varthabharthi


ವಿಶೇಷ-ವರದಿಗಳು

Thewire.in ವರದಿ

12 ರಾಜ್ಯಸಭಾ ಸದಸ್ಯರೇಕೆ ಅಮಾನತುಗೊಂಡಿದ್ದಾರೆ ಮತ್ತು ಇದು ಅಸಾಂವಿಧಾನಿಕವೆಂದು ಪ್ರತಿಪಕ್ಷ ಭಾವಿಸಿರುವುದು ಏಕೆ?

ವಾರ್ತಾ ಭಾರತಿ : 8 Dec, 2021

ಹೊಸದಿಲ್ಲಿ, ಡಿ.8: ಹಾಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಿಂದ ರಾಜ್ಯಸಭೆಯ 12 ಸದಸ್ಯರ ಅಮಾನತನ್ನು ವಿರೋಧಿಸಿ ಸಂಸತ್ ಸಂಕೀರ್ಣದಲ್ಲಿ ಸುಮಾರು 120 ಪ್ರತಿಪಕ್ಷ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಈ ನಡುವೆ 12 ಸದಸ್ಯರನ್ನು ಅಮಾನುತುಗೊಳಿಸುವ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ತೀರ್ಮಾನವು ಸರಿಯಾಗಿತ್ತೇ ಎನ್ನುವ ಬಗ್ಗೆ ಸಂವಿಧಾನ ತಜ್ಞರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮುಂಗಾರು ಅಧಿವೇಶನದ ಕೊನೆಯ ದಿನವಾಗಿದ್ದ ಆ.11ರಂದು ಸದನದಲ್ಲಿ ದುರ್ವರ್ತನೆಗಾಗಿ 12 ಸದಸ್ಯರನ್ನು ಅಮಾನುತುಗೊಳಿಸಿರುವುದಾಗಿ ನಾಯ್ಡು ಸಮರ್ಥಿಸಿಕೊಂಡಿದ್ದಾರೆ.

ದುರ್ವರ್ತನೆಗಾಗಿ ಸಂಸದರನ್ನು ಅಮಾನತುಗೊಳಿಸುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು ಎಂದು ಹೇಳುವ ಮೂಲಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರೂ ನಾಯ್ಡು ಅವರ ನಿರ್ಧಾರವನ್ನು ಸಮರ್ಥಿಸಿದ್ದಾರೆ. 12 ಸಂಸದರು ಕ್ಷಮೆ ಯಾಚಿಸಿದರೆ ಅವರ ಅಮಾನತು ನಿರ್ಧಾರವನ್ನು ಪುನರ್ಪರಿಶೀಲಿಸಲು ಸರಕಾರವು ಈಗಲೂ ಸಿದ್ಧವಿದೆ ಎಂದೂ ಅವರು ಹೇಳಿದ್ದಾರೆ.

ಆದರೆ ಅಮಾನತು ನಿರ್ಧಾರವು ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಅತಾರ್ಕಿಕ ಬಹುಮತವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರತಿಪಕ್ಷಗಳು ವಾದಿಸಿವೆ.

ಅಮಾನತು ಕ್ರಮವನ್ನು ಅನಗತ್ಯ ಎಂದು ಪ್ರಜಾಪ್ರಭುತ್ವ ವಿರೋಧಿ ಎಂದು ಜಂಟಿ ಹೇಳಿಕೆಯಲ್ಲಿ ಬಣ್ಣಿಸಿರುವ ರಾಜ್ಯಸಭೆಯಲ್ಲಿನ ಪ್ರತಿಪಕ್ಷಗಳ ನಾಯಕರು,ಇದು ಸದಸ್ಯರ ಅಮಾನತಿಗೆ ಸಂಬಂಧಿಸಿದ ರಾಜ್ಯಸಭೆಯ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಅಮಾನತು ಕ್ರಮವು ನಿಯಮ 256ಕ್ಕೆ ಅನುಗುಣವಾಗಿಲ್ಲ. ರಾಜ್ಯಸಭೆಯು ನಿರಂತರವಾಗಿ ಅಸ್ತಿತ್ವದಲ್ಲಿರುತ್ತದೆಯಾದರೂ ಮುಂಗಾರು ಅಧಿವೇಶನವನ್ನು ಮುಂದೂಡಲಾಗಿತ್ತಾದ್ದರಿಂದ ಅದು ಅಲ್ಲಿಗೇ ಅಂತ್ಯಗೊಂಡಿತ್ತು ಮತ್ತು ಚಳಿಗಾಲದ ಅಧಿವೇಶನವು ನೂತನ ಅಧಿವೇಶನವಾಗಿದೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭಾಪತಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ನಿಯಮಗಳು ಏನು ಹೇಳುತ್ತವೆ?

ಸಭಾಪತಿಗಳು ಅವಶ್ಯವೆಂದು ಭಾವಿಸಿದರೆ ಪೀಠದ ಅಧಿಕಾರವನ್ನು ಕಡೆಗಣಿಸುವ ಅಥವಾ ಸದನದ ಕಲಾಪಗಳಿಗೆ ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಅಡ್ಡಿಯನ್ನುಂಟು ಮಾಡುವ ಮೂಲಕ ಸದನದ ನಿಯಮಗಳನ್ನು ದುರುಪಯೋಗಿಸಿಕೊಳ್ಳುವ ಸದಸ್ಯರನ್ನು ಹೆಸರಿಸಬಹುದು ಎಂದು ನಿಯಮ 256(1) ಹೇಳುತ್ತದೆ.

ಸದಸ್ಯರನ್ನು ಹೆಸರಿಸಿದ ಬಳಿಕ ಅಧಿವೇಶನದ ಶೇಷ ಭಾಗದ ಗರಿಷ್ಠ ಅವಧಿಗೆ ಅವರನ್ನು ಅಮಾನತುಗೊಳಿಸಲು ನಿರ್ಣಯವನ್ನು ಮಂಡಿಸಬಹುದು ಎಂದು ನಿಯಮ 256(2) ಹೇಳುತ್ತದೆ.

ನಿಯಮ 256(1)ರಡಿ ಅಗತ್ಯವಾಗಿರುವಂತೆ ಸಭಾಪತಿಗಳು ಸದಸ್ಯರ ಹೆಸರುಗಳನ್ನು ಎಂದಿಗೂ ಕರೆದಿರಲಿಲ್ಲ ಮತ್ತು ಇದು ನಿಯಮ 256ರಡಿ ಅಂಗೀಕರಿಸಲಾದ ನಿರ್ಣಯವನ್ನು ಅಸಿಂಧುಗೊಳಿಸುತ್ತದೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ. ಅಲ್ಲದೆ ಆ.31ರಂದು ರಾಷ್ಟ್ರಪತಿಗಳು ರಾಜ್ಯಸಭೆಯನ್ನು ಮುಂದೂಡಿದ್ದು,ಅಲ್ಲಿಗೆ ಮುಂಗಾರು ಅಧಿವೇಶನವು ಅಂತ್ಯಗೊಂಡಿತ್ತು. ಹೀಗಾಗಿ ಹಿಂದಿನ ಅಧಿವೇಶನದಲ್ಲಿನ ಕೃತ್ಯಗಳಿಗಾಗಿ ಈಗ ಚಳಿಗಾಲದ ಅಧಿವೇಶನದಲ್ಲಿ ಅವರನ್ನು ದಂಡಿಸುವಂತಿಲ್ಲ ಎಂದೂ ಅವರು ವಾದಿಸಿದ್ದಾರೆ.
 
ತಜ್ಞರು ಏನೆನ್ನುತ್ತಾರೆ?

ಸದಸ್ಯರನ್ನು ಹೆಸರಿಸುವುದು, ನಿರ್ಣಯ ಮಂಡನೆ ಮತ್ತು ಅಮಾನತು ಇವೆಲ್ಲ ಒಂದೇ ವಹಿವಾಟಿನ ಭಾಗಗಳಾಗಿವೆ. ಇದು ಆಗಾಗ್ಗೆ ನಡೆಯುತ್ತಲೇ ಇರಬೇಕಾಗುತ್ತದೆ ಎಂದು ಮಾಧ್ಯಮದೊಂದಿಗೆ ಮಾತನಾಡುತ್ತ ಹೇಳಿದ ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಪಿ.ಡಿ.ಟಿ.ಆಚಾರಿಯವರು, ಆ.11ರಂದು ರಾಜ್ಯಸಭೆಯಲ್ಲಿ ಗದ್ದಲದಿಂದಾಗಿ ಸಭಾಪತಿಗಳು ಸದನವನ್ನು ಮುಂದೂಡಿದ್ದರಿಂದ ಈ ನಿಯಮಗಳಡಿ ಸಭಾಪತಿಗಳು ಅಶಿಸ್ತು ಪ್ರದರ್ಶಿಸಿದ್ದ ಸದಸ್ಯರನ್ನು ಹೆಸರಿಸಬೇಕಿತ್ತು ಮತ್ತು ನಿರ್ಣಯ ಮಂಡನೆಯ ಬಳಿಕ ಅವರನ್ನು ಅಮಾನತುಗೊಳಿಸಬೇಕಿತ್ತು. ಆದರೆ ಇದನ್ನು ಮಾಡಿರಲಿಲ್ಲ ಎಂದರು.

 ರಾಜ್ಯಸಭೆ ಎಂದೂ ವಿಸರ್ಜನೆಯಾಗದ ನಿರಂತರ ಸಂಸ್ಥೆ ಎಂದು ನಾಯ್ಡು ಈಗ ಒತ್ತಿ ಹೇಳುತ್ತಿದ್ದಾರೆ,ಆದರೆ ಸಂಸದರ ಅಮಾನತು ಕ್ರಮವನ್ನು ಈಗ ಸಮರ್ಥಿಸಿಕೊಳ್ಳುವಂತಿಲ್ಲ ಎಂದು ಹೇಳಿದ ಅವರು,‌ ಹಿಂದಿನ ಅಧಿವೇಶನದಲ್ಲಿ ನಡೆದಿದ್ದರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಕ್ರಮವನ್ನು ತೆಗೆದುಕೊಳ್ಳುವಂತಿಲ್ಲ. ಯಾವ ನಿಯಮವೂ ಇದನ್ನು ಅನುಮತಿಸುವುದಿಲ್ಲ. ಆಗಲೇ ಕ್ರಮವನ್ನು ತೆಗೆದುಕೊಳ್ಳಬೇಕಾಗಿತ್ತು ಎಂದರು.
 
ಪೂರ್ವ ನಿದರ್ಶನ

ಸದನವು ಪರಮೋಚ್ಚವಾಗಿದೆ ಮತ್ತು ಅದರ ಕಾರ್ಯವಿಧಾನವನ್ನು ಸಭಾಪತಿಗಳು ನಿಯಂತ್ರಿಸುತ್ತಾರೆ ಎಂದು ನಿಯಮಗಳು ಹೇಳುತ್ತವೆ. ಕಾರ್ಯವಿಧಾನದಲ್ಲಿ ಎಲ್ಲಿಯೂ ಸಭಾಪತಿಗಳ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗುವುದಿಲ್ಲ. ಅದು ಆ ಹುದ್ದೆಯ ಘನತೆಯಾಗಿದೆ ಎಂದು ಮಾಜಿ ಲೋಕಸಭಾ ಮಹಾ ಕಾರ್ಯದರ್ಶಿ ಮತ್ತು ಸಂವಿಧಾನ ತಜ್ಞ ಎಸ್.ಸಿ.ಕಶ್ಯಪ್ ಹೇಳಿದರು.

ವಿಷಯವು ಮುಂದಿನ ಅಧಿವೇಶನಕ್ಕೆ ಎಳೆಯಲ್ಪಡುವ ಕುರಿತಂತೆ ಅವರು,ಅದು ಎಲ್ಲ ಕಾಲಕ್ಕೂ ನಡೆಯುತ್ತಲೇ ಇರುತ್ತದೆ. 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಕ್ಕುಚ್ಯುತಿ ನೋಟಿಸನ್ನು ಎದುರಿಸಿದ್ದರು. ವಿಷಯವು ಮುಂದಿನ ಅಧಿವೇಶನಕ್ಕೆ ಮಾತ್ರವಲ್ಲ,‌ ಅದರ ಮುಂದಿನ ಅಧಿವೇಶನಕ್ಕೂ (ಲೋಕಸಭಾ ಚುನಾವಣೆಗಳ ಬಳಿಕ) ಎಳೆದೊಯ್ಯಲ್ಪಟ್ಟಿತ್ತು. 

ಈ ಪ್ರಕರಣದಲ್ಲಿ ಸಂಸತ್ತಿನ ಹಕ್ಕುಚ್ಯುತಿ ಮತ್ತು ಸದನದ ಉಲ್ಲಂಘನೆಗಾಗಿ ಅವರನ್ನು ಸದನದಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಮುಂದಿನ ಅಧಿವೇಶನವಲ್ಲ,ಅದಕ್ಕೂ ಮುಂದಿನ ಅಧಿವೇಶನದಲ್ಲಿ (ಲೋಕಸಭಾ ಚುನಾವಣೆಯ ಬಳಿಕ) ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿದಾಗ ಅವರ ಅಮಾನತನ್ನು ಪೂರ್ವಾನ್ವಯವಾಗಿ ಹಿಂದೆಗೆದುಕೊಳ್ಳಲಾಗಿತ್ತು. ಅಮಾನತು ಎಂದೂ ಸಂಭವಿಸಿರಲಿಲ್ಲ ಎನ್ನುವಂತೆ ‘ರದ್ದುಪಡಿಸಲಾಗಿದೆ’ಎಂಬ ಶಬ್ದವನ್ನು ಬಳಸಲಾಗಿತ್ತು ಎಂದರು.

ಸದನವು ಶಾಸಕಾಂಗಕ್ಕೆ ಅಗೌರವವನ್ನುಂಟು ಮಾಡುವ ತನ್ನ ಸದಸ್ಯರು ಅಥವಾ ಬಾಹ್ಯ ವ್ಯಕ್ತಿಗಳನ್ನು ದಂಡಿಸಬಹುದು. ದಿನದ ಮಟ್ಟಿಗೆ ಅಥವಾ ಅಧಿವೇಶನದ ಶೇಷ ಅವಧಿಗೆ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರ ಸದನದ ಅಧಿಕಾರಗಳಲ್ಲಿ ಸೇರಿದೆ ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಹಾಗೂ ಸಂವಿಧಾನ ತಜ್ಞ ಎಸ್.ಕೆ.ಶರ್ಮಾ ಹೇಳಿದರು.

ಕೃಪೆ: Thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)