varthabharthi


ಅನುಗಾಲ

ಕಾನೂನಿನ ಎಲ್ಲೆಗಳು

ವಾರ್ತಾ ಭಾರತಿ : 18 Nov, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಾನೂನಿನ ಬಲೆಯ ತಂತುಗಳು ಸಾಕಷ್ಟು ಸಡಿಲವಾಗುತ್ತಿವೆ. ನಮ್ಮ ಸೆರೆಮನೆಗಳು ಬಡತನದ ರೇಖೆಗಿಂತ ಕೆಳಗಿರುವವರಿಗೆ ಮನೆಗಳಾಗಿವೆಯೇ ಹೊರತು ಸ್ಥಿತಿವಂತರಿಗಲ್ಲ. ನಿರ್ದೋಷಿಗೆ ಶಿಕ್ಷೆಯಾಗಬಾರದೆಂಬುದಕ್ಕಾಗಿ ದೋಷಿಗಳು ಸಾಲಾಗಿ ಹೊರಬರುತ್ತಾರೆ. ಯಾರಾದರೂ ನೈಜ ಅಪರಾಧಿಗಳು ಹೊರಬರಲು ವಿಫಲರಾದರೆ ಅದಕ್ಕೆ ಮರುಭೂಮಿಯ ಓಯಸಿಸ್‌ನಂತಿರುವ ನಮ್ಮ ನ್ಯಾಯಾಲಯಗಳು ಕಾರಣವೇ ಹೊರತು ಪೊಲೀಸರಲ್ಲ.


ನೀವೆಷ್ಟೇ ದೊಡ್ಡವರಾದರೂ ಕಾನೂನು ನಿಮಗಿಂತ ಎತ್ತರವಾಗಿರುತ್ತದೆ ಎಂಬುದೊಂದು ಪ್ರಸಿದ್ಧ ಹೇಳಿಕೆ. ಕಾನೂನು ಕೈಗೆ ಸಿಗುವಂತಿರಬೇಕು ಎಂಬುದು ಕಾನೂನಿನ ವ್ಯವಸ್ಥೆಯ ಮೂಲಕ ನ್ಯಾಯವನ್ನೊದಗಿಸುವ ಎಲ್ಲ ಪ್ರಜಾಪ್ರಭುತ್ವ ಸಮಾಜಗಳ ಆಶಯ. ಕಾನೂನಿನ ಕೈ ತುಂಬಾ ನೀಳವಾಗಿದೆಯಾದ್ದರಿಂದ ಅದರಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ ಎಂಬುದು ಜನರ ನಂಬಿಕೆ. ಸಾವಿರ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಸರಿಯೆ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನ್ಯಾಯವ್ಯವಸ್ಥೆಯ ಎಚ್ಚರ. ನ್ಯಾಯಕ್ಕಾಗಿ ಅವಸರ ಮಾಡಿದರೆ ಅದು ಹೂತುಹೋಗಬಹುದು ಎಂಬುದಕ್ಕೆ ಪರ್ಯಾಯವಾಗಿ ನ್ಯಾಯವು ಆಮೆಗತಿಯಲ್ಲಿ ಸಾಗಿದರೆ ಅದು ತಿರಸ್ಕೃತವಾಗಬಹುದು ಎಂಬುದು ಸೂಕ್ತಿ. ಕಾನೂನೆಂಬುದು ಕತ್ತೆ ಇದ್ದಂತೆ- ಅದು ಎತ್ತಲಿಂದ ಒದೆಯುತ್ತದೆಯೆಂಬುದು ಗೊತ್ತಾಗದು ಎಂಬ ಮಾತಿದೆ. ಕಾನೂನು ಶ್ರೀಮಂತರಿಗೆ ಸುಖದ ಸಾಧನ ಎಂಬುದು ಲಾಗಾಯ್ತಿನಿಂದ ಬಂದ ನೀತಿ. ಇಂತಹ ಸಾರ್ವಜನಿಕ ಚರ್ಚಿತ ನೀತಿಗಳು ಇನ್ನೂ ಇರಬಹುದು. ಇವುಗಳಲ್ಲಿ ಯಾವುದು ಸರಿ? ಯಾವುದು ನಮಗೆ ಸ್ವೀಕಾರಾರ್ಹ?

ನಮ್ಮಲ್ಲಿ ಕಾನೂನೆಂದರೆ ಪೊಲೀಸರಿಂದ ಆರಂಭವಾಗಿ ನ್ಯಾಯಾಲಯದಲ್ಲಿ ಮುಗಿಯುವ ಪ್ರಕ್ರಿಯೆ. ಸಭ್ಯ ನಾಗರಿಕತೆಯೆಂದರೆ ಯಾವುದೊಂದು ತಪ್ಪು/ಅಪರಾಧ ನಡೆದರೆ ಅದನ್ನು ಪೊಲೀಸರಿಗೆ ವರದಿಮಾಡುವುದು. ಸಿವಿಲ್ ಅಪರಾಧಗಳಾದರೆ ತಾವೇ ಕಾನೂನಿನ ಕ್ರಮಗಳನ್ನು ಸೂಕ್ತ ಪ್ರಾಧಿಕಾರ/ನ್ಯಾಯಾಲಯಗಳಲ್ಲಿ ನಡೆಸಬಹುದು. ಆದರೆ ಕ್ರಿಮಿನಲ್ ಪ್ರಕರಣಗಳಲ್ಲಿ ನಾಗರಿಕನು ತಾನೇ ವ್ಯವಹರಿಸಬೇಕಾದ ಸಂದರ್ಭಗಳು ಕೆಲವೇ ಇವೆ: ಮಾನಹಾನಿಯ ದಾವೆ, ಜೀವನಾಂಶದ ಮೊಕದ್ದಮೆ ಮುಂತಾದವು. ಉಳಿದಂತೆ ಎಲ್ಲವೂ ಪೊಲೀಸರ ಮೂಲಕವೇ ನಡೆಯಬೇಕು; ನಡೆಸಬೇಕು. ಒಂದು ವೇಳೆ ಪೊಲೀಸರು ಕ್ರಮಕೈಗೊಳ್ಳಲು ಹಿಂಜರಿದರೆ, ನಿರಾಕರಿಸಿದರೆ ಅಥವಾ ದೂರುದಾರನಿಗೆ ವಿರೋಧ/ವಿರುದ್ಧವಾದ ಅಂತಿಮ ವರದಿಗಳನ್ನು ಸಲ್ಲಿಸಿದರೆ, ಆಗ ನೊಂದ ನಾಗರಿಕನಿಗೆ ನ್ಯಾಯಾಲಯದ ಕದ ತಟ್ಟುವ ಅವಕಾಶವಿದೆ. ಒಂದು ವೇಳೆ ಮೊದಲ ನ್ಯಾಯಾಲಯದಲ್ಲಿಯೂ ನ್ಯಾಯ ಸಿಗದಿದ್ದರೆ ಮೇಲ್ಮನವಿಯೇ ಮೊದಲಾದ ಅವಕಾಶಗಳೂ ಇವೆ. ಸಾಮರ್ಥ್ಯವಿದ್ದರೆ, ಹಣಕಾಸಿನ ಅನುಕೂಲವಿದ್ದರೆ, ಯಾವುದಾದರೂ ಸಂಘಟನೆ ಬೆಂಬಲವಾಗಿ ನಿಂತರೆ, ಸರ್ವೋಚ್ಚ ನ್ಯಾಯಾಲಯದ ವರೆಗೂ ಈ ಹಠ ಮುಂದುವರಿಯಬಹುದು.

2002ರ ಗುಜರಾತ್ ಹಿಂಸಾಚಾರದ ಪ್ರಕರಣಗಳಲ್ಲಿ ನರೇಂದ್ರ ಮೋದಿಯವರಿಗೆ ಜೀವನ್ಮುಕ್ತಿಯನ್ನು ದಯಪಾಲಿಸಿದ ವಿಶೇಷ ತನಿಖಾ ತಂಡದ ವರದಿಯನ್ನು ನ್ಯಾಯಾಲಯವು ಸ್ವೀಕರಿಸಿದ ರೀತಿಯನ್ನು ಈಗಾಗಲೇ ಝಕಿಯಾ ಜಾಫ್ರಿ ಎಂಬಾಕೆ (ಆಕೆಯ ಪತಿ ಎಹ್ಸಾನ್ ಜಾಫ್ರಿ ಕಾಂಗ್ರೆಸ್ ಶಾಸಕರಾಗಿದ್ದು ಈ ಹಿಂಸಾಚಾರದಲ್ಲಿ ಹತರಾಗಿದ್ದರು) ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಅದೀಗ ವಿಚಾರಣೆಯ ಹಂತದಲ್ಲಿದೆ. ವಿಳಂಬವು ಅನ್ಯಾಯವನ್ನು ಮರೆಯುವುದಿಲ್ಲ. ಆದರೆ ಅನೇಕ ಬಾರಿ ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ರೋಗಿ ಬದುಕಿಲ್ಲ ಎಂಬಂತಾಗುವುದೇ ಹೆಚ್ಚು. ಪ್ರಕರಣಗಳು ಇತ್ಯರ್ಥವಾಗುವ ಹೊತ್ತಿಗೆ ಅನೇಕ ಆರೋಪಿಗಳು ಸತ್ತಿರುತ್ತಾರೆ; ಇಲ್ಲವೇ ಜಾಮೀನಿನಲ್ಲಿ ಬಿಡುಗಡೆಹೊಂದಲು ವಿಫಲರಾಗಿ ತಮ್ಮ ಶಿಕ್ಷೆಯ ಅವಧಿಯನ್ನು ಪೂರೈಸಿರುತ್ತಾರೆ. ಇಂತಹ ಸಂದರ್ಭಗಳಿಗೆ ಸೂಕ್ತ ಪರಿಹಾರವಿಲ್ಲ. ಸರಕಾರದ ಏಜಂಟರಾಗಿರುವ ಪೊಲೀಸರು ಮಾಡಿದ್ದು ಸರಿಯೆಂಬ ಊಹೆಯಿಂದಲೇ ನ್ಯಾಯಾಲಯಗಳೂ ಮುಂದುವರಿಯುವುದರಿಂದ ನ್ಯಾಯ ಸಿಗುವ ಹೊತ್ತಿಗೆ ನಾಗರಿಕ ಸೋತು ಹೈರಾಣಾಗಿರುತ್ತಾನೆ. ಆದರೆ ಈಚೆಗೆ ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶದ ಪ್ರಕರಣವೊಂದರಲ್ಲಿ ಶಿಕ್ಷೆಯ ಅವಧಿಯನ್ನು ಪೂರೈಸಿದ್ದಾನೆಂಬ ಕಾರಣಕ್ಕೆ ಅಪರಾಧದ ವಿಚಾರಣೆಯನ್ನು ನಿಲ್ಲಿಸಲಾಗದೆಂದು ತೀರ್ಪು ನೀಡಿದೆ. ಮುಖ್ಯವಾಗಿ ಅನಗತ್ಯ ಕಳಂಕದ ಶಿಲುಬೆಯನ್ನು ಹೊತ್ತು ಸಾಗಬೇಕಾದ ಮಾನವಂತರಿಗೆಲ್ಲ ಇದು ವರವಾಗಿ ಪರಿಣಮಿಸುವ ನಿರೀಕ್ಷೆಯಿದೆ.

ಕೆಲವೊಂದು ಬಾರಿ ಇಂತಹ ವಿಳಂಬಗಳು ವರವೇ ಆಗುತ್ತವೆ- ಅದರಲ್ಲೂ ರಾಜಕಾರಣಿಗಳಿಗೆ ಮತ್ತು ವೃತ್ತಿಪರ ಗೂಂಡಾಗಳಿಗೆ. ನಮ್ಮ ನ್ಯಾಯದಾನ ಪದ್ಧತಿ ಎಷ್ಟು ವಿಚಿತ್ರವೆಂದರೆ ಜೈಲಿನಲ್ಲಿರಬೇಕಾದವರು ಏನಾದರೊಂದು ಕಾರಣದಿಂದ ಜಾಮೀನು ಅಥವಾ ತಡೆಯಾಜ್ಞೆಗಳನ್ನು, ಶಿಕ್ಷೆಯ ಅಮಾನತ್ತನ್ನು ಪಡೆದು, ಅಧಿಕಾರದಲ್ಲಿ ವಿಜೃಂಭಿಸುತ್ತಾರೆ. ಕೊನೆಗೂ ಆ ಪ್ರಕರಣವು ಮುಗಿಯಬೇಕಾದರೆ ಆರೋಪಿ ತನ್ನ ಜೀವನಯಾನವನ್ನು ಮುಗಿಸಿರುತ್ತಾನೆ. ಪಿ.ವಿ.ನರಸಿಂಹರಾವ್, ಲಾಲುಪ್ರಸಾದ್‌ಯಾದವ್, ಜಯಲಲಿತಾ, ಜಗನ್ಮೋಹನ ರೆಡ್ಡಿಯವರ ಮೂಲಕ ಸಾಗುವ ಈ ಪಟ್ಟಿ ಬಹಳ ದೊಡ್ಡದಿದೆ. ಇವರೆಲ್ಲ ನಮ್ಮ ನ್ಯಾಯಪದ್ಧತಿಯ ಲಾಭವನ್ನು ಪರಮೋಚ್ಚವಾಗಿ ಪಡೆದವರು. ಪೊಲೀಸರಿಂದ ಬಂಧಿತರಾಗಿ ಹೋಗಬೇಕಾದವರು ಅದೇ ಪೊಲೀಸರ ರಕ್ಷಣೆ, ಬೆಂಗಾವಲಿನೊಂದಿಗೆ ಮೆರವಣಿಗೆ ಹೋಗುವುದನ್ನು ನೋಡುವ ದೌರ್ಭಾಗ್ಯ ಈ ದೇಶದ ಜನರದ್ದು. ಒಬ್ಬ ಪೊಲೀಸು ಅಧಿಕಾರಿ ಠಾಣೆಯಲ್ಲಿ ಒದ್ದ ವ್ಯಕ್ತಿ ಮಂತ್ರಿಯಾಗಿ ನಿಂತಾಗ ಆತನಿಗೆ ಸೆಲ್ಯೂಟು ಹಾಕುವ ಪಾಡು ಎದುರಾದರೆ ಆ ಪೊಲೀಸು ಅಧಿಕಾರಿ ಏನು ಮಾಡಬೇಕು? ಏನೂ ಮಾಡಬೇಕಿಲ್ಲ. ಅಪರೂಪದ ಅಪವಾದಗಳನ್ನು ಹೊರತುಪಡಿಸಿದರೆ ಬಹುತೇಕ ಸರಕಾರಿ ಅಧಿಕಾರಿಗಳು ಮಾನವನ್ನು ಮನೆಯಲ್ಲೇ ಬಿಟ್ಟು ಕಚೇರಿಗೆ ಹೋಗುತ್ತಾರೆ, ಇಲ್ಲವೇ ಹೋಗಗಬೇಕಾದ ಸ್ಥಿತಿಯಲ್ಲಿದ್ದಾರೆ ಮತ್ತು ಅದಕ್ಕೆ ಹೊಂದಿಕೊಂಡಿದ್ದಾರೆ. ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!

 ಕಾನೂನು ಕೈಗೆ ಸಿಗುವಂತಿರಬೇಕು ನಿಜ. ಆದರೆ ಅದು ಎಲ್ಲರ ಕೈಗೆ ಸಿಗುವಂತಹ ಪರವಾನಿಗೆರಹಿತ ಶಸ್ತ್ರವಾಗಿರಬಾರದು. ದಂಡಸಂಹಿತೆಯ ಕಲಂ 43ರಲ್ಲಿ ಜಾಮೀನು ಸಿಗದ ಮತ್ತು ಅಸಂಜ್ಞೇಯ ಅಪರಾಧವನ್ನೆಸಗಿದ, ಯಾವನೇ ವ್ಯಕ್ತಿಯನ್ನು ಇಲ್ಲವೇ ಯಾವನೇ ಘೋಷಿತ ಅಪರಾಧಿಯನ್ನು ದಸ್ತಗಿರಿಮಾಡುವ ಹಕ್ಕನ್ನು ನಾಗರಿಕರಿಗೆ ನೀಡಲಾಗಿದೆ. ಆದರೆ ಇದು ತೀರಾ ಕಡಿಮೆ ಅವಧಿಗೆ-ಅಂದರೆ ಒಬ್ಬ ಪೊಲೀಸ್ ಅಧಿಕಾರಿಗೆ ಮತ್ತು ಅಂತಹ ಅಧಿಕಾರಿ ಸಿಗದಿದ್ದರೆ ಸಮೀಪದ ಪೊಲೀಸ್ ಠಾಣೆಗೆ ಆರೋಪಿಯನ್ನು ಹಾಜರುಮಾಡುವ ವರೆಗೆ ಮಾತ್ರ. (ಇದರ ವಿವರಗಳು ಇಲ್ಲಿ ಅನಗತ್ಯ.) ಇದರಿಂದಾಗಿ ನಡೆಯಬಹುದಾದ ಅಪರಾಧವನ್ನು ತಡೆಯುವ, ಇಲ್ಲವೇ ನಡೆದುಹೋದ ಅಪರಾಧವನ್ನು ಕಾನೂನಿನ ಕೈಗೆ ಒಪ್ಪಿಸುವ ಸಂದರ್ಭವಿತ್ತು. ಕಾನೂನು ತನ್ನ ನ್ಯಾಯನಿರ್ಣಯದ ವ್ಯವಸ್ಥೆಯಲ್ಲಿ ಕಾನೂನಿನ ರಕ್ಷಣೆಗೆ, ಅಪರಾಧಗಳ ತಡೆ ಮತ್ತು ನಿಯಂತ್ರಣಕ್ಕೆ ಇಂತಹ ಹತ್ತಾರು ಔಚಿತ್ಯಪೂರ್ಣ ಅವಕಾಶಗಳನ್ನು ಕಲ್ಪಿಸಿದೆ. ಇದರಿಂದಾಗಿ ಜನರು ಭೀತಮನರಾಗದೆ ನಡೆದಾಡಬಹುದಿತ್ತು. ಅಪರಾಧಿ ಎಷ್ಟೇ ಅನುಭವಸ್ಥನಾದರೂ ಆತಂಕಿತನಾಗಿ ಕನಿಷ್ಠ ಅಳುಕುವುದಕ್ಕಾದರೂ ಸಾಧ್ಯವಿತ್ತು.

ನಮ್ಮ ದೇಶದ ನ್ಯಾಯವ್ಯವಸ್ಥೆಯು ವಿಶ್ವದ ಅತ್ಯುತ್ತಮ ವ್ಯವಸ್ಥೆಗಳಲ್ಲೊಂದು ಎಂದು ನಾವು ಹೆಮ್ಮೆ ಪಡಬಹುದು. ಒಳ್ಳೆಯದೇ ಆದರೆ ಹೆಮ್ಮೆ ಪಡಲೇನಡ್ಡಿ? ಆದರೆ ಸ್ವತಂತ್ರ ಭಾರತದಲ್ಲಿ ಪ್ರಜೆಗಳು ನಮ್ಮದೇ ವ್ಯವಸ್ಥೆಗೆ ಭಯಪಡುವುದು, ಬಲಿಬೀಳುವುದು ನಮಗೆ ಶೋಭೆ ತರುವ ವಿಚಾರವಲ್ಲ. ಬ್ರಿಟಿಷ್ ವ್ಯವಸ್ಥೆಯಲ್ಲಿ ಭ್ರಷ್ಟತನವಿತ್ತೋ ಇಲ್ಲವೋ ಅದಕ್ಕೊಂದು ಶಿಸ್ತಿತ್ತು. ಅನ್ಯಾಯವಾಗಬೇಕಾದರೆ ಅದಕ್ಕೆ ಮೇಲ್ಮಟ್ಟದ ಸಂಚೇ ಇರಬೇಕಾಗಿತ್ತು. ಇದರಿಂದಾಗಿ ಬಂಗಾಳದ ಆಗಿನ ದೊರೆ ನಂದಕುಮಾರ್‌ಬೋಸ್‌ನಂತಹವರು ಅನ್ಯಾಯವಾಗಿ ನೇಣುಗಂಬವೇರಿದ್ದು ಇತಿಹಾಸದಲ್ಲಿ ಮಾತ್ರವಲ್ಲ, ನಮ್ಮ ನ್ಯಾಯದ ಇತಿಹಾಸದಲ್ಲೂ ಒಂದು ಮೈಲಿ-ಗಲ್ಲು! ಭಗತ್‌ಸಿಂಗ್‌ರಂತಹವರು ಮರಣದಂಡನೆಗೆ ಗುರಿಯಾಗಬೇಕಾದರೆ ಅವರ ಮೇಲೆ ಸತ್ಯವೋ ಸುಳ್ಳೋ ಗುರುತರ ಆರೋಪವಂತೂ ಇತ್ತು ಮತ್ತು ಅನೇಕ ಬಾರಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಭಾರತೀಯ ಮಿಲಿಟರಿ ಮತ್ತು ಪೊಲೀಸರ ಮೂಲಕವೇ ಹಿಂಸಿಸಲಾಗುತ್ತಿತ್ತು. ಪಗಾರಪಡೆಯುವ ಭಾರತೀಯ ನೌಕರರಿಗೆ ಕರ್ತವ್ಯದ ಹೆಸರಿನಲ್ಲಿ ತಮ್ಮ ಅಧಿಕಾರವೇ ಮನಸ್ಸಾಕ್ಷಿಯಾಗಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ನಮ್ಮ ಕಾನೂನಿನ ಮಾಲಕರಿಗೆ ಇತ್ತ ಕರ್ತವ್ಯವೂ ಇಲ್ಲ, ಅತ್ತ ಅಧಿಕಾರವೂ ಇಲ್ಲವೆಂಬಂತಾಗಿ ಅವರು ತಮ್ಮನ್ನು ತಾವು ಮಾರಿಕೊಂಡವರಂತಿರುವುದನ್ನು ಕಾಣುತ್ತೇವೆ. ಅವರ ಮೂಲಕ ನಡೆಸುವ ಅಕ್ರಮಗಳಿಗೆ ಅವರನ್ನೇ ಅಮಾನತ್ತು, ವರ್ಗಾವಣೆ ಮುಂತಾಗಿ ಬಲಿಪಶುಮಾಡಿದಂತಹ ಪ್ರಹಸನಗಳು ನಡೆದರೂ ಆನಂತರ ಅವರು ಇನ್ನೆಲ್ಲೋ ಬಿಲಕೊರೆದು ಬರುತ್ತಾರೆ. ವ್ಯವಸ್ಥೆ ಮುಂದುವರಿಯುತ್ತದೆ.

ಆಡಳಿತಕ್ಕೆ ನೆರವಾಗುವುದೆಂದರೆ ಆಡಳಿತ ಪಕ್ಷಕ್ಕೆ ನೆರವಾಗುವುದೆಂಬ ಹೊಸ ನೀತಿ ಸಂಹಿತೆ ಸೃಷ್ಟಿಯಾಗುತ್ತಲಿದೆ. ಇದರಿಂದಾಗಿ ಆಡಳಿತ ಪಕ್ಷದ ಯಾವುದೇ ಅಪರಾಧಗಳು-ಅವೆಷ್ಟೇ ಕಣ್ಣಿಗೆ ರಾಚುವಂತಿದ್ದರೂ- ಮರೆಯಾಗಲು ಎಲ್ಲ ನೆರವನ್ನು ನೀಡುತ್ತಾರೆ. ಅಧಿಕಾರ ಎಷ್ಟು ಪ್ರಬಲ ಅಸ್ತ್ರವೆಂದರೆ ಅನಿವಾರ್ಯವಾಗದೆ ಆಡಳಿತ ಪಕ್ಷದ ಯಾವನೇ ಧುರೀಣನು ಆರೋಪಿಯಾಗುವುದಿಲ್ಲ. ತನಿಖೆಯೆಂದರೆ ಅಪರಾಧಿಯನ್ನು ಪತ್ತೆಹಚ್ಚಿ ಆತನ ಮೇಲಣ ಆರೋಪವನ್ನು ಸಾಬೀತು ಮಾಡುವುದೆಂಬುದರ ಬದಲು ಆತನನ್ನು ‘ಬಚಾವ್’ ಮಾಡುವುದು ಎಂಬಂತಾಗಿದೆ. ಈಚೆಗೆ ಉನ್ನತ ಅಧಿಕಾರದ ಸಂಬಂಧ ಲಂಚ ಸ್ವೀಕರಿಸಿದವನೊಬ್ಬನ ಮೇಲೆ ಪ್ರಕರಣ ಮುಂದುವರಿಯುತ್ತಿದ್ದಂತೆಯೇ ಆತನಿಗೆ ಲಂಚ ಕೊಟ್ಟಿದ್ದೇವೆಂದು ದೂರು ನೀಡಿದವರ ವಿರುದ್ಧವೂ ಪ್ರಕರಣಗಳನ್ನು ದಾಖಲುಮಾಡಿದ್ದು ವರದಿಯಾಗಿದೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಇಂದು ಲಂಚ ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಬಹುದು; ಆದರೆ ಲಂಚ ಕೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದರೆ ಆ ವ್ಯಕ್ತಿ ಉಪವಾಸಬೀಳಬೇಕಾದೀತು. ಇನ್ನು ಇಂತಹ ಹಗರಣಗಳನ್ನು ಬಯಲಿಗೆಳೆಯುತ್ತೇವೆಂದು ಹೋರಾಡಿದವರು ಒಬ್ಬೊಬ್ಬ ಮಹಾತ್ಮರೂ ಹುತಾತ್ಮರಾಗುತ್ತಾರೆ.

ಮಾಹಿತಿ ಪಡೆಯುವ ಯತ್ನದಲ್ಲಿ, ಮಾಹಿತಿಯ ಮೂಲಕ ನ್ಯಾಯವನ್ನು ಸ್ಥಾಪಿಸಹೊರಟವರಿಗೆ ಶ್ರದ್ಧಾಂಜಲಿ ಸನಿಹದಲ್ಲೇ ಇದೆ. ಇಂದು ತಾವು ನಂಬಿದ ‘ಸತ್ಯ’ವನ್ನು ಸ್ಥಾಪಿಸಹೊರಟ ಅನೇಕ ಉತ್ಸಾಹಿಗಳು ಧರ್ಮದ, ಮತದ ಹೆಸರಿನಲ್ಲಿ ತಾವೇ ಕಾನೂನನ್ನು ಕೈಗೆತ್ತಿಕೊಂಡು ಶಿಕ್ಷಿಸಹೊರಟಿದ್ದಾರೆ. ಇದಕ್ಕೆ ನೈತಿಕ ಪೊಲೀಸ್‌ಗಿರಿಯೆಂಬ ತಾತ್ವಿಕ ನಾಮಕರಣವೂ ಆಗಿದೆ. ಅಂದರೆ ಪೊಲೀಸರು ಏನು ಮಾಡುತ್ತಾರೆಂಬುದನ್ನು ಅಣಕಿಸುವ ಹಿಂಸಾತ್ಮಕ ಬಲಪರೀಕ್ಷೆ ಇದು. ಇಂತಹ ಹೋರಾಟಗಳಿಗೆ ಯೋಗಿಗಳೂ, ಸನ್ಯಾಸದೀಕ್ಷೆ ಪಡೆದವರೂ ಬೆಂಬಲವಾಗಿದ್ದಾರೆ. ಯಾವುದನ್ನು ಮಾತುಕತೆಯ, ಶಾಂತಿಯುತ ಮಾರ್ಗದ ಮೂಲಕ ಸರಿಪಡಿಸಬಹುದೋ ಅಂತಹ ಎಲ್ಲ ದಾರಿಗಳನ್ನು ಮುಚ್ಚಿ ಹಿಂಸೆಯ ಒಂದೇ ಬಾಗಿಲನ್ನು ತೆಗೆದಿರಿಸಲಾಗಿದೆ. ಬಹುತೇಕ ಪ್ರಸಂಗಗಳಲ್ಲಿ ಪೊಲೀಸರು ಕಣ್ಣುಗಳನ್ನು ಅರೆತೆರೆದು ಅಥವಾ ಅರೆಮುಚ್ಚಿ ನೋಡುತ್ತಿರುತ್ತಾರೆ. ತಮಗೆ ತೊಂದರೆಯಾಗದಂತೆ ನಿಭಾಯಿಸುವುದೇ ಕಾನೂನು ಎಂದು ನಂಬಿದ ಪೊಲೀಸರು ಅನೇಕರಿದ್ದಾರೆ. ಸಿನೆಮಾಗಳಲ್ಲಿ ನಡೆಯುವಂತೆ ಅಪರಾಧ ನಡೆದು ಅಪರಾಧಿ ಸ್ಥಳದಿಂದ ಕಣ್ಮರೆಯಾದ ನಂತರವೇ ಸ್ಥಳಕ್ಕೆ ಧಾವಿಸುವ ಯೋಜಿತ ಪ್ರಸಂಗಗಳು ಅನೇಕ. ಒಂದು ವೇಳೆ ಅನಿವಾರ್ಯವಾಗಿ ಆರೋಪಿಯನ್ನು ಬಂಧಿಸಿದರೂ ಆತನ ವಿರುದ್ಧ ಜಾಮೀನು ಸಿಗಬಲ್ಲ ಕಲಮುಗಳಡಿ ಪ್ರಕರಣ ದಾಖಲಿಸುವ ಜಾಣ್ಮೆಯ ರಕ್ಷಕರೇ ಅನೇಕರು. ಹೀಗೆ ನಾಟಕದ ಈ ಪರದೆಯ ಮೂಲಕ ಬಂಧನಕ್ಕೊಳಗಾದವರು ಆ ಪರದೆಯ ಮೂಲಕ ಹೊರಬರುತ್ತಾರೆ. ಬಂಧನಕ್ಕಾಗಿಯೇ ಕಾಯುವ ಧುರೀಣರೂ ಇದ್ದಾರೆ. ಅದರ ವರದಿ, ಫೋಟೊಗಳು ಅವರಿಗೆ ಎಲ್ಲಿಲ್ಲದ ಜನಪ್ರಿಯತೆಯನ್ನು ತರುತ್ತದಲ್ಲವೇ?

ಈ ದೇಶದಲ್ಲೀಗ ಏನು ಮಾಡಿದರೂ ಹೇಗೆ ಮಾಡಿದರೂ ತಪ್ಪಿಸಿಕೊಳ್ಳಬಲ್ಲ ಮಾರ್ಗಗಳಿವೆ. ಇವು ಅಧಿಕಾರದ ಪ್ರಭಾವದಿಂದ ಇರಬಹುದು; ಅಧಿಕಾರದ ವೈಫಲ್ಯದಿಂದ ಇರಬಹುದು; ಇವೆರಡು ಇಲ್ಲದೆಯೂ ಹಣ ಮತ್ತಿತರ ಮೋಹಧಾನ್ಯಗಳನ್ನು ಬಿತ್ತುವ ಮೂಲಕವೂ ಇರಬಹುದು. ಅನೇಕ ಬಾರಿ ನಾವೇನೋ ಸತ್ಯವನ್ನು ಬಯಲಿಗೆಳೆಯುತ್ತೇವೆಂಬ ವಿಶ್ವಾಸದಿಂದ ಹಲವು ಸಂಗತಿಗಳನ್ನು ಸಾರ್ವಜನಿಕಗೊಳಿಸಬಹುದು. ಆದರೆ ಅವೆಲ್ಲವೂ ಸಾರ್ವಜನಿಕ ನೆನಪಿನಲ್ಲಿ ಬಹುಕಾಲ ಉಳಿಯುವುದಿಲ್ಲ. ನಮ್ಮ ಕಾನೂನು ಮತ್ತು ನ್ಯಾಯವು ಪ್ರಕ್ರಿಯಾತ್ಮಕವಾಗಿ ಸಾಗುವುದರಿಂದ ಕೊಂಡಿಗಳು ಎಲ್ಲೇ ತಪ್ಪಿದರೂ ಅದರ ಲಾಭವನ್ನು ಅಪರಾಧಿಗಳು ಪಡೆಯುತ್ತಾರೆ. ಇದರಿಂದಾಗಿ ಎಂತಹ ದುರ್ಭರ ಪ್ರಕರಣಗಳಲ್ಲೂ ‘ದ ಡೇ ಅಫ್ ದ ಜಕಾಲ್’ನಂತೆ ವಿದ್ಯುಚ್ಚೋರನು ಕೊತ್ವಾಲನ ಮಗನಿಗಿಂತ ತುಸು ಮುಂದಿರುವುದು ಸಾಧ್ಯವಾಗಿದೆ.

ವಡ್ಡಾರಾಧನೆಯ ಕವಿ ಭವಿಷ್ಯವನ್ನು ಎಷ್ಟು ಚೆನ್ನಾಗಿ ಕಂಡವನು! ವಿದ್ಯುಚ್ಚೋರ ಋಷಿಯಾಗಿ ಬದಲಾಗಿರಬಹುದು; ಇಂದು ಹಾಗಿಲ್ಲ, ವಿದೇಶಕ್ಕೆ ಹಾರಿಹೋಗಲು ಸಾಧ್ಯವಾಗಿದೆ. ಕಾನೂನಿನ ಬಲೆಯ ತಂತುಗಳು ಸಾಕಷ್ಟು ಸಡಿಲವಾಗುತ್ತಿವೆ. ನಮ್ಮ ಸೆರೆಮನೆಗಳು ಬಡತನದ ರೇಖೆಗಿಂತ ಕೆಳಗಿರುವವರಿಗೆ ಮನೆಗಳಾಗಿವೆಯೇ ಹೊರತು ಸ್ಥಿತಿವಂತರಿಗಲ್ಲ. ನಿರ್ದೋಷಿಗೆ ಶಿಕ್ಷೆಯಾಗಬಾರದೆಂಬುದಕ್ಕಾಗಿ ದೋಷಿಗಳು ಸಾಲಾಗಿ ಹೊರಬರುತ್ತಾರೆ. ಯಾರಾದರೂ ನೈಜ ಅಪರಾಧಿಗಳು ಹೊರಬರಲು ವಿಫಲರಾದರೆ ಅದಕ್ಕೆ ಮರುಭೂಮಿಯ ಓಯಸಿಸ್‌ನಂತಿರುವ ನಮ್ಮ ನ್ಯಾಯಾಲಯಗಳು ಕಾರಣವೇ ಹೊರತು ಪೊಲೀಸರಲ್ಲ. ವಿಕ್ಷಿಪ್ತ ಸ್ಥಿತಿಯ ವೈಪರೀತ್ಯದಲ್ಲಿ ಎಲ್ಲ ವ್ಯವಸ್ಥೆಗಳೂ ಗೊಂದಲಮಯವಾಗಿವೆ. ಅನ್ನಕ್ಕಾಗಿ ಏನು ಮಾಡಲೂ ಮನುಷ್ಯ ಸಿದ್ಧನಾಗಿರುವ ಈ ಹೊತ್ತಿನಲ್ಲಿ ಅದನ್ನು ಮೀರಿದ ದುರುದ್ದೇಶಕ್ಕಾಗಿಯೂ ಮನುಷ್ಯ ಏನೂ ಮಾಡಬಲ್ಲ ಎಂಬುದನ್ನು ನಮ್ಮ ನಡುವೆ ನಡೆಯುವ ಅನೇಕ ಘಟನೆಗಳು ನಿರೂಪಿಸಬಲ್ಲವು. ಇವನ್ನೆಲ್ಲ ಮನರಂಜನೆಯೆಂದು ಸ್ವೀಕರಿಸಿ ತಳ್ಳಿಹಾಕುವ ನಮ್ಮ ಬುದ್ಧಿಜೀವನವೇ ಇಂತಹ ವಿಪರ್ಯಾಸಕ್ಕೆ ಕಾರಣವೇನೋ ಎಂಬುದನ್ನು ಸಂಶೋಧಿಸಬೇಕಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)