varthabharthi


ನಿಮ್ಮ ಅಂಕಣ

ಇಲಾಖೆಗೆ ಸಂಬಂಧಿಸಿದವರೇ ಆಪ್ತ ಸಹಾಯಕರಾಗಲಿ

ವಾರ್ತಾ ಭಾರತಿ : 2 Dec, 2021
-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,

ದಿನದಿಂದ ದಿನಕ್ಕೆ ವಿದ್ಯಾವಂತರೆನಿಸಿಕೊಂಡಂತಹ ಕೆಲವು ಮಂದಿ ತಮ್ಮ ವಿದ್ಯೆಯನ್ನು ವಾಮಮಾರ್ಗಗಳ ಮೂಲಕ ಬಳಕೆ ಮಾಡಿಕೊಂಡಿದ್ದು, ಆರ್ಥಿಕ ಅಪರಾಧವೂ ಸೇರಿದಂತೆ ಅನೇಕ ಕೃತ್ಯಗಳಲ್ಲಿ ತೊಡಗಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರದ ಸಚಿವರು ತಮ್ಮ ಆಪ್ತ ಸಹಾಯಕರನ್ನು ತಮ್ಮ ಇಲಾಖೆಯ ವಿಚಾರದಲ್ಲಿ ಅನುಭವವುಳ್ಳಂತಹ ಅಧಿಕಾರಿಗಳನ್ನು ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಬೇಕು. ವಿಶೇಷವಾಗಿ ಗೃಹ ಸಚಿವರ ಆಪ್ತ ಸಹಾಯಕರು ಐ.ಪಿ.ಎಸ್. ಅಧಿಕಾರಿಗಳಾದರೆ ಅನುಕೂಲವಾಗುತ್ತದೆ. ಕಾರಣ ಅವರಿಗೆ ಕಾನೂನು ಸುವ್ಯವಸ್ಥೆಯ ನಿರ್ವಹಣೆ ಮಾಡಿದ ಅನುಭವದ ಜೊತೆಗೆ ಅಪರಾಧಗಳ ನಿಯಂತ್ರಣದ ಆಡಳಿತ ಜ್ಞಾನವೂ ಇರುತ್ತದೆ. ಇದಿಲ್ಲದೆ ಯಾವುದೋ ಒಬ್ಬ ಇಲಾಖೆಯ ಅಧಿಕಾರಿಗಳನ್ನು ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡರೆ ಮಂತ್ರಿಗಳು ಎಲ್ಲದಕ್ಕೂ ಅನ್ಯರನ್ನು ಅವಲಂಬಿಸಬೇಕಾಗುತ್ತದೆ. ಇಲಾಖೆಯ ಅನೇಕ ಸೂಕ್ಷ್ಮ್ಮತೆಗಳು ಅರಿವಿಗೆ ಬರುವುದಿಲ್ಲ. ಹಾಗೆಯೇ ವಿಧಾನಸಭೆಯ ಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಪತಿಗಳು ಸಂವಿಧಾನದ ಜ್ಞಾನವುಳ್ಳವರನ್ನು ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಪದೇ ಪದೇ ಸಂವಿಧಾನದ ಅನೇಕ ಸಂಗತಿಗಳು ಇವರ ನಿರ್ಣಯಗಳನ್ನು ಅವಲಂಬಿತವಾಗಿರುತ್ತದೆ. ಇನ್ನು ಸಂಸದೀಯ ಮತ್ತು ಕಾನೂನು ಸಚಿವರು ಕನಿಷ್ಠ ಕಾನೂನು ಜ್ಞಾನವುಳ್ಳ, ಕಾನೂನು ಇಲಾಖೆಯ ಅಧಿಕಾರಿಗಳನ್ನೇ ಆಪ್ತ ಸಹಾಯಕರನ್ನಾಗಿ ನೇಮಕಮಾಡಿಕೊಳ್ಳಬೇಕು. ಇದೇ ರೀತಿಯಲ್ಲಿ ಕೃಷಿ ಸಚಿವರು, ಹಣಕಾಸು ಸಚಿವರು, ಆರೋಗ್ಯ ಸಚಿವರು ತಮ್ಮ ಇಲಾಖೆಗಳ ಜ್ಞಾನವುಳ್ಳವರನ್ನು ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರೆ ಆಡಳಿತ ನಿರ್ವಹಣೆಗೆ ಅನುಕೂಲವಾಗುತ್ತದೆ. ಹಾಲಿ ಇರುವ ಪದ್ಧತಿಯನ್ನು ಕೈ ಬಿಟ್ಟು ಹೊಸ ರೀತಿಯ ಸಂಪ್ರದಾಯಕ್ಕೆ ನಮ್ಮ ಸರಕಾರಗಳು ಚಾಲನೆಯನ್ನು ನೀಡಲಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)