varthabharthi


ಸಂಪಾದಕೀಯ

​ಗುಂಪು ಥಳಿತ, ಹತ್ಯೆ: ನಾಗರಿಕ ಸಮಾಜಕ್ಕೆ ಸವಾಲು

ವಾರ್ತಾ ಭಾರತಿ : 18 Dec, 2021

ಯಾವುದೇ ದುರಂತಗಳನ್ನು ಕೇಂದ್ರ ಸರಕಾರದ ಮುಂದಿಟ್ಟು ‘ಏನು ಕ್ರಮ ತೆಗೆದುಕೊಂಡಿದ್ದೀರಿ?’ ಎಂದು ಪ್ರಶ್ನಿಸಿದರೆ, ಸರಕಾರ ‘ನಮ್ಮಲ್ಲಿ ಆ ದುರಂತದ ಬಗ್ಗೆ ಯಾವುದೇ ಅಂಕಿಅಂಶಗಳಿಲ್ಲ’ ಎನ್ನುವ ಮೂಲಕ, ಹೊಣೆಯಿಂದ ಜಾರಿಕೊಳ್ಳುತ್ತದೆ. ವಲಸೆ ಕಾರ್ಮಿಕರ ದುರಂತದ ಬಗ್ಗೆ ಸರಕಾರದ ಬಳಿ ಮಾಹಿತಿಯಿಲ್ಲ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವ ಬಗ್ಗೆ ಸರಕಾರದ ಬಳಿ ಮಾಹಿತಿಯಿಲ್ಲ. ರೈತರ ಸಾವುಗಳ ಕುರಿತಂತೆ ಸರಕಾರದ ಬಳಿ ಯಾವುದೇ ಮಾಹಿತಿಗಳಿಲ್ಲ. ಆದುದರಿಂದ, ಈ ಸಮಸ್ಯೆಗಳನ್ನು ಪರಿಹರಿಸುವುದು ತನ್ನ ಜವಾಬ್ದಾರಿಯಲ್ಲ ಎಂಬ ತರ್ಕವನ್ನು ಸರಕಾರ ವಿರೋಧ ಪಕ್ಷಗಳ ಮುಂದೆ ಮಂಡಿಸುತ್ತಿದೆ. ಪೆಗಾಸಸ್ ಮೂಲಕ ಯಾರ್ಯಾರದೋ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿರುವ ಆರೋಪಗಳನ್ನು ಹೊಂದಿರುವ ಸರಕಾರಕ್ಕೆ, ವಿಶ್ವಕ್ಕೆ ಗೊತ್ತಿರುವ, ಮಾಧ್ಯಮಗಳಲ್ಲಿ ದಿನ ನಿತ್ಯ ವರದಿಯಾಗುತ್ತಿರುವ ತನ್ನದೇ ದೇಶದ ಪ್ರಜೆಗಳ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲದೇ ಇರುವುದು ಕೇಂದ್ರ ಸರಕಾರ ಸಂವೇದನೆಯನ್ನು ಕಳೆದುಕೊಂಡಿರುವ ಸಂಕೇತವಾಗಿದೆ. ಇಡೀ ದೇಶವನ್ನು ಕಾಡಿದ, ವಿಶ್ವದ ಮುಂದೆ ಭಾರತವನ್ನು ತಲೆತಗ್ಗಿಸಿದ ವಿಷಯದ ಕುರಿತಂತೆ ತನ್ನಲ್ಲಿ ಯಾವುದೇ ಮಾಹಿತಿಯಿಲ್ಲದೆ ಇರುವುದು ಸರಕಾರದ ವೈಫಲ್ಯವಾಗಿ ಪರಿಗಣಿತವಾಗುತ್ತದೆ ಎನ್ನುವ ನಾಚಿಕೆಯೂ ಅದಕ್ಕಿದ್ದಂತೆ ಇಲ್ಲ.

‘‘ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಬಳಿ ಯಾವುದೇ ಅಂಕಿ ಅಂಶವಿಲ್ಲ. ಇಂತಹ ಘಟನೆಗಳನ್ನು ತಡೆಯುವುದು ರಾಜ್ಯ ಸರಕಾರಗಳ ಜವಾಬ್ದಾರಿ’’ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವರು ಲೋಕಸಭೆಗೆ ತಿಳಿಸಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಅಪರಾಧ ಕುರಿತ ಅಂಕಿ ಅಂಶಗಳನ್ನು ಪ್ರಕಟಿಸುತ್ತದೆ. ಆದರೆ ಗುಂಪು ಹತ್ಯೆ ಅಥವಾ ಗುಂಪು ಥಳಿತಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾಹಿತಿ ಸಂಗ್ರಹಿಸಲಾಗುವುದಿಲ್ಲ ಎಂದೂ ವಿವರಣೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುಂಪು ಥಳಿತ ಎಷ್ಟರಮಟ್ಟಿಗೆ ಸಾಮಾನ್ಯವಾಗಿ ಬಿಟ್ಟಿದೆ ಎಂದರೆ, ಅದಕ್ಕೆ ಧಾರ್ಮಿಕ, ಸಾಂಸ್ಕೃತಿಕ, ರಾಷ್ಟ್ರವಾದದ ಬಣ್ಣ ಬಂದು ಬಿಟ್ಟಿದೆ. ಗುಂಪಾಗಿ ಒಬ್ಬನನ್ನು ಥಳಿಸಿ ಕೊಂದರೆ ಅದು ಅಪರಾಧವಲ್ಲ ಎನ್ನುವ ಮನಸ್ಥಿತಿಯೊಂದನ್ನು ಸೃಷ್ಟಿಸಲಾಗುತ್ತಿದೆ. ‘ಸಾರ್ವಜನಿಕರ ಆಕ್ರೋಶ’ವೆಂದು ಇಂತಹ ಪ್ರಕರಣಗಳನ್ನು ಸ್ವತಃ ರಾಜಕಾರಣಿಗಳೇ ಸಮರ್ಥಿಸತೊಡಗಿದ್ದಾರೆ ಮತ್ತು ಗುಂಪು ಥಳಿತದ ಸಂದರ್ಭದಲ್ಲಿ ಪೊಲೀಸರೂ ಅಸಹಾಯಕರಾಗಿ ನಿಲ್ಲಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನೇ ಗುಂಪೊಂದು ಥಳಿಸಿ ಕೊಂದಿತು.

ನೀವು ಒಬ್ಬಂಟಿಯಾಗಿ ಕೊಂದರೆ ಕೊಲೆಗಾರರಾಗುತ್ತೀರಿ. ಆದರೆ ಐವತ್ತು ಜನರು ಜೊತೆಯಾಗಿ ಒಬ್ಬನನ್ನು ಥಳಿಸಿಕೊಂದರೆ ಕಾನೂನಿಂದ ನುಣುಚಿಕೊಳ್ಳಲು ನಿಮಗೆ ಬೇಕಾದಷ್ಟು ಅವಕಾಶಗಳು ಸಿಗುತ್ತವೆ. ಕೆಲವೊಮ್ಮೆ ಬಲಿಯಾದವನೇ ಅಪರಾಧಿಯಾಗಿ ಘೋಷಣೆಯಾಗುತ್ತಾನೆ. ದನ ವ್ಯಾಪಾರಿಗಳನ್ನು ಥಳಿಸಿ ಕೊಂದ ಎಷ್ಟೋ ಪ್ರಕರಣಗಳಲ್ಲಿ ಮೃತನ ಮೇಲೆಯೂ ಪೊಲೀಸರು ಪ್ರಕರಣ ದಾಖಲಿಸಿರುವ ಉದಾಹರಣೆಗಳಿವೆ. ಭಾರತದಲ್ಲಿ ಗುಂಪು ಥಳಿತವನ್ನು ಉಳಿದ ಅಪರಾಧಗಳ ಜೊತೆಗಿಟ್ಟು ಸಾಮಾನ್ಯೀಕರಿಸಿದಷ್ಟೂ ಗುಂಪು ಹತ್ಯೆ, ಗುಂಪು ಥಳಿತ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತವೆ. ಗುಂಪು ಹತ್ಯೆಗಳಲ್ಲಿ ಭಾಗಿಯಾಗುವ ಬಹುತೇಕ ದುಷ್ಕರ್ಮಿಗಳು ಮೇಲ್‌ಜಾತಿಗೆ ಸೇರಿದವರಾಗಿರುತ್ತಾರೆ ಅಥವಾ ಬಹುಸಂಖ್ಯಾತರು, ಬಲಾಢ್ಯರೂ ಆಗಿರುತ್ತಾರೆ. ಇದೇ ಸಂದರ್ಭದಲ್ಲಿ ಗುಂಪು ಹತ್ಯೆಗೀಡಾಗುವ ಸಂತ್ರಸ್ತರು ಕೆಳಜಾತಿ ಅಥವಾ ಶೋಷಿತ ಸಮುದಾಯಕ್ಕೆ ಸೇರಿರುತ್ತಾನೆ. ಖೈರ್ಲಾಂಜಿಯಲ್ಲಿ ನಡೆದ ಭೀಕರ ಗುಂಪು ಹತ್ಯೆಯನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕಾಗಿದೆ. ಇಲ್ಲಿ ನಡೆದಿರುವುದು ಹತ್ಯೆ ಮಾತ್ರವಲ್ಲ, ಮಹಿಳೆಯರ ಮೇಲೆ ಭೀಕರ ಸಾಮೂಹಿಕ ಅತ್ಯಾಚಾರಗಳೂ ನಡೆದಿವೆ. ದಾದ್ರಿಯಲ್ಲಿ ಓರ್ವ ವೃದ್ಧನನ್ನು ನೂರಾರು ಜನರ ಗುಂಪು ಸೇರಿ ಹತ್ಯೆಗೈದಿರುವುದು ಒಂದು ಕ್ರೈಂ ಆಗಿ ಮಾತ್ರ ನೋಡುವುದಕ್ಕಾಗದು. ಇದು ಮಾನವ ಘನತೆಗೆ ಮಾಡಿದ ಅವಮಾನವಾಗಿದೆ. ಇದನ್ನು ಸ್ಪಷ್ಟವಾಗಿ ಜನಾಂಗೀಯ ಹತ್ಯೆಯೆಂದೇ ನಾವು ಗುರುತಿಸಬೇಕಾಗುತ್ತದೆ. ಈಶಾನ್ಯ ಭಾರತದಲ್ಲಿ ಆದಿವಾಸಿ ಮಹಿಳೆಯರನ್ನು ಮೊದಲು ‘ಮಾಟಗಾತಿಯರು’ ಎಂದು ಬಿಂಬಿಸಿ ಬಳಿಕ ಗ್ರಾಮಸ್ಥರು ಗುಂಪಾಗಿ ಸೇರಿ ಹತ್ಯೆ ಮಾಡಿರುವ ಹಲವು ಪ್ರಕರಣಗಳಿವೆ. ಇವೆಲ್ಲದರ ಹಿಂದೆ ಜನಾಂಗೀಯತೆ ಕೆಲಸ ಮಾಡಿದೆ. ಆದುದರಿಂದ ಗುಂಪು ಹತ್ಯೆ ಭಾರತದ ಕಾನೂನು ವ್ಯವಸ್ಥೆಗೆ ಹಾಕುವ ನೇರ ಸವಾಲಾಗಿದೆ. ಇದು ಈ ದೇಶದ ವರ್ಚಸ್ಸನ್ನು ಜಾಗತಿಕವಾಗಿ ದೊಡ್ಡ ಪ್ರಮಾಣದಲ್ಲಿ ಕುಗ್ಗಿಸಿದೆ. ಎಲ್ಲೋ ಆಸ್ಟ್ರೇಲಿಯಾದಲ್ಲಿ ಭಾರತೀಯನೊಬ್ಬನ ಮೇಲೆ ಅಲ್ಲಿನ ಪ್ರಜೆಗಳು ನಡೆಸಿದ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅದನ್ನು ಜನಾಂಗೀಯ ಹತ್ಯೆಯೆಂದೂ ಟೀಕಿಸುತ್ತೇವೆ. ಆದರೆ ನಮ್ಮದೇ ದೇಶದಲ್ಲಿ ನಡೆಯುವ ಗುಂಪು ಹತ್ಯೆಗಳ ಕುರಿತಂತೆ ಸರಕಾರ ಇನ್ನೂ ಕಣ್ಣು ತೆರೆದೇ ಇಲ್ಲದಿರುವುದರ ಬಗ್ಗೆ ವೌನ ತಾಳುತ್ತೇವೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ಓರ್ವ ಶ್ರೀಲಂಕನ್ ಪ್ರಜೆಯನ್ನು ಗುಂಪೊಂದು ಬರ್ಬರವಾಗಿ ಥಳಿಸಿ ಹತ್ಯೆಗೈಯಿತು. ಈ ಪ್ರಕರಣ ವಿಶ್ವಾದ್ಯಂತ ಸುದ್ದಿಯಾಯಿತು. ಪಾಕಿಸ್ತಾನ ಸರಕಾರವೂ ಇದನ್ನು ಗಂಭೀರವಾಗಿ ತೆಗೆದುಕೊಂಡಿತು ಮಾತ್ರವಲ್ಲ, ಘಟನೆಗೆ ಸಂಬಂಧಿಸಿ ಅದು ತಕ್ಷಣ ಹಲವರನ್ನು ಬಂಧಿಸಿತು. ಜೊತೆಗೆ ಪಾಕಿಸ್ತಾನದ ಪ್ರಧಾನಿಯವರು ಈ ಬಗ್ಗೆ ಶ್ರೀಲಂಕಾದ ಅಧ್ಯಕ್ಷರನ್ನು ಸಂಪರ್ಕಿಸಿ ವಿಷಾದ ವ್ಯಕ್ತಪಡಿಸಿದರು. ಇಂದು ಭಾರತದಲ್ಲಿ ನಡೆಯುತ್ತಿರುವ ಗುಂಪು ಥಳಿತದ ಬಗ್ಗೆ ಸ್ವತಃ ದೇಶದ ಪ್ರಧಾನಿಯವರು ಮಾಹಿತಿಯನ್ನು ತರಿಸಿಕೊಂಡು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕನಿಷ್ಟ ತಮ್ಮ ಮನ್ ಕಿಬಾತ್‌ನಲ್ಲಾದರೂ ಗುಂಪು ಹತ್ಯೆಗಾಗಿ ವಿಷಾದ ವ್ಯಕ್ತಪಡಿಸಬೇಕು. ಗುಂಪು ಹತ್ಯೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ, ನಾಗರಿಕ ಸಮಾಜಕ್ಕೆ ಅವಮಾನಕಾರಿ. ಈ ಕುರಿತಂತೆ ಮಾಹಿತಿಯಿಲ್ಲ ಎನ್ನುವುದು ಪರೋಕ್ಷವಾಗಿ ಗುಂಪು ಹತ್ಯೆಗೆ ಕೇಂದ್ರ ಸರಕಾರವೇ ತನ್ನ ವೌನ ಸಮ್ಮತಿಯನ್ನು ನೀಡಿದಂತೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)