varthabharthi


ನಿಮ್ಮ ಅಂಕಣ

​ ಹೆಸರಿನ ಗೊಂದಲ

ವಾರ್ತಾ ಭಾರತಿ : 26 Nov, 2021
-ಒಲಿವರ್ ಡಿ’ಸೋಜಾ, ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೇ ಯಾತ್ರಿ ಸಂಘ, ಮುಂಬೈ

ಮಾನ್ಯರೇ,
ಭಾರತೀಯ ರೈಲ್ವೆಯು ಮಂಗಳೂರಿನ ಪಡೀಲ್ ಎಂಬಲ್ಲಿ ಇರುವ ರೈಲು ನಿಲ್ದಾಣಕ್ಕೆ ‘ಮಂಗಳೂರು ಜಂಕ್ಷನ್’ ಎಂದು ಹೆಸರಿಸಿದೆ. ಆದರೆ ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಂಗಳೂರು ವಿಭಾಗ ಇವರು ಮಂಗಳೂರು ಜಂಕ್ಷನ್‌ನಿಂದ ಬೊಕ್ಕಪಟ್ನಕ್ಕೆ ನರ್ಮ್ ಯೋಜನೆಯಡಿ ಸಿಟಿಬಸ್ ಆರಂಭಿಸಿದೆ. ಆದರೆ ಬಸ್ಸಿನ ಫಲಕದಲ್ಲಿ ‘ಕಂಕನಾಡಿ’ ರೈಲು ನಿಲ್ದಾಣ ಎಂದು ಹೆಸರನ್ನೇ ಬದಲಾಯಿಸಿ ತಪ್ಪಾಗಿ ಬರೆದಿದೆ.

ಕೇಂದ್ರ ಸರಕಾರದ ರೈಲು ವಿಭಾಗವು ತಮ್ಮ ರೈಲ್ವೆ ನಿಲ್ದಾಣಕ್ಕೆ ನೀಡಿದ ಹೆಸರನ್ನು ರಾಜ್ಯ ಸರಕಾರದ ಸಾರಿಗೆ ನಿಗಮವು ಬದಲಾಯಿಸಬಹುದೇ? ಮಂಗಳೂರಿನಿಂದ ಈ ರೈಲು ನಿಲ್ದಾಣದ ಕಡೆ ಹೋಗುವ 9, 11, 61 ಹಾಗೂ 23 ಸಂಖ್ಯೆಯ ಖಾಸಗಿ ಸಿಟಿ ಬಸ್‌ಗಳ ಫಲಕಗಳಲ್ಲೂ ರೈಲು ನಿಲ್ದಾಣದ ಹೆಸರನ್ನು ‘ಕಂಕನಾಡಿ’ ಎಂದೇ ತಪ್ಪಾಗಿ ಬರೆದಿದ್ದು ಜಿಲ್ಲಾ ಸಾರಿಗೆ ಪ್ರಾಧಿಕಾರವಾಗಲಿ, ಸಾರಿಗೆ ಇಲಾಖೆಯಾಗಲಿ ಈ ಬಗ್ಗೆ ಗಮನ ಹರಿಸಿಲ್ಲ.

ಬಂಟ್ವಾಳದ ಲೊರೆಟ್ಟೊ ಎಂಬಲ್ಲಿನ ಹಿರಿಯ ನಾಗರಿಕರೊಬ್ಬರು ಬಾಡಿಗೆ ರಿಕ್ಷಾದಲ್ಲಿ ಕುಳಿತು (ಬಸ್ಸುಗಳಲ್ಲಿ ಬರೆದಂತೆ) ‘‘ಕಂಕನಾಡಿ ಸ್ಟೇಶನ್’’ ಎಂದರು. ರಿಕ್ಷಾ ಚಾಲಕ ಪಡೀಲ್ ದಾಟಿ ಕಂಕನಾಡಿ ತಲುಪಿದಾಗ ಎಲ್ಲಿ ಇಳಿಸಬೇಕು ಎಂದು ಕೇಳಿದಾಗ ಆ ಹಿರಿಯರು ‘‘ರೈಲು ನಿಲ್ದಾಣ’’ ಎಂದರು. ರಿಕ್ಷಾ ಚಾಲಕ ಅವರನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಿಟ್ಟ. ರೈಲು ನಿಲ್ದಾಣದ ಒಳ ಹೊಕ್ಕಾಗ ಅವರಿಗೆ ಇದು ಬೇರೆ ನಿಲ್ದಾಣವೆಂದು ಮನವರಿಕೆಯಾಯಿತು. ರಿಕ್ಷಾ ಚಾಲಕ ತಿಳಿದು ಕೂಡ ದೂರದ ರೈಲು ನಿಲ್ದಾಣಕ್ಕೆ ತಂದು ಹೆಚ್ಚುವರಿ ಬಾಡಿಗೆ ಪಡೆದದ್ದು ಅರಿವಾಯಿತು. ಕೂಡಲೇ ಅವರು ಇನ್ನೊಂದು ರಿಕ್ಷಾದಲ್ಲಿ ಮಂಗಳೂರು ಜಂಕ್ಷನ್‌ಗೆ ತಲುಪಿದಾಗ ಅವರು ಮುಂಬೈಗೆ ಪ್ರಯಾಣಿಸಬೇಕಾಗಿದ್ದ 13:55ರ ರೈಲು ಹೋಗಿಯಾಗಿತ್ತು. ಇದೀಗ ಈ ವೃದ್ಧರಿಗೆ ರಿಕ್ಷಾ ಚಾಲಕನಿಂದ ಮೋಸ, ಹಣ ಹಾಗೂ ಸಮಯ ವ್ಯರ್ಥವಾಗಲು ಈ ಎಲ್ಲಾ ಖಾಸಗಿ ಹಾಗೂ ನರ್ಮ್ ಬಸ್ಸುಗಳ ‘ಕಂಕನಾಡಿ’ ಎಂಬ ಫಲಕ ಕಾರಣವಲ್ಲವೇ? ಈ ಗೊಂದಲದಿಂದಾಗಿ ಅವರು ತಡವಾಗಿ ತಲುಪಿದ್ದರಿಂದ ರೈಲು ಹೊರಟು ಹೋಯಿತು. ಇದಕ್ಕೆ ಯಾರು ಹೊಣೆ? ರೈಲಿನ ಟಿಕೆಟ್‌ನ ಹಣವೂ ಇಲ್ಲ. ಬೇರೆ ಟಿಕೆಟ್ ಕೊಳ್ಳಲು ಅವರಲ್ಲಿ ಹಣವಿಲ್ಲ.

ಆದುದರಿಂದ ಕೂಡಲೇ ಪ್ರಾದೇಶಿಕ ಸಾರಿಗೆ ಕಚೇರಿಯು ತಪ್ಪಾದ ಹೆಸರಿನ ಫಲಕ ಪ್ರದರ್ಶನ ನಡೆಸುವ ಎಲ್ಲಾ ಖಾಸಗಿ ಹಾಗೂ ನರ್ಮ್ ಬಸ್ಸುಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)