ನ್ಯೂಝಿಲ್ಯಾಂಡ್ ವಿರುದ್ದ ಟೆಸ್ಟ್ ಸರಣಿ: ರಾಹುಲ್ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡಕ್ಕೆ ಸೇರ್ಪಡೆ
ಕಾನ್ಪುರ: ಭಾರತದ ಹಿರಿಯ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಸ್ನಾಯು ಸೆಳೆತದಿಂದಾಗಿ ನ್ಯೂಝಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಮಂಗಳವಾರ ಹೊರಗುಳಿದಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಇಂಗ್ಲೆಂಡ್ಗೆ ತೆರಳಿದ್ದ ಭಾರತ ಟೆಸ್ಟ್ ತಂಡದಲ್ಲಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಗುರುವಾರದಿಂದ ಕಾನ್ಪುರದಲ್ಲಿ ಆರಂಭಿಕ ಟೆಸ್ಟ್ ಆರಂಭವಾಗಲಿದೆ.
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಎಡತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಮುಂಬರುವ ನ್ಯೂಝಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಪೇಟಿಎಂ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
"ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ತಯಾರಿಗಾಗಿ ಅವರು ಈಗ ಎನ್ಸಿಎಯಲ್ಲಿ ಪುನಶ್ಚೇತನ ಶಿಬಿರಕ್ಕೆ ಒಳಗಾಗಲಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
ಮಂಗಳವಾರ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬಹುತೇಕ ಎಲ್ಲ ಆಟಗಾರರು ಭಾಗವಹಿಸಿದ್ದ ಭಾರತ ತಂಡದ ಸಾಂಪ್ರದಾಯಿಕ ಅಭ್ಯಾಸ ಸೆಷನ್ನಿಂದ ರಾಹುಲ್ ಹೊರಗುಳಿದಿದ್ದರು.
29ರ ವಯಸ್ಸಿನ ರಾಹುಲ್ 40 ಟೆಸ್ಟ್ಗಳಲ್ಲಿ 35.16 ಸರಾಸರಿಯಲ್ಲಿ ಒಟ್ಟು 2,321 ರನ್ ಗಳಿಸಿದ್ದಾರೆ. 2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ 199 ರನ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.
ತಂಡದ ಅಭ್ಯಾಸದ ವೇಳೆ ಶುಭಮನ್ ಗಿಲ್ ಅವರು ಮಯಾಂಕ್ ಅಗರ್ವಾಲ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದು ಕಂಡುಬಂದಿತು. ಸರಣಿಯ ಮೊದಲ ಪಂದ್ಯದಲ್ಲಿ ಉಪ ನಾಯಕನಾಗಿರುವ ಚೇತೇಶ್ವರ ಪೂಜಾರ ಕೂಡ ಬ್ಯಾಟಿಂಗ್ ಮಾಡಿದರು.
ಶ್ರೇಯಸ್ ಅಯ್ಯರ್ ಅಥವಾ ಸೂರ್ಯಕುಮಾರ್ ಯಾದವ್ ಟೆಸ್ಟ್ಗೆ ಪದಾರ್ಪಣೆ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಅಧಿಕವಿದೆ.