varthabharthi


ಕ್ರೀಡೆ

ಆಟಗಾರ್ತಿ ನಾಪತ್ತೆ: ಚೀನಾ ಸರಕಾರವನ್ನು ಪ್ರಶ್ನಿಸಿದ ಟೆನಿಸ್ ಜಗತ್ತು

ವಾರ್ತಾ ಭಾರತಿ : 20 Nov, 2021

photo:AP

ಬೀಜಿಂಗ್, ನ. 20: ಚೀನಾದ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್ ಈ ತಿಂಗಳ ಆರಂಭದಲ್ಲಿ ನಿಗೂಢವಾಗಿ ನಾಪತ್ತೆಯಾದ ಬಳಿಕ ಇಡೀ ಟೆನಿಸ್ ಜಗತ್ತು ಚೀನಾದ ವಿರುದ್ಧ ಮುಗಿಬಿದ್ದಿದೆ. ಪೆಂಗ್ ಶುವಾಯ್ ಎಲ್ಲಿ ಎಂಬುದಾಗಿ ಜಗತ್ತಿನ ಖ್ಯಾತ ಟೆನಿಸ್ ಆಟಗಾರರು ಚೀನಾ ಸರಕಾರವನ್ನು ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಪ್ರಶ್ನಿಸುತ್ತಿದ್ದಾರೆ.

ಚೀನಾದ ಮಾಜಿ ಉಪ ಪ್ರಧಾನಿ ಝಾಂಗ್ ಗವೋಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಎರಡು ವಾರಗಳ ಹಿಂದೆ ಆರೋಪಿಸಿದ ಬಳಿಕ ಪೆಂಗ್ ನಾಪತ್ತೆಯಾಗಿದ್ದಾರೆ.

ಮೂರು ವರ್ಷಗಳ ಹಿಂದೆ ಝಾಂಗ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದಾಗಿ ನವೆಂಬರ್ 2ರಂದು ಸಾಮಾಜಿಕ ಮಾಧ್ಯಮ ‘ವೈಬೊ’ದಲ್ಲಿ ಪೆಂಗ್ ಬರೆದಿದ್ದಾರೆ. ಆ ಸಂದೇಶವನ್ನು ತಕ್ಷಣ ಅಳಿಸಲಾಗಿತ್ತಾದರೂ ಅದರ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿವೆ.

ಝಾಂಗ್ ಗವೋಲಿ ಅತ್ಯಂತ ಪ್ರಭಾವಿ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಬಲಗೈ ಬಂಟನಾಗಿದ್ದಾರೆ.

ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಪೆಂಗ್ ಚೀನಾದ ತಾರಾ ಕ್ರೀಡಾಪಟು ಆಗಿದ್ದಾರೆ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಕಮ್ಯುನಿಸ್ಟ್ ಪಕ್ಷದ ನಾಯಕರ ಟೀಕೆಯನ್ನು ತಡೆಯುವ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ನಿಗ್ರಹಿಸುವ ಪಕ್ಷದ ದೃಢನಿರ್ಧಾರದ ಭಾಗವಾಗಿ ಪೆಂಗ್‌ರ ಬಾಯಿ ಮುಚ್ಚಿಸಲಾಗಿದೆ ಎಂಬುದಾಗಿ ಆರೋಪಿಸಲಾಗಿದೆ.

ನವೊಮಿ ಒಸಾಕ, ಸೆರೀನಾ ವಿಲಿಯಮ್ಸ್ ಮತ್ತು ನೊವಾಕ್ ಜೊಕೊವಿಕ್ ಮುಂತಾದ ಘಟಾನುಘಟಿ ಟೆನಿಸ್ ಆಟಗಾರರು, ಟೆನಿಸ್ ಆಡಳಿತ ಮಂಡಳಿಗಳು, ಮಾನವಹಕ್ಕುಗಳ ಸಂಘಟನೆಗಳು, ನಿವೃತ್ತ ಆಟಗಾರರು ಹಾಗೂ ಹಲವಾರು ಅತ್ಲೆಟಿಕ್ಸ್ ಫೆಡರೇಶನ್‌ಗಳು ಈ ಘಟನೆಯ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ.

ಇನ್ನು ಎರಡೂವರೆ ತಿಂಗಳುಗಳಲ್ಲಿ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಉಯಿಘರ್ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಚೀನಾ ಸರಕಾರ ನಡೆಸುತ್ತಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿ ಪಂದ್ಯಾವಳಿಯು ರಾಜತಾಂತ್ರಿಕ ಬಹಿಷ್ಕಾರವನ್ನು ಎದುರಿಸುತ್ತಿದೆ. ಎನ್‌ಬಿಎ ಆಟಗಾರ ಎನಿಸ್ ಕಾಂಟರ್ ಉಯಿಘರ್ ಪರವಾಗಿ ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ‘ಅಮಾನುಷ ಸರ್ವಾಧಿಕಾರಿ’ ಎಂಬುದಾಗಿ ಬಣ್ಣಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)