varthabharthi


ಕಾಲಂ 9

ನಾಗಾಲ್ಯಾಂಡ್‌ನ ನೆತ್ತರು ಭಾರತದ ಕೈಗೆ ಮೆತ್ತಿಕೊಂಡಿದೆ!

ವಾರ್ತಾ ಭಾರತಿ : 9 Dec, 2021
ಶಿವಸುಂದರ್

(ನಿನ್ನೆಯ ಸಂಚಿಕೆಯಿಂದ)

 ಪ್ರತಿದಂಗೆಗಾಗಿ ಕಾರ್ಯ ನಿಯೋಜನೆಗೊಳ್ಳುವ ಸೇನಾಪಡೆಗಳಿಗೆ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗವು ತನ್ನ ಬಳಿ ಇರುವ ಆಯಾ ವಲಯದ ದಂಗೆಕೋರರ ಅಂದಾಜು ಸಂಖ್ಯೆ ಮತ್ತು ಪಟ್ಟಿಯನ್ನು ನೀಡಲಾಗುತ್ತದೆ ಹಾಗೂ ಅವರ ಕಾರ್ಯಕ್ಷಮತೆಯನ್ನು ಎಷ್ಟು ಮಿಲಿಟೆಂಟ್‌ಗಳನ್ನು ಕೊಲ್ಲಲಾಗಿದೆ, ಶರಣಾಗಿಸಲಾಗಿದೆಯೆಂಬ ಸಂಖ್ಯೆಗಳ ಮೂಲಕ ಅಳೆಯಲಾಗುತ್ತದೆ ಮತ್ತು ಪ್ರತಿ ಮಿಲಿಟೆಂಟ್ ಒಬ್ಬನ ಕೊಲೆಗೆ 5, ಶರಣಾಗತಿಗೆ 3 ಎಂಬಂತೆ ಅಂಕಗಳನ್ನು ನೀಡಲಾಗುತ್ತದೆ. ಒಬ್ಬ ಅಧಿಕಾರಿಗೆ ಮತ್ತು ಒಂದು ತುಕಡಿಗೆ ಪ್ರಶಸ್ತಿ, ಭಡ್ತಿ ಇತ್ಯಾದಿಗಳು ಸಿಗಬೇಕೆಂದರೆ ಅಂದಾಜು 300 ಅಂಕಗಳು ಬೇಕಾಗುತ್ತವೆ ಎಂದು ಈ ಅನಾಮಧೇಯ ಅಧಿಕಾರಿ ಲೇಖಕರಿಗೆ ಮಾಹಿತಿ ನೀಡುತ್ತಾರೆ. ಪ್ರತಿ ವರ್ಷಕ್ಕೊಮ್ಮೆ ತುಕಡಿ ಮತ್ತು ಅಧಿಕಾರಿಗಳ ‘ವಾರ್ಷಿಕ ಗುಪ್ತ ವರದಿ’ (ಎಸಿಆರ್) ನೀಡಲಾಗುತ್ತದೆ. ಅದಕ್ಕೆ ಮುಂಚಿನ ದಿನಗಳಲ್ಲೇ ಈ ವಲಯದಲ್ಲಿ ಎನ್‌ಕೌಂಟರ್‌ಗಳ ಸಂಖ್ಯೆಯೂ ಹೆಚ್ಚುತ್ತದೆ.

ಅಮಾಯಕರನ್ನು ಮಿಲಿಟೆಂಟ್‌ಗಳೆಂದು ತೋರಿಸಿ ಭಡ್ತಿ, ವಿದೇಶಿ ನಿಯೋಜನೆಗಳನ್ನು ಪಡೆಯಲಾಗುತ್ತದೆ. ಆದ್ದರಿಂದಲೇ ಸ್ವಾರ್ಥಕ್ಕೆ ಅಮಾಯಕರನ್ನು ಕೊಲ್ಲಲೊಪ್ಪದ ಅಧಿಕಾರಿಗಳ ಮೇಲೆ ಅಪಾರ ಮಾನಸಿಕ ಮತ್ತು ಔದ್ಯೋಗಿಕ ಒತ್ತಡಗಳು ಸೃಷ್ಟಿಯಾಗುತ್ತವೆ.

ಹೀಗೆ ಬೇಕೆಂದಾಗ ಎನ್‌ಕೌಂಟರ್‌ಗೆ ಒಳಗಾಗಲು ಮಾನವ ಮಿಕಗಳನ್ನು ಸರಬರಾಜು ಮಾಡುವ ದೊಡ್ಡ ಮಾಫಿಯಾವನ್ನೇ ಸೇನಾಪಡೆಗಳು ಪೋಷಿಸುತ್ತಿವೆ ಎಂದು ಈ ಅಧಿಕಾರಿ ಪುರಾವೆಗಳೊಂದಿಗೆ ಹೇಳುತ್ತಾರೆ.

STAGED ENCOUNTER  ಎಂಬ ಬರ್ಬರತೆ

ಸೇನೆಯ ಪರಿಭಾಷೆಯಲ್ಲಿ ಮೂರು ಬಗೆಯ ಎನ್‌ಕೌಂಟರ್‌ಗಳಿವೆ. ಒಂದು ನಿಜವಾದ ಎನ್‌ಕೌಂಟರ್. ಇದರಲ್ಲಿ ಬಂದೂಕುಧಾರಿ ಸೇನಾಪಡೆಗಳಿಗೂ ಮತ್ತು ಬಂದೂಕುಧಾರಿ ಮಿಲಿಟೆಂಟ್‌ಗಳಿಗೂ ನಿಜವಾದ ಮುಖಾಮುಖಿ ಸಂಭವಿಸುತ್ತದೆ. ಇಂತಹ ಮುಖಾಬಿಲೆಯಲ್ಲಿ ಸಾಮಾನ್ಯವಾಗಿ ಎರಡು ಕಡೆಯಲ್ಲೂ ಸಾವುನೋವುಗಳಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಎರಡು ಕಡೆಯಲ್ಲಿ ಸಾವುನೋವುಗಳಾದರೆ ಮಾತ್ರ ಅದು ನಿಜವಾದ ಎನ್‌ಕೌಂಟರ್.

ಎರಡನೆಯದು ಸುಳ್ಳು ಎನ್‌ಕೌಂಟರ್. ಇದರಲ್ಲಿ ಸಾಯುವವನು ನಿಜವಾದ ಮಿಲಿಟೆಂಟೇ. ಆದರೆ ಆತ/ಆಕೆ ಸೆರೆಸಿಕ್ಕಾಗ ನಿರಾಯುಧರಾಗಿರುತ್ತಾರೆ ಅಥವಾ ಶರಣಾಗಿರುತ್ತಾರೆ. ಅಗತ್ಯ ಬಿದ್ದಾಗ ಅವರನ್ನು ಸಾಯಿಸಿ ಅವರ ಬಳಿ ಬಂದೂಕು ಇರಿಸಿ ನಿಜ ಎನ್‌ಕೌಂಟರ್ ಎಂದು ಹೇಳಲಾಗುತ್ತದೆ. ಮೂರನೆಯದು ಮತ್ತು ಅತ್ಯಂತ ಬರ್ಬರವಾದದ್ದು ತಮ್ಮ ತುಕಡಿಯ ಟಾರ್ಗೆಟ್ ಅನ್ನು ಪೂರ್ಣಗೊಳಿಸಲು ಅಮಾಯಕರನ್ನು ಹಿಡಿದು ಚಿತ್ರಹಿಂಸೆ ಮಾಡಿ ಕೊಂದುಹಾಕುವುದು. ಇದನ್ನು STAGED ENCOUNTER ಎಂದು ಹೇಳಲಾಗುತ್ತದೆ. ಇಂದು ಭಾರತದ ‘Conflict Zone’ಗಳಲ್ಲಿ ನಡೆಯುತ್ತಿರುವ ಶೇ.90ರಷ್ಟು ಎನ್‌ಕೌಂಟರ್‌ಗಳು ಈ ರೀತಿಯ STAGED ENCOUNTER ಎಂದು ಅಧಿಕಾರಿ ಒಪ್ಪಿಕೊಳ್ಳುತ್ತಾರೆ.

ಈ ಅಧಿಕಾರಿ ಕೊಟ್ಟ ಮಾಹಿತಿ ಸತ್ಯವೆಂದು ಸಾಬೀತುಪಡಿಸುವ ಮತ್ತೊಂದು ಸಂಗತಿಯನ್ನು ಲೇಖಕರು ಓದುಗರ ಗಮನಕ್ಕೆ ತರುತ್ತಾರೆ. ನ್ಯಾ. ಸಂತೋಷ್ ಹೆಗ್ಡೆ ಸಮಿತಿಯ ವರದಿ

2013ರಲ್ಲಿ ಮಣಿಪುರದ ನಾಗರಿಕ ಸಂಸ್ಥೆಯೊಂದು ರಾಜ್ಯದಲ್ಲಿ ನಡೆದ 1,528 ಸುಳ್ಳು ಎನ್‌ಕೌಂಟರ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಹಾಕುತ್ತದೆ. ಅದರಂತೆ ಭಾರತದ ಉನ್ನತ ನ್ಯಾಯಪೀಠ ಈ ಪ್ರಕರಣಗಳನ್ನು ಪರಿಶೀಲಿಸಿ ವರದಿ ಮಾಡಲು ಮಾಜಿ ನ್ಯಾಯಾಧೀಶರಾದ ಕರ್ನಾಟಕದ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ನೇಮಕ ಮಾಡುತ್ತದೆ. ಆ ಸಮಿತಿ ಮೊದಲ ಆರು ಪ್ರಕರಣಗಳನ್ನು ಪರಿಶೀಲಿಸಿ ಆರೂ ಪ್ರಕರಣಗಳೂ ಸುಳ್ಳು ಎನ್‌ಕೌಂಟರ್ ಎಂದು ವರದಿಕೊಟ್ಟಿರುವುದನ್ನು ಲೇಖಕರು ಓದುಗರ ಗಮನಕ್ಕೆ ತರುತ್ತಾರೆ. ಅವುಗಳ ವಿವರವನ್ನು ನೋಡಿದರೆ ಅವರೆಲ್ಲರೂ ದುಡಿದು ಬದುಕುತ್ತಿದ್ದ 12-70 ವಯಸ್ಸಿನ ಕೂಲಿಗಳು, ಯುವಕ/ಯುವತಿಯರು, ಗೃಹಸ್ಥರು, ಗೃಹಿಣಿಯರು, ವಕೀಲರು, ಉಪಾಧ್ಯಾಯರುಗಳಂತಹ ನಾಗರಿಕ ಸಮಾಜದ ಅಮಾಯಕರು. ಒಂದು ಪ್ರಕರಣದಲ್ಲಂತೂ ಹಲವಾರು ವರ್ಷಗಳಿಂದ ರೈಲ್ವೇ ಸ್ಟೇಷನ್‌ನಲ್ಲಿ ಕುಷ್ಟರೋಗದಿಂದ ನರಳುತ್ತಾ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನೊಬ್ಬನನ್ನು ಅಪಹರಿಸಿ ಉತ್ತರ ಅಸ್ಸಾಮಿನ ಹಳ್ಳಿಯೊಂದರಲ್ಲಿ ಬೋಡೋ ಉಗ್ರಗಾಮಿಯೆಂದು ಕೊಂದು ಬಿಸಾಕಿದ ಹೃದಯವಿದ್ರಾವಕ ಸಂಗತಿಯನ್ನೂ ದಾಖಲಿಸಲಾಗಿದೆ. ಭಾರತದ ಸಾಮಾನ್ಯ ನಾಗರಿಕರು ಈ ರೀತಿ ಕೊಲೆ, ದರೋಡೆಗಳನ್ನು ಮಾಡಿದರೆ ಭಾರತದ ಅಪರಾಧ ಸಂಹಿತೆಯು 7 ವರ್ಷ ಕಾರಾಗೃಹ ಶಿಕ್ಷೆಯಿಂದ ಮೇಲ್ಪಟ್ಟು ಮರಣದಂಡನೆಯವರೆಗೆ ಶಿಕ್ಷೆ ನೀಡುತ್ತದೆ. ಆದರೆ ಇದೇ ರೀತಿಯ ಮಹಾನ್ ಅಪರಾಧಗಳನ್ನು ಎಸಗುವ ಸೇನಾಪಡೆಗಳಿಗೆ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ಶೇ. 95 ಪ್ರಕರಣಗಳಲ್ಲಿ ಯಾವ ಶಿಕ್ಷೆಯೂ ಆಗುವುದಿಲ್ಲ.

ಏಕೆಂದರೆ ಸೇನಾಪಡೆಗಳಿಗೆ ಈ ವಲಯದಲ್ಲಿ AFSPA ರಕ್ಷಣೆಯಿದೆ. ಅಲ್ಲದೆ ಇಂತಹ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ನಾಗರಿಕ ಸಮಾಜವನ್ನು ದೇಶದ್ರೋಹಿಗಳೆಂದು ಬಂಧಿಸುವ ಸುಮಾರು 16ಕ್ಕೂ ಹೆಚ್ಚು ಕಾಯ್ದೆಗಳನ್ನು ಕಳೆದ 70 ವರ್ಷಗಳಲ್ಲಿ ಜಾರಿಗೆ ತರಲಾಗಿದೆಯೆಂದು ಲೇಖಕರು ತಮ್ಮ ಅನುಬಂಧದಲ್ಲಿ ವಿವರಿಸುತ್ತಾರೆ. ಹೀಗಾಗಿ AFSPA ರದ್ದಾಗದ ಹೊರತು ಭಾರತವು ಒಂದು ನಾಗರಿಕ ಹಾಗೂ ಪ್ರಜಾತಾಂತ್ರಿಕ ರಾಷ್ಟ್ರ ಎಂದು ಹೇಳಿಕೊಳ್ಳುವುದು ದೊಡ್ಡ ಸೋಗಲಾಡಿತನವೇ ಆಗಿದೆ. ಎರಡನೇ ಯುದ್ಧದ ನಂತರ ಅಣುಬಾಂಬ್ ಹಾಕಿದ ಅಮೆರಿಕದ ಪೈಲಟ್ ಓಪನ್ ಹೈಮರ್ ತಾನು ಮಾಡಿದ ವಿನಾಶದಿಂದ ಅತ್ಯಂತ ಅಪರಾಧಿ ಮನೋಭಾವದಿಂದ ದುಃಖಿತನಾಗಿರುವಾಗಲೇ ಅಧ್ಯಕ್ಷ ಟ್ರೂಮನ್ ಅವರನ್ನು ಭೇಟಿಯಾಗಿ ""Mr. President, I have blood on my hands'' ಎಂದು ಉದ್ಗರಿಸುತ್ತಾನೆ. ಈ ಪುಸ್ತಕ ಬರೆಯುವಾಗ ತನ್ನ ಮನಸ್ಸಿನಲ್ಲಿ ಇದೇ ಚಿತ್ರ ತಲೆಯಲ್ಲಿ ಓಡುತ್ತಿತ್ತು ಎಂದು ಲೇಖಕರು ಹೇಳುತ್ತಾರೆ. ಈ ಹಿಂಸಾಚಾರ ನಡೆಯುತ್ತಿರುವುದು ಸುಳ್ಳಿನ ಆಸರೆಯಲ್ಲಿ. ಅದೊಂದು ಆರ್ಥಿಕತೆಯೇ ಆಗಿಬಿಟ್ಟಿರುವುದು ಹಿಂಸೆಯ ಬಲದಲ್ಲಿ. ಈ ಹಿಂಸೆ ಮುಂದುವರಿದಿರುವುದು ಭಾರತೀಯ ಸಮಾಜದ ಮೌನದ ತಟಸ್ಥತೆಯಲ್ಲಿ. ದೇಶಪ್ರೇಮವೆಂದರೆ ಅವಿಮರ್ಶಾತ್ಮಕವಾಗಿ ಸರಕಾರವನ್ನು ಮತ್ತು ಪ್ರಭುತ್ವವನ್ನು ಒಪ್ಪಿಕೊಳ್ಳುವುದು ಎಂಬ ವಾದ ಅಬ್ಬರದಲ್ಲಿರುವ ಕನ್ನಡದ ಸಂದರ್ಭದಲ್ಲಿ ಸೇನೆಯೂ ಸಹ ಪ್ರಭುತ್ವದ ಒಂದು ಅಂಗ ಮತ್ತು ಅದರ ಅಪರಾಧಗಳನ್ನು ಸಹಿಸಿಕೊಳ್ಳುವುದೇ ನಿಜವಾದ ದೇಶದ್ರೋಹ ಎಂಬ ಗ್ರಹಿಕೆಯನ್ನು ಈ ಪುಸ್ತಕದ ಓದು ಕೊಡುತ್ತದೆ. ಹೀಗಾಗಿ ಹಿಂಸೆಯ ಚಕ್ರ ಮುರಿಯಬೇಕೆಂದರೆ ನಾಗರಿಕ ಸಮಾಜ ಮೌನ ಮುರಿಯಬೇಕು. ಹಿಂಸಾಚಾರದ ವಿರುದ್ಧ, ಸುಳ್ಳುಗಳ ವಿರುದ್ಧ ಧ್ವನಿ ಎತ್ತಬೇಕು. ಅದೇ ನಿಜವಾದ ದೇಶಪ್ರೇಮ. ಇದೇ ಈ ಪುಸ್ತಕದ ಸಾರಾಂಶ-ಸಂದೇಶ.

ಕಿಶಾಲಯ್ ಭಟ್ಟಾಚಾರ್ಯರ ಈ D Blood on My hands- Confession Of Staged Encounters- ಪುಸ್ತಕವನ್ನು ‘ನನ್ನ ಕೈಗಂಟಿದ ನೆತ್ತರು’- ಎಂಬ ಶೀರ್ಷಿಕೆಯಲ್ಲಿ ಲೇಖಕ, ಪತ್ರಕರ್ತ ಗಿರೀಶ್ ತಾಳಿಕಟ್ಟೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಗೌರಿ ಲಂಕೇಶ್ ಪ್ರಕಾಶನ ಅದನ್ನು ಪ್ರಕಟಿಸಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)