varthabharthi


ಅಂತಾರಾಷ್ಟ್ರೀಯ

ಶೂನ್ಯ ಕೋವಿಡ್ ನೀತಿ ಕೈಬಿಟ್ಟಲ್ಲಿ ಚೀನಾದಲ್ಲಿ ಮತ್ತೆ ಕೊರೋನ ಸ್ಫೋಟ: ತಜ್ಞರ ಎಚ್ಚರಿಕೆ

ವಾರ್ತಾ ಭಾರತಿ : 28 Nov, 2021

ಬೀಜಿಂಗ್, ನ.28: ತೀವ್ರವಾಗಿ ಟೀಕೆಗೊಳಗಾಗಿರುವ ತನ್ನ ಶೂನ್ಯ ಕೋವಿಡ್ ನೀತಿಯ ಅಂಗವಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳ ಪ್ರಜೆಗಳಿಗೆ ಪ್ರವೇಶವನ್ನು ನಿಷೇಧಿಸಿರುವುದನ್ನು ಚೀನಾವು ಮುಂದಿನ ದಿನಗಳಲ್ಲಿ ಕೈಬಿಟ್ಟದ್ದೇ ಆದಲ್ಲಿ ದೇಶದಲ್ಲಿ ಕೊರೋನ ಹೆಮ್ಮಾರಿ ಮತ್ತೊಮ್ಮೆ ಸ್ಪೋಟಿಸುವ ಸಾಧ್ಯತೆಯಿದೆ ಹಾಗೂ ಪ್ರತಿ ದಿನ 6.30 ಲಕ್ಷಕ್ಕೂ ಅಧಿಕ ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಉಂಟಾಗಲಿದೆ ಎಂದು ಪೀಕಿಂಗ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯು ಎಚ್ಚರಿಕೆ ನೀಡಿದೆ.

‘‘ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ಸ್ಪೋಟಿಸುವ ನೈಜ ಸಾಧ್ಯತೆಗಳಿದ್ದು, ಖಂಡಿತವಾಗಿಯೂ ಅದು ವೈದ್ಯಕೀಯ ವ್ಯವಸ್ಥೆಗೆ ತಾಳಿಕೊಳ್ಳಲು ಸಾಧ್ಯವಾಗದಂತಹ ಹೊರೆಯನ್ನು ಹೊರಿಸಲಿದೆ’’ ಎಂದು ವರದಿ ಹೇಳಿದೆ.

ಶನಿವಾರ ಚೀನಾದಲ್ಲಿ ಕೋವಿಡ್19 ಸೋಂಕಿನ 23 ಹೊಸ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 20 ಪ್ರಕರಣಗಳು ವಿದೇಶದಿಂದ ಆಗಮಿಸಿದವರಿಗೆ ಸಂಬಂಧಿಸಿದ್ದಾಗಿವೆ. ಬೀಜಿಂಗ್ ಹಾಗೂ ಇತರ ನಗರಗಳಲ್ಲಿ ಇತ್ತೀಚೆಗೆ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದರೂ, ಅಲ್ಲೆಲ್ಲಾ ಕೋವಿಡ್19ನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸರಕಾರ ಸಫಲವಾಗಿವೆ.

2019ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ಮೊತ್ತ ಮೊದಲ ಬಾರಿಗೆ ಪತ್ತೆಯಾದ ಚೀನಾದಲ್ಲಿ ಈವರೆಗೆ 98,631 ಪ್ರಕರಣಗಳು ವರದಿಯಾಗಿವೆ ಹಾಗೂ 4636 ಮಂದಿ ಮೃತಪಟ್ಟಿದ್ದಾರೆ

ಚೀನಾದ ಪ್ರಮುಖ ಶ್ವಾಸಾಂಗ ತಜ್ಞ ರೊಂಗ್ ನಾನ್‌ಶಾನ್ ಅವರು    ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡಬಲ್ಲ ರೂಪಾಂತರಿ ಪ್ರಭೇದವಾಗಿದ್ದು, ಒಂದು ವೇಳೆ ದೇಶದಲ್ಲಿ ತಲೆ ಎತ್ತಿದಲ್ಲಿ ಅದನ್ನು ನಿಯಂತ್ರಿಸುವುದು ಅತಿ ದೊಡ್ಡ ಸವಾಲಾಗಲಿದೆಯೆಂದು ಎಚ್ಚರಿಕೆ ನೀಡಿದ್ದಾರೆ.

ಚೀನಾದ ಜನಸಂಖ್ಯೆಯ ಶೇ.76.8 ಮಂದಿಯನ್ನು ಈಗಾಗಲೇ ಲಸಿಕೀಕರಣಗೊಳಿಸಲಾಗಿದೆ. ವರ್ಷಾಂತ್ಯದೊಳಗೆ ದೇಶದಲ್ಲಿ ಸಾಮುದಾಯಿಕ ಸೋಂಕು ನಿರೋಧಕತೆಯನ್ನು ಸೃಷ್ಟಿಸಬೇಕಾದರೆ, ಶೇ.80ರಷ್ಟು ಮಂದಿಯನ್ನು ಲಸಿಕೀಕರಣಗೊಳಿಸುವ ಗುರಿಯನ್ನು ತಲುಪಬೇಕಾಗಿದೆ ಎಂದವರು ಪ್ರತಿಪಾದಿಸಿದರು.

 ಪ್ರಸಕ್ತ ವಿದೇಶದಿಂದ ಚೀನಾಗೆ ಆಗಮಿಸುವವರನ್ನು ನಿಯೋಜಿತವಾದ ಹೊಟೇಲ್‌ಗಳಲ್ಲಿ 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)