varthabharthi


ಕರ್ನಾಟಕ

ಜೆಡಿಎಸ್ ಪಕ್ಷ ಬಿಜೆಪಿ ‘ಬಿ’ ಟೀಮ್ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ವಾರ್ತಾ ಭಾರತಿ : 2 Dec, 2021

ಬೆಂಗಳೂರು, ಡಿ.2: ಮಾಜಿ ಪ್ರಧಾನಿ ದೇವೇಗೌಡರು ಅವಕಾಶವಾದಿ ರಾಜಕಾರಣಿ ಹಾಗೂ ಜೆಡಿಎಸ್ ಪಕ್ಷ ಬಿಜೆಪಿ ‘ಬಿ’ ಟೀಮ್ ಎಂದು ಹೇಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೆ ಹೇಳಿಕೊಳ್ಳುವ ಬದಲು ಒಂದು ಸ್ಲೇಟಿನಲ್ಲಿ ‘ಜೆಡಿಎಸ್ ಪಕ್ಷ ಬಿಜೆಪಿ ಟೀಮ್’ ಅಂತ ಬರೆದುಕೊಂಡು ಕಟ್ಟು ಹಾಕಿಸಿ ಕುತ್ತಿಗೆಗೆ ಹಾಕಿಕೊಂಡು ತಿರುಗಾಡಲಿ. ಹಾಗೆಯೇ ಪ್ರಚಾರ ಮಾಡಿಕೊಂಡು ದಿನವೂ ಓಡಾಡಲಿ ಎಂದು ಟೀಕಿಸಿದರು.

ಒಮೈಕ್ರಾನ್ ಬಗ್ಗೆ ಎಚ್ಚರಿಕೆ ಇರಲಿ: ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ಕೊರೋನ ತಳಿ ಒಮೈಕ್ರಾನ್ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರಬಾರದು ಹಾಗೂ ವೈದ್ಯಕೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು.

ರಾಜ್ಯದಲ್ಲಿ ಹೊಸ ತಳಿಯ ವೈರಸ್ ಪತ್ತೆಯಾಗಿದೆ ಅಂದಾಕ್ಷಣ ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ ಎಂದಲ್ಲ. ಸರಕಾರ ಸಭೆಗಳನ್ನು ಮಾಡಿದೆ ಎಂಬುದನ್ನು ನಾನೂ ಗಮನಿಸಿದ್ದೇನೆ. ಏನೇ ಆದರೂ ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಮೂರನೇ ಅಲೆ ಬಹಳ ಅಪಾಯಕಾರಿ ಎಂದು ತಜ್ಞರು ಹೇಳುತ್ತಿದ್ದು, ಆರೋಗ್ಯ ಇಲಾಖೆ ಮುಕ್ತವಾಗಿ ಕೆಲಸ ಮಾಡಲು ಹಾಗೂ ವೈದ್ಯರು ಸಮರ್ಪಕವಾಗಿ ಕರ್ತವ್ಯ ನಿರ್ವಹಣೆ ಮಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ, ಮಾಜಿ ಶಾಸಕ ಈ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಹಾಗೂ ಮೇಲ್ಮನೆ ಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಎಚ್.ಎಂ.ರಮೇಶ್ ಗೌಡ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)