varthabharthi


ಸಂಪಾದಕೀಯ

ಕೇಂದ್ರದಲ್ಲಿ ಸರಕಾರವಿದೆ ಎನ್ನುವುದಕ್ಕೆ ಏನಾದರೂ ದಾಖಲೆಗಳಿವೆಯೇ?

ವಾರ್ತಾ ಭಾರತಿ : 3 Dec, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ರೈತರ ಪ್ರತಿಭಟನೆಗೆ ಸರಕಾರ ಮಣಿದಿದೆಯಾದರೂ, ರೈತರ ಕುರಿತ ಅದರ ಮನೋಧರ್ಮ ಮಾತ್ರ ಇನ್ನೂ ಬದಲಾಗಿಲ್ಲ. ಒಂದು ವರ್ಷ ಕಾಲ ಬೀದಿಯಲ್ಲಿ ಕುಳಿತು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸಚಿವರು ಸಂವೇದನಾ ಹೀನರಂತೆ ಮಾತನಾಡಿದ್ದಾರೆ. ‘‘ರೈತರು ಸಾವನ್ನಪ್ಪಿದ ಕುರಿತಂತೆ ತನ್ನಲ್ಲಿ ಯಾವುದೇ ದಾಖಲೆ ಇಲ್ಲ. ಆದುದರಿಂದ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸತ್ತಿಗೆ ತಿಳಿಸಿದ್ದಾರೆ. ಕೊರೋನ ಅವಾಂತರದ ಕಾಲದಲ್ಲಿ, ಮಳೆ, ಚಳಿಯಲ್ಲಿ ಒಂದು ವರ್ಷ ರೈತರನ್ನು ಬೀದಿಯಲ್ಲಿ ನಿಲ್ಲಿಸಿದ ಸರಕಾರ, ಇದೀಗ ರೈತರ ಸಾವಿನ ದಾಖಲೆಗಳೇ ಇಲ್ಲ ಎನ್ನುವುದು ರೈತರ ಸಾವನ್ನು ಅದು ಎಷ್ಟರ ಮಟ್ಟಿಗೆ ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದನ್ನು ಹೇಳುತ್ತದೆ. ಈ ಹಿಂದೆ ವಲಸೆ ಕಾರ್ಮಿಕರ ಸಾವು ನೋವುಗಳ ಬಗ್ಗೆಯೂ ಸರಕಾರ ಇದೇ ಮಾತನ್ನು ಹೇಳಿತ್ತು. ಮೊದಲ ಅಲೆಯ ಸಂದರ್ಭದಲ್ಲಿ ಸರಕಾರ ವಿಧಿಸಿದ ಲಾಕ್‌ಡೌನ್, ಸಾವಿರಾರು ವಲಸೆ ಕಾರ್ಮಿಕರನ್ನು ಬೀದಿ ಪಾಲು ಮಾಡಿತು. ಈ ಸಂದರ್ಭದಲ್ಲಿ ಹೆದ್ದಾರಿಯುದ್ದಕ್ಕೂ ನೂರಾರು ಕಿಲೋಮೀಟರ್ ನಡೆದು ಕಾರ್ಮಿಕರು ಮನೆ ಸೇರುವ ಸನ್ನಿವೇಶ ನಿರ್ಮಾಣವಾಯಿತು. ಹಲವರು ಅನಾರೋಗ್ಯದಿಂದ ದಾರಿ ಮಧ್ಯೆಯೇ ಮೃತರಾದರು. ರೈಲು ಹಳಿಗಳಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ರೈಲು ಹರಿದ ಘಟನೆಯನ್ನು ದೇಶ ಇನ್ನೂ ಮರೆತಿಲ್ಲ. ಹಸಿವು, ನಿರುದ್ಯೋಗದಿಂದ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕರ ಸಂಖ್ಯೆಯೂ ಕಡಿಮೆಯಿರಲಿಲ್ಲ. ದೇಶದ ವಲಸೆ ಕಾರ್ಮಿಕರ ಬರ್ಬರ ಸ್ಥಿತಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಆದರೆ ಸಂಸತ್‌ನಲ್ಲಿ, ಲಾಕ್‌ಡೌನ್ ಕಾರಣದಿಂದ ಮೃತಪಟ್ಟ ಕಾರ್ಮಿಕರ ಕುರಿತಂತೆ ಯಾವ ದಾಖಲೆಯೂ ನಮ್ಮಲ್ಲಿಲ್ಲ ಎಂದು ಸರಕಾರ ನಾಚಿಕೆ ಬಿಟ್ಟು ಹೇಳಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದ ದುರಂತದ ಬಗ್ಗೆ ಸರಕಾರದ ಬಳಿ ದಾಖಲೆಯೇ ಇಲ್ಲ ಎನ್ನುವುದು ಸರಕಾರದ ವೈಫಲ್ಯವನ್ನು ಹೇಳುವುದಿಲ್ಲವೆ? ಕೇಂದ್ರದಲ್ಲಿ ಸರಕಾರವೊಂದು ಅಸ್ತಿತ್ವದಲ್ಲಿದೆ ಎನ್ನುವುದಕ್ಕೆ ಈಗ ಜನರು ದಾಖಲೆ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ರೈತ ಹೋರಾಟದಲ್ಲಿ ಸುಮಾರು 700 ಮಂದಿ ರೈತರು ಸತ್ತಿದ್ದಾರೆ ಎಂದು ರೈತ ನಾಯಕರು ಹೇಳುತ್ತಿದ್ದಾರೆ. ಅವರಿಗೆ ಕೇಂದ್ರ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. 700 ಮಂದಿಯಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಕಾರು ಹರಿದು ಸತ್ತಿದ್ದಾರೆ. ಅನಾರೋಗ್ಯದಿಂದಲೂ ಮೃತಪಟ್ಟಿದ್ದಾರೆ. ಈ ಸಾವಿಗೆ ಯಾರು ಹೊಣೆ? ರೈತರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ಷಮೆಯಾಚಿಸಿದ್ದಾರೆ. ಅಂದರೆ ರೈತರನ್ನು ಅಷ್ಟು ದಿನಗಳ ಕಾಲ ಬೀದಿಯಲ್ಲಿ ನಿಲ್ಲಿಸಿದ್ದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಪ್ರತಿಭಟನೆ ನಡೆದ ಒಂದೆರಡು ತಿಂಗಳಲ್ಲೇ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ ಕಾಯ್ದೆಯನ್ನು ಹಿಂದೆಗೆದುಕೊಂಡಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ. ಆದರೆ ಸರಕಾರ ರೈತರ ಹಿತಾಸಕ್ತಿಯನ್ನು ಮರೆತು ಅದಾನಿ, ಅಂಬಾನಿಗಳಿಗಾಗಿ ಮೊಂಡುತನವನ್ನು ಪ್ರದರ್ಶಿಸಿತು. ರೈತರ ಸಮಸ್ಯೆಯನ್ನು ಆಲಿಸುವ ಬದಲು, ಅವರನ್ನು ಬೆದರಿಸಿ ಅಲ್ಲಿಂದ ಓಡಿಸುವ ಪ್ರಯತ್ನವನ್ನು ಮಾಡಿತು. ರೈತರನ್ನು ದಮನಿಸುವಲ್ಲಿ ಸಂಪೂರ್ಣ ವಿಫಲವಾದ ಬಳಿಕವೇ ರೈತರ ಮುಂದೆ ಕ್ಷಮೆಯಾಚಿಸಿ, ಕಾಯ್ದೆಗಳನ್ನು ಹಿಂದೆಗೆದುಕೊಂಡಿತು. ಸರಕಾರದ ಹಠಮಾರಿ, ಸರ್ವಾಧಿಕಾರಿ ಧೋರಣೆಯಿಂದಾಗಿ 700 ಮಂದಿ ಮೃತಪಟ್ಟರು. ಆದುದರಿಂದ, ಅವರ ಸಾವಿನ ಹೊಣೆಯನ್ನು ಸರಕಾರವೇ ಹೊತ್ತು, ಸೂಕ್ತ ಪರಿಹಾರವನ್ನು ನೀಡಬೇಕಾಗಿದೆ.

ತನ್ನಲ್ಲಿ ದಾಖಲೆಯಿಲ್ಲ ಎನುವುದು ಪರಿಹಾರ ನೀಡದೇ ಇರುವುದಕ್ಕೆ ಸಮರ್ಥನೆಯಾಗುತ್ತದೆಯೆ? ದಾಖಲೆ ಇಲ್ಲದೇ ಇದ್ದರೆ, ಸೂಕ್ತ ದಾಖಲೆಗಳನ್ನು ಸರಕಾರ ತರಿಸಿಕೊಳ್ಳಬೇಕಾಗಿದೆ. ಮೃತಪಟ್ಟವರು ಪ್ರಧಾನಿ ಮೋದಿಯವರ ಮುಂದೆ ಬಂದು ‘ನಾವು ಹೋರಾಟದಲ್ಲಿ ಮೃತರಾಗಿದ್ದೇವೆ’ ಎಂದು ಹೇಳಿಕೆ ನೀಡುವುದಕ್ಕೆ ಆಗುವುದಿಲ್ಲ. ಈಗಾಗಲೇ, ಪ್ರತಿಭಟನಾ ಸ್ಥಳದಲ್ಲಿ ಮೃತಪಟ್ಟ, ಪ್ರತಿಭಟನೆಯ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟ ರೈತರ ಹೆಸರುಗಳನ್ನು ಸಂಗ್ರಹಿಸುವ ಕೆಲಸವನ್ನು ಸರಕಾರ ಮಾಡಬೇಕು. ಮೃತ ರೈತರ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿ ಈಗಾಗಲೇ ತೆಲಂಗಾಣ ಸರಕಾರ ಘೋಷಿಸಿದೆ. ‘‘ಉತ್ತರ ಪ್ರದೇಶ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮೃತಪಟ್ಟ ರೈತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಧನ ನೀಡುತ್ತೇವೆ’’ ಎಂದು ಸಮಾಜವಾದಿ ಪಕ್ಷ ಭರವಸೆ ನೀಡಿದೆ. ರಾಜ್ಯಗಳಿಗೆ ಸಾಧ್ಯವಾದುದು ಕೇಂದ್ರಕ್ಕೆ ಯಾಕೆ ಸಾಧ್ಯವಾಗುವುದಿಲ್ಲ? ರೈತರ ಸಾವಿಗೆ ನೇರ ಕಾರಣವಾಗಿರುವ ಕೇಂದ್ರ ಸರಕಾರ, ಸಂತ್ರಸ್ತರ ಮಾಹಿತಿಗಳನ್ನು ಸಂಗ್ರಹಿಸಿ ಅರ್ಹರಿಗೆ ಪರಿಹಾರ ನೀಡುತ್ತೇವೆ ಎಂದು ಭರವಸೆಯನ್ನು ನೀಡಿ, ರಾಜ್ಯಗಳ ಮುಂದೆ ತನ್ನ ಮಾನವನ್ನು ಉಳಿಸಿಕೊಳ್ಳಬೇಕಾಗಿದೆ.

 ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ನೂರಾರು ನಾಗರಿಕರು ಪ್ರಾಣವನ್ನು ಕಳೆದು ಕೊಂಡಿದ್ದಾರೆ. ಅಷ್ಟೇ ಅಲ್ಲ, ಸಂತ್ರಸ್ತರ ಮೇಲೆಯೇ ಪ್ರಕರಣವನ್ನು ದಾಖಲಿಸಲಾಗಿದೆ. ಸಿಎಎ ಪ್ರತಿಭಟನೆಯಲ್ಲಿ ಭಾಗಿಯಾದವರನ್ನು ದಿಲ್ಲಿ ಗಲಭೆಯ ಸಂಚು ಆರೋಪದಲ್ಲಿ ಬಂಧಿಸಿ ಜೈಲಲ್ಲೂ ಇಡಲಾಗಿದೆ. ಒಂದು ಸರ್ವಾಧಿಕಾರಿ ಸರಕಾರವಷ್ಟೇ ತನ್ನದೇ ದೇಶದ ಜನರ ಮೇಲೆ ಈ ರೀತಿಯ ದೌರ್ಜನ್ಯವನ್ನು ಎಸಗಬಹುದು. ಯಾವುದೇ ಕಾನೂನನ್ನು ಜನರ ಮೇಲೆ ಬಲವಂತವಾಗಿ ಹೇರಲು ಪ್ರಜಾಸತ್ತಾತ್ಮಕ ದೇಶದಲ್ಲಿ ಅವಕಾಶವಿಲ್ಲ ಎನ್ನುವುದನ್ನು ಮೊದಲು ಸರಕಾರ ಅರ್ಥ ಮಾಡಿಕೊಳ್ಳಬೇಕು. ಸಿಎಎ ಕಾಯ್ದೆಯ ವಿಷಯದಲ್ಲಿ ಅಮಾಯಕ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿದಂತೆಯೇ, ರೈತರನ್ನು ‘ಉಗ್ರಗಾಮಿ’ಗಳೆಂದು ಕರೆದು ದಮನಿಸಬಹುದು ಎಂಬ ಸರಕಾರದ ಹುಂಬ ನಿಲುವೇ ಇಂದು ಅದಕ್ಕೆ ಮುಳುವಾಗಿದೆ. ರೈತರು ಇನ್ನೂ ಹೋರಾಟವನ್ನು ಹಿಂದೆಗೆದುಕೊಂಡಿಲ್ಲ ಎನ್ನುವುದನ್ನು ಸರಕಾರ ಗಮನಿಸಬೇಕಾಗಿದೆ. ರೈತರ ಕುರಿತಂತೆ ಅಸೂಕ್ಷ್ಮವಾಗಿ ನಡೆದುಕೊಳ್ಳುವುದು, ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಿ ಅವರನ್ನು ಪ್ರಚೋದಿಸುವುದು ಇತ್ಯಾದಿಗಳು ಇನ್ನಾದರೂ ನಿಲ್ಲಬೇಕು. ರೈತರ ಹೋರಾಟದಿಂದ ಕಾಯ್ದೆಗಳು ಹಿಂದೆಗೆಯಲ್ಪಟ್ಟದ್ದು ಮಾತ್ರವಲ್ಲ, ಸರಕಾರದ ಸರ್ವಾಧಿಕಾರಿ ಧೋರಣೆಗೆ ಮೂಗುದಾರವನ್ನು ಹಾಕಲಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಈ ಹೋರಾಟ ಬಲಪಡಿಸಿದೆ. ಆದುದರಿಂದ, ಹುತಾತ್ಮ ರೈತರಿಗೆ ಪರಿಹಾರವನ್ನು ನೀಡುವುದಷ್ಟೇ ಅಲ್ಲ, ಪ್ರತಿಭಟನಾ ಸ್ಥಳದಲ್ಲಿ ಮೃತ ರೈತರಿಗಾಗಿ ಸ್ಮಾರಕವೊಂದನ್ನು ನಿರ್ಮಿಸಬೇಕು. ಭವಿಷ್ಯದಲ್ಲಿ ಎಲ್ಲ ರಾಜಕೀಯ ನಾಯಕರಿಗೂ ಆ ಸ್ಮಾರಕ ಪ್ರಜಾಸತ್ತಾತ್ಮಕವಾದ ಸಂದೇಶಗಳನ್ನು ನೀಡುತ್ತಿರಬೇಕು. ಸರ್ವಾಧಿಕಾರಿ ಸರಕಾರಕ್ಕೆ ಆ ಸ್ಮಾರಕ ಒಂದು ಎಚ್ಚರಿಕೆಯೂ ಆಗಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)