varthabharthi


ಸಂಪಾದಕೀಯ

ಹೆಚ್ಚುತ್ತಿರುವ ಅಪೌಷ್ಟಿಕತೆ ಒಡ್ಡುತ್ತಿರುವ ಸವಾಲು

ವಾರ್ತಾ ಭಾರತಿ : 29 Nov, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ದೇಶದ ಅಭಿವೃದ್ಧಿಯು ಜನಸಾಮಾನ್ಯರ ಆರೋಗ್ಯದೊಂದಿಗೆ ನೇರ ಸಂಬಂಧ ಹೊಂದಿದೆ. ಅಭಿವೃದ್ಧಿಯಲ್ಲಿ ಅಸಮತೋಲನಗಳಾದರೆ, ಜನರ ಆರೋಗ್ಯದಲ್ಲೂ ಅಸಮತೋಲನಗಳು ಕಾಣಿಸತೊಡಗುತ್ತವೆ. ಸದ್ಯದ ದಿನಗಳಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮತೋಲನದಿಂದಾಗಿ, ದುರ್ಬಲ ಅಡಿಪಾಯದಲ್ಲಿ ಕಟ್ಟುತ್ತಿರುವ ಗಗನ ಚುಂಬಿ ಕಟ್ಟಡದಂತಿದೆ ಭಾರತದ ಅಭಿವೃದ್ಧಿ. ತಲೆ ಮಾತ್ರ ಬೆಳೆದು ಪೀಚಲು ದೇಹವನ್ನು ಹೊಂದಿದ ಮಗುವಿಗೂ ಇದನ್ನು ಹೋಲಿಸಬಹುದು. ಅದಾನಿ ವಿಶ್ವಕ್ಕೆ ನಂ. 1 ಶ್ರೀಮಂತನಾಗಿ ಗುರುತಿಸಿಕೊಳ್ಳುತ್ತಿದ್ದರೆ, ಭಾರತದ ತಳಸ್ತರದ ಜನರಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚುತ್ತಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆಗೊಳಿಸಿರುವ ಐದನೇ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಪೌಷ್ಟಿಕತೆ ಹಾಗೂ ಆರೋಗ್ಯ ಸೂಚಕಗಳ ಬಗ್ಗೆ ಕಳವಳಕಾರಿ ವಿಷಯಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಎತ್ತರಕ್ಕೆ ತಕ್ಕ ತೂಕವನ್ನು ಹೊಂದದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು 2015-16ನೇ ಸಾಲಿನಲ್ಲಿ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳ ಪೈಕಿ ಶೇ.7.5 ರಷ್ಟಿದ್ದರೆ 2019-21ನೇ ಸಾಲಿನಲ್ಲಿ ಆ ಸಂಖ್ಯೆಯು ಶೇ.7.7ಕ್ಕೇರಿದೆ. ರಕ್ತ ಹೀನತೆಯು ದೇಶದ ಜನರ ಕಳಪೆ ಪೌಷ್ಟಿಕತೆಯ ಮಟ್ಟಕ್ಕೆ ಇನ್ನೊಂದು ಸೂಚಕವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರ ಪೈಕಿ 15ರಿಂದ 49 ವರ್ಷ ವಯಸ್ಸಿನ ಪುರುಷರು ಹಾಗೂ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯುಂಟಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬರು ಅಥವಾ ಶೇ.57ಮಂದಿ ಮಹಿಳೆಯರು ಮತ್ತು ಪ್ರತಿ ನಾಲ್ವರು ಪುರುಷರಲ್ಲಿ ಓರ್ವ ರಕ್ತ ಹೀನತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ವಯಸ್ಕರಲ್ಲಿಯೂ ಬೊಜ್ಜುತನ ಹೆಚ್ಚಾಗುತ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.22.9 ಮಂದಿ ಪುರುಷರು ಹಾಗೂ ಶೇ.24ರಷ್ಟು ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು 2015ರಲ್ಲಿ ಇದ್ದುದಕ್ಕಿಂತ ಕ್ರಮವಾಗಿ ಶೇ. 18.9 ಹಾಗೂ ಶೇ.20.6 ಆಗಿದೆ. ಬೊಜ್ಜುತನವು ಶ್ವಾಸಕೋಶದ ಕಾರ್ಯಕ್ಕೆ ಅಡ್ಡಿಪಡಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುವ ಮೂಲಕ ತೀವ್ರವಾದ ಕೋವಿಡ್-19 ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ರೋಗ ನಿಯಂತ್ರಣ ದತ್ತಾಂಶ ಕೇಂದ್ರದ ಪ್ರಕಾರ 2020ರಲ್ಲಿ ಶೇ.30.2 ಮಂದಿ ಕೋವಿಡ್-19 ಸೋಂಕಿತರು ಬೊಜ್ಜಿನ ಕಾರಣದಿಂದಾಗಿಯೇ ಆಸ್ಪತ್ರೆ ಸೇರುವಂತಾಯಿತು ಎನ್ನಲಾಗಿದೆ.

ಒಂದೆಡೆ ಅಪೌಷ್ಟಿಕತೆ, ಇನ್ನೊಂದೆಡೆ ಬೊಜ್ಜು ಎರಡೂ ವಿರೋಧಾಭಾಸಗಳು ಭಾರತದ ಆರೋಗ್ಯ ಅಸಮತೋಲನಗಳಿಗೆ ಹಿಡಿದ ಕನ್ನಡಿಯೂ ಹೌದು. ವಿಶೇಷವಾಗಿ ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಶೇ.10ರಷ್ಟು ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳ ದೇಹತೂಕದಲ್ಲಿ ತೀವ್ರ ಇಳಿಕೆಯುಂಟಾಗಿದ್ದರೆ ಕೇಂದ್ರಾಡಳಿತ ಚಂಡಿಗಡದಲ್ಲಿ ಈ ಪ್ರಮಾಣವು ಶೇ.3ರಷ್ಟಿದ್ದು ದೇಶದಲ್ಲಿ ಅತ್ಯಂತ ಕನಿಷ್ಠವಾಗಿದೆ. ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದೇಶದಲ್ಲೇ ಗರಿಷ್ಠವಾಗಿದೆ. ಕನಿಷ್ಠ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಾಗಿ ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಲ್ಲಿ ಗಣನೀಯವಾದ ತೂಕ ಇಳಿಕೆ ಕಂಡುಬಂದಿದೆ. ಲಡಾಖ್, ಲಕ್ಷದ್ವೀಪ, ತೆಲಂಗಾಣ, ನಾಗಾಲ್ಯಾಂಡ್ ಹಾಗೂ ಮಿಜೋರಾಂಗಳಲ್ಲಿ 2015-16ರಿಂದೀಚೆಗೆ ಈ ಸಂಖ್ಯೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ.

ಮಕ್ಕಳ ಒಟ್ಟಾರೆ ಪೌಷ್ಟಿಕ ಆಹಾರ ಮಟ್ಟವು ತೀರಾ ಕಳಪೆಯಾಗಿರುವುದನ್ನು ಈ ಸಮೀಕ್ಷೆಯು ಪ್ರತಿಬಿಂಬಿಸಿದೆ. ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬೊಜ್ಜುತನವು ಶೇ.3.4ರಷ್ಟು ಹೆಚ್ಚಳವಾಗಿದ್ದು, ಇದು 2015-16ರಲ್ಲಿ ಇದ್ದುದಕ್ಕಿಂತ ಶೇ.2.1ರಷ್ಟು ಹೆಚ್ಚಾಗಿದೆ. ಭಾರತದಾದ್ಯಂತ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕರಲ್ಲಿ ರಕ್ತಹೀನತೆ ಪ್ರಮಾಣವು ತೀರಾ ಹೆಚ್ಚಿವೆ. ಎಲ್ಲಾ ವಯೋಮಾನದ ಮಕ್ಕಳಲ್ಲಿಯೂ ಅದು ಹೆಚ್ಚಾಗುತ್ತಿದೆ. ಐದು ವರ್ಷಗಳಿಗಿಂತ ಕೆಳಗಿನ ಶೇ.67.1ರಷ್ಟು ಮಕ್ಕಳು ರಕ್ತಹೀನತೆ (ಅನಿಮೀಯಾ)ಯಿಂದ ಬಾಧಿತರಾಗಿರುವುದು ಕಂಡುಬಂದಿದೆ. ಲಡಾಖ್, ಅಸ್ಸಾಂ, ಛತ್ತೀಸ್‌ಗಡ, ತ್ರಿಪುರಾ, ಮಿಜೋರಾಂ, ಜಮ್ಮು-ಕಾಶ್ಮೀರ ಹಾಗೂ ಒಡಿಶಾಗಳಲ್ಲಿ ಅನಿಮೀಯಾ ಪೀಡಿತ ಮಹಿಳೆಯರ ಸಂಖ್ಯೆಯು ಶೇ.10ರಿಂದ 15ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ಉತ್ತಮ ಆಹಾರ ಬಲಿಷ್ಠ ಪ್ರಜೆಗಳನ್ನು ನಿರ್ಮಾಣ ಮಾಡುತ್ತದೆ. ಬಲಿಷ್ಠ ಪ್ರಜೆಗಳೇ ಬಲಿಷ್ಟ ದೇಶವನ್ನು ನಿರ್ಮಿಸಬಲ್ಲರು. ಜನಸಂಖ್ಯೆ ಭಾರತದ ಸಂಪತ್ತು. ಅದು ರೋಗಗ್ರಸ್ತವಾದರೆ ದೇಶವೂ ನಿಧಾನಕ್ಕೆ ರೋಗಗ್ರಸ್ತವಾಗುತ್ತದೆ. ಸದ್ಯದ ಕೊರೋನ ಮತ್ತು ಲಾಕ್‌ಡೌನ್ ದಿನಗಳು ಜನಸಾಮಾನ್ಯರ ಆಹಾರವನ್ನು ಇನ್ನಷ್ಟು ಕಳಪೆಗೊಳಿಸಿದೆ. ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಸರ್ವಜನರ ಹಕ್ಕಾಗಿದೆ. ಇದೇ ಸಂದರ್ಭದಲ್ಲಿ ಬೊಜ್ಜಿಗೆ ಕಾರಣವಾಗುವ ಅತಿ ಆಹಾರ ಸೇವನೆ, ಜಂಕ್ ಫುಡ್ ಸೇವನೆಗಳಿಚಗೂ ಕಡಿವಾಣ ಹಾಕಬೇಕಾಗಿದೆ. ಕೃತಕ ಆಹಾರಗಳಿಗೂ ನಿಯಂತ್ರಣದ ಅಗತ್ಯವಿದೆ. ಆಹಾರವನ್ನು ವ್ಯರ್ಥಗೊಳಿಸದೆ ಅದನ್ನು ಸರ್ವರಿಗೆ ಹಂಚುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್ ಸಾಮುದಾಯಿಕ ಪಾಕಶಾಲೆಯ ಅಗತ್ಯವನ್ನು ಸರಕಾರಕ್ಕೆ ಒತ್ತಿ ಹೇಳಿತ್ತು. ಲಾಕ್‌ಡೌನ್‌ನಲ್ಲಿ ಇದು ತುರ್ತಾಗಿ ಜಾರಿಗೊಳ್ಳಬೇಕಾಗಿದೆ. ಜೊತೆ ಜೊತೆಗೆ ಆಹಾರ ಪೋಲನ್ನು ತಡೆದು, ಪೋಲಾಗುವ ಆಹಾರವನ್ನು ಅರ್ಹರಿಗೆ ತಲುಪಿಸುವುದಕ್ಕೆ ಯೋಜನೆಯೊಂದನ್ನು ಸರಕಾರ ರೂಪಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)