varthabharthi


ವಿಶೇಷ-ವರದಿಗಳು

ಇಂದು ಅಂತರ್‌ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ

ಮನೆಕೆಲಸದ ಮಹಿಳೆಯರ ಶೋಷಣೆಗೆ ಕೊನೆ ಎಂದು?

ವಾರ್ತಾ ಭಾರತಿ : 25 Nov, 2021
ಡಾ. ಅಮ್ಮಸಂದ್ರ ಸುರೇಶ್

ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮಹಿಳೆಯರು ಇಂದು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆದೇ ಸಮಯದಲ್ಲಿ ಅತಿ ಹೆಚ್ಚು ಮಹಿಳೆಯರು ಮತ್ತು ಯುವತಿಯರು ಮನೆ ಕೆಲಸಗಾರರಾಗಿ ದುಡಿಯುತ್ತಿದ್ದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಕಡಿಮೆ ಸಂಬಳ, ಲೈಂಗಿಕ ದೌರ್ಜನ್ಯ, ರಜೆ ರಹಿತ ಕೆಲಸ, ಕೀಳಾಗಿ ಕಾಣುವ ಮನೋಭಾವ, ಹೆರಿಗೆ ರಕ್ಷಣೆಯಿಲ್ಲದಿರುವುದು, ವೃದ್ಧಾಪ್ಯ ಹೀಗೆ ಹಲವು ಶೋಷಣೆಗಳಿಂದ ಮನೆಕೆಲಸ ಮಾಡುವ ಮಹಿಳೆಯರು ನರಳುತ್ತಿದ್ದಾರೆ. ಇತರ ಕಾರ್ಮಿಕರಂತೆ ಮನೆಕೆಲಸದವರನ್ನು ಗೌರವಯುತವಾಗಿ ನೋಡಬೇಕಾದುದು ಮಾನವ ಸಮಾಜದ ಕರ್ತವ್ಯ. ಆದರೆ ಭಾರತದಲ್ಲಿ ಸುಮಾರು 4.5 ಮಿಲಿಯನ್‌ನಷ್ಟು ಮನೆಗೆಲಸ ಮಾಡುವವರಿದ್ದು ಇಂದಿಗೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಶೋಚನೀಯ ಸ್ಥಿತಿಯಲ್ಲೇ ಇದ್ದಾರೆ. ಇವರ ವೇತನ ಇತರ ವಲಯಗಳಿಗೆ ಹೋಲಿಸಿದರೆ ಮೂರನೇ ಒಂದು ಭಾಗಕ್ಕಿಂತ ಕಡಿಮೆ. ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್ ಮನೆ ಕೆಲಸವನ್ನು ಒಂದು ಅಥವಾ ಹೆಚ್ಚಿನ ಮನೆಗಳಲ್ಲಿ ಕೆಲಸ ನಿರ್ವಹಿಸುವುದು ಎಂದು ವ್ಯಾಖ್ಯಾನಿಸಿದೆ. ವೇತನಕ್ಕೆ ಪ್ರತಿಯಾಗಿ ಖಾಸಗಿ ಮನೆಗಳಲ್ಲಿ ಮನೆ ಕೆಲಸವನ್ನು ನಿರ್ವಹಿಸುವವರನ್ನು ಮನೆಕೆಲಸದ ಕಾರ್ಮಿಕರು ಎಂದು ಸರಳವಾಗಿ ಹೇಳಬಹುದು. ಐಎಲ್‌ಒದ 2015ರ ವರದಿಯ ಪ್ರಕಾರ 67 ಮಿಲಿಯನ್ ಜನರು ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದಾರೆ. ನಗರೀಕರಣ ಹೆಚ್ಚಾದಂತೆ ಜಾಗತಿಕವಾಗಿ ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭಾರತದ ಮನೆಕೆಲಸಗಾರರ ಪೈಕಿ ಮೂರನೇ ಎರಡರಷ್ಟು ಜನರು ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಮನೆಗೆಲಸದವರ ಅಗತ್ಯವೂ ಹೆಚ್ಚುತ್ತಿದೆ. ಉದ್ಯೋಗದಾತರು ಕನಿಷ್ಠ ಸೌಲಭ್ಯಗಳನ್ನು ನೀಡದೆಯೇ ಮಹಿಳಾ ಮನೆಕೆಲಸಗಾರರಿಂದ ಗರಿಷ್ಠ ಕೆಲಸವನ್ನು ಮಾಡಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಮನೆ ಕೆಲಸಗಾರರು ಪೂರ್ಣ ಸಮಯ ಅಥವಾ ಅರೆಕಾಲಿಕ ಅವಧಿಗೆ ಕೆಲಸ ಮಾಡಬಹುದು, ಉದ್ಯೋಗ ನೀಡಿರುವ ಮಾಲಕರ ಮನೆಯಲ್ಲೇ ವಾಸಿಸಬಹುದು. ನೇರವಾಗಿ ಕೆಲಸಕ್ಕೆ ಸೇರಿಸಿಕೊಳ್ಳಬಹುದು ಅಥವಾ ನೇಮಕಾತಿ ಏಜೆನ್ಸಿಗಳ ಮೂಲಕ ನೇಮಿಸಿಕೊಳ್ಳಬಹುದು. ಮನೆ ಶುಚಿಗೊಳಿಸುವಿಕೆ, ಅಡುಗೆ ಮಾಡುವುದು, ನೆಲವನ್ನು ಸ್ವಚ್ಛಗೊಳಿಸುವುದು, ಪಾತ್ರೆ ಮತ್ತು ಬಟ್ಟೆಗಳನ್ನು ತೊಳೆಯವುದು, ಮಕ್ಕಳ ಪಾಲನೆ ಮಾಡುವುದು ಹೀಗೆ ಮನೆ ಕೆಲಸದವರ ನೇಮಕ ಮತ್ತು ಅವರು ನಿರ್ವಹಿಸುವ ಕೆಲಸಗಳು ವಿಭಿನ್ನ ರೀತಿಯಲ್ಲಿ ಇರುವುದನ್ನು ನೋಡಬಹುದು. ಭಾರತದಲ್ಲಿ ಶೇ. 80ಕ್ಕಿಂತ ಹೆಚ್ಚು ಮನೆಕೆಲಸಗಾರರು ಮಹಿಳೆಯರು ಮತ್ತು ಯುವತಿಯರಾಗಿದ್ದಾರೆ. ಇತ್ತೀಚೆಗೆ ಪರಿಚಯಿಸಿದ ಇ-ಶ್ರಮ್ ಪೋರ್ಟಲ್‌ನಲ್ಲಿ ಒಟ್ಟು 8.56 ಕೋಟಿ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಕೊಂಡಿದ್ದು ಇದರಲ್ಲಿ ಶೇ. 8.8ರಷ್ಟು ಕಾರ್ಮಿಕರು ಮನೆಕೆಲಸ ಮಾಡುವವರಾಗಿದ್ದಾರೆ. ಮನೆ ಕೆಲಸದವರನ್ನು ಕೀಳಾಗಿ ಕಾಣುವುದು ನಮ್ಮ ನಾಗರಿಕ ಸಮಾಜದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಮನೆ ಕೆಲಸದವರು ನಿರ್ವಹಿಸುವ ಶಕ್ತಿ ಆರ್ಥಿಕತೆ ಮತ್ತು ಸಮಾಜಕ್ಕೆ ಗಣನೀಯವಾದ ಕೊಡುಗೆಯನ್ನು ನೀಡುತ್ತಿದೆ. ಕುಟುಂಬಗಳನ್ನು ಉಳಿಸಿಕೊಳ್ಳುವ ಜೊತೆಗೆ ಉತ್ಪಾದಕತೆ, ಆರ್ಥಿಕ ಬೆಳವಣಿಗೆ ಮತ್ತು ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವಂತಹ ಅಮೂಲ್ಯವಾದ ಕೊಡುಗೆಯನ್ನು ಮನೆಗೆಲಸದವರು ನೀಡುತ್ತಿದ್ದಾರೆ. ಆದರೆ ಇಂತಹ ಮನೆಕೆಲಸದವರು ಹಕ್ಕುಗಳು ಮತ್ತು ನ್ಯಾಯಯುತ ಕೆಲಸದ ಪರಿಸ್ಥಿತಿಗಳಿಂದ ವಂಚಿತರಾಗಿದ್ದಾರೆ. ಹೆಚ್ಚಿನ ಮನೆಕೆಲಸದವರು ಕೆಲಸದ ಅಭದ್ರತೆ ಮತ್ತು ಕಡಿಮೆ ಸಂಬಳದ ಪರಿಣಾಮವಾಗಿ ಒಂದಕ್ಕಿಂತ ಹೆಚ್ಚಿನ ಮನೆಗಳಲ್ಲಿ ದುಡಿಯುವುದು ಸಾಮಾನ್ಯವಾಗಿದೆ. ಹೀಗಾಗಿ ಅತಿಯಾದ ಕೆಲಸ, ವಿಶ್ರಾಂತಿಯ ಕೊರತೆ, ಒಪ್ಪಂದದ ಅನಿಯಂತ್ರಿತ ಸಮಯ, ಮಾನಸಿಕ ಮತ್ತು ಲೈಂಗಿಕ ನಿಂದನೆ, ಸರಿಯಾದ ಸಮಯಕ್ಕೆ ಊಟದಿಂದ ವಂಚಿತರಾಗುವುದು, ಬಲವಂತದ ದುಡಿಮೆ, ಏಜೆನ್ಸಿ ಮತ್ತು ಮಾಲಕರ ಬೆದರಿಕೆಗಳೂ ಸೇರಿದಂತೆ ಗುಲಾಮಗಿರಿಯಂತಹ ಜೀವನವನ್ನು ಅನುಭವಿಸುತ್ತಿದ್ದು ಮಾನವ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದಲ್ಲದೆ ಮನೆಗೆಲಸಗಾರರು ಆಗಾಗ್ಗೆ ಅನುಮಾನಕ್ಕೆ ಸುಲಭವಾಗಿ ಬಲಿಯಾಗುತ್ತಾರೆ. ಮನೆಯಲ್ಲಿ ಏನಾದರೂ ಕಾಣೆಯಾದರೆ ಬೆದರಿಕೆಗಳು, ದೈಹಿಕ ಹಿಂಸೆ, ಪೊಲೀಸ್ ವಿಚಾರಣೆ, ಅಪರಾಧ ನಿರ್ಣಯಗಳ ಮೊದಲ ಆರೋಪಿಗಳಾಗುತ್ತಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಮನೆ ಕೆಲಸವನ್ನು ಸಮಕಾಲೀನ ಗುಲಾಮಗಿರಿಯ ರೂಪ ಎಂದು ಬಣ್ಣಿಸಿದೆ.

ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರು, ಅಡುಗೆಯವರು ಸೇರಿದಂತೆ ಮನೆ ಕೆಲಸದವರ ನಿಖರವಾದ ಸಂಖ್ಯೆಯನ್ನು ಅಂದಾಜು ಮಾಡುವುದು ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದೂ ಸೇರಿದಂತೆ ಮನೆ ಕೆಲಸದವರ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ನಡೆಸಲು ಚಾಲನೆ ನೀಡಿದೆ. ನಗರಗಳು ಇಂದು ಅಗಾಧವಾಗಿ ಬೆಳೆಯುತ್ತಿದ್ದು ಇಂತಹ ನಗರಗಳಿಗೆ ಜೀವನೋಪಾಯಕ್ಕಾಗಿ ವಲಸೆ ಹೋಗುವುದೂ ಕೂಡ ಹೆಚ್ಚುತ್ತಿದೆ. ಇದರಲ್ಲಿ ಹೆಚ್ಚಿನವರು ಮನೆಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಈ ಸಮೀಕ್ಷೆಯು ಮನೆ ಕೆಲಸದವರ ಉದ್ಯೋಗದ ವಿವರ, ಕಾರ್ಮಿಕರ ಸಂಖ್ಯೆ, ವಲಸೆ, ವೇತನ, ಕೆಲಸದ ಅವಧಿ, ಶಿಕ್ಷಣ ಮಟ್ಟ, ಒಪ್ಪಂದ, ವೈವಾಹಿಕ ಸ್ಥಿತಿ ಸೇರಿದಂತೆ ಅವರ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ದತ್ತಾಂಶದ ಕೊರತೆಯನ್ನು ನೀಗಿಸುವ ಆಶಯವನ್ನು ಹೊಂದಿದೆ ಎಂದು ಹೇಳಲಾಗಿದೆ. ದೇಶದ 742 ಜಿಲ್ಲೆಗಳಲ್ಲಿ ನಡೆಯಲಿರುವ ಈ ಸಮೀಕ್ಷೆಯನ್ನು ಒಂದು ವರ್ಷದ ಒಳಗಾಗಿ ಮುಗಿಸಲು ನಿರ್ಧರಿಸಲಾಗಿದೆ. ಆದರೆ ಸಮೀಕ್ಷೆ ನಡೆಸಿದ ಮಾತ್ರಕ್ಕೆ ಮನೆಕೆಲಸದವರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸಮೀಕ್ಷೆಯಿಂದ ಹೊರಬಂದ ದತ್ತಾಂಶಗಳಿಗೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ರೂಪಿಸುವ ಮತ್ತು ಅದನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದಾಗ ಮಾತ್ರ ಮನೆ ಕೆಲಸದವರ ಅಲ್ಪಸ್ವಲ್ಪಸಮಸ್ಯೆಗಳಾದರೂ ಬಗೆಹರಿದು ಅವರ ಬಾಳಿನಲ್ಲಿ ಬೆಳಕು ಮೂಡಬಹುದು.

ಭಾರತದಲ್ಲಿ ಇದುವರೆಗೂ ಮನೆ ಕೆಲಸದ ಕಾರ್ಮಿಕರನ್ನು ಕನಿಷ್ಠ ವೇತನ ಕಾಯ್ದೆ-1948ರ ನಿಗದಿತ ಉದ್ಯೋಗದ ಪಟ್ಟಿಯಿಂದ ಹೊರಗಿಡಲಾಗಿದೆ. ವೇತನ ಪಾವತಿ ಕಾಯ್ದೆ-1936 ಮತ್ತು ಕಾರ್ಮಿಕರ ಪರಿಹಾರ ಕಾಯ್ದೆ-1923ರ ವ್ಯಾಪ್ತಿಗೂ ಸರಿಯಾಗಿ ಬರುವುದಿಲ್ಲ. ಬಾಲ ಕಾರ್ಮಿಕ ನಿಷೇಧಗಳು ಮತ್ತು ನಿಯಂತ್ರಣ ಕಾಯ್ದೆ-1986ರ ಅಡಿಯಲ್ಲಿ ಮನೆ ಕೆಲಸದಲ್ಲಿ ಬಾಲ ಕಾರ್ಮಿಕರನ್ನು ನಿಷೇಧಿಸುವ ಕುರಿತು ಸಮಗ್ರವಾದ ಅನುಷ್ಠಾನ ಕಾರ್ಯವಿಧಾನವನ್ನು ಜಾರಿಗೊಳಿಸಲಾಗಿಲ್ಲ. ಗೃಹ ಕಾರ್ಮಿಕರ (ನೋಂದಣಿ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ-2008ನ್ನು ಪರಿಚಯಿಸಲಾಗಿದ್ದರೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಅವರನ್ನು ಇದುವರೆಗೂ ಕಾರ್ಮಿಕರು ಎಂದು ಪರಿಗಣಿಸಿಲ್ಲ ಆದ್ದರಿಂದ ಅವರು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿದ್ದಾರೆ. ಗೃಹ ಕಾರ್ಮಿಕರಿಗಾಗಿ ರಾಷ್ಟ್ರೀಯ ನೀತಿಯೊಂದನ್ನು ಈಗಾಗಲೇ ರಚಿಸಲಾಗಿದೆ. ಮನೆ ಕೆಲಸಗಾರರನ್ನು ಅಸಂಘಟಿತ ಕೆಲಸಗಾರರೆಂದು ನೋಂದಾಯಿಸಿಕೊಳ್ಳಲು ಅವರಿಗೆ ಅನೂಕೂಲ ಕಲ್ಪಿಸಿರುವುದನ್ನು ಬಿಟ್ಟರೆ ಅದರಿಂದ ಹೆಚ್ಚಿನ ಮಟ್ಟದ ಪ್ರಯೋಜನವೇನೂ ಆಗಿಲ್ಲ. ಕಡಿಮೆ ಆದಾಯದ ಪರಿಣಾಮವಾಗಿ ಮಹಿಳಾ ಮನೆ ಕೆಲಸಗಾರರನ್ನು ಆಹಾರದ ವಿಷಯದಲ್ಲಿ ದುರ್ಬಲ ಗುಂಪು ಎಂದು ಗುರುತಿಸಲಾಗಿದ್ದು ಇವರು ಪೌಷ್ಟಿಕಾಂಶದ ಆಹಾರ ಸೇವನೆಯಲ್ಲಿ ಯಾವಾಗಲೂ ಅಂಚಿನಲ್ಲೇ ಉಳಿದುಕೊಂಡಿದ್ದಾರೆ. ಹೆಚ್ಚಿನ ಮನೆ ಕೆಲಸದವರು ವಲಸೆ ಬಂದವರು ಮತ್ತು ಅತ್ಯಂತ ಬಡವರಾಗಿದ್ದು ಸಾಮಾಜಿಕವಾಗಿ ತಾರತಮ್ಯಕ್ಕೊಳಗಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ದಲಿತರು, ಇತರ ಹಿಂದುಳಿದ ಜಾತಿಗಳು, ಕೌಶಲ್ಯರಹಿತರು, ಹಿಂದುಳಿದ ಪ್ರದೇಶಗಳಿಂದ ಬಂದವರು, ಅನಕ್ಷರಸ್ಥರು, ಭೂರಹಿತರಾಗಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕವಾಗಿ ತೀರಾ ಕೆಳಮಟ್ಟದಲ್ಲಿರುವ ಮನೆಕೆಲಸದ ಕಾರ್ಮಿಕರಿಗೆ ಪಿಂಚಣಿ, ವಿಮೆ, ವಾರದ ರಜೆ ಸೇರಿದಂತೆ ರಜೆಯ ಸೌಲಭ್ಯ, ಮಕ್ಕಳಿಗೆ ಶೈಕ್ಷಣಿಕ ಬೆಂಬಲದಂತಹ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ತುರ್ತಾಗಿ ಜಾರಿಗೆ ತರಬೇಕಾಗಿರುವುದು ಅವಶ್ಯಕವಾಗಿದೆ. ಮನೆಗೆಲಸ ಎನ್ನುವುದು ಉಳಿದ ಕೆಲಸದಂತಲ್ಲ. ಇದರ ಸನ್ನಿವೇಶ, ಪರಿಸ್ಥಿತಿಗಳು ಉಳಿದ ಎಲ್ಲಾ ಉದ್ಯೋಗಗಳಿಗಿಂತ ಭಿನ್ನವಾಗಿದೆ. ಮಹಿಳಾ ಮನೆಗೆಲಸಗಾರರು ಘನತೆಯಿಂದ ಕೆಲಸ ಮಾಡಲು ಮತ್ತು ಅರ್ಥಪೂರ್ಣ ಕೆಲಸದ ಅವಕಾಶದಲ್ಲಿ ತೊಡಗಿಸಿಕೊಳ್ಳಲು, ನಿರ್ವಹಿಸಿದ ಕೆಲಸಕ್ಕೆ ಯೋಗ್ಯವಾದ ವೇತನದೊಂದಿಗೆ ಸಂಭಾವನೆಯನ್ನು ಪಡೆಯಲು, ಕೆಲಸ ಮತ್ತು ಕುಟುಂಬವನ್ನು ಸಮತೋಲನ ಗೊಳಿಸಲು ಮುಖ್ಯವಾಗಿ ಸಬಲೀಕರಣಕ್ಕಾಗಿ ಪ್ರತ್ಯೇಕ ಕಾನೂನಿನ ಅಗತ್ಯವಿದೆ. ಮನೆ ಕೆಲಸದವರ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಮನೆಗೆಲಸಗಾರರು ಧರ್ಮ, ಜಾತಿ ಮತ್ತು ಜನಾಂಗೀಯ ಆಧಾರದ ಮೇಲೆ ತಾರತಮ್ಯಕ್ಕೆ ಒಳಗಾಗುತ್ತಲೇ ಇದ್ದಾರೆ ಎಂಬುದನ್ನು ವಿವಿಧ ವರದಿಗಳು ಮತ್ತು ಅಧ್ಯಯನಗಳು ಸಾಬೀತು ಪಡಿಸಿವೆ. ಬೇರೆ ಮಹಿಳಾ ಕಾರ್ಮಿಕರಿಗೆ ಹೋಲಿಸಿದರೆ ಮನೆ ಕೆಲಸಗಾರರು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ಹೇಳಿಕೊಳ್ಳುವುದು ಅಥವಾ ದೂರು ನೀಡುವುದು ತುಂಬಾ ಕಷ್ಟಕರವಾಗಿದೆ. ಕೆಲಸದಿಂದ ತೆಗೆದು ಹಾಕಿಬಿಡುತ್ತಾರೆ ಎಂಬ ಭಯದಿಂದ ಅವರು ಎಷ್ಟೋ ಸಂದರ್ಭಗಳಲ್ಲಿ ಮೌನವಾಗಿರಬೇಕಾಗುತ್ತದೆ.

ಭಾರತದಲ್ಲಿ ಮನೆ ಕೆಲಸಗಾರರು ತಮ್ಮ ಇರುವಿಕೆ ಮತ್ತು ಮನ್ನಣೆಗಾಗಿ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಆದರೂ ಇತರ ಮಹಿಳಾ ಕಾರ್ಮಿಕರಿಗೆ ಹೋಲಿಸಿದರೆ ಮನೆ ಕೆಲಸ ಮಾಡುವವರ ಸಂಪಾದನೆಯು ಅತ್ಯಂತ ಕೆಳಮಟ್ಟದ್ದಾಗಿದೆ. ಶೋಷಣೆಯಿಂದ ಮನೆಕೆಲಸದವರನ್ನು ರಕ್ಷಿಸುವ ದೃಷ್ಟಿಯಿಂದ ಕುಂದು-ಕೊರತೆ ಪರಿಹಾರ ವ್ಯವಸ್ಥೆಯೊಂದನ್ನು ಸ್ಥಾಪಿಸುವುದು, ಕುಂದು-ಕೊರತೆ ಪರಿಹಾರಕ್ಕಾಗಿ ನ್ಯಾಯಾಲಯಗಳ ಅಥವಾ ನ್ಯಾಯ ಮಂಡಳಿಗಳ ಸಹಾಯ ಪಡೆಯುವ ಹಕ್ಕು, ಕನಿಷ್ಠವೇತನ ನಿಗದಿ ಸೇರಿದಂತೆ ಮನೆಕೆಲಸಗಾರರ ರಕ್ಷಣೆಗೆ ಧನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಏನೆಲ್ಲಾ ಸಮಸ್ಯೆಗಳಿದ್ದರೂ ಮನೆಯ ಕೆಲಸವು ಅನೇಕ ಮಹಿಳೆಯರಿಗೆ ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಆರ್ಥಿಕ ಸ್ವಾಯತ್ತತೆಯ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಮನೆಕೆಲಸವು ಬಹಳಷ್ಟು ಬಡ ಮಹಿಳೆಯರಿಗೆ ಉದ್ಯೋಗದ ಭರವಸೆಯಾಗಿರುವ ಜೊತೆಗೆ ಮಹಿಳೆಯರಿಗೆ ಅತಿ ದೊಡ್ಡ ಉದ್ಯೋಗ ಒದಗಿಸುವ ಕ್ಷೇತ್ರಗಳಲೊಂದಾಗಿದೆ.

ಎಲ್ಲಾ ಕೆಲಸಗಳಿಗೂ ಅದರದೇ ಆದ ಘನತೆ ಇದೆ ಆದ್ದರಿಂದ ಅಸಂಘಟಿತ ಮತ್ತು ಅಸುರಕ್ಷಿತ ವಾತಾವರಣದಲ್ಲಿರುವ ಮನೆ ಕೆಲಸಗಾರರನ್ನು ಕೂಡ ಘನತೆ ಮತ್ತು ಗೌರವಗಳಿಂದ ನೋಡಬೇಕಾದುದು ಮತ್ತು ಅವರ ಕೆಲಸಕ್ಕೆ ಭದ್ರತೆ ಮತ್ತು ನ್ಯಾಯಯುತ ವೇತನ ನೀಡಬೇಕಾಗಿರುವುದು ಸ್ವಾಸ್ಥ್ಯ ಸಮಾಜದ ಲಕ್ಷಣವಾಗಿದೆ. ಕನಿಷ್ಠ ವೇತನ, ಆರೋಗ್ಯಕರ ಕೆಲಸದ ಅವಧಿ, ಸುರಕ್ಷಿತ ಕೆಲಸದ ವಾತಾವರಣ ಸೇರಿದಂತೆ ಅವರಿಗೆ ನೆರವಾಗಲು ಅನುವಾಗುವಂತಹ ಕಾನೂನುಗಳನ್ನು ಜಾರಿಗೆ ತರಬೇಕಾಗಿರುವುದು ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿರುವುದು ಪ್ರಸ್ತುತ ಅವಶ್ಯಕತೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)