varthabharthi


ರಾಷ್ಟ್ರೀಯ

ದಿನ್ಯಾರ್ ಪಟೇಲ್‌ರ ನವರೋಜಿ ಜೀವನಚರಿತ್ರೆಗೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ

ವಾರ್ತಾ ಭಾರತಿ : 1 Dec, 2021

photo:twitter/@DinyarPatel

ಹೊಸದಿಲ್ಲಿ,ಡಿ.1: ದಿನ್ಯಾರ್ ಪಟೇಲ್ ಅವರು ಬರೆದಿರುವ ದಾದಾಭಾಯಿ ನವರೋಜಿಯವರ ಜೀವನ ಚರಿತ್ರೆಯು 2021ನೇ ಸಾಲಿನ ಕಮಲಾದೇವಿ ಚಟ್ಟೋಪಾಧ್ಯಾಯ ಎನ್‌ಐಎಫ್ ಪುಸ್ತಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದು ಪ್ರಶಸ್ತಿಯ ನಾಲ್ಕನೇ ಆವೃತ್ತಿಯಾಗಿದೆ.

ಬೆಂಗಳೂರು ಮೂಲದ ನ್ಯೂ ಇಂಡಿಯಾ ಫೌಂಡೇಷನ್ (ಎನ್‌ಎಫ್‌ಐ) ಸ್ವಾತಂತ್ರ್ಯ ಹೋರಾಟ,ಮಹಿಳಾ ಆಂದೋಲನ,ನಿರಾಶ್ರಿತರ ಪುನರ್ವಸತಿ ಮತ್ತು ಕರಕುಶಲ ಕಲೆಯ ಪುನಃಶ್ಚೇತನಕ್ಕೆ ಗಣನೀಯ ಕೊಡುಗೆಯನ್ನು ಸಲ್ಲಿಸಿರುವ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ಆಧುನಿಕ ಮತ್ತು ಸಮಕಾಲೀನ ಭಾರತದ ಕುರಿತು ವಸ್ತುಕೃತಿ ಸಾಹಿತ್ಯವನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ ಮತ್ತು ಲೇಖಕರು ಯಾವುದೇ ದೇಶದ ಪ್ರಜೆಯಾಗಿರಬಹುದು. ಪ್ರಶಸ್ತಿಯು 15 ಲ.ರೂ.ನಗದು ಬಹುಮಾನ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿದೆ.

ಪಟೇಲ್‌ರ ‘ನವರೋಜಿ:ಪಯೊನಿಯರ್ ಆಫ್ ಇಂಡಿಯನ್ ನ್ಯಾಷನಲಿಸಂ ’ ಕೃತಿಯನ್ನು ಹಾರ್ವರ್ಡ್ ವಿವಿ ಪ್ರೆಸ್ ಪ್ರಕಟಿಸಿದೆ. ಪುಸ್ತಕವು ಭಾರತದ ಮೊದಲ ರಾಷ್ಟ್ರವಾದಿಗಳಲ್ಲೊಬ್ಬರಾಗಿದ್ದ ನವರೋಜಿಯವರ ಜೀವನ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುತ್ತದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕ,19ನೇ ಶತಮಾನದ ಗಣ್ಯ ರಾಜಕೀಯ ವ್ಯಕ್ತಿ ನವರೋಜಿ ಅವರು ಭಾರತೀಯ ಮೂಲದ ಮೊದಲ ಬ್ರಿಟಿಷ್ ಸಂಸದರಾಗಿದ್ದರು ಹಾಗೂ ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ ನೆಹರು ಅವರಿಗೆ ಪ್ರೇರಣೆಯಾಗಿದ್ದರು.

ಮಿಲನ್ ವೈಷ್ಣವ (2019),ಇಸ್ರೇಲ್‌ನ ಆರ್ನಿಟ್ ಶಾನಿ (2019) ಹಾಗೂ ಅಮಿತ್ ಅಹುಜಾ ಮತ್ತು ಜೈರಾಮ ರಮೇಶ (2020-ಜಂಟಿಯಾಗಿ) ಅವರು ಈ ಮೊದಲು ಪ್ರಶಸ್ತಿಯನ್ನು ಗೆದ್ದಿರುವ ಗಣ್ಯರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)