varthabharthi


ಸಂಪಾದಕೀಯ

ನಿರ್ಲಕ್ಷ್ಯಕ್ಕೀಡಾಗಿರುವ ಮಾನಸಿಕ ಆರೋಗ್ಯ

ವಾರ್ತಾ ಭಾರತಿ : 18 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ರಾಜ್ಯ ಮಾನಸಿಕ ಆರೋಗ್ಯ ಮಂಡಳಿಗೆ ತಕ್ಷಣವೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಂತೆ ರಾಜ್ಯ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ. ರಾಜ್ಯದಲ್ಲಿ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆಯನ್ನು ಜಾರಿಗೊಳಿಸುವಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ. ಕೊರೋನ ಬಳಿಕ ಜನರಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಈ ಆದೇಶ ಅತ್ಯಂತ ಮಹತ್ವ ಪೂರ್ಣವಾದದ್ದಾಗಿದೆ. ಕೊರೋನ ದಿನಗಳಲ್ಲಿ ಇತರೆಲ್ಲ ರೋಗಗಳನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಜೊತೆಗೆ ಕೊರೋನ, ಲಾಕ್‌ಡೌನ್‌ಗಳ ಕಾರಣದಿಂದಾಗಿ ಜನರು ದೈಹಿಕ ಅಸ್ವಸ್ಥತೆಯಿಂದ ಮಾತ್ರವಲ್ಲ, ಮಾನಸಿಕ ಅಸ್ವಸ್ಥತೆಯಿಂದಲೂ ಬಳಲುತ್ತಿದ್ದಾರೆ. ಮಾನಸಿಕ ಆರೋಗ್ಯವನ್ನು ಸರಕಾರ ನಿರ್ಲಕ್ಷಿಸುತ್ತಿರುವ ಕಾರಣದಿಂದ, ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ, ಮಾನಸಿಕ ಆರೋಗ್ಯ ಮಂಡಳಿಗೆ ಜೀವಕೊಡುವುದು ಅತ್ಯಗತ್ಯವಾಗಿದೆ.

 ಭಾರತ ಇಂದಿಗೂ ಮಾನಸಿಕ ಆರೋಗ್ಯವನ್ನು, ದೈಹಿಕ ಆರೋಗ್ಯದಷ್ಟೇ ಸಹಜವಾಗಿ ಸ್ವೀಕರಿಸಿಲ್ಲ. ಮಾನಸಿಕ ಅಸ್ವಸ್ಥತೆಗೆ ಹುಚ್ಚು ಎಂಬ ತಲೆಬರಹವನ್ನು ಕೊಟ್ಟು, ಅದನ್ನು ಮುಚ್ಚಿ ಹಾಕಲು ಯತ್ನಿಸುವ ಜನರೇ ಅಧಿಕ. ಮಾನಸಿಕ ರೋಗಗಳಿಗಾಗಿ ಆಸ್ಪತ್ರೆಗಳಿಗೆ ಹೋಗುವುದು ಸಂಕೋಚ ಪಡುವ ಅಥವಾ ಗುಟ್ಟಾಗಿಡುವ ವಿಷಯ ಎಂದು ಭಾವಿಸಲಾಗುತ್ತದೆ. ಇದೇ ಸಂದರ್ಭದಲ್ಲಿ, ಮಾನಸಿಕ ಆಸ್ಪತ್ರೆಗಳಿಗೆ ತೆರಳುವುದಕ್ಕೆ ರೋಗಿಗಳೂ ಒಪ್ಪುವುದಿಲ್ಲ. ತನ್ನನ್ನು ತಾನು ಮಾನಸಿಕ ಅಸ್ವಸ್ಥ ಎಂದು ಒಪ್ಪಿಕೊಳ್ಳುವುದಕ್ಕೆ ರೋಗಿಗಳು ಸಿದ್ಧರಿರುವುದಿಲ್ಲ. ದೇಹಕ್ಕೆ ಒತ್ತಡಗಳು ಹೆಚ್ಚಿದಾಗ ಅಥವಾ ಆನುವಂಶಿಕ ಕಾರಣದಿಂದ ಕಾಯಿಲೆಗಳು ಕಾಣಿಸಿಕೊಂಡಾಗ ತಕ್ಷಣ ನಾವು ಆ ಸಮಸ್ಯೆಯನ್ನು ಇತರದೊಂದಿಗೆ ಹಂಚಿಕೊಳ್ಳುತ್ತೇವೆ ಮತ್ತು ಮುಕ್ತವಾಗಿ ಚರ್ಚಿಸುತ್ತೇವೆ. ವೈದ್ಯರನ್ನು ಭೇಟಿ ಮಾಡುತ್ತೇವೆ. ಮನಸ್ಸು ಕೂಡ ದೇಹದಂತೆಯೇ ಒತ್ತಡಗಳನ್ನು ಸಹಿಸುವುದಿಲ್ಲ. ಆನುವಂಶಿಕ ಸಮಸ್ಯೆಗಳು ಮನಸ್ಸನ್ನು ಕೆಲವೊಮ್ಮೆ ಕಾಡಬಹುದು. ಆಗ ಅದನ್ನು ಮುಚ್ಚಿಡದೆ ತಕ್ಷಣ ಸಂಬಂಧಪಟ್ಟ ವೈದ್ಯರನ್ನು ಕಾಣುವುದು, ಅವರೊಂದಿಗೆ ಸಮಾಲೋಚನೆ ನಡೆಸುವುದು ಅತ್ಯಗತ್ಯ. ಜನರ ಈ ಮುಜುಗರ, ವೌಢ್ಯ, ಆತಂಕವನ್ನು ಬಾಬಾಗಳು, ಧಾರ್ಮಿಕ ಪುರೋಹಿತರು, ಮಂತ್ರವಾದಿಗಳು ದುರುಪಯೋಗ ಪಡಿಸಿಕೊಳ್ಳುವುದನ್ನು ಕಾಣುತ್ತೇವೆ.

ಸ್ಕಿರೆಫ್ರೇನಿಯಾದಂತಹ ಕಾಯಿಲೆಗಳನ್ನು ಹೊಂದಿದವರಿಗೆ ವ್ಯಕ್ತಿಗಳು ಕಾಣುವುದು, ಶಬ್ದಗಳು ಕೇಳುವುದು ಸಹಜ. ಇದನ್ನೇ ದೆವ್ವ, ಭೂತ ಎಂದು ಹೇಳಿ ನೂಲು, ಮಂತ್ರ, ಬೂದಿಗಳನ್ನು ಕೊಟ್ಟು ಆ ಕಾಯಿಲೆಪೀಡಿತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಮಂತ್ರವಾದಿಗಳು ಸಮಾಜದಲ್ಲಿ ಹೆಚ್ಚುತ್ತಿದ್ದಾರೆ. ಮಾನಸಿಕ ಕಾಯಿಲೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸದೆ ಇರುವುದರ ಲಾಭವನ್ನು ಇವರು ಪಡೆದುಕೊಳ್ಳುತ್ತಿದ್ದಾರೆ. ಭಾರತದ ದುರಂತವೆಂದರೆ, ಸರಕಾರವೇ ಇನ್ನೂ ಮಾನಸಿಕ ಕಾಯಿಲೆಗಳ ಗಂಭೀರತೆಯನ್ನು ಅರಿತಿಲ್ಲ. ಸಾಧಾರಣವಾಗಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ವಾರ್ಷಿಕ ಬಜೆಟ್‌ನಲ್ಲಿ ಶೇ. 5ರಿಂದ ಶೇ. 15ರವರೆಗೆ ಮಾನಸಿಕ ಆರೋಗ್ಯಕ್ಕೆ ಮೀಸಲಿಡುತ್ತದೆ. ಆದರೆ ಭಾರತದಲ್ಲಿ ಮಾನಸಿಕ ಆರೋಗ್ಯಕ್ಕೆ 0.05 ಶೇಕಡವಷ್ಟೇ ಮೀಸಲಿಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ವೈದ್ಯರ ದೊಡ್ಡ ಮಟ್ಟದ ಕೊರತೆಯಿದೆ. ಹಾಗೆಯೇ ಔಷಧಿಗಳ ಕುರಿತಂತೆಯೂ ಭಾರತದಲ್ಲಿ ಗೊಂದಲಗಳಿವೆ. ಖಾಸಗಿ ಆಸ್ಪತ್ರೆಗಳು ಮಾನಸಿಕ ರೋಗಿಗಳನ್ನು ಶೋಷಿಸುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ.

ರೋಗಿಗಳನ್ನು ಶೋಷಿಸುವ ವೈದ್ಯರ ಸಂಖ್ಯೆಯೂ ಕಡಿಮೆಯೇನೂ ಇಲ್ಲ. ರೋಗದ ಕುರಿತಂತೆ ಜನರಲ್ಲಿ ಇರುವ ಮಾಹಿತಿಗಳ ಕೊರತೆಯನ್ನು ವೈದ್ಯರೂ ತಮ್ಮ ಹಣದ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಹಾಗೆಯೇ ಮಾನಸಿಕ ವೈದ್ಯರ ಮೇಲಿನ ಅಪನಂಬಿಕೆ, ಅಪಪ್ರಚಾರದ ಕಾರಣದಿಂದ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುವ ರೋಗಿಗಳೂ ಇದ್ದಾರೆ. ಭಾರತ ರೈತರ ಆತ್ಮಹತ್ಯೆಯ ಕಾರಣದಿಂದ ಸುದ್ದಿಯಲ್ಲಿತ್ತು. ಆದರೆ ಕೊರೋನ ಬಳಿಕ ಸಣ್ಣ ಉದ್ಯಮಿಗಳ ಆತ್ಮಹತ್ಯೆಗಳೂ ಹೆಚ್ಚುತ್ತಿವೆ. ಕೊರೋನ ರೋಗದ ಕುರಿತ ಭಯಕ್ಕಿಂತ ಲಾಕ್‌ಡೌನ್ ಸೃಷ್ಟಿಸಿದ ಆರ್ಥಿಕ ಅಭದ್ರತೆ ಈ ದೇಶದ ಸಾವಿರಾರು ಜನರನ್ನು ಖಿನ್ನತೆಗೆ, ಆತಂಕಕ್ಕೆ ತಳ್ಳಿದೆ. ಇವರಿಗೆ ಉಚಿತ ಸಮಾಲೋಚನೆ ಮತ್ತು ಔಷಧಿಗಳನ್ನು ದೊರಕಿಸುವ ಕೆಲಸ ನಡೆಯುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತೀಯರಲ್ಲಿ ಶೇ. 60ರಷ್ಟು ಮಂದಿ ‘ಸಂತೋಷವಾಗಿಲ್ಲ’ ಎನ್ನುವುದನ್ನು ಸಮೀಕ್ಷೆ ಹೇಳುತ್ತದೆ. ಇದು ಕೊರೋನ ಪೂರ್ವ ಸಮೀಕ್ಷೆಯಾಗಿತ್ತು. ಲಾಕ್‌ಡೌನ್ ಭೀಕರತೆಯ ಬಳಿಕ ದೇಶದಲ್ಲಿ ಖಿನ್ನತೆಯ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ. ಈ ಮಾನಸಿಕ ಕಾಯಿಲೆಗೆ ದೊಡ್ಡವರು ಮಾತ್ರವಲ್ಲ ಮಕ್ಕಳೂ ಬಲಿಯಾಗುತ್ತಿದ್ದಾರೆ. ಶಿಕ್ಷಣದ ಅತಂತ್ರತೆ ಮಕ್ಕಳನ್ನು ಅನಗತ್ಯ ಗಾಬರಿ, ಗೊಂದಲ ಮತ್ತು ಒತ್ತಡಕ್ಕೆ ತಳ್ಳಿದೆ. ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಮೊರೆಹೋದ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ದೇಶ ಆಶಾವಾದವನ್ನು ಕಳೆದುಕೊಂಡು ಖಿನ್ನತೆಯತ್ತ ಜಾರುತ್ತಿರುವ ಈ ದಿನಗಳಲ್ಲಿ ದೈಹಿಕ ಆರೋಗ್ಯದಷ್ಟೇ ಮಹತ್ವವನ್ನು ನಾವು ಮಾನಸಿಕ ಆರೋಗ್ಯಕ್ಕೂ ನೀಡಬೇಕಾಗಿದೆ.

ಈ ನಿಟ್ಟಿನಲ್ಲಿ ಈ ದೇಶದ ಎಲ್ಲ ರಾಜ್ಯಗಳಲ್ಲೂ ಮಾನಸಿಕ ಆರೋಗ್ಯ ಮಂಡಳಿಯ ರಚನೆಯಾಗಬೇಕಾಗಿದೆ ಮತ್ತು ಜನರಲ್ಲಿ ಮುಖ್ಯವಾಗಿ ಮಾನಸಿಕ ಕಾಯಿಲೆ ಮುಚ್ಚಿಡುವ ವಿಷಯವಲ್ಲ, ಅದು ದೈಹಿಕ ಕಾಯಿಲೆಯಷ್ಟೇ ಸಹಜ ಮತ್ತು ಗುಣ ಪಡಿಸುವುದಕ್ಕೆ ಸಾಧ್ಯವಿದೆ ಎನ್ನುವ ಜಾಗೃತಿಯನ್ನು ಮೂಡಿಸಬೇಕಾಗಿದೆ. ಮಾನಸಿಕ ಅಸ್ವಸ್ಥತೆಯನ್ನು ಮುಕ್ತವಾಗಿ ಚರ್ಚಿಸುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ಮಾನಸಿಕ ವೈದ್ಯರು ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿ, ಗ್ರಾಮೀಣ ಜನರನ್ನು ಮಂತ್ರವಾದಿಗಳು, ಭೂತ ಬಿಡಿಸುವವರ ಶೋಷಣೆಯಿಂದ ಕಾಪಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥರಿಗೆ ಭೂತ, ಪ್ರೇತ, ಮಾಟ ಇತ್ಯಾದಿಗಳ ಹೆಸರಿನಲ್ಲಿ ಅವರಿಗೆ ಔಷಧಿ ನೀಡುವ ಯಾವುದೇ ಧರ್ಮಕ್ಕೆ ಸೇರಿದವರಿರಲಿ ಅವರನ್ನು ಗುರುತಿಸಿ ಅವರ ಮೇಲೆ ಕಾನೂನುಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮೌಢ್ಯ ವಿರೋಧಿ ಕಾನೂನು ಪ್ರತಿ ರಾಜ್ಯಗಳಲ್ಲೂ ಜಾರಿಗೊಳ್ಳಬೇಕಾಗಿದೆ.

ಕೊರೋನ ಕಾಲದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ಜನರಿಗೆ ವಿಶೇಷ ಮಾನಸಿಕ ಸಮಾಲೋಚನೆಗಳನು ಹಮ್ಮಿಕೊಳ್ಳುವ ವ್ಯವಸ್ಥೆಯಾಗಬೇಕು. ಜನರಲ್ಲಿ ಭರವಸೆ ತುಂಬುವ ಕೆಲಸ ನಡೆಯಬೇಕು. ಹೊಸ ತಲೆಮಾರು ಇಂಟರ್ ನೆಟ್, ಮೊಬೈಲ್ ಜಾಲದೊಳಗೆ ಸಿಲುಕಿ ಖಿನ್ನತೆಯಂತಹ ಸಮಸ್ಯೆಗಳಿಗೆ ಈಡಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪಾಲಕರು ಅವರನ್ನು ಪ್ರಶ್ನಿಸುವುದಕ್ಕೂ ಹೆದರುವಂತಹ ಸನ್ನಿವೇಶವಿದೆ. ಸಣ್ಣ ಪುಟ್ಟ ಸವಾಲುಗಳನ್ನೂ ಎದುರಿಸುವುದಕ್ಕೆ ವಿಫಲವಾಗುವ ಈ ತರುಣರು, ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಲಿಯಾಗಿ ಬಿಡುತ್ತಾರೆ. ಹೊಸ ತಲೆಮಾರುಗಳನ್ನು ನಾವು ಕಾಪಾಡಿಕೊಳ್ಳಬೇಕಾದರೆ ಸರಕಾರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಆರೋಗ್ಯವಂತ ದೇಹ ಮಾತ್ರವಲ್ಲ, ಆರೋಗ್ಯವಂತ ಮನಸ್ಸು ಕೂಡ ಭವಿಷ್ಯದ ಭಾರತವನ್ನು ನಿರ್ಮಾಣ ಮಾಡಲು ಅತ್ಯಗತ್ಯ ಎನ್ನುವುದನ್ನು ಸರಕಾರ ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)