varthabharthi


ಕರ್ನಾಟಕ

ಸ್ಥಳೀಯರೊಂದಿಗಿದ್ದು ಶೋಧ ಕಾರ್ಯದಲ್ಲಿ ಭಾಗವಹಿಸಿದ್ದ ಆರೋಪಿಗಳು!

ಮೂಡಿಗೆರೆ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ; ಕೊಲೆ ಆರೋಪದಲ್ಲಿ ಮೂವರ ಬಂಧನ

ವಾರ್ತಾ ಭಾರತಿ : 1 Dec, 2021

ಚಿಕ್ಕಮಗಳೂರು, ಡಿ.1: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದಿರುತಳ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ವರದಿಯಾಗಿದ್ದು, ಹಣದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಳೂರು ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ನಾಗೇಶ್ ಆಚಾರ್(45) ಶವವಾಗಿ ಪತ್ತೆಯಾಗಿರುವ ವ್ಯಕ್ತಿಯಾಗಿದ್ದು, ನಾಗೇಶ್ ಆಚಾರ್ ಅವರ ಕೊಲೆ ಆರೋಪದ ಹಿನ್ನೆಯಲ್ಲಿ ಬಾಳೂರು ಪೊಲೀಸರು ಕೃಷ್ಣೇಗೌಡ, ಉದಯ್, ಪ್ರದೀಪ್ ಎಂಬವರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಮನೆ ನಿರ್ಮಾಣದ ಕೆಲಸಕ್ಕೆಂದು ಮೃತ ನಾಗೇಶ್ ಆಚಾರ್ ಬಾಳೂರಿನಿಂದ ಬಿದಿರುತಳ ಗ್ರಾಮದ ಪರಿಚಯಸ್ಥ ಕೃಷ್ಣೇಗೌಡ ಎಂಬವರ ಮನೆಗೆ ತೆರಳಿ ಅಲ್ಲೇ ಉಳಿದುಕೊಂಡಿದ್ದರು. ಈ ವೇಳೆ ಗ್ರಾಮದಿಂದ ಇದ್ದಕ್ಕಿದ್ದಂತೆ ನಾಗೇಶ್ ಆಚಾರ್ ನಾಪತ್ತೆಯಾಗಿದ್ದಾರೆಂದು ಕೃಷ್ಣೇಗೌಡ ತಿಳಿಸಿದ್ದರಿಂದ ಕಳೆದ ಮೂರು ದಿನಗಳಿಂದ ನಾಗೇಶ್ ಆಚಾರ್‍ಗಾಗಿ ಬಿದಿರುತಳ ಗ್ರಾಮದಾದ್ಯಂತ ಸ್ಥಳೀಯರು ಹಾಗೂ ಪೊಲೀಸರು ಶೋಧ ಆರಂಭಿಸಿದ್ದರು. ಮಂಗಳವಾರ ಇಡೀ ದಿನ ಬಿದಿರುತಳ ಗ್ರಾಮದ ಸುತ್ತಮುತ್ತ ಪೊಲೀಸರು ಶ್ವಾನದಳದೊಂದಿಗೆ ಹುಡುಕಾಟ ಆರಂಭಿಸಿದ್ದು, ರಾತ್ರಿಯೂ ಶೋಧ ಮುಂದುವರಿಸಲಾಗಿತ್ತು.

ಚಾರ್ಮಾಡಿ ಘಾಟ್‍ನ ಧಟ್ಟಡವಿಯಲ್ಲಿರುವ ಬಿದಿರುತಳ ಗ್ರಾಮದಿಂದ ಸುಮಾರು 1 ಕಿಮೀ ದೂರದಲ್ಲಿ ಮಂಗಳವಾರ ರಾತ್ರಿ ಸುಮಾರು 11.30ರ ಸಮಯದಲ್ಲಿ ನಾಗೇಶ್ ಆಚಾರ್ ಗಾಗಿ ಶೋಧಿಸುತ್ತಿದ್ದ ವೇಳೆ ಹಸಿಮಣ್ಣಿನಲ್ಲಿದ್ದ ಹೆಜ್ಜೆ ಗುರುತು, ವಾಸನೆ ಆಧರಿಸಿ ಹುಡುಕಾಡಿದಾಗ ಕಂದಕವೊಂದರ ಮರದ ಬಳಿ ಮಣ್ಣಿನ ರಾಶಿಯಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಗೇಶ್ ಆಚಾರ್ ಅವರ ಶವವನ್ನು ಟಾರ್ಪಲ್‍ನಲ್ಲಿ ಸುತ್ತಿ ಹೂಳಲಾಗಿತ್ತು ಎಂದು ತಿಳಿದು ಬಂದಿದೆ.

ಬುಧವಾರ ಬೆಳಿಗ್ಗೆ ಬಾಳೂರು ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳದ ಮಹಜರು ಮಾಡಿ ಶವವನ್ನು ಹೊರತೆಗೆದಿದ್ದಾರೆಂದು ತಿಳಿದು ಬಂದಿದ್ದು, ಮೃತ ನಾಗೇಶ್ ಆಚಾರ್ ಅವರ ಪತ್ನಿ ತನ್ನ ಪತಿಯನ್ನು ಕೊಲೆ ಮಾಡಲಾಗಿದೆ, ಮನೆ ಕೆಲಸಕ್ಕೆಂದು ಕರೆಸಿಕೊಂಡಿದ್ದ ಕೃಷ್ಣೇಗೌಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣೇಗೌಡ ಸೇರಿದಂತೆ ಉದಯ್, ಪ್ರದೀಪ್ ಎಂಬವರನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

ನಾಗೇಶ್ ಆಚಾರ್ ಅವರಿಂದ ಕೃಷ್ಣೇಗೌಡ ಮನೆ ನಿರ್ಮಾಣಕ್ಕೆಂದು 5 ಲಕ್ಷ ರೂ. ಹಣ ಪಡೆದಿದ್ದು, ಈ ಹಣವನ್ನು ಕೇಳಿದ್ದಕ್ಕೆ ಕೃಷ್ಣೇಗೌಡ ತನ್ನ ಸಹಚರರೊಂದಿಗೆ ಸಂಚು ಮಾಡಿ ನನ್ನ ಗಂಡನನ್ನು ಕೊಲೆ ಮಾಡಿ ನಾಪತ್ತೆ ಎಂದು ನಾಟಕ ಆಡಿದ್ದಾನೆ. ಗಂಡನ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದು, ಶವವನ್ನು ಪರೀಕ್ಷೆಗಾಗಿ ಹಾಸನದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಶವ ಪತ್ತೆಯಾಗುತ್ತಿದ್ದಂತೆ ಸ್ಥಳದಲ್ಲಿ ಭಾರೀ ಜನಸ್ತೋಮ ನೆರೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು.

ಸ್ಥಳೀಯರ ಪ್ರಕಾರ ಕೃಷ್ಣೇಗೌಡ ಅವರ ಮನೆ ಕೆಲಸಕ್ಕೆಂದು ಹೋಗಿದ್ದ ನಾಗೇಶ್ ಆಚಾರ್ ಕೃಷ್ಣೇಗೌಡನೊಂದಿಗೆ ಶಿಖಾರಿಗೆ ಹೋಗಿದ್ದು, ಈ ವೇಳೆ ಬಂದೂಕಿನ ಗುಂಡು ತಗುಲಿ ನಾಗೇಶ್ ಆಚಾರ್ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣದ ಭೀತಿಯಿಂದ ಕೃಷ್ಣೇಗೌಡ ಶವವನ್ನು ಹೂತು ಹಾಕಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

ಆರೋಪಿಗಳಿಂದಲೂ ಶೋಧ: ಮನೆ ಕೆಲಸಕ್ಕೆ ಬಂದಿದ್ದ ನಾಗೇಶ್ ಆಚಾರ್ ನಾಪತ್ತೆಯಾಗಿದ್ದಾರೆ ಎಂದು ಕೃಷ್ಣೇಗೌಡ ನಾಗೇಶ್ ಆಚಾರ್ ಕುಟುಂಬದವರಿಗೆ ತಿಳಿಸಿದ್ದರಿಂದ ಸ್ನೇಹಿತರು, ಸ್ಥಳೀಯರು, ಕುಟುಂಬದವರು ಕಳೆದ ಮೂರು ದಿನಗಳಿಂದ ನಾಗೇಶ್ ಆಚಾರ್ ಅವರಿಗಾಗಿ ಬಿದಿರುತಳ ಗ್ರಾಮ ಹಾಗೂ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಸದ್ಯ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಕೃಷ್ಣೇಗೌಡ, ಉದಯ್, ಪ್ರದೀಪ್ ಕೂಡ ಶೋಧ ಕಾರ್ಯದ ವೇಳೆ ಸ್ಥಳೀಯರೊಂದಿಗೆ ಭಾಗವಹಿಸಿ ಏನೂ ತಿಳಿಯದವರಂತೆ ನಟಿಸಿದ್ದರು ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)