varthabharthi


ಅನುಗಾಲ

ಅಯೋಧ್ಯೆಯಲ್ಲಿ ಸೂರ್ಯೋದಯ

ವಾರ್ತಾ ಭಾರತಿ : 16 Dec, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪ್ರತಿಷ್ಠಿತ ಪೆಂಗ್ವಿನ್ ಸಂಸ್ಥೆಯು ಪ್ರಕಟಿಸಿದ ಈ ಕೃತಿ 364 ಪುಟಗಳಷ್ಟು ವಿಶಾಲವಾಗಿದೆ. ಅಯೋಧ್ಯೆಯ ರಾಮಮಂದಿರ-ಬಾಬರಿ ಮಸೀದಿಯ ಕುರಿತಾದ ವಿವಾದದ ಪೂರ್ವಾಪರಗಳನ್ನು ವಿಶಾಲವಾಗಿ ವಿಶ್ಲೇಷಿಸಿದೆ. ಸ್ವತಃ ವಕೀಲರಾಗಿರುವ ಲೇಖಕರು ಈ ತೀರ್ಪು ಮತ್ತು ಅದರಲ್ಲಿ ಉಲ್ಲೇಖಿತವಾದ ಇತರ ತೀರ್ಪುಗಳ ಆಧಾರದಲ್ಲಿ ಒಟ್ಟಾರೆ ವಿವಾದದ ಒಳಹೊರಗನ್ನು ವಿವರಿಸಿದ್ದಾರೆ.


ಅನೇಕ ಒಳ್ಳೆಯ ಪುಸ್ತಕಗಳು ತಮ್ಮ ಪ್ರಸ್ತುತತೆಗೆ ಮತ್ತು ಓದಿಗೆ ಹೊರತಾದ ಕಾರಣಕ್ಕೂ ಸುದ್ದಿಮಾಡುತ್ತವೆ. ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್.ಲಾರೆನ್ಸ್ ಬರೆದ ‘ಲೇಡಿ ಚಾಟರ್ಲೀಸ್ ಲವರ್’ ಲೈಂಗಿಕತೆಯನ್ನೊಳಗೊಂಡಿದೆಯೆಂಬ ಕಾರಣಕ್ಕೆ ಸರಕಾರದ ಮತ್ತು ಕೆಲವು ಮಡಿವಂತರ ಆಗ್ರಹಕ್ಕೆ ತುತ್ತಾಗಿ ಸುದ್ದಿಮಾಡಿತು. ಕನ್ನಡದಲ್ಲೇ ‘ಧರ್ಮಕಾರಣ’ ಕಾದಂಬರಿಯು ಲಿಂಗಾಯತ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾಗಿ ಸರ್ವೋಚ್ಚ ನ್ಯಾಯಾಲಯದವರೆಗೂ ಅನಗತ್ಯವಾಗಿ ತಲುಪಿ ಕೆಲವು ಪದಗಳನ್ನು ಕಳೆದುಕೊಂಡಿತು. ಆಧುನಿಕತೆ ಮತ್ತು ಮನುಷ್ಯರ ದೃಷ್ಟಿಕೋನ ವಿಶಾಲವಾಗುತ್ತಿದ್ದಂತೆ ಈ ರೀತಿಯ ದುರಾಗ್ರಹಗಳು ಕಡಿಮೆಯಾಗುತ್ತವೆಂಬ ನಿರೀಕ್ಷೆ ಸುಳ್ಳಾಗಿದೆ. ಈಚೆಗೆ ಧರ್ಮ, ಮತ, ಕೋಮಿನ ಕಾರಣಕ್ಕಾಗಿ ಇಂತಹ ವಿರೋಧದ ಪರಿಪಾಠ ಹೆಚ್ಚಾಗುತ್ತಿದೆ. ‘ಪದ್ಮಾವತ್’ ಎಂಬ ಹಿಂದಿ ಸಿನೆಮಾ ಒಂದು ಸಮುದಾಯದ ವಿರೋಧವನ್ನು ಅನುಭವಿಸಿತು. ಎಲ್ಲಿ ನ್ಯಾಯಾಲಯಗಳು ವಸ್ತುನಿಷ್ಠ ಅಭಿಮತವನ್ನು ಹೊಂದಿರುತ್ತವೆಯೋ ಅಲ್ಲಿ ಕಾನೂನಿನ ರಕ್ಷಣೆ ಸಿಗುತ್ತದೆಯಾದರೂ ಸಾರ್ವಜನಿಕರು ಕಾನೂನಿನ ಎಲ್ಲೆ ಮೀರಿ ತಾವೇ ಕಾನೂನನ್ನು ಕೈಗೆತ್ತಿಕೊಳ್ಳುವ ಈ ದಿನಗಳಲ್ಲಿ ಪ್ರತಿಯೊಂದು ಕಲೆಯೂ ಒಂದಲ್ಲ ಒಂದು ಕಪ್ಪುಕಲೆಯನ್ನು ಅಂಟಿಸಿಕೊಳ್ಳಬೇಕಾಗುತ್ತದೆ. ಇದನ್ನು ದಾಟಿ ಸೃಜನಶೀಲ ಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಇಂದಿನ ಸವಾಲು.

ಒಂದು ಕೃತಿಯನ್ನು ಅದರ ಮೌಲ್ಯಕ್ಕಾಗಿ ಓದಬೇಕೇ ಹೊರತು ಅದರ ನಿಲುವುಗಳಿಗಾಗಿ ಅಲ್ಲ. ಅದು ತೀವ್ರ ಪ್ರತಿಗಾಮಿಯಾಗಿದ್ದಲ್ಲಿ ಕಾನೂನು ಅದರ ಹೊಣೆಯನ್ನು ನಿರ್ವಹಿಸುತ್ತದೆ. ಮೌಲ್ಯರಹಿತ ಬರವಣಿಗೆಯಾಗಿದ್ದಲ್ಲಿ ಯಾವುದೇ ಕೃತಿ ಎಷ್ಟೇ ಪ್ರಸಿದ್ಧಿಯನ್ನು ಪಡೆದರೂ, ಪ್ರಶಸ್ತಿಗಳನ್ನು ಬಾಚಿಕೊಂಡರೂ ಅದು ಕಾಲಪ್ರವಾಹದಲ್ಲಿ ಕಳೆದುಹೋಗುತ್ತದೆ. ಸಲ್ಮಾನ್ ಖುರ್ಶಿದ್ ದೇಶಾದ್ಯಂತ ಪ್ರಸಿದ್ಧಿ ಹೊಂದಿದ ರಾಜಕಾರಣಿ ಮಾತ್ರವಲ್ಲ, ಹಿರಿಯ ವಕೀಲರು ಮತ್ತು ಬರಹಗಾರರು. ಒಕ್ಕೂಟ ಸರಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದವರು; ವಿದೇಶಾಂಗ, ಕಾನೂನು ಮುಂತಾದ ಪ್ರಮುಖ ಖಾತೆಗಳನ್ನು ನಿರ್ವಹಿಸಿದವರು. ಮತೀಯ ಧ್ರುವೀಕರಣವು ದೇಶದಲ್ಲಿ ಹೆಚ್ಚಾದ ಪರಿಣಾಮವಾಗಿ ಕಳೆದ ಎರಡು ಚುನಾವಣೆಗಳಲ್ಲಿ ಸೋತವರು. ಅವರ ತಂದೆ ಖುರ್ಷಿದ್ ಆಲಮ್‌ಖಾನ್ ಕೂಡಾ ಕೇಂದ್ರ ಸಚಿವರಾಗಿದ್ದವರು; ಕರ್ನಾಟಕದ ರಾಜ್ಯಪಾಲರಾಗಿದ್ದವರು. ಮಾಜಿ ರಾಷ್ಟ್ರಪತಿ ಝಾಕಿರ್ ಹುಸೈನ್ ಅವರ ನಿಕಟ ಸಂಬಂಧಿ. ಸಲ್ಮಾನ್ ಖುರ್ಷಿದ್ ಅವರ ಹೊಸ ಕೃತಿ ‘ಅಯೋಧ್ಯೆಯಲ್ಲಿ ಸೂರ್ಯೋದಯ- ನಮ್ಮ ಕಾಲದ ರಾಷ್ಟ್ರಲಾಂಛನ’ (Sunrise Over Ayodhya- Nationhood in our times) ಕೃತಿಯು ಇತ್ತೀಚೆಗೆ ಪ್ರಕಟವಾಯಿತು. ಇದು ಪ್ರಕಟವಾದೊಡನೆಯೇ ಈ ಕೃತಿಯಲ್ಲಿ ಸಂಘ ಪರಿವಾರವನ್ನು ಐಎಸ್‌ಐಎಸ್, ಬೋಕೋ ಹರಾಮ್‌ಗಳಿಗೆ ಹೋಲಿಸಿದ್ದಾರೆಂಬ ಕಾರಣಕ್ಕೆ ಹಿಂದೂ ಮಹಾಸಭಾದ ಅಧ್ಯಕ್ಷರು ದಿಲ್ಲಿ ನ್ಯಾಯಾಲಯದಲ್ಲಿ ಕೃತಿಯನ್ನು ನಿಷೇಧಿಸಬೇಕೆಂದು ದಾವೆ ಹೂಡಿದರು ಮತ್ತು ತಾತ್ಕಾಲಿಕ ತಡೆಯಾಜ್ಞೆ ಕೋರಿದರು. ಅದನ್ನು ನ್ಯಾಯಾಲಯವು ತಿರಸ್ಕರಿಸಿತು. ಈ ಆದೇಶದ ಮೇಲೆ ಅರ್ಜಿದಾರರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ದಿಲ್ಲಿ ಉಚ್ಚ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ತಿರಸ್ಕರಿಸುತ್ತಾ ಒಂದು ಕೃತಿಯ ಮೌಲ್ಯವನ್ನು ಒಂದೆರಡು ವಾಕ್ಯಗಳಿಂದ ನಿರ್ಧರಿಸಲಾಗದು, ಯಾವುದೇ ಕೃತಿಯಾದರೂ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲವೆಂಬ ಅಭಿಪ್ರಾಯವನ್ನು ಸೂಚಿಸಿ ಅರ್ಜಿದಾರರಿಗೆ ನೀವು ಬೇಕಾದರೆ ಓದಿ, ಇಲ್ಲವಾದರೆ ಬಿಡಿ ಎಂದು ಕಟುವಾಗಿ ಹೇಳಿತು.

ಇದೇ ಸಮಯದಲ್ಲಿ ಮತಾಂಧ ದುಷ್ಕರ್ಮಿಗಳು ಸಲ್ಮಾನ್ ಖುರ್ಷಿದ್ ಅವರ ನೈನಿತಾಲ್‌ನ ಮನೆಯ ಮೇಲೆ ದಾಳಿ ನಡೆಸಿ ಸಾಕಷ್ಟು ಹಾನಿಯನ್ನುಂಟು ಮಾಡಿದರು. ಇಷ್ಟಕ್ಕೂ ಕೃತಿಯಲ್ಲೇನಿದೆ? ಪ್ರತಿಷ್ಠಿತ ಪೆಂಗ್ವಿನ್ ಸಂಸ್ಥೆಯು ಪ್ರಕಟಿಸಿದ ಈ ಕೃತಿ 364 ಪುಟಗಳಷ್ಟು ವಿಶಾಲವಾಗಿದೆ. ಅಯೋಧ್ಯೆಯ ರಾಮಮಂದಿರ-ಬಾಬರಿ ಮಸೀದಿಯ ಕುರಿತಾದ ವಿವಾದದ ಪೂರ್ವಾಪರಗಳನ್ನು ವಿಶಾಲವಾಗಿ ವಿಶ್ಲೇಷಿಸಿದೆ. ಸ್ವತಃ ವಕೀಲರಾಗಿರುವ ಲೇಖಕರು ಈ ತೀರ್ಪು ಮತ್ತು ಅದರಲ್ಲಿ ಉಲ್ಲೇಖಿತವಾದ ಇತರ ತೀರ್ಪುಗಳ ಆಧಾರದಲ್ಲಿ ಒಟ್ಟಾರೆ ವಿವಾದದ ಒಳಹೊರಗನ್ನು ವಿವರಿಸಿದ್ದಾರೆ. ಈಗಾಗಲೇ ಜನಜನಿತವಾದ ಮತ್ತು ಭಾರತೀಯ ಜನತಾಪಕ್ಷಕ್ಕೆ ರಾಜಕೀಯವಾಗಿ ಬಹುದೊಡ್ಡ ಲಾಭವನ್ನು ತಂದುಕೊಟ್ಟ ಅಯೋಧ್ಯೆಯ ಪ್ರಕರಣ ಶತಮಾನಗಳಷ್ಟು ಮತ್ತು ಅದು ಇನ್ನೂ ಬಾಬರಿ ಮಸೀದಿಯಾಗಿದ್ದ ಕಾಲದಷ್ಟು ಹಳೆಯದು. ಲೇಖಕರು 30.11.1858ರಷ್ಟು ಹಿಂದೆಯೇ ಮುಹಮ್ಮದ್ ಸಲೀಮ್ ಎಂಬವರ ದೂರಿನ ಆಧಾರದಲ್ಲಿ ದಾಖಲಾದ ಪ್ರಥಮ ವರ್ತಮಾನವನ್ನು ಉಲ್ಲೇಖಿಸುತ್ತಾರೆ. ಆಗ ಅದು ಹಿಂದೂ ಮುಸ್ಲಿಮ್ ವಿವಾದವಾಗಿರಲಿಲ್ಲ. ನಿಹಾಂಗ್ ಸಿಖ್ಖರು ಅಲ್ಲಿ ನಿಶಾನ್ ಸಾಹೇಬ್‌ನ್ನು ಇಟ್ಟು ಅದರಲ್ಲಿ ‘ರಾಮ್’ ಎಂಬ ಬರಹವನ್ನು ನಮೂದಿಸಿದರು. 01.12.1858ರಂದು ಶೀತಲ್ ದುಬೆ ಎಂಬ (ಪೊಲೀಸ್) ಠಾಣಾಧಿಕಾರಿಯು ಪ್ರಥಮ ವರ್ತಮಾನವನ್ನು ದಾಖಲಿಸಿದರೂ ಮುಂದಿನ ಕ್ರಮವನ್ನೇನೂ ಕೈಗೊಳ್ಳದೆ ಮಸೀದಿಯನ್ನು ಮುಸ್ಲಿಮರಿಗೆ ಮರಳಿಸಿದಂತೆ ಕಾಣಿಸುತ್ತದೆ. ಆನಂತರ 1885ರಲ್ಲಿ ಮಹಂತ ರಘುವೀರ ದಾಸ್ ಎಂಬವರು 61/280 ಎಂಬ ಸಂಖ್ಯೆಯ ಒಂದು ದಾವೆಯನ್ನು ಫೈಝಾಬಾದಿನ ಸಿವಿಲ್ ನ್ಯಾಯಾಲಯದಲ್ಲಿ ಆಗಿನ ಬ್ರಿಟಿಷ್ ಸರಕಾರದ ವಿರುದ್ಧ ಸಲ್ಲಿಸಿದರು. ದಾಸ್ ತಾನು ಮಹಂತನೆಂದೂ ಚಬೂತ್ರಾದಲ್ಲಿ ಕಾರ್ಯವೆಸಗುತ್ತಿದ್ದೇನೆಂದೂ ಅಲ್ಲಿ ದೇಗುಲವನ್ನು ಕಟ್ಟಲು ಅನುಮತಿ ನೀಡಬೇಕೆಂದೂ ಕೊರಿದ್ದರು. ಈ ದಾವೆಯು ವಜಾ ಆಯಿತು.

1886ರಲ್ಲಿ ಇದರ ವಿರುದ್ಧ ಫೈಝಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಅಪೀಲು ಸಂಖ್ಯೆ 27ರಂತೆ ಸಲ್ಲಿಸಿದರು. ಆಗಿನ ಜಿಲ್ಲಾ ನ್ಯಾಯಾಧೀಶ ಎಫ್.ಇ.ಆರ್.ಚೇಮಿಯರ್ ಸ್ಥಳ ಪರಿಶೀಲನೆ ನಡೆಸಿ ಮೇಲ್ಮನವಿಯನ್ನು ವಜಾಗೊಳಿಸಿದರು. ಈ ತೀರ್ಪಿನ ವಿರುದ್ಧ ಮತ್ತೆ ನ್ಯಾಯಿಕ ಆಯುಕ್ತರ ಮುಂದೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಲಾಗಿ ಅದೂ ವಜಾವಾಯಿತು. ಇಲ್ಲಿಗೆ ಮೊದಲ ವಿವಾದ ಪ್ರಕರಣ ಅಂತ್ಯವಾಯಿತು. ಆನಂತರ 1934ರಲ್ಲಿ ಅಯೋಧ್ಯೆಯಲ್ಲಿ ಒಂದು ಗಲಭೆ ನಡೆದು ವಿವಾದಿತ ಕಟ್ಟಡವನ್ನು ಹಾನಿಗೊಳಿಸಲಾಯಿತು. ಅದನ್ನು ಆಗಿನ ಬ್ರಿಟಿಷ್ ಸರಕಾರವು ದುರಸ್ತಿ ಮಾಡಿತು. ಈಗಿನ ತೀರ್ಪಿಗೆ ಕಾರಣವಾದ ಘಟನೆಯೆಂದರೆ 22-23.12.1949ರಲ್ಲಿ ಮಸೀದಿಯೊಳಗೆ ರಾಮ್ ಲಲ್ಲಾನ ಮೂರ್ತಿಯನ್ನು ಸ್ಥಾಪಿಸಿದ್ದು. ಇದು ಸ್ವತಂತ್ರ ಮತ್ತು ಪ್ರಜಾಪ್ರಭುತ್ವ ಭಾರತದಲ್ಲಿ ನಡೆದು ಅದರ ಅಂತ್ಯ ಎರಡು ರೀತಿಯಲ್ಲಿ ನಡೆಯಿತು. ಮೊದಲನೆಯದ್ದು 06.12.1992ರಂದು ಮಸೀದಿಯನ್ನು ಕರಸೇವಕರು ಕೆಡವಿದ್ದು; ಎರಡನೆಯದ್ದು 09.11.2019ರಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ್ದು. ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಸರ್ವಸಮ್ಮತವೆಂಬ ರೀತಿಯ ತೀರ್ಪನ್ನು ನೀಡಿ ಅಲ್ಲಿ ರಾಮಮಂದಿರಕ್ಕೆ ಅನುಮತಿ ನೀಡಿತು. ಅದೇ ದಿನ ಮುಖ್ಯ ನ್ಯಾಯಾಧೀಶರು ನಿವೃತ್ತರಾದದ್ದು ಕಾಕತಾಳೀಯದಂತಿದ್ದರೂ ಅವರು ಮುಂದೆ ರಾಜ್ಯಸಭಾ ಸದಸ್ಯತ್ವವನ್ನು ಸ್ವೀಕರಿಸಿದ್ದು ಅವರ ತೀರ್ಪಿಗೆ ಒಂದು ಕರಿನೆರಳನ್ನು ಬೀರಿತು.

ಜೊತೆಗೆ ಮಸೀದಿಯನ್ನು ಅಯೋಧ್ಯೆಯಲ್ಲೇ ವಿವಾದಿತ ಸ್ಥಳದಿಂದ ಹೊರಗೆ ಕಟ್ಟಲು ಐದು ಎಕ್ರೆ ಜಾಗವನ್ನು ನೀಡಲು ಆದೇಶಿಸಿದ್ದು ಕಾನೂನಿನಡಿ ಹಕ್ಕಿಲ್ಲದಿದ್ದರೆ ಹೀಗೆ ಜಾಗ ನೀಡುವುದಕ್ಕೆ ಕಾರಣವೇನು? ಇದು ಸರಿಯೇ? ಇದೊಂದು ನೈತಿಕ ಪರಿಹಾರವೇ? ಹಾಗಾದರೆ ಕಾನೂನಿನಡಿ ನೀಡಿದ ತೀರ್ಪು ನ್ಯಾಯಯುತವಾಗಿರಲಿಲ್ಲವೇ? ಮುಂತಾದ ಕೆಲವು ಪ್ರಶ್ನೆಗಳನ್ನು ಮೂಡಿಸಿತು. ಆದರೆ ಈ ತೀರ್ಪಿನಡಿ ನಿರೀಕ್ಷಿತ ಗಲಭೆಗಳೂ, ಟೀಕೆಗಳೂ ಆಗಲಿಲ್ಲ ಮತ್ತು ಒಂದು ರೀತಿಯ ಶಾಂತಿ ಪ್ರಾಪ್ತವಾಯಿತು. ಅಸಂಖ್ಯಾತ ಮುಗ್ಧ ರಾಮಭಕ್ತರಿಗೆ ಇದು ಸಂತೋಷ ನೀಡಿತು; ಪ್ರಧಾನಿಯವರಿಗೂ, ಭಾರತೀಯ ಜನತಾಪಕ್ಷಕ್ಕೂ ಅದರ ಭಾರೀ ಸಂಖ್ಯೆಯ ಕಾರ್ಯಕರ್ತರಿಗೂ ಇದೊಂದು ರಾಜಕೀಯ ಗೆಲುವಾದರೂ ಮುಂದೆ ಈ ಹೆಸರಿನಲ್ಲಿ ಮತಯಾಚನೆಯ ಅವಕಾಶ ಕಳೆದುಹೋಯಿತು. (ಈಗ ಆರಂಭವಾದ ಕಾಶಿ ಸಮಾರಾಧನೆ ಈ ನಿಟ್ಟಿನಲ್ಲಿ ಹೊಸ ಬೆಳವಣಿಗೆ!)

ಈ ಎಲ್ಲ ಪ್ರಶ್ನೆಗಳನ್ನು ಲೇಖಕರು ವಿಮರ್ಶಿಸಿದ್ದಾರೆ. ಪ್ರತಿಯೊಂದು ಸತ್ಯಕ್ಕೂ ಎರಡು ಅಥವಾ ಹೆಚ್ಚು ಮುಖಗಳಿರುವುದನ್ನು ಅವರು ಶೋಧಿಸಿದ್ದಾರೆ. ಮಸೀದಿಯ ರಕ್ಷಣೆಯ ಭರವಸೆಯನ್ನು ನೀಡಿದ ಉತ್ತರಪ್ರದೇಶ ಸರಕಾರವು ಅದನ್ನು ಉಲ್ಲಂಘಿಸಿ ಮಸೀದಿಯನ್ನು ಕೆಡಹುವುದಕ್ಕೆ ಕಾರಣವಾದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ತೀವ್ರ ಮುಖಭಂಗವನ್ನು ಅನುಭವಿಸಿದ್ದನ್ನು ಮತ್ತು ಅದರ ಪುನರ್‌ನಿರ್ಮಾಣಕ್ಕೆ ಆದೇಶಿಸಲು ಮೊದಲಾದದ್ದು ಮತ್ತು ಆನಂತರ ಆಗಿನ ಅಟಾರ್ನಿ ಜನರಲ್ ನಿರ್ಮಲ್ ಬ್ಯಾನರ್ಜಿಯವರ ಸಲಹೆಯಂತೆ ನ್ಯಾಯಾಲಯ ನಿಂದನೆ ಪ್ರಕರಣವನ್ನು ದಾಖಲಿಸಿ ಕಲ್ಯಾಣ್‌ಸಿಂಗ್ ಅವರನ್ನು ಒಂದು ದಿನದ ನ್ಯಾಯಾಲಯದ ಅವಧಿಯ ಸೆರೆಯ ಶಿಕ್ಷೆ ನೀಡಿದ್ದನ್ನು ಲೇಖಕರು ಪ್ರಸ್ತಾವಿಸಿದ್ದಾರೆ. ಅಲ್ಲದೆ ಮಸೀದಿಯನ್ನು ಕೆಡವಿದ ಆರೋಪಿಗಳ ವಿಚಾರಣೆಯ ವಿಳಂಬಕ್ಕೆ ಹೇಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಪೂರಕವಾಯಿತು ಮತ್ತು ಕೊನೆಗೂ ಇಂತಹ ಹಿಂಸಾತ್ಮಕ ಕೃತ್ಯವನ್ನು ನಡೆಸಿದವರು ಮತ್ತು ಕಾರಣವಾದವರು ಶಿಕ್ಷೆಯಿಂದ ಪಾರಾದರು ಎಂಬುದನ್ನೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಸಂತರೂ ಋಷಿಮುನಿಗಳೂ ತಿಳಿದ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದುತ್ವವನ್ನು ಮೂಲೆಗೆ ತಳ್ಳಿದ ಇಂದಿನ ಹಿಂದುತ್ವದ ರಾಜಕೀಯ ಮುಖವನ್ನು ಐಎಸ್‌ಐಎಸ್ ಮತ್ತು ಬೋಕೋ ಹರಾಮಿನ ಜಿಹಾದಿ ಇಸ್ಲಾಮಿನ ಗುಂಪುಗಳಿಗೆ ಹೋಲಿಸಬಹುದೆಂದು ಲೇಖಕರು ಒಂದೆಡೆ (6ನೇ ಅಧ್ಯಾಯ, ಪುಟ 113) ಅಭಿಪ್ರಾಯ ಪಟ್ಟಿದ್ದಾರೆ.

ಗಾಂಧಿಗೂ ಇಂದಿನ ರಾಜಕಾರಣಿಗಳಿಗೂ ಇರುವ ಮೌಲಿಕ ವ್ಯತ್ಯಾಸ ಸ್ಪಷ್ಟವಾಗಿದೆ. ಗಾಂಧಿ ಬ್ರಿಟಿಷ್ ಕಾನೂನುಗಳನ್ನು ಉಲ್ಲಂಘಿಸಿದ ಎಲ್ಲ ಸಂದರ್ಭಗಳಲ್ಲೂ ‘‘ನಿಮ್ಮ ಕಾನೂನಿನಡಿ ನಾನು ಮಾಡಿದ್ದು ತಪ್ಪು’’ ಎಂದು ಒಪ್ಪಿಕೊಂಡು ತಮ್ಮ ಸತ್ಯಾನ್ವೇಷಣೆಯ ಪ್ರಯೋಗವನ್ನು ನಡೆಸಿದರು. ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದ ಆಪಾದನೆಯನ್ನು ಹೊತ್ತ ಅಡ್ವಾಣಿ, ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್, ಅಶೋಕ್ ಸಿಂಘಾಲ್, ಗಿರಿರಾಜ ಕಿಶೋರ್ ಮುಂತಾದ ಅತಿರಥ ಮಹಾರಥರು ಮತ್ತು ಅಸಂಖ್ಯ ಕರಸೇವಕರ ಪೈಕಿ ಒಬ್ಬನೇ ಒಬ್ಬ ದೇಶಭಕ್ತನಾಗಲಿ, ರಾಮಭಕ್ತನಾಗಲಿ ರಾಮನು ಸಂದೇಶಿಸಿದ ಸತ್ಯವನ್ನು ಹೇಳುವ ಧೈರ್ಯವನ್ನು ಪ್ರದರ್ಶಿಸಿ ತಪ್ಪನ್ನು ಒಪ್ಪಿಕೊಂಡಿಲ್ಲದಿರುವುದು ರಾಮನಿಗೆ ಮತ್ತು ಸತ್ಯಕ್ಕೆ ಮಾಡಿದ ಮತ್ತು ಅಳಿಸಲಾಗದ ಅಪಚಾರ. ಈ ಸಂದರ್ಭದ ಇತಿಹಾಸವನ್ನು ಹೇಳುವುದಕ್ಕಷ್ಟೇ ಈ ಕೃತಿ ಸೀಮಿತವಾಗಿಲ್ಲ. ಧರ್ಮ, ಮತಗಳ ವಾಸ್ತವಿಕತೆ, ನಂಬಿಕೆಗಳ ವಾದಗಳನ್ನೂ ಅವರು ಪರಿಶೀಲಿಸಿದ್ದಾರೆ. ಜಗತ್ತಿನ ಬಹುತೇಕ ಎಲ್ಲ ಧರ್ಮಗಳ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ಮಂಡಿಸಿದ್ದಾರೆ. ಅಷ್ಟೇ ಅಲ್ಲ ರಾಮಾಯಣವನ್ನು ಅತ್ಯಂತ ಕಡಿಮೆ ಪದಗಳಲ್ಲಿ ಪ್ರಭಾವಶಾಲಿಯಾಗಿ ನೀಡಿದ್ದಾರೆ. ಒಂದು ರೀತಿಯಲ್ಲಿ ಸರ್ವಧರ್ಮ ಸಮಭಾವವನ್ನು ಲೇಖಕರು ಪ್ರಕಟಪಡಿಸಿದ್ದಾರೆ. ಅರವಿಂದ, ವಿವೇಕಾನಂದ ಮುಂತಾದ ದಾರ್ಶನಿಕರ ಮಾತುಗಳನ್ನು ಸಾಕಷ್ಟು (ಕೆಲವು ಕಡೆ ಅನಗತ್ಯವೆಂಬಷ್ಟು) ಉಲ್ಲೇಖಿಸಿದ್ದಾರೆ. ಕೃತಿಯಲ್ಲಿ ಹೇಗೇ ಓದಿದರೂ ಲೇಖಕರು ಭಾರತೀಯರೆಂದಷ್ಟೇ ಗುರುತಾಗುತ್ತಾರೆ. ಆದರೆ ತೀರ್ಪುಗಳನ್ನು ಉಲ್ಲೇಖಿಸುವಾಗ ಯಾವುದು ಸಾಮಾನ್ಯ ಓದುಗನಿಗೆ ರುಚಿಸುತ್ತದೆ ಮತ್ತು ಯಾವುದು ವೃತ್ತಿಪರ ವಕೀಲರಿಗಷ್ಟೇ ಇಷ್ಟವಾಗುತ್ತದೆಯೆಂಬುದನ್ನು ಗಣಿಸದೆ ಪುಟಗಟ್ಟಲೆ ಉಲ್ಲೇಖಿಸಿದ್ದಾರೆ. ಇದು ಓದಿನ ಓಘವನ್ನು ಮತ್ತು ವೇಗವನ್ನು ಕಡಿಮೆಮಾಡಬಹುದು.

ಧರ್ಮ ಮತ್ತು ಮತಗಳು ಶಾಂತಿ, ಸಮಾಧಾನದ ದೇಶವನ್ನು ಕಟ್ಟುವುದಕ್ಕೆ ಬಳಕೆಯಾಗಬೇಕೇ ಹೊರತು ಪ್ರಚೋದನೆಗೆ, ದ್ವೇಷವನ್ನು ಬೆಳೆಸುವುದಕ್ಕೆ ಹಾಗೂ ರಾಜಕೀಯ ದುರುದ್ದೇಶಕ್ಕೆ ಬಳಸಲ್ಪಡಬಾರದು ಎಂಬುದನ್ನು ಲೇಖಕರು ಹಲವೆಡೆ ಸೂಚಿಸಿದ್ದಾರೆ. ದೇಗುಲಗಳ ಗಂಟೆಗಳ, ಮಂತ್ರಘೋಷಗಳ ಸದ್ದು ಕಡಿಮೆಯಾಗಿ ಭಾರತವು ಒಂದೇ ಸ್ವರದಲ್ಲಿ ಇಷ್ಟದೇವರಿಗೆ ಭಕ್ತಿಯನ್ನೂ ಸಂವಿಧಾನಕ್ಕೆ ಬದ್ಧತೆಯನ್ನೂ ತೋರುವ ದಿನ ಯಾವಾಗ ಬಂದೀತು? ರಾಮರಾಜ್ಯವೆಂಬುದು ಆದರ್ಶದ ಸಂಕೇತ. ಆದ್ದರಿಂದ ರಾಮರಾಜ್ಯವೆಂಬುದು ಸರ್ವಜನಾಂಗದ ಶಾಂತಿಯ ತೋಟವಾಗಿ ಆದರ್ಶ ಆಡಳಿತಕ್ಕೆ ಹಾದಿ ಮಾಡಿಕೊಡಬೇಕೇ ಹೊರತು ಹಿಂದೂ ಸಾಮ್ರಾಜ್ಯಕ್ಕಲ್ಲ; ಪರರೆಂದು ಯಾರನ್ನಾದರೂ (ತಪ್ಪಾಗಿ) ಭಾವಿಸಿದರೂ ಅವರ ಕುರಿತ ದ್ವೇಷಕ್ಕಲ್ಲ. ಅಯೋಧ್ಯೆ ಹೇಗೆ ಎಲ್ಲರಿಗೂ ಸೇರಿದೆಯೋ ಹಾಗೆಯೇ ಈ ದೇಶವೂ ಎಲ್ಲರಿಗೆ ಸೇರಿದೆ. ಗಾಂಧಿ ಹೇಳಿದಂತೆ ‘‘ರಾಮರಾಜ್ಯವೆಂದರೆ ನಾನು ಹಿಂದೂ ರಾಜ್ಯವೆಂದು ಭಾವಿಸುವುದಿಲ್ಲ. ನಾನು ಅದನ್ನು ದೇವರಾಜ್ಯವೆಂದು ಭಾವಿಸುತ್ತೇನೆ. ನನಗೆ ರಾಮ ಮತ್ತು ರಹೀಮ ಒಬ್ಬನೇ ದೇವರು. ನಾನು ಸತ್ಯ ಮತ್ತು ನೈತಿಕತೆಯನ್ನು ಮಾತ್ರ ದೇವರೆಂದು ಒಪ್ಪಿಕೊಳ್ಳುತ್ತೇನೆ.. ನನ್ನ ಕಲ್ಪನೆಯ ರಾಮನು ಈ ಭೂಮಿಯಲ್ಲಿ ಬದುಕಿದ್ದನೋ ಇಲ್ಲವೋ, ಎಲ್ಲಿ ಅತ್ಯಂತ ಕೊನೆಯ ಪ್ರಜೆಯೂ ಪ್ರಯಾಸವಿಲ್ಲದ ಮತ್ತು ಹೆಚ್ಚು ವೆಚ್ಚವಿಲ್ಲದ ಶೀಘ್ರನ್ಯಾಯದ ಭರವಸೆಯನ್ನು ಹೊಂದಿದ್ದಾನೋ ಅಂತಹ ರಾಮರಾಜ್ಯದ ಪ್ರಾಚೀನ ಆದರ್ಶವು ನೈಜ ಪ್ರಜಾಪ್ರಭುತ್ವದ ಆದರ್ಶವಾಗಿದೆ.’’ ಹದಿಮೂರು ಅಧ್ಯಾಯಗಳ ಈ ಕೃತಿಯ ಒಟ್ಟಾರೆ ಓದಿನಲ್ಲಿ ನಮಗೆ ಕಾಣು ವುದು ಲೇಖಕರ ನಿಟ್ಟುಸಿರು; ಕೊನೆಗೂ ಅಯೋಧ್ಯೆಯ ಈ ಅನಗತ್ಯ ವಿವಾದ ಕೊನೆಯಾಯಿತಲ್ಲ ಎಂಬ ಸಮಾಧಾನ. ಅಯೋಧ್ಯೆಯ ವಿವಾದದ ಅಂತ್ಯವು ಹೊಸ ಸೂರ್ಯೋದಯವೋ ನಡುಹಗಲಿನ ಕತ್ತಲೋ ಎಂಬುದನ್ನು ಭವಿಷ್ಯವೇ ಹೇಳಬೇಕು. ಇಂದಿನ ಸಂದರ್ಭದಲ್ಲಿ ಇದೊಂದು ಮೌಲಿಕ ಕೃತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)