varthabharthi


ನಿಮ್ಮ ಅಂಕಣ

ಶುದ್ಧ ಹಾಲು ಭಾರತಕ್ಕೂ ಬರಲಿ

ವಾರ್ತಾ ಭಾರತಿ : 17 Nov, 2021
-ಅಮೃತ್ ಪ್ರಭು, ವಿರಾರ್, ಮುಂಬೈ

ಮಾನ್ಯರೇ

ದೇಶದಲ್ಲಿ ಅವಿರತವಾಗಿ ಕಲಬೆರಕೆ ಹಾಲು ಮಾರಾಟವಾಗುವುದನ್ನು ತಪ್ಪಿಸಲು ಕೇಂದ್ರ ಸರಕಾರ ಆಮದು-ರಫ್ತು ಮಾಡುವ ಶ್ರೀಮಂತ ಹನ್ನೆರಡು ದೇಶಗಳಿಂದ ಪ್ರತಿದಿನ ಹಾಲು ತಂದು ಮಾರಾಟ ಮಾಡಲು ವಿದೇಶಿ ಕಂಪೆನಿಗಳಿಗೆ ಅನುಮತಿ ನೀಡಿದೆ.

ಇಂದು ಭಾರತದಲ್ಲಿ ಮಾರಾಟವಾಗುವ ಶೇ. 78ರಷ್ಟು ಹಾಲು ಕಲಬೆರಕೆ ಹಾಲಾಗಿದ್ದು; ಇದನ್ನು ತಡೆಯಲು ಯಾವ ರಾಜ್ಯವೂ ಸೂಕ್ತ ಕಾರ್ಯಾಚರಣೆ ಮಾಡುವುದಿಲ್ಲ. ಪ್ರಸ್ತುತ ಭಾರತದಲ್ಲಿ ಸುಮಾರು 137 ಕೋಟಿ ಭಾರತೀಯರಿದ್ದು ಇವರೆಲ್ಲರಿಗೂ ಬೆಳಗ್ಗೆ ಹಾಗೂ ಸಂಜೆ ಚಹಾ ಕಾಫಿಗಾಗಿ ಹಲವು ಕೋಟಿ ಲೀಟರ್ ಹಾಲಿನ ಅಗತ್ಯವಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಕೇವಲ ಶೇ. 3 ಗೌಳಿಗರಿದ್ದು, ಒಟ್ಟು ಉತ್ಪಾದನೆಯಾಗುವ ಹಾಲು ಕೇವಲ 3 ಕೋಟಿ ಲೀಟರ್. ಹಾಗಾದರೆ 137 ಕೋಟಿ ಜನರಿಗೆ ಹಾಲು ಸರಬರಾಜು ಆಗುವುದು ಎಲ್ಲಿಂದ?

ಮನೆಗಳಿಂದ ಜನರು ಹಾಲಿನ ಸೊಸೈಟಿಗೆ ನೀಡಿದ ಹಾಲನ್ನು ಟ್ಯಾಂಕರ್‌ಗಳು ಡೇರಿಗೆ ಕೊಂಡೊಯ್ಯುತ್ತವೆ. ಇಲ್ಲಿ ಹಾಲಿನಿಂದ ತುಪ್ಪ, ಹಾಲು ಪುಡಿ ಮಾಡಿದ ನಂತರ ಉಳಿಯುವುದು ಕೇವಲ ನೀರು. ಅನಧಿಕೃತ ಮೂಲಗಳ ಪ್ರಕಾರ ಈ ನೀರಿಗೆ ಮರಗೆಣಸಿನ ಹುಡಿ, ಸ್ಟೀವಿಯಾ, ಎಣ್ಣೆ, ಅನುಮತಿಸಿದ ಬಿಳಿಬಣ್ಣ, ಕ್ರಿಮಿನಾಶಕಗಳನ್ನು ಬಳಸಿ ಪ್ಯಾಕ್ ಮಾಡಿ ‘ಹಾಲು’ ಎಂಬ ಹೆಸರಲ್ಲಿ ಇಡೀ ದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ.

ಭಾರತದಲ್ಲಿ ಮಾರುವ ದಪ್ಪಹಸಿರು ಹಾಲು, ತೆಳುನೀಲಿ ಹಾಲು, ಕೆನೆ ಭರಿತ ಹಾಲು, ಟೋನ್ಡ್ ಹಾಲು ಎಂದು ಜನರನ್ನು ಯಾಮಾರಿಸಿ ಹಾಲು ಮಾರಾಟ ಪ್ರಪಂಚದಲ್ಲೆಲ್ಲೂ ನಡೆಯುವುದಿಲ್ಲ. ಉದಾಹರಣೆಗೆ ಅತ್ಯಂತ ಹೆಚ್ಚಿನ ಹಾಲು ಉತ್ಪಾದಿಸುವ ಆಸ್ಟ್ರೇಲಿಯ, ಜರ್ಮನಿಯಲ್ಲಿ ರಟ್ಟಿನ ಡಬ್ಬಿ ಒಳಗೆ ‘ಹೋಮೋಜಿನೈಸ್ಡ್’ (ಅಂದರೆ ನೇರ ಕುಡಿಯಬಹುದಾದ, ಬಿಸಿಮಾಡುವ ಅಗತ್ಯವಿಲ್ಲದ) ಹಾಲು ಸಿಗುತ್ತದೆ.

ಇದೀಗ ಹೆಚ್ಚಿನ ಹಾಲು ನಿಗಮಗಳು ವಿದೇಶಿ ಹಾಲು ಮಾರಾಟ ಮಾಡಬಾರದು ಎಂದು ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾರಂಭಿಸಿವೆ. ವಿದೇಶಿ ಹಾಲು ಶೇ. 98 ಶುದ್ಧವಾದುದು. ರಟ್ಟಿನ ಡಬ್ಬಿಯಲ್ಲಿ ಬರುವುದರಿಂದ ಪ್ಲಾಸ್ಟಿಕ್ ಮಾಲಿನ್ಯವಿಲ್ಲ, ಬಿಸಿ ಮಾಡುವ ಅಗತ್ಯವಿಲ್ಲದೆ ನೇರವಾಗಿ ಕುಡಿಯಬಹುದು. ಆಗ ಮಾತ್ರ ಕಲಬೆರಕೆ ಹಾಲು ಮಾರಾಟ ಮಾಡುವವರಿಗೆ ಬುದ್ಧಿ ಬರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)