varthabharthi


ಅಂತಾರಾಷ್ಟ್ರೀಯ

ಪೆಲೆಸ್ತೀನ್ ವಿಷಯದಲ್ಲಿ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಪಣಕ್ಕೆ ಒಡ್ಡಲಾಗಿದೆ : ವಿಶ್ವಸಂಸ್ಥೆ ಎಚ್ಚರಿಕೆ

ವಾರ್ತಾ ಭಾರತಿ : 2 Dec, 2021

ನ್ಯೂಯಾರ್ಕ್, ಡಿ.2: ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗಿಂತ ಹೆಚ್ಚು ಇಸ್ರೇಲ್-ಪೆಲೆಸ್ತೀನ್ ಸಂಘರ್ಷವನ್ನು ಪಣಕ್ಕೆ ಒಡ್ಡಲಾಗಿದೆ. ಜತೆಗೆ, ವಿಶ್ವಸಂಸ್ಥೆಯ ಪ್ರಖ್ಯಾತಿ ಹಾಗೂ ಅಂತರಾಷ್ಟ್ರೀಯ ಸಮುದಾಯಗಳನ್ನು ಪರಿಹರಿಸಿ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯವನ್ನೂ ಪಣಕ್ಕೆ ಒಡ್ಡಲಾಗಿದೆ ಎಂದು ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಹೇಳಿದ್ದಾರೆ.

ಇಸ್ರೇಲ್-ಪೆಲೆಸ್ತೀನ್ ಬಿಕ್ಕಟ್ಟಿಗೆ 2 ದೇಶ ಸೂತ್ರವೇ ಪರಿಹಾರವಾಗಿದೆ ಮತ್ತು ನಾವು ವಿಶ್ವಾಸ ಕಳೆದುಕೊಳ್ಳಬಾರದು . ಈ ಬಿಕ್ಕಟ್ಟಿಗೆ ಅಂತರಾಷ್ಟ್ರೀಯ ಮಾನವ ಹಕ್ಕು ಮತ್ತು ಮಾನವೀಯ ಕಾಯ್ದೆಯಡಿ ಪರಿಹಾರ ರೂಪಿಸುವ ಪ್ರಯತ್ನಗಳಿಗೆ ಸದಸ್ಯ ದೇಶಗಳು ಕೈ ಜೋಡಿಸಬೇಕು . ಈ ಮಹಾನ್ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಮತ್ತು ರಚನಾತ್ಮಕ ಮಾತುಕತೆಗೆ ಪ್ರೋತ್ಸಾಹ ನೀಡಬೇಕು.

ವಿಶ್ವಸಂಸ್ಥೆಯ ಆರಂಭದ ದಿನದಿಂದಲೂ ಇರುವ ಪೆಲೆಸ್ತೀನ್-ಇಸ್ರೇಲ್ ಬಿಕ್ಕಟ್ಟಿಗೆ ಇನ್ನೂ ಪರಿಹಾರ ದೊರಕದಿರುವುದು ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಗತಿ ಆಗದಿರುವುದು ಅತ್ಯಂತ ನಿರಾಶೆಯ ವಿಷಯವಾಗಿದೆ. ಈ ವಿವಾದವು ವಿಶಾಲವಾದ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಅಡ್ಡಿಯಾಗಿರುವುದನ್ನು ನಾವು ಮತ್ತೆ ಮತ್ತೆ ಗಮನಿಸುತ್ತಿದ್ದೇವೆ ಎಂದರು.

ಪೆಲೆಸ್ತೀನ್ ಜನರು ರಾಜ್ಯತ್ವದಿಂದ ವಂಚಿತರಾಗುವ ಪರಿಸ್ಥಿತಿ ಇರುವವರೆಗೆ, ಪೆಲೆಸ್ತೀನ್ ಜನರಿಗೆ ನ್ಯಾಯಯುತವಾಗಿ ಸಲ್ಲಬೇಕಿರುವ ಭೂಮಿಯಲ್ಲಿ ಅಕ್ರಮ ವಸಾಹತು ನಿರ್ಮಾಣ ಮುಂದುವರಿಯುವರೆಗೆ ಪೆಲೆಸ್ತೀನ್ ಕುಟುಂಬಗಳು ಹಿಂಸಾಚಾರದಿಂದ ದಿಕ್ಕೆಟ್ಟು ಪಲಾಯನ ಮಾಡುವ ಪರಿಸ್ಥಿತಿ ಮತ್ತು ಅವರ ವಿರುದ್ಧದ ಅನ್ಯಾಯ ಮುಂದುವರಿಯಲಿದೆ. ಮನೆಗೆ ಹಿಂತಿರುಗಲಾಗದ ಸ್ಥಿತಿಯಲ್ಲಿ ಆಕ್ರೋಶ, ಕಹಿಭಾವನೆ ಮನವನ್ನು ಕೊರೆಯಲಿದೆ ಎಂದು ಅಬ್ದುಲ್ಲಾ ಶಾಹಿದ್ ಹೇಳಿದ್ದಾರೆ.

ಪೆಲೆಸ್ತೀನ್ ದೇಶವನ್ನು ಅರಬ್ ಮತ್ತು ಯೆಹೂದಿ ದೇಶವಾಗಿ ವಿಭಜಿಸುವ ವಿಶ್ವಸಂಸ್ಥೆಯ 181ನೇ ನಿರ್ಣಯದ 74ನೇ ವಾರ್ಷಿಕೋತ್ಸವದ ಕೆಲ ದಿನಗಳ ಬಳಿಕ ನಡೆಯುತ್ತಿರುವ ಮಹಾಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)