸಮಾಡುತ್ತಿಲ್ಲ. ಸಾಮಾಜಿಕ ವ್ಯವಸ್ಥೆಯೂ ಬದಲಾಗಿದೆ. ಈಗಲಾದರೂ ಸರಕಾರ ಇಂತಹ ಹೆಸರುಗಳಿರುವ ಬಡಾವಣೆಗಳನ್ನು ಗುರುತಿಸಿ ಅವುಗಳನ್ನು ಆಯಾ ಬಡಾವಣೆಯ ಒಂದು ಭಾಗದ ರೀತಿಯಲ್ಲಿಯೇ ಗುರುತಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಶೋಷಣೆಗೆ ಒಳಗಾಗಿರುವ ಜನರು ವಾಸಮಾಡುವ ಪ್ರದೇಶಗಳನ್ನು ನಾವು ಅದೇ ಹೆಸರಿನಿಂದ ಗುರುತಿಸುವುದರಿಂದ ಅಲ್ಲಿ ವಾಸಮಾಡುವ ಜನರ ಗೌರವಕ್ಕೆ, ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟಂತಾಗುತ್ತದೆ. ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನೇಕ ಬದಲಾವಣೆಗಳು ತುರ್ತಾಗಿ ಆಗಬೇಕಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)