varthabharthi


ನಿಮ್ಮ ಅಂಕಣ

ಹಂಸಲೇಖರ ಬಿಕ್ಕಟ್ಟೂ... ಬಹುಜನರ ಒಗ್ಗಟ್ಟೂ...

ವಾರ್ತಾ ಭಾರತಿ : 16 Dec, 2021
ಡಾ. ಕೃಷ್ಣಮೂರ್ತಿ ಚಮರಂ

ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ಸಂಗೀತ ಮಾಂತ್ರಿಕ ಹಾಗೂ ಆಡು ಭಾಷೆಯನ್ನೇ ಹಾಡಾಗಿಸಿದ ಖ್ಯಾತಿಯ ನಾದಬ್ರಹ್ಮ ಹಂಸಲೇಖ ಅವರು ಇದೀಗ ತಮ್ಮ ನೇರ ಮತ್ತು ನಿಷ್ಠುರವಾದ ಮಾತಿನಿಂದ ದೊಡ್ಡದೊಂದು ವಿವಾದದ ಕೇಂದ್ರಬಿಂದುವಾಗಿ ಸುದ್ದಿಯಲ್ಲಿದ್ದಾರೆ. ಅವರ ನೇರ ಮಾತಿನ ಚಾಟಿಗೆ ತತ್ತರಿಸಿದ ಮನುವಾದಿಗಳು ಅವರ ಮಾತಿಗೆ ಉತ್ತರಿಸುವ ಬದಲು ವಿವಾದಕ್ಕೆ ಸಿಲುಕಿಸಲು ಹೋಗಿ ಕರ್ನಾಟಕದ ಜನತೆ ಎದುರು ಮುಖಭಂಗಕ್ಕೊಳಗಾಗಿದ್ದಾರೆ. ಹಂಸಲೇಖರ ಮಾತು ಮತ್ತು ಆನಂತರ ಮನುವಾದಿಗಳು ಹುಟ್ಟುಹಾಕಿದ ಅನಗತ್ಯ ವಿವಾದವು ಬರಗೆಟ್ಟ ಸುದ್ದಿವಾಹಿನಿಗಳ ಆಹಾರವಾಗಿ, ಜಾಲತಾಣದಲ್ಲಿ ಜಗ್ಗಾಟವಾಗಿ, ನೆಟ್ಟಿಗರ ನಡುವೆ ಪರ-ವಿರೊಧದ ವಾಗ್ವಾದವಾಗಿ, ನ್ಯಾಯಾಲಯದ ಮೆಟ್ಟಿಲೇರಿ, ನಾಡಿನಾದ್ಯಂತ ಬಹುಜನರ ಬಹುದೊಡ್ಡ ಚಳವಳಿಗೆ ನಾಂದಿಯಾದ ಈ ವಿವಾದ ಸತತ ಇಪ್ಪತ್ತು ದಿನಗಳ ಕಾಲ ಪ್ರಮುಖ ಸುದ್ದಿಯಾಗಿತ್ತು ಎನ್ನುವುದೇ ವಿಸ್ಮಯ! ದಿನಾಂಕ 12-11-2021ರಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕವಿ, ಬರಹಗಾರ ಡಾ.ಕೃಷ್ಣಮೂರ್ತಿ ಚಮರಂ ಅವರಿಗೆ (ಲೇಖಕರಿಗೆ) ಮುಳ್ಳೂರು ನಾಗರಾಜ ರಾಜ್ಯಮಟ್ಟದ 10ನೇ ವರ್ಷದ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಚಾಮರಾಜನಗರದ ರಂಗವಾಹಿನಿ ಟ್ರಸ್ಟ್ ನೀಡುವ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರಿನ ರಾಮಮನೋಹರ ಲೋಹಿಯಾ ಟ್ರಸ್ಟ್ ಹಾಗೂ ನೆಲೆಹಿನ್ನೆಲೆ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವದು. ಈ ಕಾರ್ಯಕ್ರಮವನ್ನು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ನಾಗೇಶ್ ವಿ. ಬೆಟ್ಟಕೋಟೆ ಉದ್ಘಾಟಿಸಿದರು. ರಾಜ್ಯ ಪ್ರದೇಶಾಭಿವೃದ್ಧಿ ಯೋಜನಾ ಮಂಡಳಿಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಹಂಸಲೇಖ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಮುನಿರಾಜು, ಬೆಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ. ರಾಜಪ್ಪದಳವಾಯಿ, ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷರಾದ ಡಾ. ನಂಜಯ್ಯ ಹೊಂಗನೂರು, ಕನ್ನಡ ವಿಭಾಗದ ನಿರ್ದೇಶಕರಾದ ಡಾ. ಮಂಜುನಾಥ್, ಅಂತರ್‌ರಾಷ್ಟ್ರೀಯ ಜಾನಪದ ಕಲಾವಿದ ರಂಗವಾಹಿನಿಯ ಸಿ.ಎಂ. ನರಸಿಂಹಮೂರ್ತಿ, ರಂಗಕರ್ಮಿ ನೆಲೆಹಿನ್ನೆಲೆ ಗೋಪಾಲಕೃಷ್ಣ ಅವರೆಲ್ಲರೂ ಭಾಗವಹಿಸಿದ್ದರು.

ಹಂಸಲೇಖ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಈ ದೇಶದ ಅಸ್ಪಶ್ಯತೆಯ ಕರಾಳತೆಯನ್ನು ತಮ್ಮದೇ ಲಘುಹಾಸ್ಯದ ಧಾಟಿಯಲ್ಲಿ ವಿವರಿಸಿದರು. ದಲಿತರ ಕೇರಿಗೆ ಅಸ್ಪಶ್ಯತೆಯ ನಿವಾರಣೆಯ ನೆಪದಲ್ಲಿ ಬರುವ ಸ್ವಾಮೀಜಿಗಳು ದಲಿತರ ಮನೆಯಲ್ಲಿ ಕೊಡುವ ದಲಿತ ಆಹಾರ ಸಂಸ್ಕೃತಿಯ ಊಟೋಪಚಾರ ಸೇವಿಸುತ್ತಾರಾ? ರಾಜಕಾರಣಿಗಳು ದಲಿತರ ಮನೆಯಲ್ಲಿ ವಾಸ್ತವ್ಯ ಮಾಡುವ ಗಿಮಿಕ್ ಮಾಡುತ್ತಾರೆ. ಆದರೆ ಅಲ್ಲಿ ಏನನ್ನೂ ಸೇವಿಸದೆ ಹೊರಗಿನಿಂದ ತಂದ ಊಟ ಮಾಡಿ ಎದ್ದು ಹೋಗುತ್ತಾರೆ. ಇದೆಲ್ಲವೂ ಬರೀ ಬೂಟಾಟಿಕೆ. ಇದೆಲ್ಲದರಿಂದ ಜಾತೀಯತೆ, ಅಸ್ಪಶ್ಯತೆ ಹೋಗುವುದಿಲ್ಲ. ಜಾತಿಭೇದ ಮಾಡುವವರ ಮನಸ್ಸಿನಿಂದ ಅದನ್ನು ತೊಳೆದುಕೊಳ್ಳಬೇಕು ಎಂಬ ಭಾವದಲ್ಲಿ ಮಾತಾಡಿದರು ಎಂಬುದಕ್ಕೆ ಅಂದು ಅಲ್ಲಿ ನೆರೆದಿದ್ದ ಪ್ರಜ್ಞಾವಂತರೇ ಸಾಕ್ಷಿ. ಹಂಸಲೇಖ ಅವರು ಹೀಗೆ ತಮ್ಮ ಮಾತುಗಳನ್ನು ಮಂಡಿಸುವ ಭರದಲ್ಲಿ ಈಗ ದಿವಂಗತರಾಗಿರುವ ಪೇಜಾವರ ಮಠದ ಸ್ವಾಮೀಜಿಯವರು ಹಿಂದೆ ದಲಿತ ಕೇರಿಗಳಿಗೆ ಜಾತಿವಿನಾಶದ ಹೆಸರಲ್ಲಿ ಭೇಟಿ ನೀಡುತ್ತಿದ್ದ ವಿಷಯವನ್ನು ಉಲ್ಲೇಖಿಸುತ್ತಾ ‘‘ಪೇಜಾವರರು ಅಸ್ಪಶ್ಯತೆ ತೊಡೆದು ಹಾಕಲು ದಲಿತರ ಕೇರಿಗೆ ಭೇಟಿ ನೀಡುತ್ತಾರಲ್ಲ ಆಗ ದಲಿತರು ಕೋಳಿ, ಕುರಿ ಮಾಂಸ ಕೊಟ್ಟರೆ ಸೇವಿಸುತ್ತಾರೆಯೇ?’’ ಎಂಬ ಪ್ರಶ್ನೆ ಹಾಕುತ್ತಾರೆ ಅಷ್ಟೆ. ಅವರ ಮಾತಲ್ಲಿ ದಲಿತರ ಆಹಾರ ಸಂಸ್ಕೃತಿ ಹಾಗೂ ಬ್ರಾಹ್ಮಣರ ಆಹಾರ ಸಂಸ್ಕೃತಿಗಳ ನಡುವೆ ವ್ಯತ್ಯಾಸವಿದೆ ಮತ್ತು ದಲಿತರ ಮಾಂಸಾಹಾರ ಕುರಿತು ಬ್ರಾಹ್ಮಣರಲ್ಲಿ ಕೀಳರಿಮೆಯಿದೆ ಎಂಬುದನ್ನು ಹೇಳುವ ಉದ್ದೇಶದಿಂದ ಈ ಮಾತುಗಳನ್ನು ಆಡಿದರು ಎಂಬುದು ನಿರ್ವಿವಾದ ಸತ್ಯ. ಹಂಸಲೇಖರು ಇಪ್ಪತ್ತು ವರ್ಷಗಳಿಗೂ ಮಿಗಿಲಾಗಿ ಚಿತ್ರರಂಗದಲ್ಲಿದ್ದು ಖ್ಯಾತಿಯ ಶಿಖರವನ್ನೇ ಏರಿ ರಾಜ್ಯದಾದ್ಯಂತ ಮನೆಮಾತಾಗಿರುವವರು. ಅವರು ಇಂತಹ ಗಂಭೀರ ಸಭೆಯಲ್ಲಿ ಪ್ರಜ್ಞಾವಂತರೆದುರು ಕೇವಲ ಚಪ್ಪಾಳೆ ಮತ್ತು ಸಿಳ್ಳೆಗಾಗಿ ಮಾತಾಡಿದರು ಎಂದರೆ ಬಹಳ ಕ್ಲೀಷೆಯಾಗುತ್ತದೆ. ಅವರು ಇದೆಲ್ಲದಕ್ಕಿಂತಲೂ ಜಾನಪದ ಸಂಗೀತ ಮತ್ತು ಅದಕ್ಕೆ ಹೊಸದಾಗಿ ತಾವೇ ತಮ್ಮ ಹಲವು ವರ್ಷಗಳ ಅಧ್ಯಯನದ ಮೂಲಕ ಕಂಡುಹಿಡಿದಿರುವ ನೊಟೇಷನ್‌ಗಳ ಕುರಿತು ಮಾತಾಡಿದರು. ನಿಜಕ್ಕೂ ಚರ್ಚೆಯಾಗಬೇಕಿದ್ದ ವಿಚಾರವಿದು.

ಹಂಸಲೇಖ ಮುಂದುವರಿದು ಬಿಳಿಗಿರಿ ರಂಗಸ್ವಾಮಿ ಸುತ್ತಲೂ ಇರುವ ಜಾನಪದವನ್ನೂ ಅವರೇ ಅಧ್ಯಯನ ಮಾಡಿದವರಾಗಿ ವಿವರಿಸುತ್ತಾ ‘‘ಬಿಳಿಗಿರಿ ರಂಗಸ್ವಾಮಿ ಬೆಳಗಿನ ನಸುಕಿನ ಜಾವದಲ್ಲಿ ಯಾರಿಗೂ ಕಾಣದಂತೆ ಬಂದು ಆದಿವಾಸಿ ಸೋಲಿಗರ ಹೆಣ್ಣುಮಗಳೊಡನೆ ಸಲ್ಲಾಪವಾಡಿ ಬೆಳಕು ಹರಿಯುವ ಹೊತ್ತಿಗೆ ಬೆಟ್ಟದ ಮೇಲೆ ಹೋಗಿ ಕಲ್ಲಾಗುತ್ತಾನೆ. ಇದು ತಳ ಸಮುದಾಯಗಳಿಗೆ ಮಾಡುವ ಮೋಸ. ಅದರ ಬದಲು ರಾಜಾರೋಷವಾಗಿ ಬಿಳಿಗಿರಿ ರಂಗನಾಥ ತಳಸಮುದಾಯದ ಹೆಣ್ಣುಮಗಳನ್ನು ತನ್ನ ಅರಮನೆಗೆ ಕರೆದೊಯ್ದು ಮೆರೆಸಬೇಕು. ಹಾಗೆಯೇ ಬಲಿತ ಸಮುದಾಯಗಳು ದಲಿತರ ಮನೆಗೆ ಬಂದು ವಾಸ್ತವ್ಯ ಹೂಡುವ ಬದಲು ತಮ್ಮ ಮನೆಗಳಿಗೆ ದಲಿತರನ್ನು ಕರೆದೊಯ್ದು ಅವರ ನಡು ಮನೆಯಲ್ಲಿ ಕೂರಿಸಿ, ಅವರಿಗೆ ತಮ್ಮ ತಟ್ಟೆಯಲ್ಲಿ ಮನಸಾರೆ ಊಟ ಬಡಿಸಿ ಅವರು ಉಂಡ ತಟ್ಟೆಯನ್ನು ಸಹಜ ಭಾವನೆಯಿಂದ ತೊಳೆಯಬೇಕು. ಹೀಗೆ ಮಾಡುವ ಮೂಲಕ ತಮ್ಮಲ್ಲಿರುವ ಭೇದಭಾವವನ್ನೂ ತೊಳೆದುಕೊಳ್ಳಬೇಕು’’ ಎಂದು ಹೇಳಿದರು. ಎಂತಹ ಜೀವಪರವಾದ ಮಾತು! ಅವರು ಮುಂದುವರಿದು, ‘‘ಈ ದೇಶದ ಭಗವದ್ಗೀತೆಯಿಂದ ಯಾರಿಗೆ ಏನು ಲಾಭವಾಗಿದೆಯೋ ಗೊತ್ತಿಲ್ಲ. ಆದರೆ ಬಾಬಾಸಾಹೇಬರು ಬರೆದ ಬಡವರಗೀತೆ ಸಂವಿಧಾನದಿಂದ ಮಾತ್ರ ಎಲ್ಲರಿಗೂ ಗುಲಾಮಗಿರಿಯಿಂದ ಮುಕ್ತಿ ಸಿಕ್ಕಿದೆ. ಧರ್ಮಾಕ್ರಸಿಯ ಆಳ್ವಿಕೆಯಲ್ಲಿ ನಾವು ಸಾಂಸ್ಕೃತಿಕ ಗುಲಾಮಗಿರಿಯಲ್ಲಿದ್ದೆವು. ಆದರೆ ಡೆಮಾಕ್ರಸಿಯ ಆಳ್ವಿಕೆಯಲ್ಲಿ ನಾವೆಲ್ಲರೂ ಗುಲಾಮಗಿರಿಯಿಂದ ಬಿಡುಗಡೆಗೊಂಡು ಸ್ವತಂತ್ರರಾಗಿದ್ದೇವೆ. ಇದನ್ನು ನಾವು ಕಳೆದುಕೊಳ್ಳಬಾರದು. ನಾವು ಇನಾಕ್ಟಿವ್ ಆಗಿರುವುದರಿಂದ ಮನುವಾದಿಗಳು ಆಕ್ಟಿವ್ ಆಗಿದ್ದಾರೆ. ಬಹುಜನರಾದ ನಾವು ಆಕ್ಟಿವ್ ಆದರೆ ಮನುವಾದಿಗಳು ಇನಾಕ್ಟಿವ್ ಆಗುತ್ತಾರೆ’’ ಎಂದು ಇಂದಿನ ಪರಿಸ್ಥಿತಿಯನ್ನು ಅತ್ಯಂತ ಸಹಜವಾಗಿ ವಿವರಿಸಿದರು. ಮಾರನೇ ದಿನ ಪತ್ರಿಕೆಗಳು ಹಂಸಲೇಖರ ಮಾತುಗಳಲ್ಲಿನ ಸೂಕ್ಷ್ಮವನ್ನು ಅರ್ಥಮಾಡಿಕೊಂಡು ಬಹಳ ಸೂಕ್ಷ್ಮವಾಗಿಯೇ ವರದಿ ಮಾಡಿದವು. ಆದರೆ ಬ್ರೇಕಿಂಗ್ ನ್ಯೂಸ್‌ಗಾಗಿ ಹಸಿದು ಹಾತೊರೆಯುವ ಕೆಲವು ಮನುವಾದಿಗಳ ಏಜೆಂಟ್ ವಾಹಿನಿಗಳು ಮಾತ್ರ ಹಂಸಲೇಖರ ಮಾತಿನ ಹಿಂದಿನ ಭಾಗ ಮತ್ತು ಮುಂದಿನ ಭಾಗಗಳನ್ನು ಎಡಿಟ್ ಮಾಡಿ, ಅವರ ಮಾತಿನ ಒಳಾರ್ಥವನ್ನೇ ಬದಲಿಸಿ ‘‘ಪೇಜಾವರ ಸ್ವಾಮೀಜಿಗಳು ಕೋಳಿ ಮಾಂಸ ತಿನ್ನುತ್ತಾರಾ? ಕುರಿ ಮಾಂಸ ತಿನ್ನುತ್ತಾರಾ?’’ಎಂಬೊಂದು ಮಾತನ್ನೇ ದಿನವಿಡೀ ಉಜ್ಜುತ್ತಾ, ಅದರ ಸುತ್ತಾ ತಮ್ಮ ಒಣಪಾಂಡಿತ್ಯ ವಿಶ್ಲೇಷಣೆ ಮಾಡುತ್ತಾ ತಾವೇ ನ್ಯಾಯಾಧೀಶರಾಗಿ ತೀರ್ಪು ಪ್ರಕಟಿಸಿ ವಿವಾದದ ಬೆಂಕಿ ಹಚ್ಚಿದವು. ಇಷ್ಟೇ ಸಾಕಾಯಿತು ಜಾಲತಾಣದಲ್ಲಿ ಕಾದುಕುಳಿತಿದ್ದ ಸಂಘಿಗಳಿಗೆ. ಅಲ್ಲಿಂದ ಅವರ ಪ್ರವರ ಶುರುವಾಯಿತು. ಇದು ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದಂತಾಗಿದೆ ಎನ್ನುತ್ತಾ ಟ್ರೋಲ್‌ಗಿಳಿದರು. ಇದರ ಅಂದಾಜು ಅರಿತ ಹಂಸಲೇಖರು ತನ್ನಿಂದ ಪ್ರಮಾದವಾಗಿರಬಹುದು, ವಿನಾಕಾರಣ ತನ್ನ ಮಾತು ಸಮಾಜದ ಶಾಂತಿಭಂಗಕ್ಕೆ ಕಾರಣವಾಗಬಾರದು ಎಂಬ ಕಾರಣಕ್ಕೂ, ಕೆಲವು ಆಪ್ತೇಷ್ಟರ ಒತ್ತಾಯಕ್ಕೂ ಕಟ್ಟುಬಿದ್ದು ಕೂಡಲೇ ತಡಮಾಡದೆ ಕ್ಷಮೆಯಾಚಿಸಿದರು. ಕ್ಷಮೆಯಾಚಿಸುವಾಗಲೂ ಅವರು ಹೇಳಿದ್ದು ಹೀಗೆ ‘‘ನನ್ನಿಂದ ತಪ್ಪಾಗಿದೆ. ಅದೊಂದು ಪ್ರಶಸ್ತಿ ಪ್ರದಾನ ಸಮಾರಂಭ. ಸ್ವಾಮೀಜಿಗಳ ಕುರಿತು ಆ ಸಭೆಯಲ್ಲಿ ನಾನು ಹಾಗೆ ಮಾತಾಡಬಾರದಿತ್ತು. ನನ್ನಿಂದ ಯಾರ ಭಾವನೆಗಾದರೂ ನೋವಾಗಿದ್ದರೆ ಕ್ಷಮೆ ಇರಲಿ, ನಾವು ಸಂಗೀತಗಾರರು ನಮಗ್ಯಾಕೆ ಟ್ರೋಲು? ನಮ್ಮಿಂದ ಅನಿಷ್ಟಗಳನ್ನು ತೊಡೆದು ಹಾಕಲು ಏನು ಮಾಡಬಹುದೋ ಅದನ್ನು ಮಾಡಬೇಕು’’ ಎಂದು ಅತ್ಯಂತ ಮಾನವ ಪ್ರೀತಿಯಿಂದ ಕೇಳಿಕೊಂಡರು.

ಪ್ರಜ್ಞಾವಂತ ಸಮಾಜವಾಗಿದ್ದರೆ ಅವರು ಅಲ್ಲಿಗೆ ಅದನ್ನು ನಿಲ್ಲಿಸಿದ್ದರೆ ಸರಿಯಿತ್ತು. ಆದರೆ ಆನಂತರವೂ ಬ್ರಾಹ್ಮಣ ಸಂಘದವರು ಜಾಲತಾಣದಲ್ಲಿ ತಮ್ಮ ಕೀಳು ಅಭಿರುಚಿಯಲ್ಲಿ ಹಂಸಲೇಖರನ್ನು ಟೀಕಿಸಲಾರಂಭಿಸುತ್ತಾರೆ. ಬ್ರಾಹ್ಮಣ ವಾಹಿನಿಗಳು ತಮ್ಮ ಅರಚಾಟವನ್ನು ಮುಂದುವರಿಸುತ್ತವೆ. ಬ್ರಾಹ್ಮಣ ಅಂಕಣಕಾರರು ಪತ್ರಿಕೆಗಳಲ್ಲಿ ಹಂಸಲೇಖರನ್ನು ಮಹಾಪರಾಧಿ ಎಂಬಂತೆ ಇನ್ನಿಲ್ಲದಂತೆ ಟೀಕಿಸಿ ಬರೆಯುತ್ತಾರೆ. ಬ್ರಾಹ್ಮಣ ಸ್ವಾಮೀಜಿಗಳು ತಮಗೆ ಸಿಕ್ಕ ವೇದಿಕೆಯಲ್ಲಿ ‘‘ಲಯ ತಪ್ಪಿದ ಹಂಸಲೇಖ’’ ಎಂದು ಟೀಕಿಸುತ್ತಾರೆ. ಅವರು ಕ್ಷಮೆ ಕೇಳಿದ ರೀತಿ ಸರಿಯಿಲ್ಲ. ಅವರ ಮುಖದಲ್ಲಿ ತಪ್ಪಿತಸ್ಥ ಭಾವ ಕಾಣಲಿಲ್ಲ, ಪ್ರಚಾರದ ಹುಚ್ಚು, ಚಪ್ಪಾಳೆ ಗಿಟ್ಟಿಸುವ ಉದ್ದೇಶದಿಂದ ಇದೆಲ್ಲಾ ಮಾತಾಡಿದರು ಇತ್ಯಾದಿಯಾಗಿ ವೀಡಿಯೊಗಳ ಮೂಲಕ ಅಬಾಲ ವೃದ್ಧ್ದರಾದಿಯಾಗಿ ವೈರಲ್ ಮಾಡುತ್ತಾರೆ. ಚಿತ್ರರಂಗದ ಪತ್ರಕರ್ತನೊಬ್ಬ ಸಿಕ್ಕಿದ್ದೇ ಚಾನ್ಸು ಎಂಬಂತೆ ತನ್ನ ಬ್ರಾಹ್ಮಣ್ಯದಿಂದ ಹುರುಪುಗೊಂಡು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಇದ್ದಕ್ಕಿದ್ದಂತೆ ಹಂಸಲೇಖರ ಸಾಹಿತ್ಯ ಸಂಗೀತಗಳೆಲ್ಲವನ್ನೂ ಸಾರಸಗಟಾಗಿ ಅಲ್ಲಗೆಳೆಯಲು ಶುರುಮಾಡುತ್ತಾನೆ. ಹಿರಿಯ ಬ್ರಾಹ್ಮಣ ಮಾಜಿ ಮಂತ್ರಿಯೊಬ್ಬರು ‘‘ಎದೆಯೊಳಗಿನ ವಿಷವನ್ನು ಕಕ್ಕಿ ಈಗ ಮೇಲ್ನೋಟದ ಕ್ಷಮೆ ಕೇಳಿದರೆ ಒಳಗಿನ ವಿಷ ಹೋಗುವುದೇ?’’ ಎಂಬ ಫಿಲಾಸಫಿ ಹೊಡೆಯುತ್ತಾರೆ.

ಎದೆಯೊಳಗೆ ಸಾಹಿತ್ಯದ ಗಂಧಗಾಳಿಯೂ ಇಲ್ಲದ ಕೆಲ ಅಡ್ಡಕಸುಬಿಗಳು ಕ್ಲಬ್ ಹೌಸ್‌ನಲ್ಲಿ ಅಸಹ್ಯವಾಗಿ, ಅತ್ಯಂತ ಕೀಳುಭಾಷೆಯಲ್ಲಿ ಹಂಸಲೇಖರ ಸಾಹಿತ್ಯದ ಕುರಿತು ಲೇವಡಿ ಮಾಡಿ ನಗುತ್ತಾರೆ. ಬೆಂಗಳೂರಿನ ಬ್ರಾಹ್ಮಣ ಸಂಘದವರು ಹಂಸಲೇಖರ ವಿರುದ್ಧ ಬ್ರಾಹ್ಮಣ ಪೊಲೀಸ್ ಆಫೀಸರ್‌ಗಳಿರುವ, ಬ್ರಾಹ್ಮಣ ಶಾಸಕ-ಸಂಸದರು ಪ್ರತಿನಿಧಿಸುವ ಬಸವನಗುಡಿ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸುತ್ತಾರೆ. ಅಷ್ಟಕ್ಕೂ ತೃಪ್ತರಾಗದ ಬ್ರಾಹ್ಮಣ ಸಂಘದವರು ಸುರಿವ ಮಳೆಯಲ್ಲೂ ಹಂಸಲೇಖ ವಿರುದ್ಧ ಬೆಂಗಳೂರಿನ ವಿದ್ಯಾಪೀಠ ಸರ್ಕಲ್‌ನಲ್ಲಿ ತಮ್ಮ ಜಾತಿಯವರನ್ನೆಲ್ಲಾ ಸಂಘಟಿಸಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಈ ಪ್ರತಿಭಟನೆಯಲ್ಲಿ ಮಹಿಳೆಯರು ಮಕ್ಕಳಿಂದಲೂ ಅಸಹ್ಯದ ಭಾಷೆಯಲ್ಲಿ ಧಿಕ್ಕಾರ ಕೂಗಿಸುವುದರ ಜೊತೆಗೆ ಹಂಸಲೇಖರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಸುತ್ತಾರೆ! ಇದು ಹಂಸಲೇಖರ ತಪ್ಪುಎನ್ನಲಾಗದ ಒಂದು ಮಾತಿಗೆ ಸುಸಂಸ್ಕೃತರಾದ ಬ್ರಾಹ್ಮಣರ ಸಂಘಟಿತ ಅಸಹ್ಯಕರವಾದ ವಾಗ್ದಾಳಿಯ ಸ್ವರೂಪ. ಒಂದೇ ಒಂದು ತಪ್ಪಿಗೆ ಈ ಪರಿಯಾಗಿ ಬ್ರಾಹ್ಮಣರು ತಿರುಗಿ ಬಿದ್ದರೇ? ಖಂಡಿತಾ ಇಲ್ಲ. ಅವರದು ಹಲವು ಕಾಲದಿಂದ ಕ್ರೋಡೀಕರಿಸಿದ್ದ ಹಗೆ! ಈ ಘಟನೆ ಅದಕ್ಕೊಂದು ನೆಪವಷ್ಟೇ. ಇಲ್ಲಿ ಅವರ ಮುಖವಾಡ ಕಳಚಿ ಬಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)