varthabharthi


ನಿಮ್ಮ ಅಂಕಣ

ಸಾಗರಗಳ ಪ್ರಕ್ಷುಬ್ಧತೆಯ ಬದುಕು

ವಾರ್ತಾ ಭಾರತಿ : 16 Nov, 2021
ಡಾ. ಎಂ. ವೆಂಕಟಸ್ವಾಮಿ

ಹೌದು! ಸಾಗರಗಳು ಕಳೆದ ಕೆಲವು ದಶಕಗಳಿಂದ ಶಾಂತವಾಗಿ ಮಲಗಲೇ ಇಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಆಧುನಿಕ ಮನುಷ್ಯ ಮತ್ತು ಆತನ ಹಾಳುಮೂಳೆಂಬ ಯಂತ್ರ-ತಂತ್ರಜ್ಞಾನ ಅಭಿವೃದ್ಧಿ ಎಂದರೆ ತಪ್ಪಾಗಲಾರದು. ಹವಾಮಾನ ಬದಲಾವಣೆಗೆ ಕಾರಣವಾಗುವ ಹತ್ತಾರು ರೀತಿಯ ಮಾಲಿನ್ಯಕಾರಕಗಳಿಂದ ಭೂಮಿಯ ತಾಪಮಾನ ಹೆಚ್ಚಿ ಸಮುದ್ರಗಳು ಬಿಸಿಯಾಗಿ ಬೆಚ್ಚಗಿನ ತೇವಾಂಶದ ಗಾಳಿಯನ್ನು ಚಂಡಮಾರುತಗಳು ತಮ್ಮ ಇಂಧನವಾಗಿ ಬಳಸಿಕೊಳ್ಳುತ್ತಿವೆ. ಹವಾಮಾನ ಬದಲಾವಣೆ ಸಾಗರಗಳ ತಾಪಮಾನವನ್ನು ನಿರಂತರವಾಗಿ ಬೆಚ್ಚಗಿಡುವುದರಿಂದ ಚಂಡಮಾರುತಗಳು ನಿರಂತವಾಗಿ ಉದ್ಭವಿಸುತ್ತಲೇ ಇವೆ. ಉತ್ತರ ಅಟ್ಲಾಂಟಿಕ್ ಮತ್ತು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳು ಹೆಚ್ಚು ಉದ್ಭವಿಸುತ್ತಿವೆ. ತಾಪಮಾನ 2 ಡಿಗ್ರಿ ಸೆಲ್ಸಿಯಸ್ ಏರಿಕೆಯೊಂದಿಗೆ ಉಷ್ಣವಲಯದ ಚಂಡಮಾರುತಗಳಲ್ಲಿ ಶೇ. 13 ಏರಿಕೆಯಾಗಿ ಕ್ಯಾಟಗಿರಿ 4 ಅಥವಾ 5 (ಅತ್ಯಂತ ಅಪಾಯಕಾರಿ) ಅನ್ನು ದಾಟುತ್ತಿವೆ.

ಬೆಚ್ಚಗಿನ ಗಾಳಿ ಹೆಚ್ಚು ನೀರಿನ ಆವಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಪ್ರತಿ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಿದಂತೆ ಶೇ. 7 ನೀರನ್ನು ಗಾಳಿ ಹಿಡಿದಿಟ್ಟುಕೊಳ್ಳುತ್ತದೆ. ಜೊತೆಗೆ ಸಮುದ್ರಮಟ್ಟ ಹೆಚ್ಚುತ್ತಿರುವುದರಿಂದ ಚಂಡಮಾರುತಗಳು ಉಂಟಾಗುತ್ತಿವೆ. ಏಳು ರೀತಿಯ ಪ್ರಾಥಮಿಕ ಹವಾಮಾನ ಪರಿಸ್ಥಿತಿಗಳ ಸಂಯೋಜನೆಯಿಂದಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಚಂಡಮಾರುತಗಳು ರೂಪುಗೊಳ್ಳುತ್ತ ತೀವ್ರಗತಿಯಲ್ಲಿ ಕಾಣಿಸಿ ಕೊಳ್ಳುತ್ತಿವೆ. ಇವುಗಳಲ್ಲಿ ಮುಖ್ಯವಾಗಿ ಬೆಚ್ಚಗಿನ ಸಮುದ್ರ ಮೇಲ್ಮೈ ತಾಪಮಾನ, ಹೆಚ್ಚಿನ ತೇವಾಂಶದ ಮಟ್ಟ ಮತ್ತು ವಾತಾವರಣದ ಅಸ್ಥಿರತೆ ಸೇರಿವೆ. ಜೊತೆಗೆ ವಾರ್ಷಿಕ ಹವಾಮಾನ ವೈಪರೀತ್ಯಗಳು. ಭೂಮಿ ದುಂಡಗಿರುವುದರಿಂದ ಧ್ರುವ ಪ್ರದೇಶಗಳು ಸೂರ್ಯನ ಓರೆಯಾದ ಕಿರಣಗಳನ್ನು ಪಡೆಯುತ್ತವೆ. ಕಾರಣ ಇಲ್ಲಿ ತಾಪಮಾನ ಕಡಿಮೆ ಇದ್ದು ತಣ್ಣನೆ ವಾತಾವರಣ ಇರುತ್ತದೆ. ಇನ್ನು ಭೂಮಿಯ ಸಮಭಾಜಕವೃತ್ತದ ಎರಡೂ ಕಡೆ ಇರುವ ಉಷ್ಣವಲಯಗಳು ಸೂರ್ಯನ ನೇರ ಅಥವಾ ಲಂಬವಾದ ಕಿರಣಗಳನ್ನು ಪಡೆಯುವುದರಿಂದ ಹೆಚ್ಚು ಶಾಖ ಪಡೆಯುತ್ತವೆ. ಸಮುದ್ರದ ಮೇಲ್ಮೈ ತಾಪಮಾನವು 26.5 ಡಿಗ್ರಿ ಸೆ.ಗಿಂತ ಹೆಚ್ಚಾಗುತ್ತಿದ್ದಂತೆ ವಾಯುಭಾರ ಕುಸಿತವಾಗಿ ಚಂಡಮಾರುತಗಳು ಸೃಷ್ಟಿಯಾಗುತ್ತವೆ. ಮೊದಲನೆಯದು ಹೆಚ್ಚಿನ ಒತ್ತಡದ ಗಾಳಿ ತಂಪಾಗಿದ್ದರೆ ಕಡಿಮೆ ಒತ್ತಡದ ಗಾಳಿ ಬೆಚ್ಚಗಿರುತ್ತದೆ. ಎರಡನೆಯದು ಬೆಚ್ಚಗಿನ ಗಾಳಿ ಮೇಲ್ಮುಖ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಮೂರನೆಯದು ಹೆಚ್ಚಿನ ಒತ್ತಡದಿಂದ ಗಾಳಿ ಕಡಿಮೆ ಒತ್ತಡಕ್ಕೆ ಹರಿಯುತ್ತದೆ.

ವಾಸ್ತವವಾಗಿ ಹೆಚ್ಚಿನ ಒತ್ತಡದ ಶೀತಗಾಳಿಯು ಕಡಿಮೆ ಒತ್ತಡದ ಕಡೆಗೆ ಹರಿದಾಗ, ಶೀತಗಾಳಿಯು ಬೆಚ್ಚಗಿನ ಗಾಳಿಯಾಗಿ ಮಾರ್ಪಟ್ಟು ತೇವಾಂಶದೊಂದಿಗೆ ಮೇಲ್ಮುಖವಾಗಿ ಚಲಿಸುತ್ತದೆ. ಇದರ ಪರಿಣಾಮ ಮೋಡಗಳು ರಚನೆಯಾಗುತ್ತವೆ. ಕಡಿಮೆ ಒತ್ತಡದ ಗಾಳಿಯಿಂದ ಸೃಷ್ಟಿಯಾದ ಶೂನ್ಯವನ್ನು ತುಂಬಲು ಹೆಚ್ಚಿನ ಒತ್ತಡದ ಗಾಳಿಯು ಚಕ್ರಗಳಲ್ಲಿ ಪರಿಚಲನೆಗೊಳ್ಳುತ್ತ ಚಂಡಮಾರುತ ವಿಶಾಲವಾಗಿ ಬೆಳೆಯುತ್ತಾ ಹೋಗುತ್ತದೆ. ಕೊನೆಗೆ ಚಂಡಮಾರುತ ಕಡಲದಂಡೆಗೆ ಹತ್ತಿರವಾದಂತೆ ತೇವಾಂಶದ ಪೂರೈಕೆ ಕಡಿಮೆಯಾಗಿ ತೀವ್ರತೆ ಕಳೆದುಕೊಳ್ಳುತ್ತದೆ. ಅಷ್ಟರಲ್ಲಿ ಚಂಡಮಾರುತ ಕಡಲ ದಂಡೆಯಿಂದ ನೂರಾರು ಕಿ.ಮೀ.ಗಳ ದೂರ ಚಲಿಸಿ ಸಾಕಷ್ಟು ನಷ್ಟವನ್ನು ಉಂಟುಮಾಡಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಚಂಡಮಾರುತಗಳು ಒಂದೇ ಸಮನೇ ಉದ್ಭವಿಸುತ್ತ ಭಾರತೀಯ ಪರ್ಯಾಯ ದ್ವೀಪದ ಮೇಲೆ ದಾಳಿ ನಡೆಸುತ್ತಿವೆ. ಹಿಂದೂಮಹಾಸಾಗರ, ಅರಬ್ಬಿಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ನಿರಂತವಾಗಿ ಚಂಡಮಾರುತಗಳು ಒಂದರ ಹಿಂದೆ ಒಂದರಂತೆ ಎದ್ದುಬರುತ್ತಲೇ ಇವೆ. ಕಳೆದ ಮೂರು ತಿಂಗಳಿಂದಲೂ ಚಂಡಮಾರುತಗಳು ಬಿಡುವಿಲ್ಲದೆ ಎದ್ದುಬರುತ್ತಿದ್ದು ಮಳೆ ನಿಲ್ಲಲೇ ಇಲ್ಲ. ದೇಶದ ಎರಡೂ ಕರಾವಳಿಗಳಲ್ಲದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಜನರು ಹೈರಾಣವಾಗಿ ಹೋಗಿದ್ದಾರೆ. ಕಳೆದ ವರ್ಷ ಉದ್ಭವಿಸಿದ 136 ವಾಯುಭಾರ ಕುಸಿತಗಳಲ್ಲಿ 12 ಭೀಕರ ಚಂಡಮಾರುತಗಳಾಗಿ ಪರಿಣಮಿಸಿ ದೇಶದ ಎರಡೂ ಕರಾವಳಿಗಳಿಗೆ ಅಪ್ಪಳಿಸಿದ್ದವು.

ಈ ವರ್ಷ ಈಗಾಗಲೇ ಕನಿಷ್ಠ ಹತ್ತು ಭೀಕರ ಚಂಡಮಾರುತಗಳ ನಾಲ್ಕಾರು ದಿನಗಳು ಕಾಲ ಒಂದರ ಹಿಂದೆ ಒಂದು ಎಂಬಂತೆ ದೇಶದ ಕರಾವಳಿಗಳಿಗೆ ಅಪ್ಪಳಿಸಿವೆ. ಒಂದು ಚಂಡಮಾರುತ ಬಂದುಹೋಗಿ ಕೆಲವು ದಿನಗಳು ಸುಧಾರಿಸಿಕೊಂಡಿದ್ದೇ ತಡ, ಹಿಂದೆಯೇ ಮತ್ತೊಂದು ಚಂಡಮಾರುತ ಬಂದು ಅಪ್ಪಳಿಸುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಲೇ ಇದೆ. ರೈತರ ಬೆಳೆಗಳು ಕೈಗೆ ಬಂದಿದ್ದು ಬಾಯಿಗೆ ಬರದೇಹೋಗಿ ಬಡವರು ನೆಮ್ಮದಿಯಾಗಿ ನಿದ್ದೆ ಮಾಡುವುದೇ ದುಸ್ತರವಾಗಿದೆ. ಸರಕಾರಗಳನ್ನು ನಡೆಸುವ ನಾಯಕರು ಹೆಲಿಕ್ಯಾಪ್ಟರ್‌ಗಳಲ್ಲಿ ಹೋಗಿ ಒಂದು ಸುತ್ತು ಹಾಕಿ ಪರಿಹಾರ ಘೋಷಿಸಿಬಿಡುತ್ತಾರೆ. ಆದರೆ ಅದು ಜನರ ಕೈಸೇರುವುದು ಮಾತ್ರ ಪವಾಡವೇ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಅರಬಿಸಮುದ್ರ ಹೆಚ್ಚಿನ ಚಂಡಮಾರುತಗಳಿಗೆ ಕೇಂದ್ರಬಿಂದುವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನಡೆದ ಕಾನನ ಹರಣದಿಂದ ಪರಿಸರ ವ್ಯವಸ್ಥೆಗಳು ಸಂಪೂರ್ಣವಾಗಿ ನಾಶಗೊಂಡು ಚಂಡಮಾರುತಗಳು ಉದ್ಭವಿಸುತ್ತಿವೆ. ಜಾಗತಿಕ ತಾಪಮಾನ ಇದೆಲ್ಲಕ್ಕೂ ಮೂಲ ಕಾರಣವಾಗಿದೆ. ಇತ್ತೀಚೆಗೆ ಕಾಣಿಸಿಕೊಂಡ ತೌಕ್ತೆ ಚಂಡಮಾರುತದೊಂದಿಗೆ ಗುಂಪುಗುಂಪಾಗಿ ಹಲವಾರು ಚಂಡಮಾರುತಗಳು ಸರದಿಯಂತೆ ಕರಾವಳಿಗೆ ಅಪ್ಪಳಿಸಿತ್ತು. ಅರಬಿಸಮುದ್ರವನ್ನು ಹಿಂದೆ ಚಂಡಮಾರುತ ನಾಚಿಕೆಯ ಸಮುದ್ರ ಎಂದು ಕರೆಯಲಾಗುತ್ತಿತ್ತು. ಕಾರಣ ಅಲ್ಲಿ ಚಂಡಮಾರುತಗಳು ಅಪರೂಪವಾಗಿ ಸೃಷ್ಟಿಯಾಗುತ್ತಿದ್ದವು. ಜಗತ್ತಿನ ಇತರ ಉಷ್ಣವಲಯದ ಸಾಗರಗಳಿಗೆ ಹೋಲಿಸಿದರೆ ಅರಬಿಸಮುದ್ರದಲ್ಲಿ ತಾಪಮಾನ ಅತ್ಯಂತ ತೀವ್ರವಾಗಿ ಏರುತ್ತಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದು ಈಗ 1.2ರಿಂದ 1.4ಡಿಗ್ರಿ ಸೆಲ್ಸಿಯಸ್ ಮಧ್ಯ ನಿಂತಿದೆ.

ಜಗತ್ತಿನಲ್ಲಿ ತಾಪಮಾನ ನಿಯಂತ್ರಣದ ಯೋಜನೆಗಳು ಯಾವ ರೀತಿಯಲ್ಲೂ ಕಟ್ಟುನಿಟ್ಟಾಗಿ ಜಾರಿಯಾಗದ ಕಾರಣ ವಿಜ್ಞಾನಿಗಳು ಚಿಂತಿತರಾಗಿದ್ದಾರೆ. ಚಂಡಮಾರುತಗಳು ಎದ್ದುಬರುವ ಪ್ರತಿಯೊಂದು ಸಲವೂ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸು ವುದು ಕಷ್ಟದ ಕೆಲಸವಾಗಿದೆ. ತಾಪಮಾನವನ್ನು ನಿಯಂತ್ರಿಸದೇ ಪರಿಹಾರವನ್ನು ಕಂಡುಕೊಳ್ಳುವುದು ಸುಲಭದ ಕೆಲಸವಲ್ಲ. ಇತ್ತೀಚೆಗೆ ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋ ನಗರದಲ್ಲಿ ನಡೆದ ಹವಾಮಾನ ಶೃಂಗಸಭೆ ಕೋಪ್-26ರಲ್ಲಿ ಜಗತ್ತಿನ 200 ದೇಶಗಳ 30,000 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ದೇಶಗಳನ್ನು ನಡೆಸುವ ಮಹಾನ್ ರಾಜಕಾರಣಿಗಳು ಅನೇಕ ನಿಲುವುಗಳನ್ನು ಪ್ರಕಟಿಸಿ ಶಾಕವರ್ಧಕ ಅನಿಲಗಳನ್ನು ಉರಿಸುವುದರಲ್ಲಿ ಸುಧಾರಣೆಗಳನ್ನು ತರುವುದಾಗಿ ರಾಜಾರೋಷವಾಗಿ ಘೋಷಿಸಿದ್ದಾರೆ. ಆದರೆ ಕಳೆದ ನಾಲ್ಕಾರು ದಶಕಗಳಿಂದ ಇದೇ ರೀತಿಯ ಸಭೆಗಳಲ್ಲಿ ತೆಗೆದುಕೊಂಡ ಯಾವುದೇ ತೀರ್ಮಾನಗಳು ಕಾರ್ಯರೂಪಕ್ಕೆ ಬರಲಿಲ್ಲ. ಫಲಿತಾಂಶ ಜಗತ್ತಿನಾದ್ಯಂತ ಇನ್ನಷ್ಟು ಮತ್ತಷ್ಟು ನೈಸರ್ಗಿಕ ವಿಪತ್ತುಗಳಿಂದ ಸಾವುನೋವುಗಳು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗಲಾರವು. ಜಾಗತಿಕ ತಾಪಮಾನ ಎನ್ನುವುದು ನಾವೇ ಮುಂದೆ ನಿಂತು ನಮ್ಮ ಭೂಮಿತಾಯಿಗೆ ಕೊಳ್ಳೆ ಹಾಕುವ ಕೆಲಸವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)