varthabharthi


ನಿಮ್ಮ ಅಂಕಣ

ಹಿಂಬಾಗಿಲಿನಿಂದ ಹಿಂದಿ ಹೇರಿಕೆ

ವಾರ್ತಾ ಭಾರತಿ : 9 Dec, 2021
-ಲಕ್ಷ್ಮೀಕಾಂತ್ ರಾವ್, ಕೊಟ್ಟಾರ, ಮಂಗಳೂರು

ಮಾನ್ಯರೇ,
  
ಕೇವಲ ಒಕ್ಕೂಟ ಸರಕಾರದ ಅಧೀನವಿರುವ ಕಚೇರಿಗಳಲ್ಲಿ ಮಾತ್ರವಲ್ಲ ಈಗ ರಾಜ್ಯ ಸರಕಾರದ ಅಧೀನ ಇರುವ ಕಚೇರಿಗಳಲ್ಲೂ ಹಿಂಬಾಗಿಲಿನಿಂದ ಹಿಂದಿ ಹೇರಿಕೆ ನಡೆದಿದೆ!. ಇದಕ್ಕೆ ತಾಜಾ ಉದಾಹರಣೆ- ಕರ್ನಾಟಕ ರಾಜ್ಯ ಸಾರಿಗೆ (ಆರ್‌ಟಿಒ) ವಿಭಾಗದವರು ಕಲಿಕಾ ಪರವಾನಿಗೆಯ (ಲರ್ನರ್ಸ್ ಲೈಸನ್ಸ್) ಅರ್ಜಿದಾರರ ಮೇಲೆ ಕಡ್ಡಾಯವಾಗಿ ಹೇರಿರುವ ಟ್ರಾಫಿಕ್ ನಿಯಮದ ಕುರಿತ ಅರ್ಧ ಗಂಟೆ ಉದ್ದದ ಹಿಂದಿ/ಇಂಗ್ಲಿಷ್ ಭಾಷೆಯ ವೀಡಿಯೊ ನೋಡಲೇಬೇಕು ಎಂಬ ತರ್ಕವಿಹೀನ ನಿಯಮ. ಅಷ್ಟೇ ಅಲ್ಲ ಅದನ್ನು ನಾವು ಪೂರ್ತಿ ನೋಡಿದ್ದೇವೆ ಎಂದು ಆ ಮೊಬೈಲ್‌ನಲ್ಲಿಯೇ ಆ ವೀಡಿಯೊ ಕೆಳಗೆ ಕಾಮೆಂಟ್ ಬರೆದು ‘ಕನ್ಫರ್ಮ್ ಮತ್ತು ಸಬ್ಮಿಟ್’ ಮಾಡಿದರೇನೇ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಜಿದಾರನ ಮೊಬೈಲಿಗೆ ಪಾಸ್ವರ್ಡ್ ಬರುವುದು. ಆ ಬಾಲಿಶ ವೀಡಿಯೊವನ್ನು ನೀವು ಪೂರ್ತಿ ನೋಡದೆ ಸಬ್ಮಿಟ್ ಕೀಲಿಯನ್ನು ಒತ್ತುವಂತಿಲ್ಲ. ಒಂದು ವೇಳೆ ಹಾಗೆ ಸಬ್ಮಿಟ್ ಒತ್ತಿದರೆ ಪಾಸ್ವರ್ಡ್ ಬರುವುದಿಲ್ಲ. ಆಗ ಪುನಃ ಅರ್ಧ ಗಂಟೆ ಆ ವೀಡಿಯೊವನ್ನು ಮೊದಲಿನಿಂದ ಕೊನೆವರೆಗೆ ಮತ್ತೊಮ್ಮೆ ವೀಕ್ಷಿಸಿ ಮಗದೊಮ್ಮೆ ಸಬ್ಮಿಟ್ ಕೀಲಿ ಒತ್ತಬೇಕು. ವಿಚಿತ್ರವೆಂದರೆ ತನ್ನಿಂದ ತಾನೇ ನಡುನಡುವೆ ಬಂದ್ ಆಗುವ ಅಥವಾ ಹಿಂದೆ ಓಡುವ ಆ ವೀಡಿಯೊ ಕರ್ನಾಟಕ ಸರಕಾರದ್ದಲ್ಲ! ಅದು ಜಾರ್ಖಂಡ್ ರಾಜ್ಯ ಸಾರಿಗೆ ವಿಭಾಗದವರು ಯಾವುದೋ ಖಾಸಗಿ ಕಂಪೆನಿಯಿಂದ ಪಡೆದು ಕೇಂದ್ರ ಸರಕಾರದ ಮೂಲಕ ಕರ್ನಾಟಕ ಸರಕಾರಕ್ಕೆ ಒದಗಿಸಿರುವ ಹಿಂದಿ ಮತ್ತು ತಪ್ಪು ತಪ್ಪು ಇಂಗ್ಲಿಷ್‌ನಲ್ಲಿರುವ ವೀಡಿಯೊ! ಈ ವೀಡಿಯೊವನ್ನು ಎಷ್ಟು ಹೆಚ್ಚು ಜನರು ವೀಕ್ಷಿಸುತ್ತಾರೋ ಅಷ್ಟು ಸಂಖ್ಯೆಯಲ್ಲಿ ವೀವ್ಸ್ ಹೆಚ್ಚಿ ಆ ಜಾರ್ಖಂಡ್ ರಾಜ್ಯದ ಖಾಸಗಿ ಕಂಪೆನಿಗೆ ಲಾಭವಂತೆ.

ಅಷ್ಟೇ ಅಲ್ಲ, ಸಾರಿಗೆ ನಿಯಮಗಳ ಮಾಹಿತಿಯೂ ಈ ವೀಡಿಯೊದಲ್ಲಿ ತುಂಬಾ ಕಡಿಮೆ. ಕರ್ನಾಟಕ ಆರ್‌ಟಿಒದವರು ತಮ್ಮ ವೆಬ್‌ಸೈಟ್‌ನಲ್ಲಿ ಒದಗಿಸಿರುವ ಪ್ರಶ್ನಾವಳಿಯಲ್ಲಿ ಟ್ರಾಫಿಕ್ ನಿಯಮಕ್ಕೆ ಸಂಬಂಧ ಪಟ್ಟ 125 ಪ್ರಶ್ನೋತ್ತರಗಳಿದ್ದರೆ ಸಂಚಾರ ಚಿನ್ನೆಗೆ ಸಂಬಂಧ ಪಟ್ಟ 76 ಪ್ರಶ್ನೆಗಳಿವೆ. ಆದರೆ ಜಾರ್ಖಂಡ್ ವೀಡಿಯೊದಲ್ಲಿ ಇದರ ಕಾಲು ಭಾಗವೂ ಇಲ್ಲ. ವಾಹನ ಚಾಲಕರಿಗೆ ಈ ವೀಡಿಯೊದಿಂದ ಯಾವುದೇ ಹೆಚ್ಚಿನ ಜ್ಞಾನ ಸಿಗುವುದಿಲ್ಲ. ಆದರೂ ಈ ವೀಡಿಯೊವನ್ನು ಕನ್ನಡಿಗರ ಮೇಲೆ ಹಿಂದಿ ಪಕ್ಷಪಾತಿ ಕೇಂದ್ರ ಸರಕಾರ ಏಕಪಕ್ಷೀಯವಾಗಿ ಹೇರಿದೆ ಎಂದು ಸ್ವತಃ ಆರ್‌ಟಿಒ ಸಿಬ್ಬಂದಿಯೇ ಒಪ್ಪುತ್ತಾರೆ. ವಾಹನ ಚಾಲಕರಿಗೆ ಯಾವುದೇ ಪ್ರಯೋಜನವಿಲ್ಲದ ಈ ಕಡ್ಡಾಯ ಹಿಂದಿ ವೀಡಿಯೊ ವೀಕ್ಷಣೆಯ ಹೊಸ ನಿಯಮದ ವಿರುದ್ಧ ಕನ್ನಡ ಪ್ರೇಮಿ ಸಂಘಟನೆಗಳು ಪ್ರತಿಭಟಿಸಲೇ ಬೇಕು.

ಕೊನೆಯ ಪ್ರಶ್ನೆ-  ಯಾರೇ ಆಗಲಿ ವಾಹನ ಚಾಲನ ಲೈಸನ್ಸ್ ಪಡೆಯಬೇಕಾದರೆ ಅವರು ಮೊದಲು ಕಂಪ್ಯೂಟರ್ ಬಳಕೆ ಕಲಿಯಲೇ ಬೇಕೇ? ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊ ಗೇಮ್ ಆಡುವುದನ್ನೂ ಕಲಿಯಬೇಕೇ? ಕಂಪ್ಯೂಟರ್ ಬಳಕೆ ಗೊತ್ತಿಲ್ಲದವರು, ದುಬಾರಿ ಸ್ಮಾರ್ಟ್‌ಫೋನ್ ಇಲ್ಲದವರು ವಾಹನ ಚಾಲನಾ ಲೈಸನ್ಸ್ ಪಡೆಯಲು ಅನರ್ಹರೇ? ಈ ಪರೀಕ್ಷೆಯನ್ನು ಸರಳವಾಗಿ ಕಾಗದದ ಮೇಲೆ ಬರೆಯುವ ಅಬ್ಜೆಕ್ಟಿವ್ ಟೆಸ್ಟ್ ಆಗಿ ಯಾಕೆ ಪರಿವರ್ತಿಸಬಾರದು? ಇದರಿಂದ ಕಂಪ್ಯೂಟರ್ ಬಳಕೆ ಗೊತ್ತಿಲ್ಲದ ಗೃಹಿಣಿಯರು ಅಥವಾ ಬಡ ತರಕಾರಿ ಮಾರಾಟಗಾರರು ವಾಹನ ಚಾಲನೆ ಲೈಸನ್ಸ್ ಪಡೆಯಲು ಸುಲಭವಾಗುತ್ತದೆಯಲ್ಲವೇ?
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)