varthabharthi


ರಾಷ್ಟ್ರೀಯ

ಪಕ್ಷಪಾತಿ ನಿರೂಪಕರ ವಿರುದ್ಧ ಕ್ರಮಕ್ಕೆ ಟಿವಿ ವಾಹಿನಿಗಳಿಗೆ ನಿರ್ದೇಶ

‘ಮತಾಂತರ ಜಿಹಾದ್’ ವೀಡಿಯೊಗಳನ್ನು ತೆಗೆಯುವಂತೆ 'ನ್ಯೂಸ್ ನೇಷನ್‌'ಗೆ ಎನ್‌ಬಿಡಿಎಸ್‌ಎ ಆದೇಶ

ವಾರ್ತಾ ಭಾರತಿ : 25 Nov, 2021

Photo credit: livelaw.in

ಹೊಸದಿಲ್ಲಿ,ನ.25: ನ್ಯೂಸ್ ನೇಷನ್ ಸುದ್ದಿವಾಹಿನಿಯಲ್ಲಿ 2020, ನ.6ರಂದು ಪ್ರಸಾರಗೊಂಡಿದ್ದ ‘ಮತಾಂತರ ಜಿಹಾದ್’ ಕಾರ್ಯಕ್ರಮದ ಕುರಿತು ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ (ಸಿಜೆಪಿ) ಸಲ್ಲಿಸಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ (ಎನ್‌ಬಿಡಿಎಸ್‌ಎ)ಯು ನಿರೂಪಕರು ಪ್ರಸಾರದ ಸಮಯದಲ್ಲಿ ನಿಷ್ಪಕ್ಷರಾಗಿರುವಲ್ಲಿ ವಿಫಲರಾದರೆ ಅವರ ವಿರುದ್ಧ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ತನ್ನ ನ.15ರ ಆದೇಶದಲ್ಲಿ ಸುದ್ದಿವಾಹಿನಿಗೆ ಸೂಚಿಸಿದೆ ಎಂದು livelaw.in ವರದಿ ಮಾಡಿದೆ.

ಸುದ್ದಿವಾಹಿನಿಯು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಹಾಗೂ ಕಾರ್ಯಕ್ರಮಗಳ ಪ್ರಸಾರದ ಸಂದರ್ಭದಲ್ಲಿ ತಟಸ್ಥ ಮತ್ತು ನಿಷ್ಪಕ್ಷರಾಗಿ ಉಳಿಯುವಲ್ಲಿ ವಿಫಲರಾಗುವ ನಿರೂಪಕರ ವಿರುದ್ಧ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾರ್ಯಕ್ರಮಗಳನ್ನು ನಿರ್ವಹಿಸುವ ರೀತಿಯ ಬಗ್ಗೆ ನಿರೂಪಕರಿಗೆ ತರಬೇತಿಯನ್ನು ಅಗತ್ಯವಾಗಿ ನೀಡಬೇಕು ಎಂದು ಎನ್‌ಬಿಡಿಎಸ್‌ಎ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಆದಾಗ್ಯೂ ನ್ಯೂಸ್ ನೇಷನ್ ಬೇಷರತ್ ಕ್ಷಮೆಯನ್ನು ಯಾಚಿಸಿರುವುದರಿಂದ ಭವಿಷ್ಯದಲ್ಲಿ ಜಾಗರೂಕವಾಗಿರುವಂತೆ ಅದಕ್ಕೆ ಎಚ್ಚರಿಕೆ ನೀಡಲಾಗಿದೆ ಹಾಗೂ ತನ್ನ ವೆಬ್‌ಸೈಟ್‌ನಲ್ಲಿ, ಯೂಟ್ಯೂಬ್‌ನಲ್ಲಿ ಅಥವಾ ಇತರ ಯಾವುದೇ ಲಿಂಕ್‌ಗಳಲ್ಲಿ ಕಾರ್ಯಕ್ರಮದ ವೀಡಿಯೊ ಈಗಲೂ ಲಭ್ಯವಿದ್ದರೆ ಏಳು ದಿನಗಳಲ್ಲಿ ಅದನ್ನು ತೆಗೆಯಬೇಕು ಮತ್ತು ಈ ಬಗ್ಗೆ ಎನ್‌ಬಿಡಿಎಸ್‌ಎಗೆ ದೃಢಪಡಿಸಬೇಕು ಎಂದು ನಿರ್ದೇಶಿಸಲಾಗಿದೆ.

ಸುದ್ದಿವಾಹಿನಿಯಲ್ಲಿ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವಾಗ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳು, ಸ್ವನಿಯಂತ್ರಣ ನೀತಿಯಂತಹ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಎನ್‌ಬಿಡಿಎಸ್‌ಎ ಅಧ್ಯಕ್ಷ ನ್ಯಾ.(ನಿ) ಎ.ಕೆ.ಸಿಕ್ರಿ ಅವರು ಆದೇಶದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ನಿರೂಪಕ ದೀಪಕ್ ಚೌರಾಸಿಯಾ ಅವರ ಕೆಲವು ಹೇಳಿಕೆಗಳು ಹಾಗೂ ‘ಮೇಮ್‌ಚಂದ್ ಜಿಂದಾ ಹೈ ಜಮಾತ್ ಶರ್ಮಿಂದಾ ಹೈ’, ‘500-ಹಿಂದು ಕೈಸೆ ಬನಾಯೆ ಮುಸ್ಲಿಂ’ ಮತ್ತು ‘ಕ್ಯಾ ಮೇವಾತ್ ಪಾಕಿಸ್ತಾನ ಬನ್ ಗಯಾ?’ ದಂತಹ ಅಡಿಬರಹಗಳು ಪ್ರಸಾರ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಎನ್‌ಬಿಡಿಎಸ್‌ಎ ಬೆಟ್ಟು ಮಾಡಿದೆ.

ಕಾರ್ಯಕ್ರಮದ ಸಂದರ್ಭದಲ್ಲಿ ಮೌಲಾನಾ ಸೈಯದ್ ಅಲ್ ಕಾದ್ರಿ ಎನ್ನುವವರನ್ನು ಇಡೀ ಮುಸ್ಲಿಂ ಸಮುದಾಯದ ಪರವಾಗಿ ಕ್ಷಮೆ ಯಾಚಿಸುವಂತೆ ಬಲವಂತಗೊಳಿಸಿದ್ದ ಚೌರಾಸಿಯಾ ಅವರನ್ನು ಅವಮಾನಿಸಿ ‘ಸುಳ್ಳುಗಳ ಫ್ಯಾಕ್ಟರಿ’ ಎಂದು ಕರೆದಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದ ಸಿಜೆಪಿ, ಜಮಾಅತ್ ಹಾದಿ ತಪ್ಪಿಸುತ್ತಿದೆ ಹಾಗೂ ಧರ್ಮವಿರೋಧಿ ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗುವಂತೆ ಜನರನ್ನು ಉತ್ತೇಜಿಸುತ್ತಿದೆ ಎಂಬಿತ್ಯಾದಿ ಇಸ್ಲಾಮೋಫೋಬಿಕ್ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿತ್ತು.

ಟಿವಿ ಕಾರ್ಯಕ್ರಮದ ಕೆಲವು ಕ್ಲಿಪ್‌ಗಳನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅವುಗಳಿಗೆ ಸಾವಿರಾರು ಲೈಕ್‌ಗಳು ವ್ಯಕ್ತವಾಗಿದ್ದವು ಮತ್ತು ಅವುಗಳನ್ನು ರಿಟ್ವೀಟ್ ಮಾಡಲಾಗಿತ್ತು. ತನ್ಮೂಲಕ ಇಂತಹ ದ್ವೇಷಗಳನ್ನು ಬಹಿರಂಗವಾಗಿ ಮಾರಾಟ ಮಾಡಲು ಮತ್ತು ಭಾರತದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಭಾವನೆಯನ್ನು ಸೃಷ್ಟಿಸಲು ಉತ್ತೇಜಿಸಲಾಗಿತ್ತು ಎಂದೂ ದೂರಿನಲ್ಲಿ ಹೇಳಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)