varthabharthi


ವಿಶೇಷ-ವರದಿಗಳು

ನೋಟು ನಿಷೇಧ, ಜಿಎಸ್ಟಿ ಮತ್ತು ಲಾಕ್ಡೌನ್: ಮೋದಿ ಸರಕಾರವು ಭಾರತದ ಸಣ್ಣ ಉದ್ಯಮಗಳನ್ನು ನಾಶಗೊಳಿಸಿದ್ದು ಹೇಗೆ...?

ವಾರ್ತಾ ಭಾರತಿ : 1 Dec, 2021
ಪ್ರಿಯ ದರ್ಶಿನಿ, ಆಶಿಷ್ ಕಜ್ಲಾ, ಅನಿರ್ಬನ್ ಭಟ್ಟಾಚಾರ್ಯ - scroll.in

ಹೊಸದಿಲ್ಲಿ: ಕೇಂದ್ರದ ನರೇಂದ್ರ ಮೋದಿ ಸರಕಾರದ ನೋಟು ನಿಷೇಧ, ಜಿಎಸ್ಟಿ ಮತ್ತು ಲಾಕ್ಡೌನ್ ಕ್ರಮಗಳು ದೇಶದ ಸಣ್ಣ ಉದ್ಯಮಗಳ ಬೆನ್ನೆಲುಬನ್ನೇ ಮುರಿದಿವೆ. ನೋಟು ನಿಷೇಧದ ಐದು ವರ್ಷಗಳ ಹಿನ್ನೋಟದ ಕುರಿತು ವರದಿಯೊಂದನ್ನು ಸುದ್ದಿ ಜಾಲತಾಣ (Scroll.in) ಪ್ರಕಟಿಸಿದ್ದು,ಅದರ ಸಂಕ್ಷಿಪ್ತ ಸಾರಾಂಶವಿಲ್ಲಿದೆ.

ಕಳೆದ ಐದು ವರ್ಷಗಳ ಅವಧಿ ಭಾರತದ ಸಣ್ಣ ಉದ್ಯಮಗಳು ಮತ್ತು ಅಸಂಘಟಿತ ಕ್ಷೇತ್ರಗಳ ಕಾರ್ಮಿಕರ ಪಾಲಿಗೆ ಒಂದರ ನಂತರ ಒಂದರಂತೆ ಸರಣಿ 100 ಮೀ.ಓಟಗಳಂತೆ ಕಂಡು ಬರುತ್ತಿದೆ. ಅದು ನೋಟು ನಿಷೇಧವಾಗಿರಲಿ, ಜಿಎಸ್ಟಿಯಾಗಿರಲಿ ಅಥವಾ ಲಾಕ್ಡೌನ್ ಆಗಿರಲಿ.... ಪ್ರತಿಬಾರಿಯೂ ಈ ದೇಶದ ಪ್ರಜೆಗಳು ಬದುಕುಳಿಯಲು ಓಡುತ್ತಲೇ ಇರಬೇಕು ಮತ್ತು ತಥಾಕಥಿತ ‘ಉದಾತ್ತ ಗುರಿ’ಯನ್ನು ಸಾಧಿಸಲು ತಥಾಕಥಿತ ಕ್ಷಣಿಕ ಕಷ್ಟಗಳನ್ನು ಸಹಿಸುತ್ತಲೇ ಇರಬೇಕು ಎಂದು ನಿರೀಕ್ಷಿಸಲಾಗಿತ್ತು.

ಅಚ್ಛೇ ದಿನ್, ಡಿಜಿಟಲ್ ಇಂಡಿಯಾ, ಕಪ್ಪುಹಣದ ಮೇಲೆ ಸರ್ಜಿಕಲ್ ದಾಳಿ, ದೇಶದ ಪ್ರತಿಯೊಬ್ಬ ಪ್ರಜೆಗೂ 15 ಲ.ರೂ., ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಮತ್ತು ಐದು ಲ.ಕೋ.ಡಾ.ಗಳ ಆರ್ಥಿಕತೆ..... ಹೀಗೆ ಭಾರತೀಯರ ಮೂಗಿಗೆ ಹಚ್ಚಲಾಗುತ್ತಿರುವ ತುಪ್ಪದ ಸ್ವರೂಪ ಪ್ರತಿಬಾರಿಯೂ ಬದಲಾಗುತ್ತಲೇ ಇದೆ. ಪ್ರತಿಯೊಂದನ್ನೂ ವಾಕ್ಚಾತುರ್ಯ,ಬ್ರಾಂಡಿಂಗ್ ಮತ್ತು ಮಾಧ್ಯಮಗಳ ಸುದ್ದಿಮನೆಗಳಲ್ಲಿಯ ಹೆಚ್ಚಿನ ಅಬ್ಬರದೊಂದಿಗೆ ಸರಿಯಾಗಿ ಮಿಶ್ರಗೊಳಿಸಲಾಗಿತ್ತು ಮತ್ತು ಇದು ಆಕ್ರೋಶವನ್ನೇ ಮರೆತಿರುವ ಮತ್ತು ನೆನಪಿನ ಶಕ್ತಿ ಕುಂಠಿತಗೊಂಡಿರುವ ದೇಶವನ್ನು ನಮ್ಮ ಪಾಲಿಗೆ ನೀಡಿದೆ.

ಹೀಗೆ ತಯಾರಿತ ಭ್ರಮೆಯನ್ನು ದೊಡ್ಡ ಚಿತ್ರವನ್ನು, ಅಂತ್ಯದಲ್ಲಿಯ ಮ್ಯಾರಥಾನ ಓಟವನ್ನು ಬಚ್ಚಿಡಲು ಪರದೆಯನ್ನಾಗಿ ಬಳಸಲಾಗಿತ್ತು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್‘ ಎಂಬ ಘೋಷಣೆಯೊಂದಿಗೆ ಈ ಓಟಕ್ಕೆ ಚಾಲನೆ ನೀಡಲಾಗಿತ್ತು, ಆದರೆ ಈ ಎಲ್ಲ ವರ್ಷಗಳಲ್ಲಿ ಅದನ್ನು ದೊಡ್ಡ ಬಂಡವಾಳದಾರರಿಗಾಗಿ ಸಣ್ಣ ಉದ್ಯಮಗಳು ಮತ್ತು ಅನೌಪಚಾರಿ ಕ್ಷೇತ್ರವನ್ನು ನಾಶ ಮಾಡಲು ವಿನ್ಯಾಸಗೊಳಿಸಲಾಗಿದೆ.

ಸಣ್ಣ ಉದ್ಯಮಗಳಿಗಾಗಿ ಓಟದ ಟ್ರಾಕ್ಗಳಲ್ಲಿ ಮೊದಲ ತಡೆಯನ್ನಾಗಿ ನೋಟು ನಿಷೇಧವನ್ನು ಒಡ್ಡಲಾಗಿತ್ತು. ರಾತ್ರಿ ಬೆಳಗಾಗುವುದರಲ್ಲಿ 1,000 ಮತ್ತು 500 ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸಿದ್ದು ಭಾರತದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ.86ರಷ್ಟನ್ನು ತೆಗೆದುಹಾಕಿತ್ತು. ಐದು ವರ್ಷಗಳ ಹಿಂದಿನ ನೋಟು ನಿಷೇಧ ಘೋಷಣೆ ಪ್ರಸಕ್ತ ಸರಕಾರದ ಈ ಗೇಮ್ ಪ್ಲ್ಯಾನ್ ಅನ್ನು ಪರಿಪೂರ್ಣವಾಗಿ ಬಿಂಬಿಸುವ ಹಲವಾರು ಕ್ರಮಗಳಲ್ಲಿ ಒಂದಾಗಿತ್ತು.
ನೋಟು ನಿಷೇಧವನ್ನು ಘೋಷಿಸಿದ್ದ ಪ್ರಧಾನಿ ಮೋದಿ ಅದರ ಅನುಷ್ಠಾನಕ್ಕೆ ಸಿದ್ಧತೆಗಳ ಬಗ್ಗೆ ಮಾತನಾಡಿರಲಿಲ್ಲ, ಆದರೆ ದೇಶವನ್ನು ಕಪ್ಪುಹಣ ಮತ್ತು ಭಯೋತ್ಪಾದನೆಯ ಪಿಡುಗಿನಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ವೈಯಕ್ತಿಕ ಕಷ್ಟಗಳನ್ನು ಮೀರಿ ನಿಲ್ಲಬೇಕು ಮತ್ತು ಕೇವಲ 50 ದಿನಗಳ ಕಾಲ ನೋವನ್ನು ಸಹಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಭಾರತೀಯರ ಕಿವಿಗಳಲ್ಲಿ ಹೂವಿಟ್ಟಿದ್ದರು. ಪ್ರಭುತ್ವಕ್ಕೆ ಸದಾ ನಿಷ್ಠರಾಗಿರುವ ಮಾಧ್ಯಮಗಳಿಗೆ ಕಪ್ಪು ಹಣದ ಮೇಲಿನ ಸರ್ಜಿಕಲ್ ದಾಳಿ ಎಂದು ಬಣ್ಣಿಸಿ ಕಥನಗಳನ್ನು ಸೃಷ್ಟಿಸಲು ಇದಿಷ್ಟೇ ಸಾಕಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿದವರನ್ನು ‘ಉದಾತ್ತ ಗುರಿ ’ ಸಾಧನೆಯ ಮಾರ್ಗಕ್ಕೆ ಅಡ್ಡ ಬರುವ ದೇಶದ್ರೋಹಿಗಳು ಎಂದು ಬ್ರಾಂಡ್ ಮಾಡಲಾಗುತ್ತಿತ್ತು.

ನಗದು ಹಣವನ್ನೇ ಅವಲಂಬಿಸಿದ್ದ ಅಸಂಘಟಿತ ಕ್ಷೇತ್ರಕ್ಕೆ ನೋಟು ನಿಷೇಧ ಬರಸಿಡಿಲಿನಂತೆ ಎರಗಿತ್ತು. ದುಡಿಯುವ ಬಂಡವಾಳ ಹಠಾತ್ ನಿಂತುಹೋಗಿದ್ದರಿಂದ ತಮ್ಮ ನೌಕರರಿಗೆ ವೇತನಗಳನ್ನು ಪಾವತಿಸುವ ಸ್ಥಿತಿಯಲ್ಲಿ ಕಿರು ಮತ್ತು ಸಣ್ಣ ಉದ್ಯಮಗಳಿರಲಿಲ್ಲ, ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಊರುಗಳಿಗೆ ಮರಳುವಂತಾಗಿತ್ತು. ಇಂದಿಗೂ ಈ ಹೊಡೆತದಿಂದ ಸಣ್ಣ ಉದ್ಯಮಗಳ ಕ್ಷೇತ್ರವು ಚೇತರಿಸಿಕೊಂಡಿಲ್ಲ. ಅದೆಷ್ಟೋ ಉದ್ಯಮಗಳನ್ನು ಮುಚ್ಚಲಾಗಿದೆ. ಅಂದು ಕಳೆದುಕೊಂಡಿದ್ದ ತಮ್ಮ ಹೊಟ್ಟೆಪಾಡಿನ ಉದ್ಯೋಗಗಳನ್ನು ಮತ್ತೆ ಪಡೆದುಕೊಳ್ಳಲು ಅದೆಷ್ಟೋ ಜನರಿಗೆ ಇನ್ನೂ ಸಾಧ್ಯವಾಗಿಲ್ಲ.

ಇದರ ಬೆನ್ನಿಗೇ ಜಿಎಸ್ಟಿ ಎಂಬ ಭೂತದ ರೂಪದಲ್ಲಿ ಇನ್ನೊಂದು ಬರಸಿಡಿಲು ಸಣ್ಣ ಉದ್ಯಮಗಳ ಮೇಲೆ ಎರಗಿತ್ತು. ಇದು ಓಟದ ಟ್ರಾಕ್ನಲ್ಲಿ ಒಡ್ಡಲಾಗಿದ್ದ ಇನ್ನೊಂದು ತಡೆಯಾಗಿತ್ತು. ಇದು ಮತ್ತೊಮ್ಮೆ ಆರ್ಥಿಕತೆಯನ್ನು ಬುಡಮೇಲು ಮಾಡಿತ್ತು.
 ಆಗಲೂ ತೊಂದರೆಗಳು ಕೆಲವೇ ದಿನಗಳ ಮಟ್ಟಿಗೆ ಆಗಲಿವೆ ಮತ್ತು ಇದು ದೀರ್ಘಾವಧಿಯಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಒಯ್ಯಲಿದೆ ಎಂದು ಮತ್ತೊಮ್ಮೆ ಮೂಗಿಗೆ ತುಪ್ಪ ಸವರಲಾಗಿತ್ತು. ವಾಸ್ತವದಲ್ಲಿ ಜಿಎಸ್ಟಿ ಹೇರಿಕೆ ಅಸಂಘಟಿತ ಮತ್ತು ಸಣ್ಣ ಉದ್ಯಮಗಳ ಪಾಲಿಗೆ ನೋಟು ನಿಷೇಧಕ್ಕಿಂತಲೂ ದೊಡ್ಡದಾದ ಆಘಾತವಾಗಿತ್ತು.

ಅಸಂಘಟಿತ ಕ್ಷೇತ್ರವು ಚೇತರಿಸಿಕೊಳ್ಳಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾಗಲೇ 2020ರಲ್ಲಿ ಓಟದ ಟ್ರಾಕ್ನಲ್ಲಿ ಲಾಕ್ಡೌನ್ ರೂಪದಲ್ಲಿ ಇನ್ನೊಂದು ತಡೆಯನ್ನು ಒಡ್ಡಲಾಗಿತ್ತು. ಇದು ಹಿಂದಿನ ತಡೆಗಳಿಗಿಂತ ಹೆಚ್ಚು ಮಾರಣಾಂತಿಕವಾಗಿತ್ತು.

ಲಾಕ್ ಡೌನ್ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಿತ್ತು. ನೋಟು ನಿಷೇಧ ಮತ್ತು ಜಿಎಸ್ಟಿಯಿಂದ ಅದಾಗಲೇ ಕುಂಠಿತಗೊಂಡಿದ್ದ ಅಸಂಘಟಿತ ಕ್ಷೇತ್ರಕ್ಕೆ ಲಾಕ್ಡೌನ್ ಇನ್ನೂ ದೊಡ್ಡ ಹೊಡೆತವನ್ನು ನೀಡಿತ್ತು.

ನೋಟು ನಿಷೇಧ, ಜಿಎಸ್ಟಿ ಮತ್ತು ಲಾಕಡೌನ್ ಇವು ಮೂರನ್ನೂ ಒಟ್ಟಾಗಿ ನೋಡಿದರೆ ಅವು ಖಂಡಿತವಾಗಿಯೂ ನೂರು ಮೀ.ಓಟದ ಸ್ಪರ್ಧೆಗಳಾಗಿರಲಿಲ್ಲ, ಐದು ವರ್ಷಗಳ ಸುದೀರ್ಘ ಮ್ಯಾರಥಾನ್ ಓಟವಾಗಿತ್ತು ಮತ್ತು ಈ ಮ್ಯಾರಥಾನ್ ಅತಿ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ಅನ್ನ ನೀಡುವ ಸಣ್ಣ ಉದ್ಯಮಗಳನ್ನು ಸಾವಿನ ಬಲೆಯಲ್ಲಿ ಸಿಲುಕಿಸಿದೆ. ಇದೇ ಮ್ಯಾರಥಾನ್ ಅವಧಿಯಲ್ಲಿ ಬಂಡವಾಳಶಾಹಿ ಉದ್ಯಮಗಳು ಹುಲುಸಾಗಿ ಬೆಳೆದಿದ್ದು,ಇದಕ್ಕಾಗಿ ಸಣ್ಣ ಉದ್ಯಮಗಳು ಬಲಿಪಶುಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)