varthabharthi


ಅಂತಾರಾಷ್ಟ್ರೀಯ

ಪಾಶ್ಚಿಮಾತ್ಯ ದೇಶಗಳು ಸದ್ಭಾವನೆ ತೋರಿದರೆ ಪರಮಾಣು ಒಪ್ಪಂದ ಸಾಧ್ಯ : ಇರಾನ್

ವಾರ್ತಾ ಭಾರತಿ : 2 Dec, 2021

ಹೊಸೇನ್ ಅಮಿರ್ ಅಬ್ದುಲ್ಲಾಹಿಯಾನ್(photo:twitter/@Amirabdolahian)

ಟೆಹ್ರಾನ್, ಡಿ.2: ವಿಶ್ವದ ಶಕ್ತ ದೇಶಗಳೊಂದಿಗಿನ ಇರಾನ್‌ನ ಪರಮಾಣು ಒಪ್ಪಂದವನ್ನು ಪುನರೂರ್ಜಿತಗೊಳಿಸುವ ಒಪ್ಪಂದ ಕೈಗೆಟಕುವ ಸನಿಹದಲ್ಲಿದೆ. ಆದರೆ ಇದು ಪಶ್ಚಿಮದ ದೇಶಗಳ ಸದ್ಭಾವನೆಯನ್ನು ಆಧರಿಸಿದೆ ಎಂದು ಇರಾನ್‌ನ ವಿದೇಶ ವ್ಯವಹಾರ ಸಚಿವ ಹೊಸೇನ್ ಅಮಿರ್ ಅಬ್ದುಲ್ಲಾಹಿಯಾನ್ ಗುರುವಾರ ಹೇಳಿದ್ದಾರೆ.

ಪರಮಾಣು ಒಪ್ಪಂದ ಪುನರೂರ್ಜಿತಗೊಳಿಸುವ ಕುರಿತಂತೆ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಗಹನ ಮಾತುಕತೆ ಮುಂದುವರಿಯುತ್ತಿದೆ . ಇರಾನ್ ಮೇಲೆ ವಿಧಿಸಿರುವ ನಿರ್ಬಂಧ ರದ್ಥತಿ ಈ ಮಾತುಕತೆಯ ಪ್ರಮುಖ ವಿಷಯವಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಸದಾಶಯ ಹೊಂದಿದ್ದರೆ ಉತ್ತಮ ರೀತಿಯ ಒಪ್ಪಂದ ಕೈಗೆಟುಕಲಿದೆ. ತರ್ಕಬದ್ಧ, ಸಮಚಿತ್ತದ ಮತ್ತು ಫಲಿತಾಂಶ ಆಧಾರಿತ ಮಾತುಕತೆ ನಮ್ಮ ಆಶಯವಾಗಿದೆ ಎಂದವರು ಹೇಳಿದ್ದಾರೆ.

ವಿಶ್ವದ ಹಲವು ಶಕ್ತ ದೇಶಗಳು ಹಾಗೂ ಇರಾನ್ ನಡುವಿನ 2015ರ ಪರಮಾಣು ಒಪ್ಪಂದವನ್ನು ಪುನರೂರ್ಜಿತಗೊಳಿಸುವ ನಿಟ್ಟಿನಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ , ರಶ್ಯಾ ಮತ್ತು ಅಮೆರಿಕ ಪಾಲ್ಗೊಂಡಿರುವ ಮಾತುಕತೆ ಸೋಮವಾರ ವಿಯೆನ್ನಾದಲ್ಲಿ ಮುಂದುವರಿದಿದೆ. ಇರಾನ್‌ಗೆ ಪರಮಾಣು ಬಾಂಬ್ ತಯಾರಿಕೆ ಪ್ರಾಯೋಗಿಕವಾಗಿ ಅಸಾಧ್ಯಗೊಳಿಸುವ ಜತೆಗೆ , ಪರಮಾಣು ಶಕ್ತಿಯನ್ನು ನಾಗರಿಕ ಬಳಕೆಗೆ ಮಾತ್ರ ಅವಕಾಶ ನೀಡುವುದು ಮಾತುಕತೆಯ ಉದ್ದೇಶವಾಗಿದೆ. ಇದರಂತೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸೀಮಿತಗೊಳಿಸಿದರೆ ಆ ದೇಶದ ಮೇಲೆ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆ ವಿಧಿಸಿರುವ ಆರ್ಥಿಕ ದಿಗ್ಬಂಧ ತೆರವುಗೊಳಿಸಲಾಗುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)