varthabharthi


ಬೆಂಗಳೂರು

ಠಾಣೆಯೆದುರು ಮುಂದುವರಿದ ಪರ-ವಿರುದ್ಧ ಪ್ರತಿಭಟನೆ

ಪೇಜಾವರಶ್ರೀ ಕುರಿತ ಹೇಳಿಕೆ: ಬಸವನಗುಡಿ ಠಾಣೆಗೆ ಹಾಜರಾದ ಹಂಸಲೇಖ

ವಾರ್ತಾ ಭಾರತಿ : 25 Nov, 2021

ಬೆಂಗಳೂರು, ನ.25: ದಲಿತರ ಕೇರಿಗಳಿಗೆ ಪೇಜಾವರ ಶ್ರೀಗಳ ಭೇಟಿ ಕುರಿತು ಹೇಳಿಕೆ ಸಂಬಂಧ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರಿಂದು ವಿಚಾರಣೆಗಾಗಿ ನಗರದ ಬಸವನಗುಡಿ ಠಾಣೆಗೆ ಹಾಜರಾಗಿದ್ದಾರೆ.

ಈ ವೇಳೆ ಅವರಿಗೆ ಬೆಂಬಲಾರ್ಥವಾಗಿ ನಟ ಚೇತನ್ ಅಹಿಂಸಾ ಹಾಗೂ ಕೆಲವು ಸಂಘಟನೆಗಳ ಮುಖಂಡರು ಠಾಣೆಗೆ ಆಗಮಿಸಿದ್ದು, ಇದನ್ನು ವಿರೋಧಿಸಿ ಬಜರಂಗದಳ ಕಾರ್ಯಕರ್ತರು ಕೂಡಾ ಠಾಣೆಯೆದುರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

"ಇಂದು ಬಸವನಗುಡಿ ಠಾಣೆಗೆ ಹಾಜರಾಗಲಿರುವ ಹಂಸಲೇಖ ಜೊತೆಗೆ ನಾನೂ ಇರುತ್ತೇನೆ. ವಾಕ್ಸ್ವಾಂತಂತ್ರ್ಯದ ರಕ್ಷಕರು ಹಾಗೂ ನಾನು ಹಂಸಲೇಖರ ಜೊತೆಗೆ ಠಾಣೆಯಲ್ಲಿ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ನಮ್ಮೊಂದಿಗೆ ಸೇರಬಯಸುವವರು ಬನ್ನಿ" ಎಂದು ಚೇತನ್ ಅಹಿಂಸಾ ಟ್ವೀಟ್ ಮೂಲಕ ಕರೆ ನೀಡಿದ್ದರು.

ಚೇತನ್ ಅವರ ಈ ಹೇಳಿಕೆಯನ್ನು ವಿರೋಧಿಸಿರುವ ಸಂಘ ಪರಿವಾರದ ಕಾರ್ಯಕರ್ತರು ಇಂದು ಬಸವನಗುಡಿ ಠಾಣೆಯೆದುರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚೇತನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದಲ್ಲದೆ ಹಂಸಲೇಖ ಹಾಗೂ ಚೇತನ್ ಅವರನ್ನು ಬೆಂಬಲಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ವಿಚಾರಣೆಗಾಗಿ ಹಂಸಲೇಖ ಠಾಣೆಗೆ ಹಾಜರಾಗಿದ್ದಾರೆ. ಹಂಸಲೇಖರಿಗೆ  ಮಾತ್ರ ಠಾಣೆಗೆ ಹಾಜರಾಗಲು ಬಸವನಗುಡಿ ಪೊಲೀಸರು ಅವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)