varthabharthi


ನಿಮ್ಮ ಅಂಕಣ

ಎಸ್ಟಿ ಮೀಸಲಾತಿ ಕೋಟಾ ಹೆಚ್ಚಿಸಲು ಏಕೆ ಸಾಧ್ಯವಿಲ್ಲ?

ವಾರ್ತಾ ಭಾರತಿ : 23 Nov, 2021
ಕೆ.ಎನ್. ಲಿಂಗಪ್ಪ (ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಬೇಡಿಕೆ ಈಡೇರಿಕೆಗೆ, ರಾಜ್ಯಸರಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆಯಾದರೂ, ಅಲ್ಲಿ ಸಾಮಾಜಿಕ ಒಳಸುಳಿಗಳ ಸೂಕ್ಷ್ಮತೆ ಅಡಗಿರುವುದೂ ಸರಕಾರದ ಹಿಂಜರಿಕೆಗೆ ಕಾರಣ ಇರಬಹುದೇನೋ! ಏನೇ ಇರಲಿ, ಇಂತಹ ಜಟಿಲ ಸಮಸ್ಯೆಯೊಂದನ್ನು ಬಿಡಿಸುವುದು ಸರಕಾರದ ದಕ್ಷತೆಗೆ ಸಾಕ್ಷಿ ಅಲ್ಲದೆ, ಅದನ್ನು ಅಳೆಯುವ ಅಳತೆಗೋಲಾಗಿಯೂ ಪರಿಗಣಿತವಾಗುತ್ತದೆ.

ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ. ಸರಕಾರ ಈ ದಿಸೆಯಲ್ಲಿ ಮುಂದಡಿಯಿಟ್ಟರೆ, ಮಾರ್ಗ ತಾನಾಗಿಯೇ ಗೋಚರಿಸುತ್ತದೆ. ಸರಕಾರದ ದೃಢ ನಿರ್ಧಾರವಿದ್ದಲ್ಲಿ ಪರಿಹಾರದ ಆಯ್ಕೆಗಳೂ ಇರುತ್ತವೆ.‘‘ಬಿಜೆಪಿ ಸರಕಾರದ ಅವಧಿ ಮುಗಿಯುವಷ್ಟರಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ. 7.5ರಷ್ಟು ಮೀಸಲಾತಿ ಕೋಟಾ ಕೊಡಿಸಿಯೇ ತೀರುತ್ತೇನೆ.’’ ಈ ಮಾತುಗಳನ್ನು ಹೇಳಿರುವರು ಬೇರೆ ಯಾರೂ ಅಲ್ಲ. ಅವರೇ, ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದ ಒಬ್ಬ ಪ್ರಭಾವಿ ಹಾಗೂ ಜವಾಬ್ದಾರಿಯುತ ಸಚಿವ ಬಿ.ಶ್ರೀರಾಮುಲು. ಇವರ ಈ ಮಾತುಗಳು ಕೆಲ ಪತ್ರಿಕೆಗಳಲ್ಲಿ ವರದಿಯಾಗಿವೆ. ಇಂತಹ ವಿರೋಚಿತ ಮಾತುಗಳನ್ನು ಆಡುವವರಲ್ಲಿ, ಇವರು ಮೊದಲನೆಯವರೂ ಅಲ್ಲ ಹಾಗೂ ಕೊನೆಯವರೂ ಅಲ್ಲ. ತಮ್ಮ ಸಮಾಜ ಬಂಧುಗಳನ್ನು ಮೆಚ್ಚಿಸಲು ಹೇಳಿರುವ ಮಾತುಗಳಿವು ಎಂಬ ಶಂಕೆ ವ್ಯಕ್ತವಾಗದಿರದು. ಏಕೆಂದರೆ, ಯಾವುದೇ ಆಧಾರವಿಲ್ಲದೆ ಹೇಳಿದಂತಹ ಮಾತುಗಳವು. ಬಿಜೆಪಿ ಸರಕಾರದ ಪ್ರಾರಂಭದಿಂದಲೂ ಶ್ರೀರಾಮುಲು ಸಂಪುಟ ದರ್ಜೆಯ, ಅದರಲ್ಲೂ ಸಮಾಜಕಲ್ಯಾಣ ಇಲಾಖಾ ಸಚಿವರಾಗಿ ಹಾಗೂ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಮೀಸಲಾತಿ ಕೋಟಾ ಏರಿಸುವ ದಿಸೆಯಲ್ಲಿ ಸರಕಾರದ ಮಟ್ಟದಲ್ಲಿ ನಡೆದಿರಬಹುದಾದ ಪ್ರಾರಂಭಿಕ ಕ್ರಮಗಳು ಇವರ ಅರಿವಿಗೆ ಬಾರದಿರುವುದು ಹೇಗೆ ಸಾಧ್ಯ? ಹಾಗಾಗಿ, ಆ ಮಾತುಗಳು ಬರೀ ಓಳು!

ಅಧಿಕಾರ ಸಿಕ್ಕ ಕೇವಲ 24 ಗಂಟೆಗಳಲ್ಲಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಕೋಟಾವನ್ನು ಏರಿಸುವುದು ಶತಸಿದ್ಧ ಎಂದು ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಆವೇಶದಿಂದ ಹೇಳಿದ್ದರು. ಆದರೆ, ಅಧಿಕಾರದ ಎರಡು ವರ್ಷಗಳ ಅವಧಿಯಲ್ಲಿ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಹಾಗಾದರೆ, ಮೀಸಲಾತಿ ಕೋಟಾ ಏರಿಸಲು ಸರಕಾರಕ್ಕೆ ಇರುವ ತೊಡಕಾದರೂ ಏನು? ಎಂಬ ಗಂಭೀರ ಪ್ರಶ್ನೆ ಮಾತ್ರ ನಮ್ಮೆದುರು ನಿಲ್ಲುತ್ತದೆ.

ವಿಶಾಲ ಕರ್ನಾಟಕ ಉದಯ ಪೂರ್ವದಲ್ಲಿ ಮೈಸೂರು ರಾಜ್ಯದಲ್ಲಿ, ರಾಷ್ಟ್ರಪತಿಗಳ ಆಜ್ಞಾನುಸಾರ, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ, ಸೇರ್ಪಡೆಯಾಗಿದ್ದ ಜಾತಿಗಳು ಕೇವಲ ಬೆರಳೆಣಿಕೆಯಷ್ಟು (ಹಸಲರು, ಇರುಳಿಗ, ಜೇನುಕುರುಬ, ಕಾಡುಕುರುಬ, ಮಲೇರು, ಸೋಲಿಗ) ಮಾತ್ರ. 1951ರ ಜನಗಣತಿ ಪ್ರಕಾರ, ಇವುಗಳ ಜನಸಂಖ್ಯೆ 15,310 ಆಗಿತ್ತು. ಕ್ರಮೇಣ ವರ್ಷದಿಂದ ವರ್ಷಕ್ಕೆ ಹೊಸ ಜಾತಿಗಳ ಸೇರ್ಪಡೆಯಿಂದಾಗಿ ಪಟ್ಟಿ ಬೆಳೆಯಿತು. ಸದ್ಯ, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ 50 ಜಾತಿಗಳು ಮತ್ತು ಅವುಗಳ ಉಪಜಾತಿಗಳು ಸ್ಥಾನ ಪಡೆದಿವೆ. 2011ರ ಜನಗಣತಿಯಂತೆ, ಅವುಗಳ ಜನಸಂಖ್ಯೆ 42,48,987 ಇದೆ (ಶೇ.6.99). ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಿಧಾನಸಭಾ ಕ್ಷೇತ್ರ, 1957 ಮತ್ತು 62ರ ಚುನಾವಣೆಯಲ್ಲಿ 1 ಮಾತ್ರ ಇತ್ತು. 1967ರಲ್ಲಿ ಇದ್ದ 2 ಕ್ಷೇತ್ರಗಳು 2008ರಷ್ಟರಲ್ಲಿ 15ಕ್ಕೆ ಏರಿಕೆಯಾಗಿವೆ. ಕ್ಷೇತ್ರ ಪುನರ್ವಿಂಗಡಣಾ ಆಯೋಗ (ನ್ಯಾ.ಕುಲದೀಪ್ ಸಿಂಗ್ ) 2001ರ ಜನಸಂಖ್ಯೆಯನ್ನು ಆಧರಿಸಿ ಪರಿಶಿಷ್ಟ ಪಂಗಡಗಳ ವಿಧಾನ ಸಭಾ ಕ್ಷೇತ್ರಗಳನ್ನು ನಿಗದಿಗೊಳಿಸಿದೆ. ಆ ಮೊದಲು ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳಿಗೆ ಯಾವುದೇ ಲೋಕಸಭಾ ಕ್ಷೇತ್ರಗಳು ಮೀಸಲಾತಿಗೆ ಒಳಪಟ್ಟಿರಲಿಲ್ಲ. ಆದರೆ, 2008ರ ನಂತರದಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಮೀಸಲಾತಿಗೆ ಒಳಪಟ್ಟಿವೆ. ಹಾಗೆಯೇ, ಸ್ಥಳೀಯ ಸಂಸ್ಥೆಗಳಿಗೂ ಕಾಲದಿಂದ ಕಾಲಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ನಿಗದಿ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮಾತ್ರ ಯಥಾಪ್ರಕಾರ, ಮೀಸಲಾತಿ ಕೋಟಾ ಶೇ.3ರಷ್ಟನ್ನೇ ಮುಂದುವರಿಸಿಕೊಂಡು ಬರಲಾಗಿದೆ. ಹಾಗಾಗಿ, ಆ ವರ್ಗದ ಜನರು ಸಹಜವಾಗಿ ಒಳಗುದಿಗೆ ಒಳಗಾಗಿರುವರು.

ಸಂವಿಧಾನ ನೀಡಿರುವ ಹಕ್ಕಿಗಾಗಿ ಸರಕಾರದ ಮುಂದೆ ಕೈಕಟ್ಟಿ ನಿಲ್ಲುವ ದೌರ್ಭಾಗ್ಯ! ಉಂಟಾದುದು, ಆ ವರ್ಗಗಳಿಗೆ ಆಗಿರುವ ಘೋರ ಅನ್ಯಾಯ. ಹಾಗೆಂದು ಕೈಕಟ್ಟಿ ಕೂರದೆ, ಹೋರಾಟಕ್ಕೆ ಇಳಿಯುವುದು ಅವರಿಗೆ ಅನಿವಾರ್ಯವೆನಿಸಿದೆ. ಸರಕಾರದ ಮುಂದೆ ಕೋಟಾ ಹೆಚ್ಚಿಸಲು ತಮ್ಮ ಬೇಡಿಕೆಯನ್ನು ಮಂಡಿಸಿ ಹರತಾಳದಲ್ಲಿ ನಿರತರಾಗಿರುವರು. ಸರಕಾರದ ದಿವ್ಯ ನಿರ್ಲಕ್ಷವನ್ನು ಪ್ರತಿಭಟಿಸಿ, ಕುಲಗುರುಗಳಾದ ಪ್ರಸನ್ನಾನಂದ ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಜನ ಹರಿಹರ ತಾಲೂಕಿನ ರಾಜನಹಳ್ಳಿಯಿಂದ ಸುಮಾರು 300 ಕಿಲೋಮೀಟರ್ ದೂರದ ದಾರಿಯನ್ನು ನಡಿಗೆಯ ಮೂಲಕವೇ ಸವೆಸಿ ರಾಜಧಾನಿ ಬೆಂಗಳೂರಿಗೆ ಆಗಮಿಸಿ, ಅಂದು ಅಧಿಕಾರದಲ್ಲಿದ್ದ ಸಮ್ಮಿಶ್ರ ಸರಕಾರಕ್ಕೆ ಮನವಿ ಸಲ್ಲಿಸಿ ಶಕ್ತಿ ಪ್ರದರ್ಶಿಸಿದರು. ಎಚ್.ಡಿ. ಕುಮಾರಸ್ವಾಮಿ ಸರಕಾರ ಮೀಸಲಾತಿ ಕೋಟಾ ಹೆಚ್ಚಿಸುವ ನಿಟ್ಟಿನಲ್ಲಿ ವರದಿ ಪಡೆಯಲು ಚಿಂತಿಸಿ ನ್ಯಾ. ಎಚ್.ಎನ್. ನಾಗಮೋಹನದಾಸ್ ಅವರ ಆಯೋಗ ನೇಮಕ ಮಾಡಿ (ನವೆಂಬರ್ 2019)ಮುಷ್ಕರನಿರತ ಜನಸಮುದಾಯವನ್ನು ತಾತ್ಕಾಲಿಕವಾಗಿ ಶಮನಗೊಳಿಸಲು ಮುಂದಾಯಿತು. ನ್ಯಾ. ನಾಗಮೋಹನದಾಸ್ ಆಯೋಗ ಔಪಚಾರಿಕ ವಿಚಾರಣಾ ಕಾರ್ಯವನ್ನು ಪೂರ್ಣಗೊಳಿಸಿ, ಬಿ.ಎಸ್.ಯಡಿಯೂರಪ್ಪ ಸರಕಾರಕ್ಕೆ ವರದಿ ಸಲ್ಲಿಸಿತು(2.7.2020). ವರದಿಯಲ್ಲಿರುವ ಸಲಹೆಗಳೇನು ಎಂಬುದೂ ಬಹಿರಂಗಗೊಂಡಿಲ್ಲ. ಆದರೆ, ವರದಿ ಬಹಿರಂಗಗೊಳಿಸಲು ಸರಕಾರಕ್ಕಿರುವ ಸಂಕಷ್ಟವಾದರೂ ಏನು ಎಂಬುದು ಕೂಡಾ ಜನಸಾಮಾನ್ಯರ ಅರಿವಿಗೆ ಬಂದಿಲ್ಲ. ಸುದ್ದಿ ಮಾಧ್ಯಮಗಳು ಮಾತ್ರ, ಆಯೋಗ ಪರಿಶಿಷ್ಟ ಪಂಗಡಗಳಿಗೆ ಶೇ 7.5 ಮತ್ತು ಪರಿಶಿಷ್ಟ ಜಾತಿಗಳಿಗೆ ಶೇ. 17ರಷ್ಟು ಮೀಸಲಾತಿ ನಿಗದಿ ಮಾಡಲು ಶಿಫಾರಸು ಮಾಡಿದೆ ಎಂಬ ಅಂಶವನ್ನು ವರದಿ ಮಾಡಿವೆ. ಸರ್ವೋಚ್ಚ ನ್ಯಾಯಾಲಯ ನಿಗದಿಗೊಳಿಸಿರುವ ಗರಿಷ್ಠ ಶೇ. 50ರ ಮಿತಿಯನ್ನು ಮೀರಿ ಕೋಟಾ ನಿಗದಿಗೊಳಿಸಲು ಆಯೋಗ ಹೇಳಿದೆ ಎಂಬುದು ಕೆಲ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ತಥ್ಯವಾಗಿದ್ದಲ್ಲಿ ಸರಕಾರ ಕ್ರಮ ಕೈಗೊಳ್ಳಲು ಏಕೆ ಮೀನ-ಮೇಷ ಎಣಿಸುತ್ತಿದೆ ಎಂಬುದು ಮಾತ್ರ ರಹಸ್ಯ. ಏತನ್ಮಧ್ಯೆ, ಆಯೋಗದ ವರದಿಯ ಸಾಧಕ -ಬಾಧಕಗಳ ಅಧ್ಯಯನಕ್ಕಾಗಿ ಸರಕಾರ ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ. ಅಧಿಕಾರ ಗದ್ದುಗೆ ಏರುವ ಮುನ್ನ ಆರ್ಭಟಿಸಿದ್ದ ಯಡಿಯೂರಪ್ಪಈ ವಿಷಯದಲ್ಲಿ ತುಟಿಪಿಟಿಕ್ಕೆನ್ನದೆ ಅಧಿಕಾರದಿಂದ ಹೊರಬಿದ್ದರು. ಅವರ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಅವರೂ ಕೂಡ ವಿಷಯದ ಬಗ್ಗೆ ಚಕಾರವೆತ್ತಿಲ್ಲ.

ಬೇಡಿಕೆ ಈಡೇರಿಕೆಗೆ, ರಾಜ್ಯಸರಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆಯಾದರೂ, ಅಲ್ಲಿ ಸಾಮಾಜಿಕ ಒಳಸುಳಿಗಳ ಸೂಕ್ಷ್ಮತೆ ಅಡಗಿರುವುದೂ ಸರಕಾರದ ಹಿಂಜರಿಕೆಗೆ ಕಾರಣ ಇರಬಹುದೇನೋ! ಏನೇ ಇರಲಿ, ಇಂತಹ ಜಟಿಲ ಸಮಸ್ಯೆಯೊಂದನ್ನು ಬಿಡಿಸುವುದು ಸರಕಾರದ ದಕ್ಷತೆಗೆ ಸಾಕ್ಷಿ ಅಲ್ಲದೆ, ಅದನ್ನು ಅಳೆಯುವ ಅಳತೆಗೋಲಾಗಿಯೂ ಪರಿಗಣಿತವಾಗುತ್ತದೆ.
ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ. ಸರಕಾರ ಈ ದಿಸೆಯಲ್ಲಿ ಮುಂದಡಿಯಿಟ್ಟರೆ, ಮಾರ್ಗ ತಾನಾಗಿಯೇ ಗೋಚರಿಸುತ್ತದೆ. ಸರಕಾರದ ದೃಢ ನಿರ್ಧಾರವಿದ್ದಲ್ಲಿ ಪರಿಹಾರದ ಆಯ್ಕೆಗಳೂ ಇರುತ್ತವೆ.

ನ್ಯಾ.ಎಚ್.ಎನ್.ನಾಗಮೋಹನದಾಸ್ ಆಯೋಗ ನೀಡಿರುವ(?) ಸಲಹೆಯಂತೆ, ಸರಕಾರದ ಮುಂದಿರುವ ಮೊದಲನೆಯ ಆಯ್ಕೆ - ಮೀಸಲಾತಿ ಕೋಟಾ ಶೇ. 50ರ ಮಿತಿಯನ್ನು ಮೀರಿ, ಮೀಸಲಾತಿಗೆ ಒಳಪಡುವ ಎಲ್ಲ ವರ್ಗಗಳಿಗೂ(ಪ.ಜಾ., ಪ.ಪಂ. ಮತ್ತು ಹಿಂ.ವರ್ಗಗಳ 3 ಪ್ರವರ್ಗಗಳು)ಕೋಟಾ ಹೆಚ್ಚಿಸುವುದು. ಆ ಕಾರಣದಿಂದ ಕಾನೂನು ಭದ್ರತೆಗಾಗಿ ಕಾಯ್ದೆ ರೂಪಿಸಬಹುದು.  [ THE KARNATAKA SCs, STs AND OTHER BACKWARD CLASSES (reservation of seats in educational institutions and of appointment or posts in the services under the state),ACT..]... ಪ್ರತಿ ವರ್ಗಗಳಿಗೂ ಸರಕಾರ ನಿರಾತಂಕವಾಗಿ ಶೇಕಡವಾರು ಕೋಟಾ ನಿಗದಿಗೊಳಿಸಲು ಸಾಧ್ಯವಿದೆ. ಸರಕಾರವೇ 2015ರಲ್ಲಿ, ಹಿಂದುಳಿದ ವರ್ಗಗಳ ಆಯೋಗದ (ಎಚ್.ಕಾಂತರಾಜ) ಮೂಲಕ ರಾಜ್ಯವ್ಯಾಪಿ ಸಮಗ್ರವಾಗಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಆಯೋಗ ಪ್ರತಿ ಜಾತಿ-ಉಪಜಾತಿಗಳ ಜನಸಂಖ್ಯೆಯ ಜೊತೆಗೆ ಪ್ರಾಮಾಣೀಕರಿಸುವ (quantifiable) ದತ್ತಾಂಶಗಳನ್ನೂ ಸಂಗ್ರಹಿಸಿದೆ. ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ಸರಕಾರ ಶೇಕಡಾವಾರು ಕೋಟ ನಿಗದಿ ಮಾಡಿದ ಪಕ್ಷದಲ್ಲಿ ನ್ಯಾಯಾಲಯ (ಸರ್ವೋಚ್ಚ) ಸರಕಾರದ ಈ ಅಸಾಧಾರಣ ಸಂದರ್ಭ (extra ordinary circumstances)ವನ್ನು ಆಕ್ಷೇಪಿಸುವ ಸಂಭವ ಇಲ್ಲ.

ಮತ್ತೆ, ಸರಕಾರಕ್ಕಿರುವ ಎರಡನೆಯ ಆಯ್ಕೆ ತುಸು ತೊಡಕಿನದು. ಆದರೂ, ವಸ್ತುನಿಷ್ಠ ಮಾನದಂಡ (objective criteria) ಅನುಸರಿಸಿ, ಪ್ರಸ್ತುತ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವುದು(revision).ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ (16.11.1992) ಆದೇಶದಂತೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳ ಸ್ಥಾಪನೆಗಾಗಿ ಕಾಯ್ದೆಗಳನ್ನು ಜಾರಿಗೆ ತಂದಿವೆ. ಕರ್ನಾಟಕ ಕೂಡಾ ಕಾಯ್ದೆ (ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 1995)ಯನ್ನು ಜಾರಿಗೆ ತಂದಿದೆ. ಕಾಯ್ದೆಯ ಕಲಂ 11(1)ರ ಪ್ರಕಾರ ಪ್ರತಿ ಹತ್ತು ವರ್ಷಗಳಿಗೆ ಒಂದು ಬಾರಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಶಾಸನಬದ್ಧ ಅಧಿಕಾರ ಸರಕಾರಕ್ಕಿದೆ. ಪ್ರಸ್ತುತ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಜಾರಿಗೆ ಬಂದಿರುವುದು 1994ರಲ್ಲಿ. ಅದು ನ್ಯಾ. ಚಿನ್ನಪ್ಪರೆಡ್ಡಿ ಆಯೋಗದ ವರದಿ ಆಧರಿಸಿದುದಾಗಿದೆ. ವರದಿಯಲ್ಲಿ ಹಿಂದುಳಿದ ವರ್ಗಗಳು ಎಂದು ಪರಿಗಣಿಸದ ಕೆಲವು ವರ್ಗಗಳನ್ನು ಸರಕಾರವೇ ಪಟ್ಟಿಯಲ್ಲಿ ಸೇರಿಸಿದೆ. ಹಾಗೆಯೇ ಸೇರಿಸಿರುವ ವರ್ಗಗಳನ್ನು ಸರಕಾರಿ ಪ್ರಾಯೋಜಿತ (ಪ್ರವರ್ಗ-3ಎ 3ಬಿ, ವೈಷ್ಣವ ಸಮುದಾಯ ಬಿಟ್ಟು)ಎಂದು ಹೇಳುವುದು ಸೂಕ್ತ. ಜಾರಿ ಲಾಗಾಯ್ತಿನಿಂದ, ಈ ವರೆಗೆ ಎರಡು ಬಾರಿ ಪಟ್ಟಿಯನ್ನು ಪರಿಷ್ಕರಿಸಬೇಕಾದ ಹೊಣೆಗಾರಿಕೆ ಸರಕಾರದ ಮೇಲಿತ್ತು. ಆದರೆ, ಸರಕಾರ ಮಾತ್ರ ದಿವ್ಯ ಮೌನ ತಾಳಿದೆ.

ಸರಕಾರ ಈ ಸಮಸ್ಯೆ ಬಗೆಹರಿಸಿ ಪರಿಹಾರ ಕಂಡುಕೊಳ್ಳಲು ಪಟ್ಟಿಯನ್ನು ನಿಯತಕಾಲಿಕವಾಗಿ ಪರಿಷ್ಕರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಸರಕಾರ ಈ ಕಾರ್ಯವನ್ನು ಆಯೋಗದ ಸಲಹೆಯಂತೆಯೇ ನಿರ್ವಹಿಸಬೇಕು(ಕಲಂ 11.2). ಪ್ರಾಯೋಗಿಕವಾಗಿ ಆಯೋಗವೇ ಈ ನಿಟ್ಟಿನಲ್ಲಿ ಕಾರ್ಯವೆಸಗಬೇಕಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವರ್ಗಗಳು ಹಿಂದುಳಿದ ವರ್ಗವೆಂದು ಮುಂದುವರಿಯಲು, ಅನರ್ಹಗೊಂಡಲ್ಲಿ ಅವುಗಳನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆಯೇ ಅದು. ಸಂವಿಧಾನದ ವಿಧಿ16(4)ರ ಆಜ್ಞಾರ್ಥಕದಂತೆ, ‘ಸಾಕಷ್ಟು ಪ್ರಾತಿನಿಧ್ಯ’ ಗಳಿಸಿರುವ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ಆಯೋಗ ಕೈಗೊಳ್ಳಬೇಕು. ಈ ಕಾರ್ಯ ಕೈಗೊಳ್ಳಲು ‘ದ್ವಿತೀಯ ಮೂಲದ ಮಾಹಿತಿ’ಗಳು (secondary source of information) ಅವಶ್ಯ. ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳು, ಸಾಕಷ್ಟು ಪ್ರಮಾಣದ ಪ್ರಾತಿನಿಧ್ಯವನ್ನು, ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಪಡೆದಿರುವ ಅವುಗಳ ಸಂಖ್ಯೆಯನ್ನು, ಆ ವರ್ಗಗಳ ಒಟ್ಟಾರೆ ಜನಸಂಖ್ಯೆಗೆ ತಾರ್ಕಿಕವಾಗಿ ತುಲನೆಮಾಡಿ ನಿಗದಿಗೊಳಿಸುವುದಾಗಿದೆ ಹಾಗೂ ಸಾಮಾನ್ಯವರ್ಗದಲ್ಲಿ ಅವು ಪಡೆದಿರುವ ಪ್ರಾತಿನಿಧ್ಯ (ಸರಾಸರಿ)ಸಂಖ್ಯೆಯನ್ನೂ, ಸಾಕಷ್ಟು ಪ್ರಾತಿನಿಧ್ಯ ಪ್ರಮಾಣವನ್ನು ಕಂಡುಕೊಳ್ಳಲು ಪರಿಗಣಿಸಬೇಕು (ಜಯಶ್ರೀ ಲಕ್ಷ್ಮಣರಾವ್ vs ಪಾಟೀಲ್  ಮಹಾರಾಷ್ಟ್ರ LL 2021 SC). ಆಯೋಗದ ಈ ಪ್ರಕ್ರಿಯೆಯಿಂದ, ಸಾಕಷ್ಟು ವರ್ಗಗಳು ಪಟ್ಟಿಯಿಂದ ಹೊರಗುಳಿಯುತ್ತವೆ. ಹಾಗೆಯೇ, ಹೊರಗುಳಿಯುವ ವರ್ಗಗಳಿಗೆ ಬದಲಿಯಾಗಿ ಮೀಸಲಾತಿ ಪಡೆಯಲು ಯಾವುದೇ ಸಂಚಕಾರ ಉಂಟಾಗುವುದಿಲ್ಲ. ಅಂತಹವುಗಳು ತಂತಾನೆ ಶೇ.10ರ ಆರ್ಥಿಕ ದುರ್ಬಲ ವರ್ಗಗಳ(EWS) ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ಹೀಗಾಗಿ ಅವುಗಳಿಂದ ಯಾವುದೇ ಪ್ರತಿರೋಧ ವ್ಯಕ್ತವಾಗುವ ಸಂಭವ ಇಲ್ಲ. ಇಂತಹ ಸೂಕ್ಷ್ಮ ಸ್ವರೂಪದ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಸರಕಾರ ಮತ್ತು ಆಯೋಗಗಳೆರಡೂ ಎಚ್ಚರವಹಿಸಬೇಕು. ಹಾಗೊಂದು ವೇಳೆ, ಈ ಎರಡೂ ಆಯ್ಕೆಗಳಲ್ಲಿ ತೊಡಕಿದೆ ಎಂದು ಸರಕಾರ ಪರಿಗಣಿಸಿದರೆ, ಅನ್ಯಮಾರ್ಗವಿಲ್ಲದೆ, ಅರ್ಹ ಹಿಂದುಳಿದ ವರ್ಗಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಬಹುದು.
ಸರಕಾರ, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡರೆ, ಪರಿಶಿಷ್ಟ ಸಮುದಾಯಗಳು ಮತ್ತು ಅರ್ಹ ಹಿಂದುಳಿದ ವರ್ಗಗಳು ನೆಮ್ಮದಿಯ ನಿಟ್ಟುಸಿರು ಬಿಡುವವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)