varthabharthi


ನಿಮ್ಮ ಅಂಕಣ

ತೋರಿಕೆಯ ಪಲ್ಲಟಗಳು ಮತ್ತು ಆಕಾಶವಾಣಿ

ವಾರ್ತಾ ಭಾರತಿ : 29 Nov, 2021
-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು

ಮಾನ್ಯರೇ,

ಕನ್ನಡದ ಪತ್ರಿಕೆಗಳಿಗೆ ನಾನು ಹಳೆಯ ಓದುಗನಾಗಿರುವಂತೆ ಆಕಾಶವಾಣಿಗೆ ಚಿಕ್ಕಂದಿನಿಂದಲೂ ಅಂದರೆ ಸುಮಾರು 60 ವರ್ಷಗಳಿಂದಲೂ ಕೇಳುಗನಾಗಿ ಬೆಳೆದವನು. ಈ ಅವಧಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಗಳಾಗಿರುವಂತೆ ಆಕಾಶವಾಣಿಯ ಕಾರ್ಯಕ್ರಮಗಳಲ್ಲೂ ಅನೇಕ ಬದಲಾವಣೆಗಳಾಗಿರುವುದು ಸಹಜವೇ. ಆದರೆ ಈಚಿನ ವರ್ಷಗಳಲ್ಲಿ ಆಗುತ್ತಿರುವ ಪಲ್ಲಟಗಳು ನನಗೆ ಹೆಚ್ಚು ಪರಿಚಿತವಾಗಿರುವ ಮೈಸೂರು ಆಕಾಶವಾಣಿಯ ಕಾರ್ಯಕ್ರಮಗಳ ಆಧಾರದಿಂದ ಹೇಳುವುದಾದರೆ, ಅನೇಕ ಕಾರಣಗಳಿಗಾಗಿ ಆತಂಕ ಹುಟ್ಟಿಸುವಂತಿವೆ.
ಈ ಪಲ್ಲಟಗಳನ್ನು ಸಂಗ್ರಹವಾಗಿ ಪಟ್ಟಿಮಾಡುವುದಾದರೆ:

1. ಹಿಂದೆಲ್ಲಾ ಬೆಳಗಿನ ಗೀತಾರಾಧನೆ, ಕಾರ್ಯಕ್ರಮದಡಿಯಲ್ಲಿ ಭಕ್ತಿಗೀತೆಗಳು, ಕೀರ್ತನೆಗಳು, ಸಮಾಜದ ಕೊಳಕನ್ನು ಟೀಕಿಸುವ ದಾಸರ ಪದಗಳು, ವೈಚಾರಿಕ ಮತ್ತು ಸುಧಾರಕ ಆಶಯಗಳ ವಚನಸಾಹಿತ್ಯ ಮುಂತಾಗಿ ವೈವಿಧ್ಯಮಯ ಸಂಗೀತ, ಜೊತೆಗೆ ಶುಕ್ರವಾರಗಳಂದು ಮುಸ್ಲಿಮರ ಹಂದೋನಾತ್, ರವಿವಾರಗಳಂದು ಕ್ರಿಸ್ತ ಸಂಕೀರ್ತನೆಗಳು ಪ್ರಸಾರವಾಗುತ್ತಿದ್ದವು.
ಈಗ ಸೋಮವಾರ ಈಶ್ವರ, ಮಂಗಳವಾರ ಶಕ್ತಿದೇವತೆ, ಬುಧವಾರ ಗಣೇಶ, ಗುರುವಾರ ರಾಘವೇಂದ್ರ, ಶುಕ್ರವಾರ ಲಕ್ಷ್ಮೀ, ಶನಿವಾರ ವೆಂಕಟೇಶ್ವರ ಹೀಗೆ ವಾರಕ್ಕೊಂದು ದೇವರಿಗೆ ಮೀಸಲಿರಿಸಿದ ಸ್ತುತಿಗೀತೆ, ಸುಪ್ರಭಾತ, ಸ್ತೋತ್ರಪಠನೆಗಳು, ಅವುಗಳ ಪಠ್ಯಗಳ ಗುಣಾತ್ಮಕತೆಗೆ ಲವಲೇಶವೂ ಗಮನಹರಿಸದೆ ಪ್ರಸಾರಗೊಳ್ಳುತ್ತಿವೆ. ಕಾಟಾಚಾರಕ್ಕೆಂಬಂತೆ ಎರಡು ದಿನ, ಒಂದೆರಡು ನಿಮಿಷಗಳ ಕಾಲ ಹಂದೋನಾತ್ ಮತ್ತು ಕ್ರಿಸ್ತಸಂಕೀರ್ತನೆಗಳೂ ಕೇಳಿಬರುತ್ತವೆ.
 ಈ ಮಧ್ಯೆ ರಾಷ್ಟ್ರಮಾತೆ, ನಾಡದೇವಿಯನ್ನು ಕೀರ್ತಿಸುವ ದೇಶಭಕ್ತಿಗೀತೆಗಳು ನಿಧಾನವಾಗಿ, ದೇವ-ದೇವತೆಗಳನ್ನು ಸ್ತುತಿಸುವ ಭಕ್ತಿಸಂಗೀತದೊಳಕ್ಕೆ ತೂರಿಕೊಳ್ಳುತ್ತಿವೆ. ದೈವಭಕ್ತಿಯು ದೇಶಭಕ್ತಿಯಾಗಿ, ದೇಶಭಕ್ತಿಯೇ ದೈವಭಕ್ತಿ ಎಂಬ ಏಕಾಕಾರದತ್ತ ಸಾಗುತ್ತಿವೆ.

2. 'ಸಾವಯವದ ಎಲ್ಲ ಮಗ್ಗಲುಗಳನ್ನು ಪರಿಚಯಿಸುವ ಕಾರ್ಯಕ್ರಮ' ಎಂದು ಕೃಷಿ, ಗೊಬ್ಬರ, ಬೀಜ, ಆರೋಗ್ಯ ಮುಂತಾದವುಗಳ ಜೊತೆಗೆ ಕಾರ್ಯಕ್ರಮ ನಿರ್ವಾಹಕರಿಗೆ ಇಷ್ಟವಾದ 'ಏನನ್ನು ಬೇಕಾದರೂ ತೂರಿಸಬಹುದು' ಎನ್ನುವಂತಹ ಪ್ರಶ್ನಾರ್ಹ ವಿಧಾನಗಳಲ್ಲಿ, ವೈಯಕ್ತಿಕವಾಗಿ ನಿರ್ವಾಹಕರಿಗೆ ಪ್ರಿಯವಾದ ವಿಷಯಗಳನ್ನು ಮೈಸೂರು, ಬೆಂಗಳೂರು, ತುಮಕೂರು, ಸಿರಸಿ, ಸಿದ್ದಾಪುರ, ಸಾಗರ, ತೀರ್ಥಹಳ್ಳಿ, ಧಾರವಾಡ ಮೊದಲಾದ ಊರುಗಳಲ್ಲಿರುವ 'ಪರಿಣಿತ'ರಿಂದ ಸಂಗ್ರಹಿಸಲಾಗುತ್ತಿದೆ. ಅವಕ್ಕೆ ಕಾರ್ಯಕ್ರಮ ನಿರ್ವಾಹಕರು ತಮ್ಮದೇ ಆದ ವಿವರಣೆ, ಟಿಪ್ಪಣಿ, ಸ್ಪಷ್ಟನೆಗಳ ತೇಪೆಹಾಕಿ, ಮಧ್ಯೆ ಮಧ್ಯೆ ಪ್ರಶ್ನೆಗಳನ್ನು ಸೇರಿಸಿ ಸಂದರ್ಶನವೆಂಬಂತೆ ಹೆಣೆದ ಕಾರ್ಯಕ್ರಮಗಳು ದಿನಕ್ಕೆರಡು ಬಾರಿ ಪ್ರಸಾರಗೊಳ್ಳುತ್ತಿವೆ. ಅವಕ್ಕೆ, ಬಹುಶಃ ನನ್ನಂತಹವರಿಗೆಂದು, ಅಂಟಿಸಿದ 'ಸಾವಯವ ಒಂದು ಪಂಥವಲ್ಲ, ಪಥ' ಎಂಬ ಸ್ಪಷ್ಟೀಕರಣ ಬೇರೆ.

3. ಬೆಳಕಿಗೆ ಬಾರದ 'ಚರಿತ್ರೆ'ಯನ್ನು 'ಬೆಳಕಿಗೆ ತರುವ' ಘೋಷಿತ ಉದ್ದೇಶದ ಕಾರ್ಯಕ್ರಮದ ಜೊತೆಯಲ್ಲಿ ಪೌರಾಣಿಕ ಮತ್ತು ಧಾರ್ಮಿಕ ನಂಬಿಕೆಯ ವಿವರಗಳನ್ನು 'ಇನ್ನೊಂದು ಮುಖದ' ಹೆಸರಿನಲ್ಲಿ ಜಾಣತನದಲ್ಲಿ ತೂರಿಸಿ ಹೆಣೆದ ಕಾರ್ಯಕ್ರಮಗಳು ಇತ್ತೀಚಿನ ಕರ್ನಾಟಕದ ಆಕಾಶವಾಣಿಗೆ ''ಮೈಸೂರು ಕೇಂದ್ರದ ಕೊಡುಗೆಗಳು'' ಎಂದು ದಿನಕ್ಕೆರಡು ಬಾರಿ ಪ್ರಸಾರಗೊಳ್ಳುತ್ತಿವೆ.

4. ಕೇವಲ ಐದಾರು ನಿಮಿಷದ ಅವಧಿಯಲ್ಲಿ ವಿವಿಧ ಜೀವನ ಶೈಲಿಯ, ನಂಬಿಕೆಯ, ದೃಷ್ಟಿಕೋನದ ಮತ್ತು ವಿಚಾರಗಳ ಅಭಿವ್ಯಕ್ತಿಗೆ ಅವಕಾಶವನ್ನೊದಗಿಸುತ್ತಿದ್ದ 'ಚಿಂತನೆ' ಆಕಾಶವಾಣಿಯಿಂದ ಮಾಯವಾಗಿದೆ.

ಈ ಪಲ್ಲಟಗಳು ತಮ್ಮಷ್ಟಕ್ಕೇ ಆತಂಕಕಾರಿಯಲ್ಲ. ಕಪ್ಪೆಯನ್ನೇ ಕುದಿನೀರಿಗೆ ಹಾಕಿ ಕೊಲ್ಲುವ ಬದಲು ಅದನ್ನು ನೀರಿನ ಪಾತ್ರೆಯಲ್ಲಿಟ್ಟು ಕಾಯಿಸುತ್ತಾ ಹೋಗುವ ವಿಧಾನ ಈ ಪಲ್ಲಟಗಳ ಹಿಂದೆ ಕಂಡೂ ಕಾಣದಂತೆ ಇದೆ ಎಂಬುದು ನನ್ನ ಆತಂಕಕ್ಕೆ ಕಾರಣ. 'ವೈವಿಧ್ಯದಲ್ಲಿ ಏಕತೆ'ಯ ಬದಲು ವೈವಿಧ್ಯದಿಂದ ಏಕಾಕಾರಕ್ಕೆ ಕೊಂಡೊಯ್ಯುತ್ತಿರುವ, ರಾಜಕೀಯವನ್ನು ಸಾಂಸ್ಕೃತಿಕ ಚೌಕಟ್ಟುಗಳೊಳಕ್ಕೆ ತೂರಿಸುತ್ತಿರುವ ನಯವಂಚನೆ ಈ ಪಲ್ಲಟಗಳಲ್ಲಿದೆ ಎಂಬುದು ನನ್ನ ಆತಂಕ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)