varthabharthi


ಅಂತಾರಾಷ್ಟ್ರೀಯ

ಬಾಂಗ್ಲಾ: ಪ್ರಧಾನಿ ತಂದೆಯ ಭಿತ್ತಿಚಿತ್ರಕ್ಕೆ ಅವಕಾಶ ನಿರಾಕರಿಸಿದ ಮೇಯರ್ ಬಂಧನ

ವಾರ್ತಾ ಭಾರತಿ : 2 Dec, 2021

ಪ್ರಧಾನಿ ಶೇಖ್ ಹಸೀನಾ(photo:PTI)

ಢಾಕಾ, ಡಿ.2: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ತಂದೆಯ ಭಿತ್ತಿಚಿತ್ರಕ್ಕೆ ಧಾರ್ಮಿಕ ನೆಲೆಯಲ್ಲಿ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್‌ಶಾಹಿ ನಗರದ ಮೇಯರ್ ಅಬ್ಬಾಸ್ ಅಲಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶೇಖ್ ಹಸೀನಾರ ತಂದೆ ಶೇಖ್ ಮುಜೀಬುರ್ರಹ್ಮಾನ್ ಸ್ವತಂತ್ರ ಬಾಂಗ್ಲಾದೇಶದ ಪ್ರಥಮ ಅಧ್ಯಕ್ಷ ಮತ್ತು ಪ್ರಧಾನಿಯಾಗಿದ್ದರು. 2009ರಲ್ಲಿ ಶೇಖ್ ಹಸೀನಾ ಬಾಂಗ್ಲಾದ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮುಜೀಬುರ್ರಹ್ಮಾನ್ ಗೌರವಾರ್ಥ ದೇಶದ ಹಲವೆಡೆ 1 ಸಾವಿರಕ್ಕೂ ಅಧಿಕ ಸ್ಮಾರಕ ಹಾಗೂ ಭಿತ್ತಿಚಿತ್ರಗಳನ್ನು ಸ್ಥಾಪಿಸಲಾಗಿದೆ. ಮುಜೀಬುರ್ರಹ್ಮಾನ್ ಅವಧಿಯಲ್ಲಿ ಜಾರಿಯಲ್ಲಿದ್ದ ಇಂಟರ್‌ನೆಟ್ ಕಾಯ್ದೆಯನ್ನು ವಿರೋಧಿಸಿ ಟೀಕಿಸಿದ ಹಲವರ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಮುಜೀಬುರ್ರಹ್ಮಾನ್ ಭಿತ್ತಿಚಿತ್ರ ಸ್ಥಾಪಿಸುವುದಕ್ಕೆ ಅನುಮತಿ ನಿರಾಕರಿಸಿದ ಬಾಂಗ್ಲಾದೇಶದ ರಾಜ್‌ಶಾಹಿ ನಗರದ ಮೇಯರ್ ಅಬ್ಬಾಸ್ ಅಲಿಯವರ ಆಡಿಯೊ ತುಣುಕು ವೈರಲ್ ಆಗಿತ್ತು. ಇಸ್ಲಾಮ್ ಶರಿಯಾ ಕಾನೂನಿಗೆ ಇದು ವಿರುದ್ಧವಾಗಿರುವುದರಿಂದ ಇದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಅಲಿ ಹೇಳಿರುವ ಆಡಿಯೊ ತುಣುಕು ಇದಾಗಿದೆ. ಈ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದ ಬಳಿಕ ಪ್ರತಿಕ್ರಿಯೆ ನೀಡಿದ್ದ ಅಲಿ ‘ಆಡಿಯೊ ನಕಲಿ’ ಎಂದಿದ್ದರು. ಆದರೆ ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಹೇಳಿಕೆಗೆ ಕ್ಷಮೆ ಯಾಚಿಸಿ ಭೂಗತರಾಗಿದ್ದರು.

ಬುಧವಾರ ಅವರನ್ನು ಢಾಕಾದ ಹೋಟೆಲ್‌ನಿಂದ ಬಂಧಿಸಲಾಗಿದೆ. ನವೆಂಬರ್ 23ರಿಂದ ತಲೆಮರೆಸಿಕೊಂಡಿದ್ದ ಅಲಿ ದೇಶ ಬಿಟ್ಟು ತೆರಳಲು ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಅಲಿ ಬಂಧನವನ್ನು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಖಂಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)