varthabharthi


ವೈವಿಧ್ಯ

‘ಒನ್ ಚೈಲ್ಡ್ ನೇಶನ್’ ಸಾಕ್ಷ್ಯಚಿತ್ರ: ಚೀನಾದ ಅಮಾನುಷ ಯೋಜನೆಯ ಘೋರ ಅನಾವರಣ

ವಾರ್ತಾ ಭಾರತಿ : 1 Dec, 2021
-ಆರ್.ಎನ್

ಭಾರತದಲ್ಲಿ ‘ಒಂದು ಕುಟುಂಬ, ಒಂದು ಮಗು’ ತೀವ್ರ ಚರ್ಚೆಯಲ್ಲಿದೆ. ದೇಶದ ಜನಸಂಖ್ಯಾ ಸ್ಫೋಟವನ್ನು ತಡೆಯುವುದಕ್ಕೆ ಈ ನೀತಿಯನ್ನು ಜಾರಿಗೆ ತರುವ ಕುರಿತಂತೆ ಉತ್ತರ ಪ್ರದೇಶ ಚಿಂತನೆ ನಡೆಸುತ್ತಿದೆ. ಚೀನಾದಲ್ಲಿ ವಿಫಲವಾದ ನೀತಿಯನ್ನು ಭಾರತವೀಗ ಅನುಷ್ಠಾನಗೊಳಿಸುವ ಉತ್ಸಾಹದಲ್ಲಿದೆ. ಆದರೆ ಈ ಒಂದು ಕಾನೂನು ಚೀನಾದಲ್ಲಿ ಮಾಡಿದ ಅನಾಹುತಗಳನ್ನು ‘ಒನ್ ಚೈಲ್ಡ್ ನೇಶನ್’ ಸಾಕ್ಷ್ಯ ಚಿತ್ರ ತೆರೆದಿಡುತ್ತದೆ. ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿರುವ ಈ ಸಾಕ್ಷ ಚಿತ್ರ, ಹೇಗೆ ಹಸುಕಂದಮ್ಮಗಳ ಭೀಕರ ಹತ್ಯಾಕಾಂಡವನ್ನೇ ನಡೆಸಿತು ಎನ್ನುವುದನ್ನು ತೆರೆದಿಡುತ್ತದೆ.

1975ರಲ್ಲಿ ಆರಂಭವಾದ ಚೀನಾದ ‘ಒಂದೇ ಮಗು ನೀತಿ’ಯು 2015ರಲ್ಲಿ ಅಂತ್ಯವನ್ನು ಕಂಡಿತು. (ಆ ಬಳಿಕ ಜಾರಿಗೆ ಬಂದ ಎರಡು ಮಗು ನೀತಿಯು ಈಗಲೂ ಅಸ್ತಿತ್ವದಲ್ಲಿದೆ). ಆದರೆ ಚೀನಾ ಆಡಳಿತದ ಈ ನೀತಿಯು ಎಷ್ಟೊಂದು ಕ್ರೌರ್ಯಭರಿತವಾಗಿತ್ತು ಹಾಗೂ ದುರಂತಮಯ ಪ್ರಯೋಗವಾಗಿತ್ತು ಎಂಬ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಸಾಕ್ಷಚಿತ್ರ (ಡಾಕ್ಯೂಮೆಂಟರಿ) ‘ಒನ್ ಚೈಲ್ಡ್ ನೇಶನ್’ ಮನಮುಟ್ಟುವಂತೆ ತೋರಿಸಿದೆ. ಸರಕಾರದ ಹಸ್ತಕ್ಷೇಪ, ಆಡಳಿತದಿಂದ ಕುಟುಂಬಗಳ ಮೇಲೆ ಬೃಹತ್ ಪ್ರಮಾಣದಲ್ಲಿ ನಯವಂಚನೆಯ ದೌರ್ಜನ್ಯಗಳಿಂದ ಉಂಟಾದ ಪರಿಣಾಮಗಳಿಂದಾಗಿ ಜನಸಾಮಾನ್ಯರಿಗೆ ಚೇತರಿಸಿಕೊಳ್ಳಲು ಇನ್ನೂ ಸಾಧ್ಯವಾಗದಿರುವ ಬಗ್ಗೆ ಈ ಸಾಕ್ಷ ಚಿತ್ರವು ಬೆಳಕು ಚೆಲ್ಲಿದೆ.

ಈ ಸಾಕ್ಷ ಚಿತ್ರದ ನಿರ್ದೇಶಕರಾದ ಝಾಂಗ್ ಲಿನ್ ಹಾಗೂ ನಾನ್ಫು ವಾಂಗ್ ಇವರಿಬ್ಬರೂ ಸ್ವತಃ ಚೀನಾ ಸರಕಾರದ ಒಂದೇ ಶಿಶು ನೀತಿಯ ಉತ್ಪನ್ನವಾಗಿದ್ದಾರೆ. ಈ ನೀತಿಯ ಅನುಷ್ಠಾನದ ಆರಂಭದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲು ಜನಿಸಿದ ಮಗು ಹೆಣ್ಣಾಗಿದ್ದಲ್ಲಿ ಎರಡನೇ ಮಗುವಿನ ಜನನಕ್ಕೆ ಅವಕಾಶ ನೀಡುವಂತಹ ಮೃದು ನಿಲುವಿನಿಂದಾಗಿ ತನ್ನ ಕುಟುಂಬಕ್ಕೆ ಪ್ರಯೋಜನವಾಗಿದೆ ಎಂಬುದನ್ನು ನಾನ್ಫು ಒಪ್ಪಿಕೊಳ್ಳುತ್ತಾರೆ. ಆದರೆ ಇದರಿಂದಾಗಿ ಘೋರ ರೂಪದ ಲಿಂಗತಾರತಮ್ಯವಾದವು ಸಮಾಜದಲ್ಲಿ ಬಲವಾಗಿ ಬೇರೂರಿತು.

ಹಲವಾರು ತಲೆಮಾರುಗಳ ಮಹಿಳೆಯರು ತಾವು ಕೀಳೆಂದು ತಮ್ಮನ್ನು ತಾವೇ ಭಾವಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ಮಾಡಿತು. ಅಲ್ಲದೆ ಆಡಳಿತದ ಪರೋಕ್ಷ ಸಮ್ಮತಿಯ ಶಿಶುಹತ್ಯೆ ಹಾಗೂ ಮಕ್ಕಳ ಕಳ್ಳಸಾಗಾಟದ ಮಾರುಕಟ್ಟೆ ಶಕ್ತಿಗಳನ್ನು ಸೃಷ್ಟಿಸಿತು. ಹೆಣ್ಣು ಶಿಶುಗಳನ್ನು ತ್ಯಜಿಸುವುದು ಅಥವಾ ಅವರನ್ನು ಅನಾಥಾಶ್ರಮಗಳಿಗೆ ಮಾರಾಟ ಮಾಡುವುದು ಸಾಮಾನ್ಯವಾಗತೊಡಗಿತು. ಈ ನತದೃಷ್ಟ ಮಕ್ಕಳನ್ನು ಈ ಅನಾಥಾಲಯಗಳು ಪಾಶ್ಚಾತ್ಯ ದೇಶಗಳ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿರುವುದನ್ನು ಸಾಕ್ಷಚಿತ್ರದಲ್ಲಿ ದಂಗುಬಡಿಸುವ ರೀತಿಯಲ್ಲಿ ತೋರಿಸಲಾಗಿದೆ.

ಈ ಮಧ್ಯೆ ಒಂದೇ ಮಗುವಿನ ಕುಟುಂಬದ ನೀತಿಯು ಮಾದರಿಯೆಂಬುದಾಗಿ ಬಿಂಬಿಸಲು ವ್ಯವಸ್ಥಿತವಾದ ಪ್ರಚಾರವನ್ನು ನಡೆಸುತ್ತಾ ಬರಲಾಯಿತು. ಇಸ್ಪೀಟ್ ಕಾರ್ಡ್ ಗಳು, ಸ್ಟಿಕ್ಕರ್, ಪೋಸ್ಟರ್‌ಗಳು ಹಾಗೂ ಪ್ರವಾಸಿ ನಾಟಕ ಅಪೇರಾ ಪ್ರದರ್ಶನಗಳಲ್ಲಿ ಈ ನೀತಿಯ ವೈಭವೀಕರಣ ನಡೆಯಿತು. ಈ ನೀತಿಯ ವಿರುದ್ಧ ತಮ್ಮ ನೋವನ್ನು ಹೊರಹಾಕಲು ಪೆಂಗ್‌ವಾಂಗ್ ಅವರ ‘ದಿ ಥಾಟ್ಸ್ ಆಫ್ ಚೇರ್‌ಮನ್ ಮಾವೊ’ ನಂತಹ ವಿಡಂಬನಾತ್ಮಕ ಕಲಾಕೃತಿಯಲ್ಲಿ ಪುಟ್ಟ ಕೆಂಪು ಪುಸ್ತಕವೊಂದರ ಪ್ರತಿ ಪುಟದಲ್ಲಿಯೂ ಗರ್ಭಪಾತ ಮಾಡಲಾದ ಭ್ರೂಣಗಳ ಭಯಾನಕ ರೀತಿಯಲ್ಲಿ ಮೂಡಿಸಲಾಗಿರುವುದನ್ನು ‘ಒನ್ ಚೈಲ್ಡ್ ನೇಶನ್’ನಲ್ಲಿ ಸಾಂಕೇತಿಕವಾಗಿ ತೋರಿಸಲಾಗಿದೆ. (ಈ ಸಾಕ್ಷ ಚಿತ್ರದ ಒಂದು ಭಾಗದಲ್ಲಿ ತ್ಯಾಜ್ಯರಾಶಿಯಲ್ಲಿ ಎಸೆಯಲ್ಪಟ್ಟ ಭ್ರೂಣಗಳ ಛಾಯಾಚಿತ್ರಗಳನ್ನು ತೋರಿಸಲಾಗಿದ್ದು, ಎದೆ ಝಲ್ಲೆನ್ನುವಷ್ಟು ಭೀಕರವಾಗಿದೆ).

ಅಮೆರಿಕದಲ್ಲಿ ನೆಲೆಸಿರುವ ನಾನ್ಫು ಜಟಿಲವಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರೊಂದಿಗೆ ಮುಖಾಮುಖಿಯಾಗಲು ತನ್ನ ಊರಿಗೆ ಆಗಮಿಸುತ್ತಾರೆ, ತನ್ನನ್ನು ದತ್ತುಪಡೆದ ನಾಡಾದ ಅಮೆರಿಕದಲ್ಲಿಯೂ ಕೆಲವರು ಮಹಿಳೆಯರನ್ನು ಅವರ ಆಯ್ಕೆಯ ಅವಕಾಶಗಳಿಂದ ವಂಚಿತರನ್ನಾಗಿಸುತ್ತಿರುವ ವಿಪರ್ಯಾಸದ ಕುರಿತಾಗಿಯೂ ಆಕೆ ನೋವು ವ್ಯಕ್ತಪಡಿಸುತ್ತಾರೆ. ಆದರೆ ಚೀನಾದ ಏಕ ಮಗು ನೀತಿಯನ್ನು ಆಕೆಯ ತಾಯಿ ಬಲವಾಗಿ ಸಮರ್ಥಿಸುತ್ತಾರೆ. ಚೀನಾಕ್ಕೆ ಒಂದೇ ಮಗು ನೀತಿಯು ಅನಿವಾರ್ಯ ಅಗತ್ಯವಾಗಿದೆ. ಇಲ್ಲದೇ ಇದ್ದಲ್ಲಿ ಚೀನಾವು ನರಭಕ್ಷಣೆಯ ದೇಶವಾಗಿ ಬದಲಾಗಬೇಕಿತ್ತೆಂದು ನಾನ್ಫು ಅವರ ತಾಯಿ ಪ್ರತಿಪಾದಿಸುತ್ತಾರೆ.

ಏಕ ಮಗು ನೀತಿಯಿಂದಾಗಿ ದೊರೆಯುವ ಮಾನದಂಡಾತ್ಮಕ ಪ್ರಯೋಜನಗಳು ಅಥವಾ ಈ ಬರ್ಬರ ನೀತಿಯ ದುಷ್ಪರಿಣಾಮಗಳ ಕುರಿತು ನಾನು ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಕೇಳಲಿಚ್ಛಿಸುತ್ತೇನೆ. ಆದರೆ ಈ ಅನಿಸಿಕೆಗಳೇನಾದರೂ ಇದ್ದರೂ ಈ ಸಾಕ್ಷಚಿತ್ರದ ತೀವ್ರತೆಗೆ ಇದರಿಂದ ಕಿಂಚಿತ್ತಾದರೂ ಕುಂದನ್ನುಂಟು ಮಾಡಲಾರದು. ‘ಒನ್ ಚೈಲ್ಡ್ ನೇಶನ್’ ಸಾಕ್ಷ ಚಿತ್ರವನ್ನು ನೀವು ಅಮೆಝಾನ್ ಪ್ರೈಮ್‌ನಲ್ಲಿ ನೋಡಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)