varthabharthi


ವಿಶೇಷ-ವರದಿಗಳು

indianexpress.com ವರದಿ

ಅಯೋಧ್ಯೆ ತೀರ್ಪಿನ ಬಳಿಕ ಪೀಠದ ಸದಸ್ಯರೊಂದಿಗೆ ತಾಜ್ ನಲ್ಲಿ ವೈನ್ ಕುಡಿದಿದ್ದೆವು: ಗೊಗೊಯಿ ಆತ್ಮಕಥೆಯಲ್ಲಿ ಉಲ್ಲೇಖ

ವಾರ್ತಾ ಭಾರತಿ : 9 Dec, 2021

ಹೊಸದಿಲ್ಲಿ,  ಡಿ.9: ನವಂಬರ್ 9,2019ರಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಸರ್ವಾನುಮತದ ತೀರ್ಪನ್ನು ಪ್ರಕಟಿಸಿದ ಬಳಿಕ ಅಂದು ರಾತ್ರಿ ಆಗಿನ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ಅವರು ಪೀಠದ ಸದಸ್ಯರಾಗಿದ್ದ ತನ್ನ ಸಹೋದ್ಯೋಗಿಗಳನ್ನು ಹೋಟೆಲ್ ತಾಜ್ ಮಾನಸಿಂಗ್ಗೆ ಊಟಕ್ಕೆ ಕರೆದೊಯ್ದಿದ್ದರು ಮತ್ತು ಅಲ್ಲಿಯ ಅತ್ಯುತ್ಕೃಷ್ಟ ವೈನ್ ತರಿಸಿದ್ದರು. ಇದು ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಗೊಗೊಯಿ ಅವರು ತನ್ನ ‘ಜಸ್ಟೀಸ್ ಫಾರ್ ಜಡ್ಜ್:ಆ್ಯನ್ ಆಟೊಬಯಾಗ್ರಫಿ’ ಹೆಸರಿನ ಆತ್ಮಚರಿತ್ರೆಯಲ್ಲಿ ಪ್ರಸ್ತಾವಿಸಿರುವ ತನ್ನ ವೃತ್ತಿಜೀವನದ ಹಲವಾರು ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. 

2018ರಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರು ನಡೆಸಿದ್ದ ಪತ್ರಿಕಾಗೋಷ್ಠಿ,ತನ್ನ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದಿಂದ ಹಿಡಿದು ತನ್ನ ಅಧಿಕಾರಾವಧಿಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ತೆಗೆದುಕೊಂಡಿದ್ದ ನಿರ್ಧಾರಗಳವರೆಗೆ ಹಲವಾರು ವಿಷಯಗಳನ್ನು ನ್ಯಾ.ಗೊಗೊಯಿ ಪುಸ್ತಕದಲ್ಲಿ ಪ್ರಸ್ತಾವಿಸಿದ್ದಾರೆ.

ಅಯೋಧ್ಯೆ ತೀರ್ಪನ್ನು ಪ್ರಕಟಿಸಿದ ಬಳಿಕ ಅಂದಿನ ಸಂಜೆಯ ವಿದ್ಯಮಾನಗಳನ್ನು ಕುರಿತು ನ್ಯಾ.ಗೊಗೊಯಿ,‘ತೀರ್ಪಿನ ಬಳಿಕ ಮಹಾ ಕಾರ್ಯದರ್ಶಿ ಕೋರ್ಟ್ ನಂ.1ರ ಹೊರಗೆ ಅಶೋಕ ಚಕ್ರದ ಕೆಳಗೆ ನ್ಯಾಯಾಧೀಶರ ಗ್ಯಾಲರಿಯಲ್ಲಿ ಫೋಟೊ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಜೆ ನಾನು ನ್ಯಾಯಾಧೀಶರನ್ನು ತಾಜ್ ಮಾನಸಿಂಗ್ ಹೋಟೆಲ್ ಗೆ ಕರೆದೊಯ್ದಿದ್ದೆ. ನಾವು ಚೈನೀಸ್ ಆಹಾರವನ್ನು ಸೇವಿಸಿದ್ದೆವು ಮತ್ತು ಅಲ್ಲಿ ಲಭ್ಯವಿದ್ದ ಅತ್ಯುತ್ತಮ ವೈನ್ ನ ಒಂದು ಬಾಟಲ್ ಅನ್ನು ಹಂಚಿಕೊಂಡಿದ್ದೆವು. ಹಿರಿಯನಾಗಿದ್ದರಿಂದ ಬಿಲ್ ಅನ್ನು ನಾನೇ ಪಾವತಿಸಿದ್ದೆ’ ಎಂದು ಬರೆದಿದ್ದಾರೆ. 

ಅಯೋಧ್ಯೆ ತೀರ್ಪನ್ನು ನೀಡಿದ್ದ ಸಿಜೆಐ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಆಗಿನ ನಿಯೋಜಿತ ಸಿಜೆಐ ಎಸ್.ಎ.ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಝೀರ್ ಅವರನ್ನೂ ಒಳಗೊಂಡಿತ್ತು.

ನ್ಯಾ.ಅಕಿಲ್ ಕುರೇಷಿ ಅವರನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಗೊಳಿಸುವಂತೆ ಮಾಡಿದ್ದ ಶಿಫಾರಸನ್ನು ಹಿಂದೆಗೆದುಕೊಂಡು ಬದಲಿಗೆ ಅವರನ್ನು ತ್ರಿಪುರಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿದ್ದ ಕೊಲಿಜಿಯಂ ನಿರ್ಧಾರದ ಕುರಿತಂತೆ ನ್ಯಾ.ಗೊಗೊಯಿ,ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಂಘರ್ಷವನ್ನು ತಪ್ಪಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು ಎಂದಿದ್ದಾರೆ.

2019,ಮೇ 10ರಂದು ನ್ಯಾ.ಕುರೇಷಿಯವರ ಹೆಸರನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಸಮಾಲೋಚನೆ ಪ್ರಕ್ರಿಯೆಯಲ್ಲಿ ಕಾನೂನು ಸಚಿವರು ತನ್ನ 2019, ಆ.23ರ ಪತ್ರದಲ್ಲಿ ಶಿಫಾರಸಿಗೆ ಕೇಂದ್ರ ಸರಕಾರದ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ನ್ಯಾ.ಕುರೇಷಿ ಅವರು ಹೊರಡಿಸಿದ್ದ ಕೆಲವು ನ್ಯಾಯಾಂಗ ತೀರ್ಪುಗಳಿಂದ ಉಂಟಾಗಿದ್ದ ನಕಾರಾತ್ಮಕ ದೃಷ್ಟಿಕೋನವೊಂದನ್ನು ಈ ಆಕ್ಷೇಪವು ಆಧರಿಸಿತ್ತು. ಸರಕಾರದ ಆಕ್ಷೇಪವು ಸಾರ್ವಜನಿಕ ಕ್ಷೇತ್ರದಲ್ಲಿ ಬಂದಿದ್ದರೆ ಅದು ಯಾರಿಗೂ ಒಳ್ಳೆಯದನ್ನು ಮಾಡುತ್ತಿರಲಿಲ್ಲ ಎಂದು ಅವರು ಬರೆದಿದ್ದಾರೆ.
 
ಪ್ರಾಸಂಗಿಕವಾಗಿ ಈ ವರ್ಷದ ಸೆಪ್ಟೆಂಬರ್ನಲ್ಲಿ ನ್ಯಾ.ಕುರೇಷಿಯವರನ್ನು ತ್ರಿಪುರಾದಿಂದ ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಳಿಸುವ ವಿಷಯವು ವಾಸ್ತವಿಕವಾಗಿ ಕೊಲಿಜಿಯಂ ನಡಾವಳಿಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಿತ್ತು.

ಇಬ್ಬರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಪ್ರದೀಪ್ ನಂದ್ರಜೋಗ್ ಮತ್ತು ರಾಜೇಂದ್ರ ಮೆನನ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಳಿಸಲು ಶಿಫಾರಸು ಮಾಡಲು ಕೊಲಿಜಿಯಂ ತಾತ್ವಿಕವಾಗಿ ನಿರ್ಧರಿಸಿತ್ತು,ಆದರೆ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಸೋರಿಕೆಯಾಗಿದ್ದರಿಂದ ಈ ವಿಷಯದಲ್ಲಿ ಮುಂದುವರಿದಿರಲಿಲ್ಲ ಎಂದು ನ್ಯಾ.ಗೊಗೊಯಿ ಬರೆದಿದ್ದಾರೆ.

‘ಸುಪ್ರೀಂ ಆರೋಪಗಳು ಮತ್ತು ಸತ್ಯಕ್ಕಾಗಿ ನನ್ನ ಅನ್ವೇಷಣೆ ’ ಎಂಬ ಅಧ್ಯಾಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಹಿಳಾ ಉದ್ಯೋಗಿ ತನ್ನ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳಗಳ ಬಗ್ಗೆ ನ್ಯಾ.ಗೊಗೊಯಿ ಬರೆದಿದ್ದಾರೆ.

ಆರೋಪಗಳು ಬೆಳಕಿಗೆ ಬಂದಾಗ ನ್ಯಾ.ಗೊಗೊಯಿ ಅವರು ಶನಿವಾರ, 2019, ಎ.20ರಂದು ಈ ಬಗ್ಗೆ ವಿಶೇಷ ವಿಚಾರಣೆಯನ್ನು ನಡೆಸಿದ್ದರು. ಪೀಠದ ನೇತೃತ್ವವನ್ನು ಅವರೇ ವಹಿಸಿದ್ದರಾದರೂ ಪ್ರಕರಣದಲ್ಲಿಯ ಆದೇಶಕ್ಕೆ ಸಹಿ ಹಾಕಲು ನಿರಾಕರಿಸಿದ್ದರು.
ಬುಧವಾರ ತನ್ನ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ಗೊಗೊಯಿ ತಾನು ಪೀಠದ ಭಾಗವಾಗಿದ್ದಕ್ಕೆ ವಿಷಾದವನ್ನು ವ್ಯಕ್ತಪಡಿಸಿದರು.‘ಈಗ ಹಿಂದಿರುಗಿ ನೋಡಿದಾಗ ನಾನು ಪೀಠದಲ್ಲಿ ನ್ಯಾಯಾಧೀಶನಾಗಿರಬಾರದಿತ್ತು. ನಾನು ಪೀಠದ ಭಾಗವಾಗಿರದಿದ್ದರೆ ಉತ್ತಮವಾಗಬಹುದಿತ್ತು. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ಅದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಹಾನಿಯಲ್ಲ’ಎಂದು ಹೇಳಿದರು.

ಆದರೆ ತನ್ನ ಕೃತಿಯಲ್ಲಿ ಈ ಬಗ್ಗೆ ನ್ಯಾ.ಗೊಗೊಯಿ ಭಿನ್ನವಾಗಿ ಬರೆದಿದ್ದಾರೆ. ‘ಶನಿವಾರದ ನಿಗದಿತವಲ್ಲದ ಈ ವಿಚಾರಣೆ ಅತ್ಯಂತ ಅಲ್ಪಾವಧಿಯದ್ದಾಗಿತ್ತು. ವಾಸ್ತವದಲ್ಲಿ ವಿಚಾರಣೆ ನಡೆದೇ ಇರಲಿಲ್ಲ. ನಾನು ಆರೋಪಗಳ ಬಗ್ಗೆ ನನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದೆ ಮತ್ತು ಅದು ಸಿಜೆಐ ಕಾರ್ಯ ನಿರ್ವಹಣೆಗೆ ಧಕ್ಕೆಯನ್ನುಂಟು ಮಾಡಲು ಕೆಲವು ಅಪರಿಚಿತ ಶಕ್ತಿಗಳ ಪ್ರಯತ್ನ ಎಂದು ಪ್ರತಿಪಾದಿಸಿದ್ದೆ. ವಿಚಾರಣೆಯ ಕೊನೆಯಲ್ಲಿ ಅತ್ಯಂತ ನಿರುಪದ್ರವಿ ಆದೇಶವನ್ನು ಹೊರಡಿಸಲಾಗಿತ್ತು ’ಎಂದು ಅವರು ಹೇಳಿದ್ದಾರೆ.

2018ರ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರ ಸುದ್ದಿಗೋಷ್ಠಿಯ ಕುರಿತಂತೆ ನ್ಯಾ.ಗೊಗೊಯಿ,ಅದು ಸರಿಯಾದ ಕಾರ್ಯ ಎಂದು ತಾನು ನಂಬಿದ್ದೆನಾದರೂ ಪತ್ರಿಕಾಗೋಷ್ಠಿಯನ್ನು ತಾನು ನಿರೀಕ್ಷಿಸಿರಲಿಲ್ಲ,ಕೆಲವೇ ಪತ್ರಕರ್ತರೊಂದಿಗೆ ಭೇಟಿ ಎಂದು ತಾನು ಭಾವಿಸಿದ್ದೆ. ಅಂದಿನ ಸ್ಥಿತಿಯಲ್ಲಿ ಅದು ಸರಿಯಾದ ಕೆಲಸವಾಗಿತ್ತು ಎಂದು ತಾನು ಇಂದಿಗೂ ನಂಬಿದ್ದೇನೆ ಎಂದು ಬರೆದಿದ್ದಾರೆ.
 
ರಾಜ್ಯಸಭೆಗೆ ನಾಮ ನಿರ್ದೇಶನವನ್ನು ಒಪ್ಪಿಕೊಂಡ ಕುರಿತಂತೆ ಅವರು,ರಾಷ್ಟ್ರಪತಿಗಳೇ ನಾಮ ನಿರ್ದೇಶನವನ್ನು ಮಾಡಿದ್ದರಿಂದ ಏನನ್ನೂ ಆಲೋಚಿಸದೆ ಅದನ್ನು ಒಪ್ಪಿಕೊಂಡಿದ್ದೆ ಎಂದು ಬರೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)