varthabharthi


ವಿಶೇಷ-ವರದಿಗಳು

ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್ ನ 10 ನ್ಯಾಯಾಧೀಶರು

ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕರ್ನಾಟಕದ ಪ್ರಬಲ ಮಠಾಧೀಶ ರಾಘವೇಶ್ವರ ಭಾರತಿ

ವಾರ್ತಾ ಭಾರತಿ : 8 Dec, 2021
ಸಂಯುಕ್ತಾ ಧರ್ಮಾಧಿಕಾರಿ (thenewsminute.com)

FACEBOOK/SRISAMSTHANA

ಕರ್ನಾಟಕದ ಅತ್ಯಂತ ದೊಡ್ಡ ಮಠಗಳಲ್ಲಿ ಒಂದಾಗಿರುವ ರಾಮಚಂದ್ರಾಪುರ ಮಠದ ಪ್ರಬಲ ಪೀಠಾಧಿಪತಿ ರಾಘವೇಶ್ವರ ಭಾರತಿ ಅವರು ಓರ್ವ ಅಪ್ರಾಪ್ತ ವಯಸ್ಕೆ ಸೇರಿದಂತೆ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಧರ್ಮಭೇದವಿಲ್ಲದೆ ಧಾರ್ಮಿಕ ನಾಯಕರಿಂದ ದೌರ್ಜನ್ಯಗಳು ತೀವ್ರ ಗಮನವನ್ನು ಸೆಳೆದಿರುವ ಈ ಸಮಯದಲ್ಲಿ ರಾಘವೇಶ್ವರರ ವಿರುದ್ಧ ವಿಚಾರಣೆ ಮಿಂಚಿನ ವೇಗದಲ್ಲಿ ನಡೆಯಬೇಕಿತ್ತು,ಆದರೆ ಅದು ಹಾಗಾಗಿಲ್ಲ.
 
ರಾಘವೇಶ್ವರರು 2011-2014ರ ನಡುವೆ 168 ಸಲ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಓರ್ವ ಮಹಿಳೆ ಆರೋಪಿಸಿದ್ದರು. ವಿಚಾರಣಾ ನ್ಯಾಯಾಲಯವು ರಾಘವೇಶ್ವರರನ್ನು ಖುಲಾಸೆಗೊಳಿಸಿದ್ದು,ಮೇಲ್ಮನವಿಯು ಕರ್ನಾಟಕ ಉಚ್ಚ ನ್ಯಾಯಾಲದಲ್ಲಿ ಬಾಕಿಯಿದೆ. ಇನ್ನೊಂದು ಪ್ರಕರಣದಲ್ಲಿ ಆಗ 15ರ ಹರೆಯದವಳಾಗಿದ್ದ,ಶಿವಮೊಗ್ಗದಲ್ಲಿರುವ ರಾಮಚಂದ್ರಾಪುರ ಮಠದ ಶಾಲೆಯ ವಿದ್ಯಾರ್ಥಿನಿಯ ಮೇಲೆ ರಾಘವೇಶ್ವರರು ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ. 

ಭೂಕಬಳಿಕೆ ಮತ್ತು ಅಧಿಕಾರ ದುರುಪಯೋಗದ ಇತರ ಪ್ರಕರಣಗಳೂ ಈ ಸ್ವಾಮಿಯ ವಿರುದ್ಧ ಇವೆ. ಆದರೆ ಅದು ಅತ್ಯಾಚಾರ ಅಥವಾ ಭೂಕಬಳಿಕೆ ಆರೋಪವಾಗಿರಲಿ, ನವಂಬರ್ 2014ರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಹಲವಾರು ನ್ಯಾಯಾಧೀಶರು ರಾಘವೇಶ್ವರರ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಮತ್ತು ಕೆಲವರು ಪ್ರಕರಣವನ್ನು ತಮ್ಮ ಪೀಠದಿಂದ ವರ್ಗಾಯಿಸಬೇಕೆಂದು ಕೋರಿದ್ದಾರೆ ಮತ್ತು ಇಂತಹ 17 ಘಟನೆಗಳು ನಡೆದಿವೆ.

ಪೂರ್ವಾಶ್ರಮದಲ್ಲಿ ಹರೀಶ್ ಶರ್ಮಾ ಆಗಿದ್ದ ರಾಘವೇಶ್ವರರು ತನ್ನನ್ನು ಶ್ರೀರಾಮನ ಅವತಾರವೆಂದು ಹೇಳಿಕೊಳ್ಳುತ್ತಾರೆ. ತನ್ನ ಶಿಷ್ಯರು ಅದನ್ನು ನಂಬುವಂತೆಯೂ ಮಾಡಿದ್ದಾರೆ ಎಂದು ಅತ್ಯಾಚಾರ ಪ್ರಕರಣವೊಂದರಲ್ಲಿಯ ಸಂತ್ರಸ್ತ ಮಹಿಳೆ 2014ರಲ್ಲಿ ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದರು. ರಾಘವೇಶ್ವರರು ಕರ್ನಾಟಕದ ಸಣ್ಣ,ಆದರೆ ಅತ್ಯಂತ ಶಕ್ತಿಶಾಲಿ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ.

Photo: Thenewsminute.com

ಸ್ಥಳೀಯವಾಗಿ ಗೋರಕ್ಷಣಾ ಕಾರ್ಯಕ್ರಮವನ್ನು ನಡೆಸುತ್ತಿರುವ ರಾಘವೇಶ್ವರರು ಹಲವಾರು ರಾಜಕೀಯ ನಾಯಕರು ಮತ್ತು ಗಣ್ಯರಿಗೆ ಆಪ್ತರಾಗಿದ್ದಾರೆ. ನರೇಂದ್ರ ಮೋದಿ,ಯೋಗಿ ಆದಿತ್ಯನಾಥ,ಪ್ರತಿಭಾ ಪಾಟೀಲ್,ಸಂಸದೆ ಮತ್ತು ಭಯೋತ್ಪಾದನೆ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್,ಯೋಗಗುರು ಬಾಬಾ ರಾಮದೇವ್ ಮತ್ತಿರರೊಂದಿಗೆ ರಾಘವೇಶ್ವರರು ಇರುವ ಚಿತ್ರಗಳು ಅವರ ರಾಮಚಂದ್ರಾಪುರ ಮಠದಲ್ಲಿವೆ.

ರಾಘವೇಶ್ವರರ ವಿರುದ್ಧದ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರೂ ಹಿಂದೆ ಸರಿದಿದ್ದಾರೆ. ನ್ಯಾಯಾಧೀಶರು ಬೇರೆ ಸ್ವಾಮೀಜಿಯವರ ಅನುಯಾಯಿಗಳಾಗಿದ್ದಾರೆ ಅಥವಾ ಅವರ ಮಕ್ಕಳು ಸಂತ್ರಸ್ತೆಯ ಪುತ್ರಿಯ ಕ್ಲಾಸ್ ಮೇಟ್ ಆಗಿದ್ದಾರೆ ಎಂದು ರಾಘವೇಶ್ವರರ ಪರ ವಕೀಲರು ವಾದಿಸಿದ್ದು ಇದಕ್ಕೆ ಕಾರಣವಾಗಿತ್ತು.

ಸ್ವಾಮಿಯ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಮೊದಲನೆಯದು ಅವರ ಶಿಷ್ಯೆಯಾಗಿದ್ದ ಗಾಯಕಿ ಗೀತಾ (ಹೆಸರು ಬದಲಿಸಲಾಗಿದೆ)ರಿಗೆ ಸಂಬಂಧಿಸಿದೆ. 2010ರಲ್ಲಿ ರಾಮಚಂದ್ರಾಪುರ ಮಠದ ರಾಮಕಥಾ ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿದ್ದ ಗೀತಾ ಐವರ ತಂಡದಲ್ಲಿ ಮುಖ್ಯ ಗಾಯಕಿಯಾಗಿದ್ದರು. ಗೀತಾ ಜೊತೆ ಸಖ್ಯ ಬೆಳೆಸಿಕೊಂಡ ರಾಘವೇಶ್ವರರು ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ರಾಘವೇಶ್ವರರನ್ನು ಖುಲಾಸೆಗೊಳಿಸಿದ್ದು,ಮೇಲ್ಮನವಿಯು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿದೆ.

ಇನ್ನೊಂದು ಪ್ರಕರಣದಲ್ಲಿ ತಾನು 15 ವರ್ಷ ಪ್ರಾಯದವಳಾಗಿದ್ದಾಗ ರಾಘವೇಶ್ವರರು ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ. ಪೊಕ್ಸೊ ಆರೋಪಗಳನ್ನು ಹೊರಿಸಲಾಗಿರುವ ಈ ಪ್ರಕರಣದ ತೀರ್ಪನ್ನು ಸದ್ಯಕ್ಕೆ ಕಾಯ್ದಿರಿಸಲಾಗಿದೆ. ಹಿಂದೆ ರಾಘವೇಶ್ವರರ ಪರ ವಕೀಲರಾಗಿದ್ದು ಹಾಲಿ ಕರ್ನಾಟಕದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿರುವ ಅರುಣ ಶ್ಯಾಮ ಅವರು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದು, ಸಂತ್ರಸ್ತೆಯನ್ನು ಅಪಹರಿಸಿದ ಮತ್ತು ಬೆದರಿಕೆಯೊಡ್ಡಿದ ಆಪಾದನೆಯನ್ನು ಎದುರಿಸುತ್ತಿದ್ದಾರೆ.

Photo: Thenewsminute.com

ತಾನು 2013ರಲ್ಲಿ ಸ್ವಾಮಿಯೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದ್ದೆ, ಆದರೆ 2014ರಲ್ಲಿ ಮಠಕ್ಕೆ ಮರಳಿದ್ದೆ. ಆಗಲೂ ಸ್ವಾಮಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಿದ್ದರು, ಬಳಿಕ ತಾನು ಖಾಯಂ ಆಗಿ ಮಠವನ್ನು ತೊರೆದಿದ್ದೇನೆ ಎಂದು ಗೀತಾ ಆರೋಪಿಸಿದ್ದರು.
 
2014 ಜೂನ್ ನಲ್ಲಿ ಕೊನೆಯ ಲೈಂಗಿಕ ದೌರ್ಜನ್ಯದ ಬಳಿಕ ಗೀತಾ ವಿಷಯವನ್ನು ಪತಿಗೆ ತಿಳಿಸಿದ್ದರು. ಆದರೆ ಅವರು ಯಾವುದೇ ಕ್ರಮಕ್ಕೆ ಮುಂದಾಗುವ ಮುನ್ನವೇ ಅವರನ್ನು ಬಂಧಿಸಲಾಗಿತ್ತು. ದಂಪತಿ ತನ್ನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಘವೇಶ್ವರರು ಅವರು ತನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ದೂರು ಸಲ್ಲಿಸಿದ್ದರು. 

ಇದಾದ ಬಳಿಕ ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕಾಗಿ ರಾಘವೇಶ್ವರರ ವಿರುದ್ಧ ಕ್ರಮವನ್ನು ಕೋರಿ ಗೀತಾರ ಪುತ್ರಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸುತ್ತಿದ್ದರೆ ತನ್ನ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ರಾಘವೇಶ್ವರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣವು ತನಿಖೆಗೆ ಅರ್ಹವಾಗಿದೆ ಎಂದು ಹೇಳಿ ನ್ಯಾ.ಕೆ.ಎನ್.ಫಣೀಂದ್ರ ಅವರು ಅರ್ಜಿಯನ್ನು ವಜಾಗೊಳಿಸಿದ್ದರು.

ತಿಂಗಳ ಬಳಿಕ ರಾಘವೇಶ್ವರರು ಉಚ್ಚ ನ್ಯಾಯಾಲಯದಲ್ಲಿ ಇನ್ನೊಂದು ಮೇಲ್ಮನವಿಯನ್ನು ಸಲ್ಲಿಸಿದಾಗ ನ್ಯಾ.ಫಣೀಂದ್ರ ಅವರು ವಿಚಾರಣೆಯಿಂದ ದೂರ ಸರಿದಿದ್ದರು ಮತ್ತು ಇದು ರಾಘವೇಶ್ವರರ ವಿರುದ್ಧ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರ ಸರಣಿ ನಿರಾಕರಣೆಗಳಿಗೆ ನಾಂದಿ ಹಾಡಿತ್ತು.

ಈ ನಡುವೆ ಗೀತಾರ ಪತಿಯ ಸೋದರ ಆತ್ಮಹತ್ಯೆ ಮಾಡಿಕೊಂಡಿದ್ದರು .ಇದಕ್ಕೆ ರಾಘವೇಶ್ವರರ ಬೆಂಬಲಿಗರ ಬೆದರಿಕೆಯೇ ಕಾರಣವಾಗಿತ್ತು ಎಂದು ಗೀತಾ ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರದಲ್ಲಿ ಆರೋಪಿಸಿದ್ದರು.

ಈ ಪತ್ರವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದ ರಾಘವೇಶ್ವರರ ಪರ ವಕೀಲರು ದೂರುದಾರರಿಗೆ ಈ ನ್ಯಾಯಾಲಯದಲ್ಲಿ ವಿಶ್ವಾಸವಿಲ್ಲ ಎಂದು ವಾದಿಸಿದ್ದರು ಮತ್ತು ಇದೇ ಕಾರಣವನ್ನು ನೀಡಿ ನ್ಯಾ.ಫಣೀಂದ್ರ ವಿಚಾರಣೆಯಿಂದ ಹಿಂದೆ ಸರಿದಿದ್ದರು. ನ್ಯಾ.ಫಣೀಂದ್ರ ಅವರ ಬದಲು ಪ್ರಕರಣದ ವಿಚಾರಣೆಗೆ ನೇಮಕಗೊಳಿಸಲಾಗಿದ್ದ ನ್ಯಾ.ರಾಮಮೋಹನ ರೆಡ್ಡಿಯವರು 2015,ಜ.6ರಂದು ಬೆಳಿಗ್ಗೆ ಕೆಲ ಸಮಯ ವಿಚಾರಣೆಯನ್ನು ನಡೆಸಿದ್ದರೂ ಬಳಿಕ ಸಂಜೆ ತಾನು ವಿಚಾರಣೆಯಿಂದ ದೂರಸರಿಯುತ್ತಿರುವುದಾಗಿ ಪ್ರಕಟಿಸಿದ್ದರು.

ಒಂಭತ್ತು ದಿನಗಳ ಬಳಿಕ,ಜ.14ರಂದು ಈಗ ದಿವಂಗತರಾಗಿರುವ ನ್ಯಾ.ಮೋಹನ ಶಾಂತನಗೌಡ್ ಅವರು ಪ್ರಕರಣದ ವಿಚಾರಣೆಯಿಂದ ದೂರ ಸರಿದಿದ್ದರು. ಐದು ದಿನಗಳ ಬಳಿಕ,ಜ.19ರಂದು ವಿಚರಣೆಗೆ ನಿರಾಕರಣೆಯ ಸರದಿ ನ್ಯಾ.ಎನ್.ಕುಮಾರ್ ಅವರದಾಗಿತ್ತು. ಎರಡು ದಿನಗಳ ಬಳಿಕ ಪ್ರಕರಣದಲ್ಲಿಯ ಐದನೇ ನ್ಯಾಯಾಧೀಶ ಎಚ್.ಜಿ.ರಮೇಶ ಅವರೂ ವಿಚಾರಣೆಯಿಂದ ದೂರ ಸರಿದಿದ್ದರು. ಪೀಠದಲ್ಲಿ ಅವರ ಜೊತೆಯಲ್ಲಿದ್ದ ಇನ್ನೋರ್ವ ನ್ಯಾಯಾಧೀಶ ಪಿ.ಬಿ.ಭಜಂತ್ರಿ ಅವರೂ ಅದೇ ದಿನ ವಿಚಾರಣೆಯಿಂದ ಹಿಂದೆ ಸರಿದಿದ್ದರು.

 2016ರಲ್ಲಿ ರಾಘವೇಶ್ವರರ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ವಿಚಾರಣಾ ನ್ಯಾಯಾಲಯದ ನ್ಯಾ.ವಿಜಯ ಕುಮಾರಿ ಅವರು ನ್ಯಾಯಾಲಯಕ್ಕೆ ಗೈರು ಹಾಜರಾಗುತ್ತಿರುವ ಬಗ್ಗೆ ಸ್ವಾಮಿಯನ್ನು ತರಾಟೆಗೆತ್ತಿಕೊಂಡಿದ್ದರು. ಇದರ ಬೆನ್ನಲ್ಲೇ 2016,ಜ.29ರಂದು ಅವರನ್ನು ಪ್ರಕರಣದ ವಿಚಾರಣೆಯಿಂದ ಎತ್ತಂಗಡಿ ಮಾಡಲಾಗಿತ್ತು. ವಿಜಯ ಕುಮಾರಿಯವರ ಬಳಿಕ ಪುರುಷ ನ್ಯಾಯಾಧೀಶರನ್ನು ಪ್ರಕರಣದ ವಿಚಾರಣೆಗೆ ನೇಮಕಗೊಳಿಸಲಾಗಿತ್ತು. 

ಇದನ್ನು ಗೀತಾ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ,ಮಹಿಳಾ ನ್ಯಾಯಾಧೀಶರು ವಿಚಾರಣೆ ನಡೆಸಬೇಕು ಎಂದು ಕೋರಿದ್ದರು, ಆದರೆ ಅವರ ಮೇಲ್ಮನವಿ ಅಲ್ಲಿ ತಿರಸ್ಕೃತಗೊಂಡಿತ್ತು. ಬಳಿಕ ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ರಾಘವೇಶ್ವರರನ್ನು ಖಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೀತಾ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. 2018,ಜನವರಿಯಲ್ಲಿ ಅರ್ಜಿಯು ಮತ್ತೆ ನ್ಯಾ.ಫಣೀಂದ್ರ ಎದುರಿಗೆ ವಿಚಾರಣೆಗೆ ಬಂದಿತ್ತು. 

ನ್ಯಾಯಾಧೀಶರು ಈ ಹಿಂದೆ ಪ್ರಕರಣದಿಂದ ದೂರಸರಿದಿದ್ದನ್ನು ರಾಘವೇಶ್ವರರ ಪರ ವಕೀಲ ಅರುಣ ಶ್ಯಾಮ ನೆನಪಿಸಿದಾಗ ನ್ಯಾ.ಫಣೀಂದ್ರ ಮತ್ತೆ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ನ್ಯಾ.ಮುಹಮ್ಮದ್ ನವಾಝ್ ಮತ್ತು ನ್ಯಾ.ಎನ್.ಕೆ,ಸುಧೀಂದ್ರ ರಾವ್ ಅವರೂ ವಿಚಾರಣೆಯಿಂದ ದೂರ ಸರಿದಿದ್ದರು.

ಹಾಲಿ ನೂತನ ನ್ಯಾಯಾಧೀಶರು ಎರಡು ಬಾರಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು,ಕೊನೆಯ ವಿಚಾರಣೆ ನ.25ರಂದು ನಡೆದಿತ್ತು. ಡಿ.17ರಂದು ಮುಂದಿನ ವಿಚಾರಣೆ ನಡೆಯಲಿದೆ. ನ್ಯಾಯಾಧೀಶರು ವಿಚಾರಣೆಯಿಂದ ದೂರ ಸರಿದಿರುವ ರಾಘವೇಶ್ವರರ ವಿರುದ್ಧದ ಇತರ ಪ್ರಕರಣಗಳೂ ಇವೆ. ನ್ಯಾ.ಶಾಂತನಗೌಡರ್,ಮುಖ್ಯ ನ್ಯಾಯಾಧೀಶ ಎಸ್.ಕೆ ಮುಖರ್ಜಿ, ನ್ಯಾ.ಎಚ್.ಜಿ.ರಮೇಶ, ನ್ಯಾ.ಪಿ.ಬಿ.ಭಜಂತ್ರಿ ಮತ್ತು ನ್ಯಾ.ಎಸ್.ಜಿ.ಪಂಡಿತ್ ಇವರಲ್ಲಿ ಸೇರಿದ್ದಾರೆ.

thenewsminute.com ವರದಿ ಸಾರಾಂಶ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)