varthabharthi


ಕರಾವಳಿ

ಹಲ್ಲೆ, ಬೆದರಿಕೆ ತಡೆಯುವಂತೆ ಪೊಲೀಸರಿಗೆ ಮೌಖಿಕ ಮನವಿ

ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಲ್ಲೆ ಪ್ರಕರಣ: ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟ ತುರ್ತು ಸಭೆ

ವಾರ್ತಾ ಭಾರತಿ : 25 Nov, 2021

ಪುತ್ತೂರು, ನ.25: ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಅವರಿಗೆ ಸುರಕ್ಷೆ ಹಾಗೂ ಭಯಮುಕ್ತವಾಗಿ ವಿದ್ಯಾರ್ಜನೆಗೆ ಅವಕಾಶ ಒದಗಿಸುವ ಕುರಿತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಮನವಿ ನೀಡಿ ಆಗ್ರಹಿಸಲು ಪುತ್ತೂರು ತಾಲೂಕು ಮುಸ್ಲಿಂ ನಿರ್ಧರಿಸಿದೆ.

ಈ ಬಗ್ಗೆ ಪುತ್ತೂರು ಮುಹಿಯುದ್ದೀನ್ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಗುರುವಾರ ನಡೆದ ಒಕ್ಕೂಟದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ.ಮುಹಮ್ಮದ್ ಹಾಜಿ ಕಲ್ಲೇಗ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ನಡೆದ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣವನ್ನು ಖಂಡಿಸಲಾಯಿತು. ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಮನವಿ ಮಾಡುವುದೆಂದು ತೀರ್ಮಾನಿಸಲಾಯಿತು.

ತಾಲೂಕಿನ ವಿವಿಧ ಮೊಹಲ್ಲಾಗಳಿಂದ ಆಗಮಿಸಿದ್ದ ಮಸೀದಿ ಕಮಿಟಿಯ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಅಮಾಯಕ ಮಕ್ಕಳನ್ನು ಗುರಿಯಾಗಿರಿಸಿ ಹಲ್ಲೆ ನಡೆಸಲಾಗುತ್ತಿದೆ. ಇದರಿಂದಾಗಿ ಮಕ್ಕಳು ಶಾಲಾ ಕಾಲೇಜಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಕ್ಕಳ ಶಿಕ್ಷಣಕ್ಕೆ ತೊಡಕಾಗುವ ಅಪಾಯ ಎದುರಾಗುತ್ತಿದೆ. ಇದನ್ನು ತಡೆಯಲು ಕಾನೂನು ಸುರಕ್ಷತೆಯ ಅಗತ್ಯವಿದೆ ಎಂದು ಹೇಳಿದರು.

ಸಮುದಾಯದ ಮುಖಂಡರಾದ ಇಬ್ರಾಹೀಂ ಹಾಜಿ ಸಾಗರ್, ಕೆ.ಎ.ಸಿದ್ದೀಕ್, ಅಶ್ರಫ್ ಹಾಜಿ ಕಲ್ಲೇಗ, ನ್ಯಾಯವಾದಿ ಅಶ್ರಫ್ ಅಗ್ನಾಡಿ, ಜಾಬಿರ್ ಅರಿಯಡ್ಕ, ಇಬ್ರಾಹೀಂ ಗೋಳಿಕಟ್ಟೆ, ಅಬೂಬಕರ್ ಮಲಾರ್, ಅಬ್ದುಲ್ ಖಾದರ್ ಹಾಜಿ ಸುರಯ್ಯೆ, ಬಿ.ಎ.ಶಕೂರ್ ಹಾಜಿ, ಎಲ್.ಟಿ.ಅಬ್ದುರ್ರಝಾಕ್ ಹಾಜಿ, ಕೆ.ಎ.ಅಬ್ದುರ್ರಝಾಕ್ ಹಾಜಿ ಕೂರ್ನಡ್ಕ ಮತ್ತಿತರರು ಮಾತನಾಡಿದರು.

ಪೊಲೀಸ್ ಅಧಿಕಾರಿಗಳಿಗೆ ಮನವಿ

ಸಭೆಯ ಬಳಿಕ ಮುಖಂಡರ ನಿಯೋಗ ಪುತ್ತೂರು ನಗರ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಮೌಖಿಕ ಮನವಿ ಮಾಡಿದರು. ಶಾಲಾ ಕಾಲೇಜುಗಳಲ್ಲಿ ಮಕ್ಕಳ ನಡುವೆ ವಿಂಗಡಣೆ ಮಾಡಬಾರದು, ಕೋಮು ಭಾವನೆಗಳನ್ನು ಬಾರದಂತೆ ಎಲ್ಲರೂ ಒಟ್ಟಾಗಿರುವಂತೆ ಯೋಜನೆ ರೂಪಿಸಬೇಕು. ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸೌಹಾರ್ದ ಮೂಡಿಸುವ ನಿಟ್ಟಿನಲ್ಲಿ ಕೌನ್ಸಿಲಿಂಗ್ ವ್ಯವಸ್ಥೆಗೊಳಿಸಬೇಕು. ಮಕ್ಕಳು ಕಾಲೇಜುಗಳಿಗೆ ಮಾರಕ ಅಸ್ತ್ರಗಳನ್ನು ತರದಂತೆ ಹಾಗೂ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡದಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮೌಖಿಕ ಮನವಿ ಮಾಡಲಾಯಿತು.

ಮನವಿಗೆ ಸ್ಪಂದಿಸಿದ ಪುತ್ತೂರು ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ, ಈ ಬಗ್ಗೆ ಎಲ್ಲಾ ರೂಪದಲ್ಲಿ ತನಿಖೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಅಪ್ರಾಪ್ತ ವಯಸ್ಕರಾಗಿರುವ ಕಾರಣ ಕೆಲವೊಂದು ಕಾನೂನು ನಿಯಮಾವಳಿಯಂತೆ ತನಿಖೆ ಮಾಡಬೇಕಾಗಿದೆ. ಕಾನೂನಿನ ಅಡಿಯಲ್ಲಿ ಯಾವುದೇ ಅಪರಾದಿ ತಪ್ಪಿಸಲು ಸಾಧ್ಯವಿಲ್ಲ. ತಪ್ಪು ಮಾಡಿದವರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)