varthabharthi


ಕರ್ನಾಟಕ

ಸಾಗರ: ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ

ವಾರ್ತಾ ಭಾರತಿ : 1 Dec, 2021

ಶಿವಮೊಗ್ಗ,ಡಿ.1:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೊದಲ ಪುತ್ಥಳಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೆ.ಹೊಸಕೊಪ್ಪ ಗ್ರಾಮದಲ್ಲಿ ಅನಾವರಣಗೊಂಡಿದೆ. 

ಗ್ರಾಮಸ್ಥರೇ ಸೇರಿ ತಮ್ಮೂರಿನ ವೃತ್ತಕ್ಕೆ‌ ಪುನೀತ್‌ ರಾಜ್ ಕುಮಾರ್ ಹೆಸರನ್ನು ನಾಮಕರಣ‌ ಮಾಡುವ ಜೊತೆಗೆ ಮೂರು ಅಡಿಯ ಪುತ್ಥಳಿಯನ್ನೂ ಪ್ರತಿಷ್ಠಾಪನೆ ಮಾಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ತಮ್ಮೂರ ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ. ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಹೊಸಕೊಪ್ಪದ ಗ್ರಾಮಸ್ಥರು ಎಲ್ಲರೂ ಒಂದೆಡೆ ಸೇರಿ ಪುನೀತ್ ರಾಜ್ ಕುಮಾರ್‌ ಅವರಿಗೆ ವಿಶೇಷವಾಗಿ ಗೌರವ ಸೂಚಿಸುವ ಬಗ್ಗೆ ಚರ್ಚೆ‌ನಡೆಸಿದ್ದರು. ಈ ವೇಳೆ ತಮ್ಮೂರಿನಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಸ್ಥಾಪಿಸಲು ಎಲ್ಲರೂ ತೀರ್ಮಾನಿಸಿದ್ದರು. ಹೀಗಾಗಿ ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗರಿಸಿದ ಗ್ರಾಮಸ್ಥರು ಎತ್ತಿನ ಗಾಡಿಗಳ ಮೆರವಣಿಗೆ ನಡೆಸಿ ಬಳಿಕ ತಮ್ಮೂರಿನ ಪ್ರಮುಖ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಪ್ರತಿಷ್ಟಾಪಿಸಿದರು.

 ಬಳಿಕ ಇಡೀ ಊರಿನ ಜನರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಗ್ರಾಮಸ್ಥರೇ‌ ಸೇರಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಹೊಸಕೊಪ್ಪ ಗ್ರಾಮಸ್ಥರು ರಾಜ್ಯದಲ್ಲೇ ಮೊದಲ ಬಾರಿಗೆ ಪುನೀತ್‌ ರಾಜ್ ಕುಮಾರ್ ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಪವರ್ ಸ್ಟಾರ್ ಗೆ ತಮ್ಮ ಗೌರವ ಸಲ್ಲಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)