varthabharthi


ಕರ್ನಾಟಕ

ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ವಿಚಾರ: ಶೀಘ್ರವೇ ನಿರ್ಧಾರ ಮಾಡುತ್ತೇವೆ ಎಂದ ಕುಮಾರಸ್ವಾಮಿ

ವಾರ್ತಾ ಭಾರತಿ : 1 Dec, 2021

ಬೆಂಗಳೂರು, ಡಿ.1: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದಿಲ್ಲಿಯಿಂದ ಬಂದ ಮೇಲೆ ವಿಧಾನ ಪರಿಷತ್ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಾಸ್ವಾಮಿ ಹೇಳಿದರು.

ಬುಧವಾರ ಬಿಡದಿಯಲ್ಲಿರುವ ತಮ್ಮ ತೋಟದಲ್ಲಿ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪ ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‍ನವರು ನಮಗೆ ಜೆಡಿಎಸ್ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ? ಹೀಗಾಗಿ ಯಡಿಯೂರಪ್ಪ ಮನವಿ ಬಗ್ಗೆ ಏನು ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಶೀಘ್ರವೇ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜತೆ ದೇವೇಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲಿನಿಂದಲೂ ಪ್ರಧಾನಮಂತ್ರಿ ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ. ಜತೆಗೆ, ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಿರಬಹುದು. ಗೌಡರು ದಿಲ್ಲಿಯಿಂದ ವಾಪಸ್ ಬಂದ ಮೇಲೆ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಅಧಿಕಾರಿ ವಿರುದ್ಧ ದೂರು ಯಾಕೆಂದು ಗೊತ್ತಿಲ್ಲ: ಬಳ್ಳಾರಿ ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯ ಬಗ್ಗೆ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ. ಯಾತಕ್ಕಾಗಿ ದೂರು ನೀಡಲಾಗಿದೆಯೋ ನನಗೆ ಗೊತ್ತಿಲ್ಲ. ನಾನೆಂದೂ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸಿದವನಲ್ಲ ಎಂದು ಅವರು ಹೇಳಿದರು.

ನಮ್ಮ ಕಾರ್ಯಕರ್ತರ ವಿಶ್ವಾಸದಲ್ಲಿ ಮಾತ್ರ ಕೆಲಸ ಮಾಡಿದವನು ನಾನು. ಹೀಗಾಗಿ ವೈಯಕ್ತಿಕ ದ್ವೇಷದ ಮೇಲೆ ಆ ಅಧಿಕಾರಿ ವಿರುದ್ಧ ದೂರು ಕೊಟ್ಟಿರಬಹುದು. ಸತ್ಯಾಂಶ ಏನೆಂಬುದು ತನಿಖೆಯಿಂದ ಹೊರಬರಲಿ. ನಮ್ಮ ಅಭ್ಯರ್ಥಿಗೆ ನಮ್ಮ ಕಾರ್ಯಕರ್ತರು ಮತ ಹಾಕಿಸಲಿಕ್ಕೆ ಸಾಧ್ಯವೋ ಅಥವಾ ಅಧಿಕಾರಿ ಹಾಕಿಸಲಿಕ್ಕೆ ಸಾಧ್ಯವೋ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಕನಕಪುರದಲ್ಲಿ ಗುಪ್ತ ಮತದಾರರು ಇದ್ದಾರೆ: ಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನನ್ನ ನೇರ ಪಾತ್ರ ಇರಲಿಲ್ಲ. ಹಿಂದೆ ನಮ್ಮ ಪಕ್ಷದಲ್ಲಿದ್ದ ನಾಯಕರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ನಡೆಸಿದ್ದರು. ಈ ಬಾರಿ ಖುದ್ದು ನಾನೇ ಕೆಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಜತೆಗೆ ಮಾಗಡಿ ಶಾಸಕ ಮಂಜುನಾಥ್ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಕನಕಪುರ ಕ್ಷೇತ್ರಕ್ಕೂ ಹೆಚ್ಚಿನ ಗಮನ ಕೊಟ್ಟಿದ್ದೇವೆ. ಅಲ್ಲಿ ನಮ್ಮ ಪಕ್ಷಕ್ಕೆ ಗುಪ್ತ ಮತದಾರರು, ಅಂದರೆ ನಮ್ಮ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಆ ಭಾಗದಲ್ಲಿ ಮುಕ್ತ ಚುನಾವಣೆ ನಡೆಸಲು ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯ ಮಾಡಿದರು.

ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮತದಾರರ ಸಭೆಯನ್ನು ಕರೆದಿದ್ದೆ. ರಾಜ್ಯದ ಆರು ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳಿದ್ದು, ಅಷ್ಟೂ ಕಡೆ ನಾವು ಗೆಲ್ಲಲಿದ್ದೇವೆ ಎಂದ ಅವರು, ಈ ಚುನಾವಣೆ ಮುಂದಿನ 2023ರ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಈ ಚುನಾವಣೆಯ ಫಲಿತಾಂಶವು ಮುಂದಿನ ಚುನಾವಣೆಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲಿದೆ ಎಂದರು.

ನಮ್ಮ ಪಕ್ಷಕ್ಕೆ ಅನೇಕ ಕ್ಷೇತ್ರಗಳಲ್ಲಿ ನೆಲೆ ಇದೆ. ಆದರೆ ಅದು ಚುನಾವಣೆ ಗೆಲ್ಲುವ ಮಟ್ಟದಲ್ಲಿ ಇಲ್ಲ. ಅದರ ಹೊರತಾಗಿ ಯಾರನ್ನು ಗೆಲ್ಲಿಸಬಹುದೆಂಬ ತೀರ್ಮಾನ ಮಾಡುವ ಶಕ್ತಿಯಂತೂ ಇದೆ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಗುರಿ 123  ಸ್ಥಾನ. ಆ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕ್ರಮಗಳಿರುತ್ತವೆ ಎಂದು ಅವರು ತಿಳಿಸಿದರು.

ರಾಮನಗರ ನನ್ನ ಕರ್ಮಭೂಮಿ: ಪಕ್ಷ ಬಯಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕರ್ತರ ಒಲವು, ಪಕ್ಷದ ಆದೇಶ ಬಂದರೆ ಸ್ಪರ್ಧಿಸಲು ತಯಾರಿದ್ದೇನೆ ಎಂದು ಹೇಳಿದ್ದಾರೆ. ಅದು ಇನ್ನೂ ಎರಡು ವರ್ಷದ ಮಾತು ಎಂದು ಕುಮಾರಸ್ವಾಮಿ ಹೇಳಿದರು.

ನಿಖಿಲ್ ಅವರು ರಾಮನಗರ ಅಥವಾ ಮಂಡ್ಯ ಇವೆರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವುದಾದರೆ, ರಾಮನಗರ ನಮ್ಮ ಕರ್ಮಭೂಮಿ. ನಮ್ಮ ಹೃದಯದಲ್ಲಿರುವ ನೆಲೆ. ಈ ಭೂಮಿ ಮೇಲೆ ಇರುವವರೆಗೂ ಇಲ್ಲೇ ಇರುತ್ತೇವೆಯಲ್ಲದೇ, ಭೂಮಿ ಮೇಲೆ ಮಣ್ಣಾದರೂ ಈ ಮಣ್ಣಲ್ಲೇ ಮಣ್ಣಾಗುವೆ. ನಮ್ಮ ಮತ್ತು ರಾಮನಗರದ ನಡುವೆ ವಿಶೇಷ ಬಾಂಧವ್ಯವಿದೆ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಉಸಿರಿರುವ ತನಕವμÉ್ಟೀ ಅಲ್ಲ ಉಸಿರು ನಿಂತ ಮೇಲೆಯೂ ರಾಮನಗರವೇ ನಮ್ಮ ಕರ್ಮಭೂಮಿ ಆಗಿರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)