varthabharthi


ನಿಮ್ಮ ಅಂಕಣ

ರೈಲುಗಳ ವೇಳಾಪಟ್ಟಿಯಲ್ಲಿ ಮಾರ್ಪಾಡಾಗಲಿ

ವಾರ್ತಾ ಭಾರತಿ : 22 Nov, 2021
-ಒಲಿವರ್ ಡಿ’ ಸೋಜಾ, ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೆ ಯಾತ್ರಿ ಸಂಘ, ಮುಂಬೈ

ಮಾನ್ಯರೇ,
ಸದಾಕಾಲ ವಿಮಾನದಲ್ಲಿ ಹಾರಾಡುವ ನಾವು ಚುನಾಯಿಸಿದ ಜನಪ್ರತಿನಿಧಿಗಳಿಗೆ ತಮ್ಮದೇ ಮತದಾರ ಕ್ಷೇತ್ರದಲ್ಲಿ ಸರಿಯಾದ ರೈಲು ಬಸ್ಸು ಇಲ್ಲದೆ ನಾವು ತೊಂದರೆಗೊಳಗಾಗುವುದು ಎಂದೆಂದಿಗೂ ತಿಳಿಯುವುದೇ ಇಲ್ಲ.
ಉದಾಹರಣೆಗೆ ರೈಲುಗಳಿಗೆ ರೈಲು ವೇಳಾಪಟ್ಟಿ ಹಾಗೂ ರನ್ನಿಂಗ್ ಟೈಮ್ ಟೇಬಲ್ ಹೀಗೆ ಎರಡು ಪಟ್ಟಿಗಳಿವೆ. ಈ ವೇಳಾಪಟ್ಟಿ ತಯಾರಿಸುವಾಗ ಕ್ರಾಸಿಂಗ್ ಹಾಗೂ ಇಂಜಿನ್ ಬದಲಾವಣೆ; ಲೋಕೋ ಪೈಲೆಟ್, ಟಿಕೆಟ್ ಪರಿವೀಕ್ಷಕರು ಸೇವೆಗೆ ಬರಬೇಕಾದ ಸಮಯ ಇತ್ಯಾದಿಯನ್ನು ಗಮನಕ್ಕೆ ತೆಗೆದುಕೊಳ್ಳಲೇಬೇಕು. ಬೆಂಗಳೂರಿನಿಂದ ಬರುವ (ರೈಲು ಸಂಖ್ಯೆ 06515)ರೈಲು ಮಂಗಳೂರು ಜಂಕ್ಷನ್ ರೈಲು ನಿಲ್ದಾಣವನ್ನು ಬೆಳಗ್ಗೆ 7:20ಗಂಟೆಗೆ ತಲುಪಬೇಕು. ಆದರೆ ಇದು ಪ್ರತಿದಿನ ಬೆಳಿಗ್ಗೆ 6:50ಕ್ಕೆ ತಲುಪುತ್ತಿದೆ. ಇಲ್ಲಿ ವೇಳಾಪಟ್ಟಿ ತಯಾರಿಕೆಯಲ್ಲಿ ಗೊಂದಲವಿದೆ. ಈ ರೈಲು ಮಂಗಳೂರು ಜಂಕ್ಷನ್‌ನಿಂದ ಹೊರಡಿಸಬೇಕಾದ ಸಮಯ 7:30. ಇದರಿಂದಾಗಿ ಈ ರೈಲು ಬೆಳಗ್ಗೆ 6:50ರಿಂದ 7:30ರವರೆಗೆ ನಲ್ವತ್ತು ನಿಮಿಷ ಇಲ್ಲೇ ತಡೆಹಿಡಿಯಲ್ಪಡುತ್ತಿದೆ.
ಮತ್ಸ್ಯಗಂಧ (ರೈಲು ಸಂಖ್ಯೆ 02619) ರೈಲು ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆಯಿಲ್ಲದೆ 7:20ಗಂಟೆಗೆ ಹಾದುಹೋಗುತ್ತಿದೆ. ಮುಂಬೈ, ಗೋವಾ, ಕರ್ನಾಟಕದ ಕರಾವಳಿ ಪ್ರದೇಶದ ನೂರಾರು ಭಕ್ತರು ಧರ್ಮಸ್ಥಳ, ಸುಬ್ರಹ್ಮಣ್ಯ ಮುಂತಾದ ಧಾರ್ಮಿಕ ಸ್ಥಳಗಳಿಗೆ ಹೋಗುವವರು ಈ ರೈಲಲ್ಲಿ ಪ್ರತಿದಿನ ಬರುತ್ತಾರೆ. ನಿಲುಗಡೆ ಇದ್ದಲ್ಲಿ ಪಡೀಲ್‌ನಿಂದ ನೇರವಾಗಿ ಈ ಮೇಲಿನ ಸ್ಥಳಗಳಿಗೆ ಹೋಗಬಹುದು. ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಇಲ್ಲದಿರುವುದರಿಂದ ಇವರು ವ್ಯರ್ಥ ಸಮಯ ವ್ಯಯ ಮಾಡಬೇಕಾಗುತ್ತದೆ.

ಬೆಳಗ್ಗೆ ಬೆಂಗಳೂರಿನಿಂದ 6:50ಕ್ಕೆ ಮಂಗಳೂರು ಜಂಕ್ಷನ್ ತಲುಪಿದ ರೈಲನ್ನು 5 ನಿಮಿಷ ನಿಲುಗಡೆ ನೀಡಿ ನೇರವಾಗಿ ಮಂಗಳೂರು ಸೆಂಟ್ರಲ್‌ನ ಪ್ಲಾಟ್‌ಫಾರ್ಮ್ ಮೂರರಲ್ಲಿ ನಿಲ್ಲಿಸಬಹುದು. ಬೆಳಗ್ಗೆ 7:20ಕ್ಕೆ ಬರುವ ಮತ್ಸ್ಯಗಂಧ ರೈಲಿಗೆ ಮಂಗಳೂರು ಜಂಕ್ಷನ್‌ನಲ್ಲಿ 10 ನಿಮಿಷ ನಿಲುಗಡೆ ಕೊಟ್ಟು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರಲ್ಲಿ ಇಡಬಹುದು. ಯಾಕೆಂದರೆ 7:25ಕ್ಕೆ ಅಲ್ಲಿಂದ ಎರ್ನಾಡ್ ಎಕ್ಸ್‌ಪ್ರೆಸ್ ಹೋಗಿರುತ್ತದೆ. ರೈಲು ಪ್ರಯಾಣಿಕರ ಬಹುಕಾಲದ ಈ ಬೇಡಿಕೆ ಈಡೇರಲೇ ಇಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)