varthabharthi


ಸಂಪಾದಕೀಯ

ಪ್ರಜಾ ಸತ್ತ!

ವಾರ್ತಾ ಭಾರತಿ : 24 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಪ್ರಜಾಸತ್ತೆಯೆನ್ನುವುದು ಹಲವು ಶತಮಾನಗಳ ಮನುಷ್ಯ ಸಂಘರ್ಷಗಳ ಮೂಲಕ, ಹೋರಾಟಗಳ ಮೂಲಕ ಜನ್ಮತಳೆದಿದೆ. ತನ್ನನ್ನು ಯಾರು ಆಳಬೇಕು ಎನ್ನುವುದನ್ನು ತಾನೇ ನಿರ್ಣಯಿಸುವ ಈ ವ್ಯವಸ್ಥೆ ತನ್ನ ಭೂಮಿಯಲ್ಲಿರುವ ಎಲ್ಲರಿಗೂ ಸಮಾನ ಹಕ್ಕುಗಳನ್ನು ಘೋಷಿಸುತ್ತದೆ. ಜಾತಿ, ಬಣ್ಣದ ಹೆಸರಿನಲ್ಲಿ ಅಸಮಾನತೆಯನ್ನು ಇದು ವಿರೋಧಿಸುತ್ತದೆ. ‘ಪ್ರಜೆಗಳೇ ಇಲ್ಲಿ ಪ್ರಭುಗಳು’ ಎನ್ನುವ ಘೋಷಣೆಯ ತಳಹದಿಯಲ್ಲಿ ನಿಂತಿರುವ ಪ್ರಜಾಸತ್ತೆಯಲ್ಲಿ ಆಳುವವರು ಜನರ ಪರವಾಗಿರುವ ನೀತಿಯನ್ನು ರೂಪಿಸಬೇಕು. ಪ್ರಜಾಸತ್ತೆಯಲ್ಲಿ ಅರಸನಾದವನು ಪ್ರಜೆಗಳ ಸೇವಕ. ಹೀಗೆಲ್ಲ ನಾವು ನಂಬಿದ್ದೇವೆ. ಆದರೆ ಜಾಗತಿಕವಾಗಿ ಅಸ್ತಿತ್ವದಲ್ಲಿರುವ ಪ್ರಜಾಸತ್ತಾತ್ಮಕ ಸರಕಾರಗಳಿಗೆ ಇವೆಲ್ಲವನ್ನು ಸಾಧಿಸಲು ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರೆ ನಿರಾಶೆಯ ಉತ್ತರ ನಮಗೆ ಸಿಗುತ್ತದೆ. ಇಲ್ಲಿ ಅಂತಿಮವಾಗಿ ದೊರೆಯನ್ನು ಆರಿಸುವುದು ಬೃಹತ್ ಕಾರ್ಪೊರೇಟ್ ಶಕ್ತಿಗಳು ಮತ್ತು ಧಾರ್ಮಿಕ ಶಕ್ತಿಗಳು ಜೊತೆ ಸೇರಿ. ಹೀಗೆ ಜೊತೆ ಸೇರಿ ಆಯ್ಕೆ ಮಾಡುವ ದೊರೆ ಯಾರ ಹಿತಾಸಕ್ತಿಯನ್ನು ಬಯಸುತ್ತಾನೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಟ್ಟಿನಲ್ಲಿ ಪ್ರಜೆಗಳ ಹೆಸರಿನಲ್ಲೇ ಆಳ್ವಿಕೆ ನಡೆಸಿ, ಪ್ರಭುಗಳ ಪರವಾಗಿ ನೀತಿ ರೂಪಿಸಿ ಅವರನ್ನು ಅಭಿವೃದ್ಧಿ ಮಾಡುವುದೇ ಪ್ರಜಾಪ್ರಭುತ್ವ ಎನ್ನುವಂತಾಗಿದೆ. ಹೀಗೆ ಹೆಸರಿಗಷ್ಟೇ ಇರುವ ಪ್ರಜಾಪ್ರಭುತ್ವವೂ ವಿಶ್ವದಲ್ಲಿ ಇನ್ನಷ್ಟು ದುರ್ಬಲವಾಗುತ್ತಿದೆ ಎನ್ನುವ ಅಂಶವನ್ನು ಇಂಟರ್‌ನ್ಯಾಶನ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಆ್ಯಂಡ್ ಇಲೆಕ್ಟೋರಲ್ ಅಸಿಸ್ಟೆನ್ಸ್ ವರದಿ ಹೇಳಿದೆ. ಆ ಸಂಸ್ಥೆ ಇದೀಗ, ಅಮೆರಿಕವವನ್ನೂ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿತದ ಸ್ಥಿತಿಯಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಿದೆ.

‘ನಾಗರಿಕ ಸ್ವಾತಂತ್ರ’ ಸೂಚಕದಲ್ಲಿ ಅಮೆರಿಕದ ನಿರ್ವಹಣೆ ಕಳಪೆಯಾಗಿದ್ದು ವಿಶ್ವದಲ್ಲಿ ನಾಲ್ವರಲ್ಲಿ ಒಬ್ಬ ಕೆಟ್ಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾನೆ ಎಂದು ವರದಿ ತಿಳಿಸುತ್ತದೆ. ವಿಪರ್ಯಾಸವೆಂದರೆ, ಪ್ರಜಾಪ್ರಭುತ್ವದ ಗುತ್ತಿಗೆದಾರನಂತೆ ವರ್ತಿಸುತ್ತಿರುವ ಅಮೆರಿಕಕ್ಕೆ ಇತರ ದೇಶಗಳ ಪ್ರಜಾಸತ್ತೆಯಲ್ಲಿ ಆಸಕ್ತಿಯಿಲ್ಲ. ಭಾರತವೂ ಸೇರಿದಂತೆ ಹಲವು ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದ ಹೆಗ್ಗಳಿಕೆ ಅಮೆರಿಕಕ್ಕೆ ಸೇರಿದೆ. ಇತರ ದೇಶಗಳಲ್ಲಿ ಸರ್ವಾಧಿಕಾರಿ ಬಲಾಢ್ಯನಾದಂತೆ, ಆ ದೇಶವನ್ನು ತನ್ನ ದೇಶದ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಬಹುದು ಎಂಬ ರಾಜಕೀಯ ತಂತ್ರಗಾರಿಕೆ ಇದಕ್ಕೆ ಕಾರಣ. ಒಂದು ದೇಶದ ಸರ್ವಾಧಿಕಾರಿ ತನಗೆ ಪೂರಕವಾಗಿದ್ದರೆ ಅವನನ್ನು ಆತ್ಮೀಯ ಸ್ನೇಹಿತನನ್ನಾಗಿಸುವ ಅಮೆರಿಕ, ಸರ್ವಾಧಿಕಾರಿ ವಿರೋಧಿಯಾದಾಕ್ಷಣ ‘ಪ್ರಜಾಸತ್ತೆ’ ‘ಮಾನವಹಕ್ಕು’ ಹೆಸರಿನಲ್ಲಿ ಸದೆ ಬಡಿಯುತ್ತಾ ಬಂದಿದೆ. ಇರಾನ್‌ನ ಮೇಲೆ ದಾಳಿ ನಡೆಸಿದಾಗ ಅಮೆರಿಕದ ಸ್ನೇಹಿತನಾಗಿದ್ದ ಸದ್ದಾಂ ಹುಸೇನ್ ಬಳಿಕ ಅದೇ ಅಮೆರಿಕಕ್ಕೆ ಬಲಿಯಾದುದನ್ನು ನಾವು ನೋಡಿದ್ದೇವೆ. ತನ್ನ ಮೂಗಿನ ನೇರಕ್ಕಿಲ್ಲ ಎನ್ನುವ ಕಾರಣಕ್ಕೇ ಲಿಬಿಯಾದ ಗದ್ದಾಫಿಯನ್ನು ಅಮೆರಿಕ ಬಲಿ ತೆಗೆದುಕೊಂಡಿತು. ಇಡೀ ವಿಶ್ವವನ್ನು ನಿಯಂತ್ರಿಸಲು ಬಯಸುವ ಅಮೆರಿಕವೇ ‘ಸರ್ವಾಧಿಕಾರಿ’ ದೇಶವಾಗಿ ಮೆರೆಯುತ್ತಿದೆ. ಇದೀಗ ಆ ದೇಶದೊಳಗಿರುವ ಅಣಕು ಪ್ರಜಾಸತ್ತೆಯೂ ದುರ್ಬಲವಾಗುತ್ತಿದೆ ಎಂದು ವರದಿ ಹೇಳುತ್ತದೆ.

ವರದಿ ಹೇಳುವಂತೆ ಕೊರೋನ ಸಾಂಕ್ರಾಮಿಕ ಆರಂಭವಾದಂದಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಕುಸಿಯುತ್ತಿದೆ. ಕೊರೋನವನ್ನು ತನ್ನ ಸರ್ವಾಧಿಕಾರಿ ನಿಲುವಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ವರದಿ ಅಭಿಪ್ರಾಯ ಪಡುತ್ತದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಜನಾಂಗೀಯ ದ್ವೇಷ ಸರ್ವಾಧಿಕಾರಿ ಟ್ರಂಪ್‌ರನ್ನು ಸೃಷ್ಟಿಸಿತ್ತು. ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದ ಮೋದಿ ಸರಕಾರವನ್ನು ಹೆಚ್ಚು ಸರ್ವಾಧಿಕಾರಿಯಾಗಿಸಿದೆ. ಒಂದು ಕಾಲದಲ್ಲಿ ಭಾರತವೆಂದರೆ ಇಂದಿರಾಗಾಂಧಿ ಎನ್ನುವಂತಹ ಸ್ಥಿತಿಯಿತ್ತು. ಅದು ಅಂತಿಮವಾಗಿ ದೇಶವನ್ನು ತುರ್ತುಪರಿಸ್ಥಿತಿಗೆ ತಳ್ಳಿತು. ಇಂದಿರಾಗಾಂಧಿ ಕನಿಷ್ಠ ಬಡವರ ಅಭಿವೃದ್ಧಿಯ ಬಗ್ಗೆ, ಹಸಿವಿನ ನಿವಾರಣೆಯ ಬಗ್ಗೆ ಮಾತನಾಡುತ್ತಿದ್ದರು. ಬ್ಯಾಂಕ್ ರಾಷ್ಟ್ರೀಕರಣ, ಭೂಸುಧಾರಣೆ ಕಾಯ್ದೆಯಂತಹ ಜನಪರ ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಆದರೆ ಮೋದಿಯ ಕಾಲ ರಾಮಮಂದಿರ, ಪ್ರತಿಮೆ, ಕಾಶ್ಮೀರ ಇತ್ಯಾದಿ ಘೋಷಣೆಗಳಿಗಷ್ಟೇ ಸೀಮಿತವಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ದೇಶದ ಸೊತ್ತಾಗಿರುವ ಎಲ್ಲ ಸಾರ್ವಜನಿಕ ಸಂಸ್ಥೆಗಳು ಒಂದೊಂದಾಗಿ ಮಾರಾಟವಾಗುತ್ತಿವೆ.

ಇಂದಿರಾ ಗಾಂಧಿ ತನ್ನ ವರ್ಚಸ್ಸನ್ನು ಜನರದೊಂದಿಗೆ ಬೆಸೆದು ರೂಪಿಸಿಕೊಂಡದ್ದು. ಆದರೆ ಪ್ರಧಾನಿ ಮೋದಿಯ ವರ್ಚಸ್ಸು ಮಾಧ್ಯಮಗಳು ಕಟ್ಟಿಕೊಟ್ಟದ್ದು. ಜನರೊಂದಿಗೆ, ಮಾಧ್ಯಮಗಳೊಂದಿಗೆ ಸಂವಹನಕ್ಕೆ ಸಿದ್ಧವಾಗದ ಮೊದಲ ಪ್ರಧಾನಿ ಇವರು. ಬಿಜೆಪಿಯು, ಪ್ರಧಾನಿ ಮೋದಿಯೊಳಗೆ ಇಂದಿರಾಗಾಂಧಿಯನ್ನು ಹುಡುಕುತ್ತಿದೆ. ಆದರೆ ಮೋದಿಗೆ ಇಂದಿರಾಗಾಂಧಿಗಿದ್ದ ಸ್ವಂತಿಕೆಯೂ ಇದ್ದಂತಿಲ್ಲ. ಅವರನ್ನು ನಿಯಂತ್ರಿಸುತ್ತಿರುವುದೇ ಕಾರ್ಪೊರೇಟ್ ಶಕ್ತಿಗಳು ಮತ್ತು ಸಂಘಪರಿವಾರ. ಜನಸಾಮಾನ್ಯರು ಸಂಪೂರ್ಣ ಮೋಸ ಹೋಗಿದ್ದಾರಾದರೂ, ಮಾಧ್ಯಮಗಳು ‘ನೀವು ಮೋಸ ಹೋಗಿಲ್ಲ, ನೀವು ಗೆದ್ದಿದ್ದೀರಿ’ ಎಂದು ಅವರನ್ನು ಸಮಾಧಾನಿಸುತ್ತಿವೆ. ನೋಟು ನಿಷೇಧದ ಸಂದರ್ಭದಲ್ಲಿ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಯಿತು. ಜನ ಸಾಮಾನ್ಯರು ತಮ್ಮ ದುಡ್ಡಿಗಾಗಿಯೇ ಬ್ಯಾಂಕಿನಲ್ಲಿ ಕ್ಯೂ ನಿಲ್ಲಬೇಕಾಯಿತು. ಇಂತಹ ಆರ್ಥಿಕ ಅಸಹಾಯಕತೆ, ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇರಲಿಲ್ಲ. ಶ್ರೀಮಂತರ ಕಪ್ಪು ಹಣವೆಲ್ಲ ಹೊರಗೆ ಬರುತ್ತದೆ ಎಂದು ಜನರು ಸಹಿಸಿಕೊಂಡರು. ಆದರೆ ಇಂದಿಗೂ ಕಪ್ಪು ಹಣದ ಕುರಿತಂತೆ ಪ್ರಧಾನಿ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಜಿಎಸ್‌ಟಿಯೂ ವ್ಯಾಪಾರವನ್ನು ಇನ್ನಷ್ಟು ಕಷ್ಟಗೊಳಿಸಿತು. ರಾಜ್ಯಗಳು ಆರ್ಥಿಕವಾಗಿ ಬಡವಾಯಿತು.

ಕೇಂದ್ರದ ನಿಯಂತ್ರಣ ರಾಜ್ಯದ ಮೇಲೆ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ನ್ನು ಪ್ರಧಾನಿ ಮೋದಿಯವರು ‘ಅಘೋಷಿತ ತುರ್ತು ಪರಿಸ್ಥಿತಿಗೆ’ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡರು. ವಲಸೆ ಕಾರ್ಮಿಕರ ಮಾರಣ ಹೋಮ, ರೈತರ ಸಂಕಟಗಳು, ಕೂಲಿಕಾರ್ಮಿಕರ ಅಸಹಾಯಕತೆ, ಹಸಿವು, ಬಡತನ ಇವೆಲ್ಲವೂ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಘಟಿಸಿರಲಿಲ್ಲ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಸಂಭವಿಸಿತು. ಲಾಕ್‌ಡೌನ್ ಇಂದು ಆರೋಗ್ಯ, ಶಿಕ್ಷಣ ಎಲ್ಲವನ್ನೂ ಉಳ್ಳವರ ಸೊತ್ತಾಗಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ‘ನಿಮ್ಮ ಪೌರತ್ವವನ್ನು ಸಾಬೀತು ಪಡಿಸಿ’ ಎಂದು ಪ್ರಜೆಗಳಿಗೆ ಕೇಳಿರಲಿಲ್ಲ. ಆದರೆ ಮೋದಿಯ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವಾಯಿತು. ಕೊರೋನ ಓಡಿಸಲು ಲಾಕ್‌ಡೌನ್ ಅನಿವಾರ್ಯವಾಗಿತ್ತು ಎಂದು ಪ್ರಧಾನಿ ಹೇಳಿದರು. ಇದೇ ಸಂದರ್ಭದಲ್ಲಿ ಪಶ್ಚಿಮಬಂಗಾಳ ಚುನಾವಣೆಗೆ ಕೊರೋನ ಸಮಸ್ಯೆಯಾಗಲಿಲ್ಲ. ಕುಂಭಮೇಳಕ್ಕೆ ಕೊರೋನ ಸಮಸ್ಯೆಯಾಗಲಿಲ್ಲ. ಲಾಕ್‌ಡೌನ್‌ನಿಂದ ತತ್ತರಿಸಿ ಕೂತಿರುವ ಜನರೊಳಗೆ ದ್ವೇಷ ತುಂಬಿ ಪರಸ್ಪರ ಗಲಭೆಗೆ ಹಚ್ಚಿ, ಅತ್ತ ಒಂದೊಂದಾಗಿ ಜನವಿರೋಧಿ, ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸತೊಡಗಿದರು. ಇದರ ವಿರುದ್ಧ ಮೊತ್ತ ಮೊದಲ ಜನಬಂಡಾಯ ‘ಪಂಜಾಬಿನ ರೈತ ಹೋರಾಟ’ ಆಗಿದೆ. ತುರ್ತುಪರಿಸ್ಥಿತಿಯಲ್ಲಿ ಮೇಲ್‌ಸ್ತರದ ಜನರು ಬೀದಿಗಿಳಿದರೆ, ಮೋದಿಯ ಸರ್ವಾಧಿಕಾರದ ವಿರುದ್ಧ ತಳಸ್ತರದ ಜನರು ಬೀದಿಗಿಳಿದು ಗೆದ್ದರು. ಇಂತಹ ಹೊತ್ತಿನಲ್ಲಿ ಉಳ್ಳವರು, ವಿದ್ಯಾವಂತರು, ಪತ್ರಕರ್ತರು ಹೋರಾಟದ ಪರವಾಗಿ ನಿಲ್ಲದೆ ಪ್ರಭುತ್ವದ ಪರವಾಗಿ ನಿಂತದ್ದು ಮಾತ್ರ ವಿಪರ್ಯಾಸ. ರೈತರ ಹೋರಾಟ ಮುಂದುವರಿದು ಇನ್ನಷ್ಟು ವಿಸ್ತಾರಗೊಳ್ಳದೆ ಇದ್ದರೆ, ಈ ದೇಶದ ಅಳಿದುಳಿದ ಪ್ರಜಾಪ್ರಭುತ್ವವೂ ನಾಶವಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ, ಐಡಿಇಎ ತೆರೆದಿಟ್ಟ ವರದಿಯನ್ನು ಮುಖ್ಯವಾಗಿ ಭಾರತ ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರು ಅದ ಹಾಕಿ ತಿವಿದರದು ಹೂವೆ’ ಎನ್ನುವ ಪದ್ಯದ ಸಾಲನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)