varthabharthi


ಕರ್ನಾಟಕ

ಬೊಮ್ಮಾಯಿಯವರೇ ಖಾಲಿ ಡಬ್ಬ ಅಲ್ಲಾಡಿಸಿ ಹೆಚ್ಚು ಸದ್ದು ಮಾಡಿದಿರಲ್ಲವೇ?: ಕಾಂಗ್ರೆಸ್ ಪ್ರಶ್ನೆ

ವಾರ್ತಾ ಭಾರತಿ : 25 Nov, 2021

ಬೆಂಗಳೂರು, ನ. 25: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಬ್ಬರದೊಂದಿಗೆ ಘೋಷಿಸಿದ ‘ರೈತ ವಿದ್ಯಾನಿಧಿ' ವಿದ್ಯಾರ್ಥಿ ವೇತನಕ್ಕೆ ಪ್ರತ್ಯೇಕ ಅರ್ಜಿ ಹಾಕುವ ವ್ಯವಸ್ಥೆಯೇ ಇಲ್ಲ, ಸಾಮಾನ್ಯ ವರ್ಗದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹೀಗಾಗಿ ಇದುವರೆಗೂ ಕೇವಲ 16 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ದೊರಕಿದೆ! ಬೊಮ್ಮಾಯಿಯವರೇ, ಇಂತಹ ಖಾಲಿ ಡಬ್ಬ ಅಲ್ಲಾಡಿಸಿ ಹೆಚ್ಚು ಸದ್ದು ಮಾಡಿದಿರಲ್ಲವೇ?' ಎಂದು ಕಾಂಗ್ರೆಸ್, ಸಿಎಂ ವಿರುದ್ಧ ಲೇವಡಿ ಮಾಡಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಲವು ದಿನಗಳಿಂದ ಡಿಎಪಿ, ಯೂರಿಯಾ ಕೊರತೆ ಎದುರಾಗಿದೆ, ಕೊರತೆಯೇ ಇಲ್ಲ ಎಂದು ಸಮರ್ಥಿಸುತ್ತಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಈಗ ನಿಧಾನಕ್ಕೆ ಕಾಂಪ್ಲೆಕ್ಸ್ ಗೊಬ್ಬರ ಬಳಸಿ ಎಂದು ಬಿಟ್ಟಿ ಸಲಹೆ ನೀಡಲು ಶುರು ಮಾಡಿದ್ದಾರೆ. ಹಸಿರು ಶಾಲು ಹಾಕಿ ಫೋಟೋಶೂಟ್ ಮಾಡಿಸುವ ಬಿ.ಸಿ.ಪಾಟೀಲ್ ಅವರೇ, ರೈತರು ಹೇಡಿಗಳಲ್ಲ, ಗೊಬ್ಬರ ಕೊಡಲಾಗದ ತಾವು ಹೇಡಿಗಳು ಅಲ್ಲವೇ?' ಎಂದು ಪ್ರಶ್ನಿಸಿದೆ.

‘ಸರಕಾರ ವಿಮಾ ಕಂಪೆನಿಗಳೊಂದಿಗೆ ಶಾಮೀಲಾಗಿ, ಕಂಪೆನಿಗಳಿಗೆ ನೆರವಾಗುವಂತೆ ನಡೆದುಕೊಳ್ಳುತ್ತಿದೆ. ವಿಮೆ ಹಣ ಕಟ್ಟಿಸಿಕೊಳ್ಳಲು ತುರ್ತಾಗಿ ಸಭೆ ನಡೆಸುವ ಆಸಕ್ತಿಯನ್ನು ರೈತರಿಗೆ ಪರಿಹಾರ ಕೊಡಿಸುವುದರಲ್ಲಿ ತೋರಿಸುತ್ತಿಲ್ಲ. ಸರಕಾರ ಕೂಡಲೇ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಕೆಲಸ ಮಾಡಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.

‘ಇಲ್ಲಿಯವರೆಗೂ ಬೆಳೆ ಹಾನಿಯ ಸಮೀಕ್ಷೆಯೇ ಆಗಿಲ್ಲ. ಸರಕಾರ ಕುಂಭಕರ್ಣ ನಿದ್ರೆಯಲ್ಲಿದೆ. 418 ಕೋಟಿ ರೂ.ಪರಿಹಾರ ಬಿಡುಗಡೆ ಮಾಡಿರುವುದಾಗಿ ಸರಕಾರ ಸುಳ್ಳು ಹೇಳುತ್ತಿದೆ. ಅಧಿಕಾರಿಗಳು ತಳಮಟ್ಟದ ಸರ್ವೆ ಮಾಡಿ ವರದಿಯನ್ನೂ ಕೊಟ್ಟಿಲ್ಲ. ಹಾಗಾಗಿ ತಕ್ಷಣ ಸಮೀಕ್ಷೆ ಮಾಡಬೇಕು ಹಾಗೂ ಪರಿಹಾರ ವಿತರಿಸಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.

‘ಕೋವಿಡ್ ಸಮಯದಲ್ಲಿ ಯಾವ ರೈತರಿಗೂ ಪರಿಹಾರ ಕೊಡಲಿಲ್ಲ, ಬೆಳೆಗೆ ಮಾರುಕಟ್ಟೆಯನ್ನೂ ಕಲ್ಪಿಸದೆ ಬಿಜೆಪಿ ಸರಕಾರ ರೈತರನ್ನು ನಡು ನೀರಿನಲ್ಲಿ ಕೈಬಿಟ್ಟಿತು. ಬಾಯಿ ಮಾತಿನಲ್ಲಿ ಘೋಷಿಸಿದ ಪರಿಹಾರ ಯಾವ ರೈತರ ಕೈಗೂ ಸೇರಲಿಲ್ಲ. ಮುಖ್ಯಮಂತ್ರಿಗಳು, ಕೋವಿಡ್ ವೇಳೆ ರೈತರಿಗೆ ಎಷ್ಟು ಪರಿಹಾರ ಕೊಡಲಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡಲಿ' ಎಂದು ಕಾಂಗ್ರೆಸ್ ಮನವಿ ಮಾಡಿದೆ.

‘ಮೂರು ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಲಕ್ಷಾಂತರ ಹೆಕ್ಟೇರ್‍ನಲ್ಲಿ ಬೆಳೆದ ಬೆಳೆ ಹಾಗೂ ಕಟಾವಿಗೆ ಬಂದ ಬೆಳೆ ನೀರುಪಾಲಾಗಿದೆ, ಜಮೀನಿನಲ್ಲೇ ಕೊಳೆಯುತ್ತಿದೆ. ಸರಕಾರ ಕೂಡಲೇ ಬೆಳೆ ನಷ್ಟವಾದ ಪ್ರತಿ ಎಕರೆಗೆ 10 ಸಾವಿರ ರೂ.ಪರಿಹಾರ ನೀಡಬೇಕು. ನಮ್ಮ ಕಾರ್ಯಕರ್ತರು ರೈತರ ಬಳಿಗೆ ಹೋಗಿ ಪರಿಹಾರವನ್ನು ಕೊಡಿಸಬೇಕು' ಎಂದು ಕಾಂಗ್ರೆಸ್ ಮನವಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)