varthabharthi


ಕರ್ನಾಟಕ

ಗೋಹತ್ಯೆ ನಿಷೇಧ ಕಾನೂನು ಇನ್ನಷ್ಟು ಕಠಿಣಗೊಳಿಸಲು ತಜ್ಞರ ಜೊತೆ ಚರ್ಚಿಸಿ ಕ್ರಮ: ಸಚಿವ ಈಶ್ವರಪ್ಪ

ವಾರ್ತಾ ಭಾರತಿ : 2 Dec, 2021

ಶಿವಮೊಗ್ಗ, ಡಿ.02): ಗೋಹತ್ಯಾ ನಿಷೇಧ ಕಾನೂನು ಇನ್ನಷ್ಟು ಕಠಿಣ ಮಾಡುವ ಅಗತ್ಯ ಇದೆ ಎನಿಸಿದರೆ ಮಾರ್ಪಾಡು ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಗೋ ಹತ್ಯಾ ನಿಷೇಧ ಕಾನೂನು ಇದ್ದರೂ ಕೂಡ ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿದ್ದಾರೆ. ಇದನ್ನು ತಡೆಯಲು ಮುಂದಾದವರ ಮೇಲೆ ಹತ್ಯೆ ಯತ್ನ ಕೂಡ ನಡೆಯುತ್ತಿದೆ. ಎರಡು ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ಇಂತಹ ಘಟನೆ ನಡೆದಿದೆ. ಹಾಗಾಗಿ ಕಾನೂನು ಬಿಗಿ ಮಾಡಬೇಕು ಎನಿಸಿದರೆ ಕಾನೂನು ತಜ್ಞರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಕ್ರಮ ಗೋಸಾಗಾಣೆಕೆ ಮಾಡುವಾಗ ಇಬ್ಬರು ಜೀವ ಒತ್ತೆ ಇಟ್ಟು ಗೋವುಗಳನ್ನು ಸಂರಕ್ಷಿಸಿದ್ದಾರೆ. ಅವರ ಮೇಲೆ ದಾಳಿ ಮಾಡಲಾಗಿದ್ದು, ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚ ನಾನೇ ಭರಿಸುತ್ತೇನೆ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಪ್ರಧಾನಿ ಮೋದಿ ಅವರ ನಡತೆಯನ್ನು ನೋಡಿ ಕಲಿಯಲಿ. ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಅದೆಷ್ಟು ಗೌರವ ಕೊಟ್ಟರು ಎಂಬುದನ್ನು ತಿಳಿದುಕೊಳ್ಳಲಿ. ಬಾಯಿಗೆ ಬಂದಂತೆ ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಮತ್ತು ಬಿಜೆಪಿ ಮುಖಂಡರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಅವರಿಗೆ ನಾಗರಿಕತೆಯ ಪಾಠದ ಅವಶ್ಯಕತೆ ಇದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)