varthabharthi


ಕಾಲಂ 9

ನಮ್ಮ ರಾಯಣ್ಣ, ನಮ್ಮ ಶಿವಾಜಿ, ನಿಮ್ಮ ಪೇಶ್ವಾಯಿ..

ವಾರ್ತಾ ಭಾರತಿ : 22 Dec, 2021
ಶಿವಸುಂದರ್

ಅಂದು ಶಿವಾಜಿಯನ್ನು ವಿಫಲಗೊಳಿಸಿದ ಹಾಗೂ ರಾಯಣ್ಣನಿಗೆ ದ್ರೋಹಬಗೆದ ಬ್ರಾಹ್ಮಣವಾದಿ ಮತ್ತು ನವ ಪೇಶ್ವಾಯಿ ಶಕ್ತಿಗಳೇ ಈಗ ಮತ್ತೊಮ್ಮೆ ಎರಡೂ ರಾಜ್ಯಗಳ ಅಣ್ಣತಮ್ಮಂದಿರಲ್ಲಿ ಕಲಹ ಮೂಡಿಸಿ ರಾಜಕಾರಣ ಮಾಡಲು ಹೊರಟಿದ್ದಾರೆ. ಸಂಗೊಳ್ಳಿ ರಾಯಣ್ಣನನ್ನು ಕುರುಬ ಜಾತಿಗೆ ಹಾಗೂ ಶಿವಾಜಿಯನ್ನು ಮಹಾರಾಷ್ಟ್ರದ ಮರಾಠಿ ಪ್ರತಿಷ್ಠೆಗೆ ಮಾತ್ರ ಪ್ರತಿಮೆಯಾಗಿಸಿ ಕುಬ್ಜಗೊಳಿಸುತ್ತಿದ್ದಾರೆ. ಕುಬ್ಜಗೊಂಡ ಪ್ರತಿಮೆಗಳ ಮೇಲೆ ದಾಳಿ ಪ್ರಚೋದನೆ ಸುಲಭ. ಇದು ಆಧುನಿಕ ನವ ಬ್ರಾಹ್ಮಣ್ಯದ ಹುನ್ನಾರ. ಆದ್ದರಿಂದ ಈ ಹುನ್ನಾರಕ್ಕೆ ಬಲಿಯಾಗದೆ ಶಿವಾಜಿ ಮತ್ತು ರಾಯಣ್ಣನನ್ನು ನಾವು ದಕ್ಕಿಸಿಕೊಳ್ಳಬೇಕಿದೆ. 


ಬಾಲ್ಯದಲ್ಲೇ ಬಿಜೆಪಿ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು ಎಂಬ ಚರಿತ್ರಹೀನ ಕಥನ ಕಟ್ಟಲು ಹೆಣಗಾಡುತ್ತಿರುವ ಸಂಘಪರಿವಾರದ ಸುಳ್ಳು ಕಥನಗಳು ವರ್ತಮಾನದಲ್ಲಿ ಅದರ ಸುಳ್ಳುಗಳು ಹಾಗೂ ವೈರುಧ್ಯಗಳ ಕಾರಣಕ್ಕಾಗಿಯೇ ಢಿಕ್ಕಿ ಹೊಡೆದುಕೊಳ್ಳುವುದುಂಟು. ಒಂದೆಡೆ ಮೇಲ್ಜಾತಿ ಭೂ ಮಾಲಕ-ಬ್ರಿಟಿಷ್ ವಿರೋಧಿ ಸೇನಾನಿ ಸಂಗೊಳ್ಳಿ ರಾಯಣ್ಣನನ್ನು ಕರ್ನಾಟಕದ ಸಂಘಪರಿವಾರ ಹಾಗೂ ಮತ್ತೊಂದೆಡೆ ಬ್ರಾಹ್ಮಣ್ಯ ವಿರೋಧಿ ಶೂದ್ರ ದೊರೆ ಶಿವಾಜಿಯನ್ನು ಮಹಾರಾಷ್ಟ್ರದ ಎಂಇಎಸ್, ಶಿವಸೇನಾ ಹಾಗೂ ಸಂಘಪರಿವಾರಗಳು ತಮ್ಮ ಬ್ರಾಹ್ಮಣವಾದಿ ಹಿಂದುತ್ವ ರಾಜಕಾರಣದ ಸೇನಾನಿಗಳನ್ನಾಗಿ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಮತ್ತು ಈಗ ರಾಯಣ್ಣ- ಶಿವಾಜಿಯರನ್ನೇ ಎದುರುಬದುರು ನಿಲ್ಲಿಸಿ ಗಲಭೆ ಹುಟ್ಟಿಸಿ ತಮ್ಮ ಯಶಸ್ವಿ ಒಡೆದಾಳುವ ನೀತಿಯನ್ನು ಪ್ರಯೋಗಿಸುತ್ತಾ ತಮ್ಮ ಶೂದ್ರ, ರೈತ, ದಲಿತ ವಿರೋಧಿ ಬ್ರಾಹ್ಮಣ್ಯದ ನೀತಿಗಳನ್ನು ಮುಂದುವರಿಸಿದ್ದಾರೆ. ಆದರೆ ರೈತ ಸೇನಾನಿ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜ್ ಇಬ್ಬರೂ ಯಾವುದೇ ಒಂದು ಜಾತಿಗೆ, ಕುಲಕ್ಕೆ, ಪ್ರದೇಶಕ್ಕೆ ಸೇರಿದವರಲ್ಲ. ಅವರಿಬ್ಬರೂ ಈ ದೇಶದ ಎಲ್ಲಾ ಶೂದ್ರ-ದಲಿತ-ರೈತಾಪಿಯ ನಾಯಕರು. ತಾವು ಬದುಕಿ ಬಾಳಿದ ಸಮಯದಲ್ಲಿ ಜಾತಿ ತಾರತಮ್ಯ ಹಾಗೂ ಕೋಮು ವೈಷಮ್ಯಗಳು ರೈತಾಪಿ-ದಲಿತರ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸದಂತೆ ಶ್ರಮಿಸಿದವರು. ಶೂದ್ರ ಸಾಮಾಜಿಕ ನ್ಯಾಯದ ಆಳ್ವಿಕೆಗೆ ಶಿವಾಜಿ, ಮೇಲ್ಜಾತಿ ಭೂಮಾಲಕ-ವಸಾಹತುಶಾಹಿಗಳ ವಿರುದ್ಧ ಸ್ವಾತಂತ್ರ್ಯ ಹಾಗೂ ರೈತ ನೆಮ್ಮದಿಯ ಬಾಳಿಗೆ ಸಂಗೊಳ್ಳಿ ರಾಯಣ್ಣ ಹೋರಾಡಿದವರು. ಒಡೆದಾಳುವ ದ್ರೋಹತಂತ್ರವನ್ನು ಅನುಸರಿಸುವ ಮೂಲಕವೇ ಅಂದು ಇವರಿಬ್ಬರ ಹೋರಾಟವನ್ನು ಮತ್ತು ಆಶಯಗಳನ್ನು ವಿಫಲಗೊಳಿಸುವಲ್ಲಿ ಬ್ರಾಹ್ಮಣವಾದಿಗಳು ಮತ್ತು ವಸಾಹತುಶಾಹಿ ಶಕ್ತಿಗಳು ಯಶಸ್ವಿಯಾದರು. ಸಣ್ಣವರ ಕೈಯಲ್ಲಿ ದೊಡ್ಡವರ ಪ್ರತಿಮೆಗಳು 

ಅಂದು ಶಿವಾಜಿಯನ್ನು ವಿಫಲಗೊಳಿಸಿದ ಹಾಗೂ ರಾಯಣ್ಣನಿಗೆ ದ್ರೋಹಬಗೆದ ಬ್ರಾಹ್ಮಣವಾದಿ ಮತ್ತು ನವ ಪೇಶ್ವಾಯಿ ಶಕ್ತಿಗಳೇ ಈಗ ಮತ್ತೊಮ್ಮೆ ಎರಡೂ ರಾಜ್ಯಗಳ ಅಣ್ಣತಮ್ಮಂದಿರಲ್ಲಿ ಕಲಹ ಮೂಡಿಸಿ ರಾಜಕಾರಣ ಮಾಡಲು ಹೊರಟಿದ್ದಾರೆ. ಸಂಗೊಳ್ಳಿ ರಾಯಣ್ಣನನ್ನು ಕುರುಬ ಜಾತಿಗೆ ಹಾಗೂ ಶಿವಾಜಿಯನ್ನು ಮಹಾರಾಷ್ಟ್ರದ ಮರಾಠಿ ಪ್ರತಿಷ್ಠೆಗೆ ಮಾತ್ರ ಪ್ರತಿಮೆಯಾಗಿಸಿ ಕುಬ್ಜಗೊಳಿಸುತ್ತಿದ್ದಾರೆ. ಕುಬ್ಜಗೊಂಡ ಪ್ರತಿಮೆಗಳ ಮೇಲೆ ದಾಳಿ ಪ್ರಚೋದನೆ ಸುಲಭ. ಇದು ಆಧುನಿಕ ನವ ಬ್ರಾಹ್ಮಣ್ಯದ ಹುನ್ನಾರ. ಆದ್ದರಿಂದ ಈ ಹುನಾರಕ್ಕೆ ಬಲಿಯಾಗದೆ ಶಿವಾಜಿ ಮತ್ತು ರಾಯಣ್ಣನನ್ನು ನಾವು ದಕ್ಕಿಸಿಕೊಳ್ಳಬೇಕಿದೆ. ನವ ಪೇಶ್ವಾಯಿಗಳ ಸಂಚನ್ನು ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ಸ್ವಲ್ಪ ಇತಿಹಾಸವನ್ನು ಅರಿಯಬೇಕಿದೆ.

ರೈತ ಸೇನೆಯ ದಂಡನಾಯಕ ಸಂಗೊಳ್ಳಿ ರಾಯಣ್ಣ 
ಸಂಗೊಳ್ಳಿ ರಾಯಣ್ಣ ಕೇವಲ ಕುರುಬರ ನಾಯಕನಲ್ಲ. 1857ರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ ಮೂರು ದಶಕಗಳ ಮುಂಚೆಯೇ ಕರ್ನಾಟಕದ ಕಿತ್ತೂರು ಪ್ರಾಂತದಲ್ಲಿ ಕುರುಬ, ಬೇಡ, ಜೈನ, ಲಿಂಗಾಯತ, ಸಿದ್ಧಿ, ಮುಸ್ಲಿಂ, ಪಂಚಮಸಾಲಿ ಸೇರಿದಂತೆ ಆಗಿನ ಊಳಿಗಮಾನ್ಯ ಭೂಮಾಲಕ ದೊರೆಗಳ ಶೋಷಣೆಗೆ ಬಲಿಯಾಗಿದ್ದ ಎಲ್ಲರನ್ನೂ ಒಂದು ಮಾಡಿ ಬ್ರಿಟಿಷರೇ ಬೆಚ್ಚುವಂತಹ ಹೋರಾಟ ಮಾಡಿದ್ದ ಮಹಾನ್ ಜನನಾಯಕ. ರಾಷ್ಟ್ರವೀರ. ಆತನಿಗೆ ಮುಂಚೆ ಇದೇ ಹೋರಾಟದಲ್ಲಿ ಪ್ರಾಣತೆತ್ತ ಟಿಪ್ಪು, ಹೈದರಲಿ, ಧೋಂಡಿಯಾ ವಾಘ್‌ರೂ ಸಹ ಆಯಾ ಜಾತಿ ಮತ್ತು ಧರ್ಮದ ನಾಯಕರಲ್ಲ. ಇಡೀ ಶೋಷಿತ ಸಮಾಜದ ನಾಯಕರು.
ಕರ್ನಾಟಕದ ಇತಿಹಾಸವನ್ನು ಜನಪರ ದೃಷ್ಟಿಯಿಂದ ಅತ್ಯಂತ ಶ್ರಮವಹಿಸಿ ಅಧ್ಯಯನ ಮಾಡಿದ ಮೇಧಾವಿ ಸಾಕೇತ್ ರಾಜನ್‌ರು ತಮ್ಮ "Making History' ಎಂಬ ಉದ್ಗ್ರಂಥದ ಎರಡನೇ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟ ಮತ್ತು ಜೀವನದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಅವರ ಅಧ್ಯಯನ ಸ್ಪಷ್ಟಪಡಿಸುವಂತೆ ರಾಯಣ್ಣನೊಂದಿಗೆ ಎಲ್ಲ ಜಾತಿಯ ಜನರೂ ಇದ್ದರು. ಅವನ ಹೋರಾಟದ ಅಂತಿಮ ಗಳಿಗೆಯಲ್ಲಿ ಆತನೊಂದಿಗೆ ಬಂಧಿತರಾಗಿದ್ದ ಹನ್ನೆರಡು ಮಂದಿಯಲ್ಲಿ; ಐವರು ಬೇಡ ಜನಾಂಗದವರು, ಇಬ್ಬರು ಲಿಂಗಾಯತರು, ಓರ್ವ ಪಂಚಮಸಾಲಿ, ಓರ್ವ ಮುಸ್ಲಿಂ, ಒಬ್ಬ ಮರಾಠಾ, ಒಬ್ಬ ನಾರ್ವೇಕರ, ಓರ್ವ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರು. ಹಾಗೆಯೇ ಜನಪದ ಹಾಡುಗಳಲ್ಲಿ ವ್ಯಕ್ತವಾಗಿರುವಂತೆ ಅವನೊಂದಿಗೆ ಬೋವಿ ಜಾತಿಯವರಲ್ಲದೆ, ಪೋರ್ಚುಗೀಸರು ಮೊಜಾಂಬಿಕ್‌ನಿಂದ ಗೋವಾಗೆ ಅಡಿಯಾಳುಗಳಾಗಿ ತಂದಿದ್ದ ಸಿದ್ಧಿ ಜನಾಂಗದವರೂ ಇದ್ದರು. ಕಿತ್ತೂರಿನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದ ಈ ಸಿದ್ಧಿಗಳು ರಾಯಣ್ಣನ ಅಂಗರಕ್ಷಕರಾಗಿದ್ದರು. ಗಜಾವೀರಾ ಎಂಬ ಸಿದ್ಧಿಯಂತೂ ರಾಯಣ್ಣನ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡ.

ಸಾಕೇತ್ ರಾಜನ್ ಸ್ಪಷ್ಟಪಡಿಸುವಂತೆ ‘‘ಸಮುದಾಯದ ಎಲ್ಲಾ ವರ್ಗಗಳ ಜನರನ್ನು ರಾಯಣ್ಣ ಸೇರಿಸಿದ್ದರೂ, ಅವರ್ಯಾರೂ ಜಮೀನ್ದಾರರಾಗಿರಲಿಲ್ಲ ಎಂಬ ಅಂಶ ಆತನ ಹೋರಾಟವು ಯಾರ ಪರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆದರೆ ರಾಯಣ್ಣನ ಹೋರಾಟ ಕೇವಲ ಭೂರಹಿತರ ಪರವಾಗಿ ಇರಲಿಲ್ಲ. ಆತ ವರ್ಗ, ಜಾತಿ ಭೇದವನ್ನು ಅಳಿಸಲು ಅನ್ನ ದಾಸೋಹ ಪದ್ಧತಿಯನ್ನೂ ಜಾರಿಗೆ ತಂದಿದ್ದ. ಹೀಗೆ ಮಾಡುವ ಮೂಲಕ ಭೂರಹಿತರ ಹೋರಾಟಕ್ಕೆ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧದ ತಿರುವನ್ನು ನೀಡಿದ ರಾಯಣ್ಣ. ಈ ಸಂಗ್ರಾಮ ಜಮೀನ್ದಾರಿ ಆಧಿಪತ್ಯದಲ್ಲಿದ್ದಿದ್ದರೆ ಅದರಲ್ಲಿ ಈ ಸಾಧ್ಯತೆಗಳಾಗಲೀ, ಅಂಶಗಳಾಗಲೀ ಅರಳಲು ಅಸಾಧ್ಯವಾಗುತ್ತಿತ್ತು.’’

ಹೆಚ್ಚಿನ ವಿವರಗಳಿಗೆ ಆಸಕ್ತರು ಸಾಕೇತ ರಾಜನ್‌ರ "Making History Vol II' ಪುಸ್ತಕವನ್ನು ಈ ವಿಳಾಸದಲ್ಲಿ ಓದಬಹುದು.: https://ourrebellion.files.wordpress.com/2010/09/book-making_history_vol_21.pdf

 ಇದು ಸಂಗೊಳ್ಳಿ ರಾಯಣ್ಣನ ಜಾತಿ-ಮತ ಮೀರಿದ ಜನಪರತೆಗೆ ಸಾಕ್ಷಿ. ಆದರೆ ನಮ್ಮ ಆಧುನಿಕ ಪ್ರಭುಗಳು ಅವರನ್ನು ಕೇವಲ ಕುರುಬರ ನಾಯಕನನ್ನಾಗಿ ಮಾಡಲು ಹೊರಟಿದ್ದಾರೆ. ಆದರೆ ರಾಯಣ್ಣನ ಬಗ್ಗೆ ಈಗ ಇಷ್ಟೆಲ್ಲಾ ಮಾತಾಡುವ ಈ ಸಂಘಪರಿವಾರ ಮತ್ತು ಬಿಜೆಪಿ ರಾಯಣ್ಣನನ್ನು ನೆನೆಸಿಕೊಳ್ಳುವುದು ನಿಯತ್ತಿನ ಸೇವಕನ ರೀತಿಯೇ ಹೊರತು ನಾಡನಾಯಕನೆಂದಲ್ಲ. ಉದಾಹರಣೆಗೆ 2010ರಲ್ಲಿ ಯಡಿಯೂರಪ್ಪನವರ ಬಿಜೆಪಿ ಸರಕಾರ ಬೆಂಗಳೂರಿನಲ್ಲಿ ರಾಯಣ್ಣನ ಪ್ರತಿಮೆಯನ್ನು ಅನಾವರಣ ಮಾಡಿತು. ಯಡಿಯೂರಪ್ಪನವರು ಪ್ರತಿಮೆ ಅನಾವರಣ ಮಾಡುತ್ತಾ ‘‘ಪೊಲೀಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ ಮಾಡಿದ ಅಧಿಕಾರಿಗಳಿಗೆ ರಾಯಣ್ಣನ ಹೆಸರಲ್ಲಿ ಪ್ರಶಸ್ತಿ ನೀಡುವ ಮೂಲಕ ರಾಣಿ ಕಿತ್ತೂರು ಚೆನ್ನಮ್ಮಳ ಬಂಟನಾದ ರಾಯಣ್ಣನ ತ್ಯಾಗ, ಬಲಿದಾನ, ರಾಜನಿಷ್ಠೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಲಾಗುವುದು’’ ಎಂದು ಹೇಳಿದ್ದಾರೆ. ಇದು ‘ಸೈನಿಕ’ ಸಂಗೊಳ್ಳಿ ರಾಯಣ್ಣನಲ್ಲಿ ‘ದೊರೆ’ ಯಡಿಯೂರಪ್ಪನವರು ಮೆಚ್ಚಿಕೊಂಡ ಗುಣ.

ಇದಕ್ಕಿಂತ ಕೀಳಾಗಿ ಒಬ್ಬ ಜನನಾಯಕ, ಸ್ವಾತಂತ್ರ್ಯವೀರನನ್ನು ಅವಮಾನ ಮಾಡಲು ಸಾಧ್ಯವೇ? ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಆಕೆಯಂತೆ ದೇಶದ ಹಲವಾರು ರಾಜ ಹಾಗೂ ಪಾಳೆಗಾರಿ ಮನೆತನದವರು ಬ್ರಿಟಿಷರ ವಿರುದ್ಧ ಹೋರಾಡಿದ್ದರಲ್ಲಿ ಪ್ರಧಾನವಾಗಿ ಇದ್ದದ್ದು ತಮ್ಮ ರಾಜಸತ್ತೆಯನ್ನು ಉಳಿಸಿಕೊಳ್ಳುವ ಉದ್ದೇಶವೇ. ಹೀಗಾಗಿ ಅವರ ದೇಶಪ್ರೇಮ ಪರೋಕ್ಷವಾದದ್ದು. 1857ಕ್ಕೆ ಮುಂಚೆ ಹೋರಾಟದ ಕಣದಲ್ಲಿದ್ದ ಕಿತ್ತೂರು ಚೆನ್ನಮ್ಮ, ಲಕ್ಷ್ಮೀಬಾಯಿಯಂತಹ ಹಲವರು ರಾಜಮನೆತನದಿಂದ ಬಂದರೂ ಬ್ರಿಟಿಷರು ಮುಂದಿಟ್ಟ ಅವಮಾನಕಾರಿ ರಾಜಿ ಒಪ್ಪಂದಗಳಿಗೆ ಬಲಿಯಾಗದೆ ವೀರೋಚಿತವಾಗಿ ಹೋರಾಡಿ ಪ್ರಾಣಬಿಟ್ಟರು. ಆದರೆ 1857ರ ಸ್ವಾತಂತ್ರ್ಯ ಸಂಗ್ರಾಮದಿಂದ ಪಾಠ ಕಲಿತ ಬ್ರಿಟಿಷರು ತಂದ ಮಾರ್ಪಾಡುಗಳಿಂದ ರಾಜರ ಸುಖ ಸೌಕರ್ಯಗಳನ್ನು ಖಾತರಿಗೊಳಿಸಲಾಯಿತು. ಇದರ ನಂತರ ಬಹುಪಾಲು ರಾಜರು ಹೋರಾಟದ ಕಣಕ್ಕೆ ಬರಲಿಲ್ಲ. ಮಾತ್ರವಲ್ಲ. ಈ ಸೌಕರ್ಯಗಳನ್ನು ಕಾಪಾಡಿಕೊಳ್ಳಲು ಬಹುಪಾಲು ರಾಜರು ತಮ್ಮ ಜನಕ್ಕೇ ದ್ರೋಹ ಬಗೆದು ಬ್ರಿಟಿಷ್ ಸಾರೋಟಿನ ಕುದುರೆಗಳಾಗಿ ಬಿಟ್ಟರು. ಅವರ ಜೊತೆಗೆ ಬ್ರಿಟಿಷ್ ಸಂಸ್ಥಾನ ಇಲ್ಲಿ ನೆಲೆ ನಿಂತುಕೊಳ್ಳಲು ನೆಲೆ ಮತ್ತು ನೆರವು ಕೊಟ್ಟಿದ್ದು ಗ್ರಾಮ ಮಟ್ಟದಲ್ಲಿದ್ದ ಭೂಮಾಲಕ, ಬಡ್ಡಿ ವ್ಯಾಪಾರಿ ದೊರೆಗಳು.

ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ಸೇನಾನಾಯಕನಾಗಿದ್ದರೂ ಆತ ಚೆನ್ನಮ್ಮಳ ಬಂಧನದ ನಂತರವೂ ಹೋರಾಟವನ್ನು ಮುಂದುವರಿಸಿದ್ದು ಕೇವಲ ಅರಸೊತ್ತಿಗೆಯ ಪುನರ್ ಸ್ಥಾಪನೆಗೆ ಮಾತ್ರವಲ್ಲ. ಬದಲಿಗೆ ಜನರನ್ನು ಲೂಟಿ ಮಾಡುತ್ತಿದ್ದ ವಸಾಹತುಶಾಹಿ ಮತ್ತು ಭೂಮಾಲಕ ವ್ಯವಸ್ಥೆ ಎರಡರ ವಿರುದ್ಧವೂ ಆತನ ಹೋರಾಟ ಮುಂದುವರಿಯಿತು. ಇದಕ್ಕಾಗಿ ಆತ ಆಯ್ದುಕೊಂಡಿದ್ದು ಗೆರಿಲ್ಲಾ ಮಾದರಿ ಹೋರಾಟ. 1830ರ ಪ್ರಾರಂಭದಲ್ಲಿ ಕೇವಲ ನೂರು ಜನರಿದ್ದ ಆತನ ಸೈನ್ಯ ಕೆಲವೇ ತಿಂಗಳಲ್ಲಿ 5 ಸಾವಿರಕ್ಕೆ ಮುಟ್ಟಿತು. ಆತನ ಸೈನ್ಯ ನಿತ್ಯ ಶೋಷಕರನ್ನು ದಂಡಿಸುತ್ತಿದ್ದುದರಿಂದ ಅದು ಬಹಳ ಬೇಗನೆ ಜನಸೈನ್ಯದ ಸ್ವರೂಪವನ್ನು ಮತ್ತು ಜನಸಂಗ್ರಾಮದ ಚಹರೆಯನ್ನು ಪಡೆದುಕೊಂಡಿತು.

ರಾಯಣ್ಣನದ್ದು ಜನಸೈನ್ಯವನ್ನು ಕಟ್ಟಲು ಜನರಿಗಾಗಿ ಮಾಡಿದ ಪ್ರಜ್ಞಾಪೂರ್ವಕವಾದ ತ್ಯಾಗ ಬಲಿದಾನ. ಆದ್ದರಿಂದಲೇ ನೇರ ಯುದ್ಧದಿಂದ ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ಸಾಧ್ಯವೇ ಇಲ್ಲ ಎಂದು ಅರ್ಥ ಮಾಡಿಕೊಂಡ ಬ್ರಿಟಿಷರು ತಮ್ಮ ಫಲಾನುಭವಿಗಳಾದ ಭೂಮಾಲಕ ವರ್ಗದೊಂದಿಗೆ ಕುತಂತ್ರ ನಡೆಸಿದರು. ಕೃಷ್ಣರಾವ್ ಎಂಬ ಒಬ್ಬ ಭೂಮಾಲಕನನ್ನು ಆತನ ಸೇನೆಗೆ ಸೇರಿಸಿದರು. ಪರಿಣಾಮ ದ್ರೋಹ. ರಾಯಣ್ಣನ ಬಂಧನ. ಮರಣದಂಡನೆ. ರಾಯಣ್ಣನನ್ನು ಬಂಧಿಸಲು ಸಹಾಯ ಮಾಡಿದ್ದಕ್ಕೆ ಕೃಷ್ಣರಾವ್‌ಗೆ ನಗದು ಬಹುಮಾನ ನೀಡಲಾಯಿತು. ರೈತರ ಸಂಗ್ರಾಮಕ್ಕೆ ದ್ರೋಹ ಬಗೆದ ಭೂಮಾಲಕರಿಗೂ ಪ್ರಶಸ್ತಿಗಳನ್ನು ನೀಡಲಾಯಿತು. ಅವರೆಲ್ಲರಿಗೆ ಮುನ್ನೂರು ರೂಪಾಯಿಗಳ ನಗದು ಸೇರಿದಂತೆ ಇಡೀ ಹಳ್ಳಿಗಳನ್ನೇ ಇನಾಮಾಗಿ ನೀಡಿತು ಬ್ರಿಟಿಷ್ ಸರಕಾರ. ಲಿಂಗಣ್ಣ ಗೌಡನಿಗೆ ಕಿತ್ತೂರು ಸಮೀಪದ ಕಲೊಲಿ ಗ್ರಾಮ ಸಿಕ್ಕಿದರೆ, ಯೆಂಕನ ಗೌಡನಿಗೆ ಧಾರವಾಡದ ಹತ್ತಿರದ ಧೋಂ ಗ್ರಾಮ ದಕ್ಕಿತು. ಆದರೆ ಕುರುಬ, ಬೇಡ, ಜೈನ, ಲಿಂಗಾಯತ, ಸಿದ್ಧಿ, ಮುಸ್ಲಿಂ, ಪಂಚಮಸಾಲಿ ಸೇರಿದಂತೆ ವಿವಿಧ ಜಾತಿಗಳಿಂದ ಬಂದಿದ್ದ ರಾಯಣ್ಣ ಮತ್ತು ಸಂಗಡಿಗರಿಗೆ ಸಿಕ್ಕಿದ್ದು ಮರಣದಂಡನೆ!

ರೈತರ, ಶೂದ್ರರ ಛತ್ರಪತಿ ಶಿವಾಜಿ  

ಮತ್ತೊಂದೆಡೆ ಇಂತಹ ದ್ರೋಹಿ ಕೃಷ್ಣರಾವ್, ಲಿಂಗಣ್ಣ ಗೌಡರ ವಾರಸುದಾರರಾದ ಸಂಘಪರಿವಾರ ಶಿವಾಜಿ ದೊರೆ ಸುಲ್ತಾನ್ ಔರಂಗಜೇಬನ ವಿರುದ್ಧ ಹೋರಾಡಿದ್ದನ್ನು ಮಾತ್ರ ಹೇಳುತ್ತಾ ಆ ಯುದ್ಧವನ್ನು ಮುಸ್ಲಿಂ ಸಾಮ್ರಾಟನ ವಿರುದ್ಧ ಹಿಂದೂ ವಿಜಯ ಎಂದು ತಪ್ಪಾಗಿ ಬಿಂಬಿಸುತ್ತ್ತಾರೆ. ಅದು ಸಾಮ್ರಾಟನೊಬ್ಬನ ವಿರುದ್ಧ ಸ್ವತಂತ್ರಾಕಾಂಕ್ಷಿ ಜನಾನುರಾಗಿ ಅರಸನ ಹೋರಾಟವೆನ್ನುವುದನ್ನು ಮರೆಮಾಚುತ್ತಾರೆ. ಹಾಗೆಯೇ ಶಿವಾಜಿಯ ಸೈನ್ಯದಲ್ಲಿ ಫಿರಂಗಿ ದಳದ ಮುಖ್ಯಸ್ಥನಾದ ಇಬ್ರಾಹೀಂ ಖಾನ್‌ರನ್ನೂ ಒಳಗೊಂಡಂತೆ ಹಲವಾರು ನಿಷ್ಠ ಮುಸ್ಲಿಂ ದಂಡನಾಯಕರಿದ್ದುದನ್ನು ಬಚ್ಚಿಡುತ್ತಾರೆ. ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಪರುಶುರಾಮನ ಕಾಲದಲ್ಲೇ ಎಲ್ಲಾ ಕ್ಷತ್ರಿಯರು ನಿರ್ನಾಮವಾಗಿರು ವುದರಿಂದ ಶೂದ್ರ ಶಿವಾಜಿಯು ಕ್ಷತ್ರಿಯನಲ್ಲ ಎಂದು ಹೇಳುತ್ತಾ ಶಿವಾಜಿಯ ಪದಾರೋಹಣವನ್ನು ಮರಾಠಿ ಬ್ರಾಹ್ಮಣರು ವಿರೋಧಿಸಿದ್ದನ್ನು ಹಾಗೂ ಕೊನೆಗೆ ಶಿವಾಜಿಗೆ ಕ್ಷತ್ರಿಯ ದೀಕ್ಷೆ ಕೊಡಲು ಬನಾರಸಿನಿಂದ ಗಾಗಾ ಭಟ್ಟರನ್ನು ಕರೆಸಿದ್ದನ್ನು ಈ ಸಂಘಪರಿವಾರ ಹೇಳುವುದಿಲ್ಲ. ಅಷ್ಟು ಮಾತ್ರವಲ್ಲ. ಶೂದ್ರ ದೊರೆ ಶಿವಾಜಿಯ ಸೋಲನ್ನು ಮಹಾರಾಷ್ಟ್ರದ ಪುರೋಹಿತಶಾಹಿ ಬ್ರಾಹ್ಮಣರು ಸಂಭ್ರಮಿಸಿದ್ದನ್ನು, ಹರ್ಷಾಚರಣೆ ಮಾಡಿದ್ದನ್ನು ಸಹ ಈ ಸಂಘಪರಿವಾರದ ಇತಿಹಾಸಕಾರರು ಹೇಳುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಸನಾತನವಾದಿಗಳು ಕೊಂದುಹಾಕಿದ ಕಾಮ್ರೇಡ್ ಗೋವಿಂದ್ ಪನ್ಸಾರೆ ಅವರು ಬರೆದ "Who was Shivaji' ಪುಸ್ತಕವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು: https://lokayat.org.in/books/who_was_shivaji.pdf

ಶಿವಾಜಿ ಮತ್ತು ಆ ನಂತರ ಸಾಂಭಾಜಿ ಮಹಾರಾಜರು ಮೇಲ್ಜಾತಿ ಭೂಮಾಲಕರನ್ನು ನಿಗ್ರಹಿಸಿ ಶೂದ್ರ ರೈತಾಪಿ ಹಾಗೂ ದಲಿತರ ಪರವಾದ ತಂದ ಸುಧಾರಣೆಯನ್ನೆಲ್ಲಾ ಸಾಂಭಾಜಿಯ ನಂತರ ಅಧಿಕಾರವಶಪಡಿಸಿಕೊಂಡ ಬ್ರಾಹ್ಮಣ ಪೇಶ್ವಾಯಿಗಳು ಬದಲಾಯಿಸಿ ಅತ್ಯಂತ ಕ್ರೂರ ದಲಿತ-ರೈತ ವಿರೋಧಿ ಶಾಸನಗಳನ್ನು ಜಾರಿಗೆ ತಂದದ್ದನ್ನು ಮುಚ್ಚಿಡುತ್ತಾರೆ. ಹಾಗೆ ನೋಡಿದರೆ ಛತ್ರಪತಿ ಶಿವಾಜಿ ಎಲ್ಲಾ ರೀತಿಯಿಂದಲೂ ನಮ್ಮ ಟಿಪ್ಪುಸುಲ್ತಾನ್‌ರನ್ನು ಹೋಲುವ ಜನರ ದೊರೆ. ಹಿಂದುತ್ವ ರಕ್ಷಕ ಅಲ್ಲ. ರೈತ-ದಲಿತ ರಕ್ಷಕ. ಕೋಮು ಸೌಹಾರ್ದ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರು ಇಬ್ಬರು. ಹಾಗೆ ನೋಡಿದರೆ ಶಿವಾಜಿಯ ನಂತರ ಹಿಂದುತ್ವ ರಕ್ಷಕರೆಂಬ ಹೆಸರಿನ ಈ ಬ್ರಾಹ್ಮಣ ಪೇಶ್ವೆಗಳೇ ರಘುನಾಥ ರಾವ್ ಪಟವರ್ಧನ್ ನೇತೃತ್ವದಲ್ಲಿ ಶೃಂಗೇರಿ ಮಠವನ್ನು ಲೂಟಿ ಮಾಡಲು 1791ರಲ್ಲಿ ದಾಳಿ ಮಾಡುತ್ತಾರೆ. ಆ ದಾಳಿಯಿಂದ ಶೃಂಗೇರಿಯನ್ನು ಟಿಪ್ಪುರಕ್ಷಿಸಿದ್ದರ ಬಗ್ಗೆ ಆಗಿನ ಮಠಾಧೀಶರೇ ಬರೆದ 23 ಪತ್ರಗಳು ಈಗಲೂ ಲಭ್ಯವಿದೆ. ಅಲ್ಲದೆ ಶಿವಾಜಿ ಸಂಘಪರಿವಾರಕ್ಕೆ ಅಷ್ಟೊಂದು ಮೆಚ್ಚಿನ ನಾಯಕನೇನೂ ಆಗಿರಲಿಲ್ಲ. ಹಿಂದುತ್ವದ ಕುಲಗುರು ಸಾವರ್ಕರ್ ಬರೆದ ಕೊನೆಯ ಗ್ರಂಥ "Six Glorious Epochs Of Indian History'ಯಲ್ಲಿ ಸೆರೆಸಿಕ್ಕಿದ್ದ ಕಲ್ಯಾಣ ಪ್ರಾಂತದ ನವಾಬನ ಮಗಳ ಮೇಲೆ ಅತ್ಯಾಚಾರ ಮಾಡದೆ ಗೌರವಯುತವಾಗಿ ಕಳಿಸಿಕೊಟ್ಟಿದ್ದಕ್ಕೆ ಶಿವಾಜಿಯನ್ನು ಸಾವರ್ಕರ್ ಕಟುವಾದ ಮಾತುಗಳಿಂದ ನಿಂದಿಸುತ್ತಾರೆ.

ತೀರಾ ಇತ್ತೀಚಿನ ದಿನಗಳಲ್ಲಿ ಶಿವಾಜಿ ಮತ್ತು ಸಂಭಾಜಿಯನ್ನು ತಮ್ಮ ಹಿಂದೂತ್ವ ದ್ವೇಷ ರಾಜಕಾರಣದ ಐಕಾನ್ ಮಾಡಿಕೊಂಡಿರುವ ಸಂಘಪರಿವಾರ ಭೀಮಾ-ಕೊರೆಗಾಂವ್ ನದಿತೀರದಲ್ಲಿ ಸಿಕ್ಕ ಸಾಂಭಾಜಿಯ ಹೆಣವನ್ನು ಗೌರವಯುತವಾಗಿ ದಫನ್ ಮಾಡಿದ ಗಾಯಕ್‌ವಾಡ್ ಎಂಬ ದಲಿತನ ಗೋರಿಯನ್ನು ಧ್ವಂಸ ಮಾಡಿದ್ದಾರೆ. ಅದರ ವಿರುದ್ಧ ದಲಿತರು ಧ್ವನಿ ಎತ್ತಿದ್ದಕ್ಕೆ ಆಗ ಅಧಿಕಾರದಲ್ಲಿದ್ದ ನವಪೇಶ್ವಾಯಿ ಸರಕಾರದ ಕುಮ್ಮಕ್ಕಿನೊಂದಿಗೆ 2018ರ ಜನವರಿ 1ರಂದು ಭೀಮಾ-ಕೋರೆಗಾಂವ್ ದಲಿತರ ಮೇಲೆ ಆಕ್ರಮಣ ನಡೆಸಿದ್ದರು.

ಇತಿಹಾಸದುದ್ದಕ್ಕೂ ಬ್ರಾಹ್ಮಣವಾದಿ ಶಕ್ತಿಗಳು ಸುಳ್ಳು ಇತಿಹಾಸ, ದ್ರೋಹ ಕಥನಗಳ ಮೂಲಕ ರಾಯಣ್ಣರನ್ನು ಶಿವಾಜಿಗಳನ್ನು ಸೋಲಿಸುತ್ತಲೇ ಬಂದಿದ್ದಾರೆ. ಈ ಸೋಲಿನ ಸರಪಳಿಯಿಂದ ಕಳಚಿಕೊಳ್ಳಬೇಕೆಂದರೆ ಮೊದಲು ರಾಯಣ್ಣ ಮತ್ತು ಶಿವಾಜಿಗಳನ್ನು ನಮ್ಮವರನ್ನಾಗಿಸಿಕೊಳ್ಳಬೇಕು. ಆಗ ಮಾತ್ರ ನವ ಪೇಶ್ವಾಯಿಗಳ ನಿಜರೂಪ ಅರ್ಥವಾಗುತ್ತದೆ. ವಿಮೋಚನೆಯ ಮಾರ್ಗ ಸಿಗುತ್ತದೆ. ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು