varthabharthi


ಅಂತಾರಾಷ್ಟ್ರೀಯ

ಮಾನವೀಯ ನೆರವಿನ ಕೋರಿಕೆ ದಾಖಲೆ ಮಟ್ಟಕ್ಕೆ ಏರಿಕೆ: ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ

ವಾರ್ತಾ ಭಾರತಿ : 2 Dec, 2021

ಸಾಂದರ್ಭಿಕ ಚಿತ್ರ:PTI

ನ್ಯೂಯಾರ್ಕ್, ಡಿ.2: ಕೊರೋನ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಹಾಗೂ ಅಂತರ್ಯುದ್ಧದ ಬಿಕ್ಕಟ್ಟಿನಿಂದಾಗಿ ಮತ್ತಷ್ಟು ಮಂದಿ ಅಸಹಾಯಕ ಸ್ಥಿತಿ ತಲುಪಲಿದ್ದು ಮುಂದಿನ ವರ್ಷ ಮಾನವೀಯ ನೆರವಿನ ಕೋರಿಕೆ ವಿಶ್ವದಾದ್ಯಂತ ದಾಖಲೆ ಮಟ್ಟಕ್ಕೆ ಏರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಜೀವ ರಕ್ಷಕ ನೆರವಿನ ನಿರೀಕ್ಷೆಯಲ್ಲಿರುವ 183 ಮಿಲಿಯನ್ ಜನತೆಗೆ ನೆರವಾಗಲು ದಾಖಲೆ ಪ್ರಮಾಣದ 41 ಬಿಲಿಯನ್ ಡಾಲರ್ ಮೊತ್ತದ ಅಗತ್ಯವಿದೆ. 2021ರಲ್ಲಿ 35 ಬಿಲಿಯನ್ ಜನತೆ ನೆರವಿನ ಅಗತ್ಯದಲ್ಲಿದ್ದರು. ಇದು ಕಳೆದ 4 ವರ್ಷಕ್ಕಿಂತ ದುಪ್ಪಟ್ಟು ಪ್ರಮಾಣವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವಿಭಾಗ ಒಸಿಎಚ್‌ಎ ಹೇಳಿದೆ.

ನೆರವಿನ ಅಗತ್ಯವಿರುವವರ ಸಂಖ್ಯೆ ಈ ಹಿಂದೆ ಯಾವತ್ತೂ ಈ ಮಟ್ಟಕ್ಕೆ ತಲುಪಿರಲಿಲ್ಲ. ಹವಾಮಾನ ಬದಲಾವಣೆ ಸಮಸ್ಯೆ ವಿಶ್ವದ ಅತ್ಯಂತ ದುರ್ಬಲ ವರ್ಗದ ಜನತೆಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ದೀರ್ಘಕಾಲದ ಘರ್ಷಣೆ ಮತ್ತು ಅಸ್ಥಿರತೆ ವಿಶ್ವದ ಹಲವೆಡೆ, ಮುಖ್ಯವಾಗಿ ಇಥಿಯೋಪಿಯಾ, ಮ್ಯಾನ್ಮಾರ್, ಅಫ್ಗಾನಿಸ್ತಾನದಲ್ಲಿ ಕಂಡುಬಂದಿದೆ ಎಂದು ಒಸಿಎಚ್‌ಎ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಮುಂದಿನ ವರ್ಷ ವಿಶ್ವದಾದ್ಯಂತ 274 ಮಿಲಿಯನ್ ಜನತೆಗೆ ತುರ್ತು ನೆರವಿನ ಅಗತ್ಯ ಬರಲಿದ್ದು 2021ಕ್ಕೆ ಹೋಲಿಸಿದರೆ ಇದು 17% ಹೆಚ್ಚಳವಾಗಿದೆ . 2022ರಲ್ಲಿ ಪ್ರತೀ 29 ಮಂದಿಯಲ್ಲಿ ಒಬ್ಬನಿಗೆ ನೆರವಿನ ಅಗತ್ಯ ಉಂಟಾಗಲಿದ್ದು 2015ಕ್ಕೆ ಹೋಲಿಸಿದರೆ ಇದು 250% ಹೆಚ್ಚಳವಾಗಿದೆ. 2015ರಲ್ಲಿ ಪ್ರತೀ 95 ಮಂದಿಯಲ್ಲಿ ಒಬ್ಬರಿಗೆ ಮಾನವೀಯ ನೆರವಿನ ಅಗತ್ಯವಿತ್ತು ಎಂದು ‘ಜಾಗತಿಕ ಮಾನವೀಯ ಅವಲೋಕನ ವರದಿ’ಯಲ್ಲಿ ಒಸಿಎಚ್‌ಎ ಉಲ್ಲೇಖಿಸಿದೆ.

ಆದರೆ, ಈ ಪ್ರಸ್ತಾವಿತ ಮೊತ್ತದ ದೇಣಿಗೆಯನ್ನು ಸಂಗ್ರಹಿಸುವ ಸಾಧ್ಯತೆ ಕಡಿಮೆ ಎಂದು ನಮಗೆ ತಿಳಿದಿದೆ. ಆದರೂ ಈ ಬಗ್ಗೆ ಪ್ರಯತ್ನ ಮುಂದುವರಿಯಲಿದೆ ಎಂದು ಗ್ರಿಫಿತ್ಸ್ ಹೇಳಿದ್ದಾರೆ. ಈ ವರ್ಷ ಅಂತರಾಷ್ಟ್ರೀಯ ದೇಣಿಗೆಯಿಂದ ವಿಶ್ವಸಂಸ್ಥೆ ಸಂಗ್ರಹಿಸಿದ ಮೊತ್ತ ಸುಮಾರು 17 ಬಿಲಿಯನ್ ಡಾಲರ್. ಸುಮಾರು 35 ಬಿಲಿಯನ್ ಡಾಲರ್ ಮೊತ್ತದ ದೇಣಿಗೆಯ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿತ್ತು.

ಹಲವು ದೇಶಗಳಲ್ಲಿ 45 ಮಿಲಿಯನ್ ಜನತೆ ಬರಗಾಲದ ಭೀತಿ ಎದುರಿಸುತ್ತಿದ್ದಾರೆ ಎಂಬ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಅಂದಾಜಿಸಿರುವುದನ್ನು ಉಲ್ಲೇಖಿಸಿದ ಅವರು ‘ಮಾನವೀಯ ನೆರವು ಮುಖ್ಯವಾಗಿದೆ. ಬರಗಾಲದ ಸಮಸ್ಯೆ ಎದುರಿಸುತ್ತಿದ್ದ ದಕ್ಷಿಣ ಸುಡಾನ್‌ನ ಅರ್ಧ ಮಿಲಿಯನ್ ಜನರಿಗೆ ನೆರವಾಗಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆ ಮತ್ತು ಯೆಮನ್‌ನ 10 ಮಿಲಿಯನ್ ಜನತೆಗೆ ಆರೋಗ್ಯ ರಕ್ಷಕ ನೆರವು ಒದಗಿಸಿದೆ ಎಂದರು.

ಅಫ್ಘಾನಿಸ್ತಾನಕ್ಕೆ ಅಗ್ರಸ್ಥಾನ:

ಐದು ದೇಶಗಳು ಅತ್ಯಂತ ತೀವ್ರ ಮಾನವೀಯ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿದ್ದು ಇದರಲ್ಲಿ ಅ ಫ್ಘಾನಿಸ್ತಾನ ಅಗ್ರಸ್ಥಾನದಲ್ಲಿದೆ. ಸಿರಿಯಾ, ಯೆಮನ್, ಇಥಿಯೋಪಿಯಾ ಮತ್ತು ಸುಡಾನ್ ನಂತರದ ಸ್ಥಾನದಲ್ಲಿವೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ತಾಲಿಬಾನ್ ಆಡಳಿತದ ಅಫ್ಗಾನಿಸ್ತಾನದಲ್ಲಿ ಮಾನವೀಯ ನೆರವಿನ ಅಗತ್ಯ ಆಕಾಶದೆತ್ತರಕ್ಕೆ ಬೆಳೆದಿದ್ದು ಸುಮಾರು 4.5 ಬಿಲಿಯನ್ ಡಾಲರ್ ತುರ್ತು ನೆರವಿನ ಅಗತ್ಯವಿದೆ. 24 ಮಿಲಿಯನ್‌ಗೂ ಅಧಿಕ ಜನತೆ ಜೀವರಕ್ಷಕ ನೆರವಿನ ನಿರೀಕ್ಷೆಯಿದ್ದು ಇದಕ್ಕೆ ಇತ್ತೀಚಿಗಿನ ರಾಜಕೀಯ ಬಿಕ್ಕಟ್ಟು, ಆರ್ಥಿಕ ಆಘಾತ, ತೀವ್ರ ಆಹಾರ ಅಭದ್ರತೆಯ ಸಮಸ್ಯೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)