varthabharthi


ನಿಮ್ಮ ಅಂಕಣ

ಕೊಂಕಣಿ ಅಸ್ಮಿತೆಗೆ ಧಕ್ಕೆ ತರಲಿದೆಯೇ ಬ್ರಾಹ್ಮಣ್ಯದ ಸಾರಸ್ವತವಾದ?

ವಾರ್ತಾ ಭಾರತಿ : 3 Dec, 2021
ಕಲ್ಲಚ್ಚು ಮಹೇಶ ಆರ್. ನಾಯಕ್

ನದಿಯ ಮೂಲ ಕೇಳಬಾರದು ಎಂಬ ಮಾತಿದೆ ನಿಜ, ಆದರೆ ಅದರ ಹರಿವಿನ ಮೂಲ ನಮ್ಮ ಕಣ್ಣಿಗೆ ಕಾಣುವಂತಹದ್ದು. ಒಂದರ್ಥದಲ್ಲಿ ಜಗತ್ತಿನ ಬಹುತೇಕ ನಾಗರಿಕತೆಯ ಬೆಳವಣಿಗೆ ಮತ್ತು ಮಾನವನ ಹಸಿವು ತಣಿಸಿ ಕಾಯಕ ಕಲಿಸಿದ್ದು ಈ ನದಿ ಹರಿವಿನುದ್ದಕ್ಕೂ ಎಂಬುದು ನಮ್ಮ ಕಣ್ಣ ಮುಂದಿರುವ ಇತಿಹಾಸ. ಇದಕ್ಕೆ ಭಾರತದ ಸರಿಸುಮಾರು ಎಲ್ಲ ನದಿಗಳೂ ಸಾಕ್ಷಿ. ಈ ನೆಲೆಯಲ್ಲಿ ಒಂದೆಡೆ ದೈವಿ ಸ್ವರೂಪ ಹೊಂದಿರುವ ಮತ್ತೊಂದೆಡೆ ಗುಪ್ತಗಾಮಿನಿಯೂ ಎನಿಸಿಕೊಂಡಿರುವ ಸರಸ್ವತಿ ನದಿಯೂ ತನ್ನ ಬಾಹ್ಯ ಮತ್ತು ಆಂತರಿಕ ಜೀವನವಧಿಯಲ್ಲಿ ಇಂತಹ ನೆಲೆಗೆ ಖಂಡಿತ ಕಾರಣವಾಗಿದ್ದಿರಬಹುದು. ಹಾಗಾಗಿ ಕಾಲಾನುಸಾರದಲ್ಲಿ ಶತ ಶತಮಾನಗಳ ಅಂತರದಲ್ಲಿ ಸರಸ್ವತಿ ನದಿ ಹರಿವಿನ ಭಾಗದ ಜನರು ಸಾರಸ್ವತರೆನಿಸಿಕೊಂಡು ಮುಂದೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತಿತರ ಅನಿವಾರ್ಯ ಮತ್ತು ಅಗತ್ಯದ ಎರಡು ಕಾರಣಗಳಿಂದ ಅಲ್ಲಿಂದ ವಲಸೆ ಹೊರಟು (ವಲಸೆ ಎಂಬುದು ಇಂದಿಗೂ ನಿಲ್ಲದ ಸಹಜ ಜಾಗತಿಕ ವಿದ್ಯಮಾನ, ಈಗ ಆಧುನೀಕರಣಗೊಂಡಿದೆಯಷ್ಟೇ) ಹೆಚ್ಚು ಕಡಿಮೆ ದೇಶದ ಎಲ್ಲ ಭಾಗಗಳಲ್ಲೂ ನೆಲೆಯಾಗಿ ಅಂದು ಸಾವಿರಾರು ಸಂಖ್ಯೆಯಲ್ಲಿ ಇದ್ದವರು ಇಂದು ಲಕ್ಷ ಕೋಟಿಗಳಾಗಿದ್ದಾರೆ.

  ಹಾಗೆ ನೋಡಿದರೆ ನದಿ ಮೂಲದ ಹಿನ್ನೆಲೆಯಲ್ಲಿ ಜನರನ್ನು ಗುರುತಿಸಲು ಅಥವಾ ಹೆಸರಿಸಲು ಆರಂಭಿಸಿದರೆ ಕರ್ನಾಟಕದ ಒಂದು ಭಾಗದವರು ಕಾವೇರಿಯನ್ಸ್ ಆಗಿ ಮತ್ತೊಂದು ಭಾಗದವರು ನೇತ್ರಾವತಿಕಾರ್ಸ್ ಆಗಿ ಬದಲಾಗಬೇಕಾಗಬಹುದೇನೋ. ಹಾಗಾಗಿ ಮೊತ್ತ ಮೊದಲು ಇದನ್ನು ಒಂದು ಸಾಂಕೇತಿಕವಾಗಿ ಗುರುತಿಸಿಕೊಳ್ಳುವ ಅಥವಾ ಕರೆಸಿಕೊಳ್ಳುವ ಬಾಯಿ ಮಾತಿನ ಬಳಕೆಯ ಪ್ರಕ್ರಿಯೆ ಎಂದಷ್ಟೇ ಭಾವಿಸಬೇಕು ವಿನಹ, ನೇರವಾಗಿ ನಿರ್ದಿಷ್ಟ ಜಾತಿ, ಸಮುದಾಯ, ಧರ್ಮ, ಪಂಗಡಗಳಿಗೆ ತಾಳೆ ಹಾಕಿ ಬೌದ್ಧಿಕ ಮತ್ತು ಸಾಮಾಜಿಕ ಸ್ಥಾನಮಾನದ ದೃಷ್ಟಿಯಿಂದ ನೋಡಿದರೆ ಒಟ್ಟು ಜನಜೀವನದ ಅಥವಾ ಸ್ವಸ್ಥ ಸಮಾಜದ ಪ್ರಗತಿಯ ಹಿನ್ನಡೆಗೂ ಕಾರಣವಾಗಿ ತೊಡಕಾಗಬಹುದು. ಆರ್ಯರು ಶ್ರೇಷ್ಠ ಎಂಬ ಪೊಳ್ಳು ವಾದದೆದುರು ದ್ರಾವಿಡರು ಅಥವಾ ಯಾವುದೇ ಸ್ಥಳೀಯ ಮೂಲನಿವಾಸಿಗಳು ಈಗಾಗಲೇ ಹಲವೆಡೆ ಮಂಕಾದಂತೆ. ಈ ನಿಟ್ಟಿನಲ್ಲಿ ಸರಸ್ವತಿಯ ಮೂಲದಿಂದಲೇ ಬೆಳೆದು ಬಂದು ಬಹುತೇಕ ಮಹಾರಾಷ್ಟ್ರ, ಗೋವಾ ಮೂಲಕ ಸಾಗಿ ಕರ್ನಾಟಕ ಕೇರಳ ಸೇರಿ ಕಳೆದ ಸುಮಾರು 3-4 ಶತಮಾನಗಳಿಂದ ಜೀವನ ಸಾಗಿಸುತ್ತಿರುವ ಸುಮಾರು 41ಪಂಗಡ ಉಪಪಂಗಡಗಳಾಗಿ, ಬಹಳ ಅಪರೂಪಕ್ಕೆ ನಮ್ಮ ನಡುವಿನ ಮೂರು ಪ್ರಮುಖ ಧರ್ಮಗಳಲ್ಲಿ ಕಾಣಿಸಿಕೊಳ್ಳುವ ಕೊಂಕಣಿ ಭಾಷಿಕರು ಒಂದರ್ಥದಲ್ಲಿ ಒಂದು ಕಾಲದ ಮೂಲ ಸಾರಸ್ವತರೆಂದೆನಿಸಿಕೊಂಡರೂ ಅದಕ್ಕಿಂತಲೂ ಹೆಚ್ಚಾಗಿ ತದನಂತರದ ತಮ್ಮತನದ ಅಸ್ಮಿತೆಯನ್ನು ಈವರೆಗೂ ಉಳಿಸಿ ಬೆಳೆಸಿಕೊಂಡಿರುವ ಒಂದು ಬಹು ದೊಡ್ಡ ಭಾಷಿಕ ಸಮುದಾಯ.

ಆದರೆ ಈಗ ಒಮ್ಮಿಂದೊಮ್ಮೆಗೆ ಇಂತಹ ವಿಭಿನ್ನತೆಯ ಕೊಂಕಣಿ ಭಾಷಿಕ ಸಮುದಾಯದೊಳಗಿನ ಕೆಲವು ನಿರ್ದಿಷ್ಟ ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿರುವ ಬಾಹ್ಮಣ್ಯವನ್ನು ಅನುಕರಿಸುವ ಜಾತಿಯವರು ನಾವು ಸಾರಸ್ವತರು ಎಂಬ ಹೆಗ್ಗಳಿಕೆಯೊಂದಿಗೆ ಹೊಸ ವಾದದ ಕೂಗೊಂದನ್ನು ಹುಟ್ಟುಹಾಕಿ ಅದೀಗ ರಾಜಕೀಯ ಸ್ವರೂಪವನ್ನು ಪಡೆದು ದೇಶಪ್ರೇಮದ ಹೆಸರಿನಲ್ಲಿ ಭಾಷೆ, ಭಾವ ಮತ್ತು ಅಸ್ತಿತ್ವವನ್ನು ಕಡೆಗಣಿಸಿ ಕೊಂಕಣಿ ಅಸ್ಮಿತೆಗೆ ಸಂಪೂರ್ಣ ಧಕ್ಕೆ ತರಲು ಹೊರಟಂತಿದೆ.

 ಮೂಲತಃ ದೇಶಪ್ರೇಮ ಇವೆಲ್ಲವನ್ನು ಮೀರಿ ಇರಬೇಕಾದ್ದು ನಿಜ. ಆದರೆ ಪ್ರಸ್ತುತ ದೇಶಾದ್ಯಂತ ರಾಜಕೀಯಕರಣಗೊಂಡ ಪಕ್ಷ ಆಧಾರಿತ ದೇಶಪ್ರೇಮ, ಇಲ್ಲಿಯವರೆಗೆ ಸರಸ್ವತಿ ನದಿ ಮೂಲದ ಜನಾಂಗವನ್ನೆಲ್ಲ ಸಾಂಕೇತಿಕವಾಗಿ ಸಾರಸ್ವತರೆಂದು ಕರೆಸಿಕೊಂಡವರಲ್ಲಿ ಭಿನ್ನತೆಯನ್ನು ಹುಡುಕಿ ಈಗ ಒಮ್ಮಿಂದೊಮ್ಮೆಗೆ ಅದರೊಳಗಿನ ಕೆಲವು ಪ್ರಬಲ ಮತ್ತು ಬ್ರಾಹ್ಮಣ್ಯದ ಆಚರಣೆವುಳ್ಳವರನ್ನು ಮತ್ತು ನಿರ್ದಿಷ್ಟ ರಾಜಕೀಯ ಒಲವಿನವರನ್ನು ಮಾತ್ರ ಸಾರಸ್ವತರೆನ್ನಲು ಹಾಗೂ ಆವರ ಒಗ್ಗೂಡುವಿಕೆಗೆ ಸಜ್ಜಾಗುತ್ತಿದ್ದಾರೆ. ಈ ಮೂಲಕ ಬಹು ಸಂಸ್ಕೃತಿಯ ನೆಲೆಯಲ್ಲಿ ಬಹಳ ಮುಖ್ಯವಾಗಿ ಕರ್ನಾಟಕದಾದ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಹಿಂದುಳಿದ ದಲಿತ ಸಮುದಾಯದ ಕೊಂಕಣಿ ಭಾಷಿಕರನ್ನು ಸೇರಿದಂತೆ ಹಲವರನ್ನು ಮುಖ್ಯ ವಾಹಿನಿಯಿಂದ ಹೊರಗಿಡುವ ಅತ್ಯಂತ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಕರಾವಳಿಯಲ್ಲಂತೂ ಹಿಂದೂ ಧರ್ಮದ ಬಹುತೇಕ ವ್ಯಾಪಾರಿ ಹಿನ್ನೆಲೆಯ ಕೊಂಕಣಿ ಸಮುದಾಯವೊಂದನ್ನು ಬಿಟ್ಟರೆ ಉಳಿದ ಕೊಂಕಣಿ ಹಿನ್ನೆಲೆಯವರನ್ನೆಲ್ಲ ಎರಡನೇ ದರ್ಜಿಗೆ ತಳ್ಳುವ ಮರ್ಜಿಗೆ ಕೈಹಾಕಿದೆ. ರಾಜಕೀಯ ಪ್ರಾಬಲ್ಯ ಗಳು ನಮ್ಮ ನಡುವಿನ ಮಠ-ಮಂದಿರಗಳ ಪ್ರವೇಶದಿಂದ ಈಗಾಗಲೇ ಜಾತಿ ಆಧಾರಿತವಾಗಿ ಗಟ್ಟಿಗೊಂಡು ಮುಖ್ಯಮಂತ್ರಿಯನ್ನೇ ಆಯ್ಕೆ ಮಾಡುವ ಹಂತಕ್ಕೆ ಬಂದಿರುವಾಗ, ಈ ಸಮುದಾಯದ ಪ್ರಬಲ ಮಠಗಳು ಇದಕ್ಕೂ ಕಣ್ಣು ಹಾಕಿದ್ದು ಮುಂದೇನು ಕಾದಿದೆಯೋ ಎಂಬ ಭಯಕ್ಕೂ ಕಾರಣವಾಗಿದೆ. ಈಗಾಗಲೇ ಭಾಷೆ ಒಂದಾದರೂ ಧರ್ಮದ ಆಧಾರದ ಭಿನ್ನತೆಯೊಳಗೆ ಅಗತ್ಯದಷ್ಟು ಒಂದಾಗದ ಕೊಂಕಣಿಗರ ನಡುವೆ ಇದೀಗ ಧರ್ಮದೊಳಗೆಯೇ ಇನ್ನೊಂದು ಕಂದಕ ನಿರ್ಮಾಣಕ್ಕೆ ಮುನ್ನುಡಿ ಬರೆಯುವಂತಿದೆ ಇತ್ತೀಚಿನ ಮಂಗಳೂರಿನಲ್ಲಿ ನಾವು ಸಾರಸ್ವತರು ಎಂಬ ಸಮ್ಮೇಳನವೊಂದರ ಮೂಲಕ.

 ಇಂತಹ ನಿರ್ದಿಷ್ಟ ಜಾತಿಯ ಕೊಂಕಣಿ ಸಾರಸ್ವತರು ಮಾತ್ರ ಶ್ರೇಷ್ಠ, ಬುದ್ಧಿವಂತರು ಆಡಳಿತಕ್ಕೆ ಸಮರ್ಥರು... ಇತ್ಯಾದಿ ವಾದಗಳಂತೂ ಸಮಗ್ರವಾಗಿ ಬೇರೂರಿರುವ ಕೊಂಕಣಿ ಭಾಷೆಯ ಅಸ್ತಿತ್ವ ಮತ್ತು ಅಸ್ಮಿತೆಯನ್ನೇ ಹೋಗಲಾಡಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಕೊಂಕಣಿಗರು ಎಚ್ಚೆತ್ತು ಕೊಳ್ಳಬೇಕಿದೆ ಮತ್ತು ತಮ್ಮ ಪ್ರತಿರೋಧವನ್ನೂ ಮುಂದಿಡಬೇಕಾಗಿದೆ ರಾಜಕೀಯ ಸೇರಿದಂತೆ ಪ್ರತಿಯೊಂದು ಅಗತ್ಯದ ಕ್ಷೇತ್ರಗಳಲ್ಲೂ. ಪಕ್ಷ ವ್ಯಕ್ತಿ ಎಂದೂ ಶಾಶ್ವತವಲ್ಲ, ಒಂದೊಮ್ಮೆ ಮೈದುಂಬಿಕೊಂಡಿದ್ದ ಸರಸ್ವತಿ ನದಿಯಂತೆ ಮುಂದೆ ಬತ್ತಲೂಬಹುದು ಆಗಲೂ ಈ ಕೊಂಕಣಿ ಸಂಸ್ಕೃತಿ ಮಾತ್ರ ಗಟ್ಟಿಯಾಗಿ ಉಳಿದು ಬೆಳೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)