varthabharthi


ನಿಮ್ಮ ಅಂಕಣ

ಡೆಸ್ಮಂಡ್ ಟುಟು: ಮಾನವ ಘನತೆಯ ಸಂಕೇತ

ವಾರ್ತಾ ಭಾರತಿ : 2 Jan, 2022
ನಿಖಿಲ್ ಕೋಲ್ಪೆ

ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ಎಲ್ಲಾ ರೀತಿಯಿಂದಲೂ ಅನೇಕ ಸಾಮ್ಯಗಳಿರುವಂತೆ, ಹಲವು ವ್ಯತ್ಯಾಸಗಳೂ ಇವೆ. ಒಂದರಲ್ಲಿ ಶತಮಾನಗಳ ಮೇಲು-ಕೀಳಿನ ವಿಭಜನಕಾರಿ ಜಾತಿ ವ್ಯವಸ್ಥೆಯಿದ್ದರೆ, ಇನ್ನೊಂದರಲ್ಲಿ ಸಾಂಪ್ರದಾಯಿಕವಾಗಿ ಕಾದಾಡುತ್ತಾ ಬಂದಿರುವ ಬುಡಕಟ್ಟುಗಳಿವೆ. ಎರಡೂ ಕಡೆ ಶಿಷ್ಟ-ಪರಿಶಿಷ್ಟಗಳ ಸಂಘರ್ಷವಿದೆ; ಎರಡೂ ದೇಶಗಳು ಬಿಳಿಯರ ಆಡಳಿತದಲ್ಲಿ ನಲುಗಿ ಸ್ವಾತಂತ್ರ್ಯ ಪಡೆದವುಗಳು. ಎರಡೂ ಕಡೆ ಭಯಾನಕ ಆರ್ಥಿಕ, ಸಾಮಾಜಿಕ ಅಸಮಾನತೆಗಳಿವೆ. ಈ ಹಿನ್ನೆಲೆಯಲ್ಲಿಯೇ- ಇತ್ತೀಚೆಗೆ ನಿಧನರಾದ ನೊಬೆಲ್ ಪ್ರಶಸ್ತಿ ವಿಜೇತ ಧಾರ್ಮಿಕ, ಸಾಮಾಜಿಕ ನಾಯಕ ಡೆಸ್ಮಂಡ್ ಟುಟು ಅವರ ವ್ಯಕ್ತಿತ್ವವನ್ನು ನೋಡಬಹುದು.‘‘ವರ್ಣಭೇದ ನೀತಿಯು ಜನರನ್ನು ತಪ್ಪುದಾರಿಗೆಳೆಯಲು ಬಯಸುವಂತೆ-

ಮನುಷ್ಯರಿಗೆ ಮೌಲ್ಯವನ್ನು ನೀಡುವುದು ಜೈವಿಕತೆಯಾಗಲೀ, ತೊಗಲಿನ ಬಣ್ಣವಾಗಲೀ ಅಥವಾ ಜನಾಂಗೀಯತೆಯಾಗಲೀ ಅಲ್ಲ; ಅವು ನಿಜವಾಗಿಯೂ ಅಪ್ರಸ್ತುತ ಎಂಬುದನ್ನು ನೀವು ಕಂಡುಕೊಂಡಾಗ, ಮನುಷ್ಯನನ್ನು ದೇವರ ಪಡಿಯಚ್ಚಿನಂತೆ ಸೃಷ್ಟಿಸಲಾಗಿದೆ; ನಾವು ಪ್ರತಿಯೊಬ್ಬರೂ ದೇವರ ವಾಹಕರು ಎಂದು ಧರ್ಮಗ್ರಂಥಗಳು ಹೇಳಿರುವುದನ್ನು ಅರಿತಾಗ, ನೀವು ಯಾವುದೇ ಭೌತಿಕ ಸ್ಥಿತಿಯಲ್ಲಿ ಇರಿ, ಅದು ಎಷ್ಟೇ ಕೆಟ್ಟದಾಗಿರಲಿ, ನೀವು ಎಷ್ಟೇ ಬಡವರಾಗಿರಿ, ಅದು ನಿಮ್ಮಿಳಗಿನ ಮೌಲ್ಯವನ್ನು ಇಲ್ಲವಾಗಿಸುವುದಿಲ್ಲ!’’
- ಡೆಸ್ಮಂಡ್ ಟುಟು


ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ಎಲ್ಲಾ ರೀತಿಯಿಂದಲೂ ಅನೇಕ ಸಾಮ್ಯಗಳಿರುವಂತೆ, ಹಲವು ವ್ಯತ್ಯಾಸಗಳೂ ಇವೆ. ಒಂದರಲ್ಲಿ ಶತಮಾನಗಳ ಮೇಲು-ಕೀಳಿನ ವಿಭಜನಕಾರಿ ಜಾತಿ ವ್ಯವಸ್ಥೆಯಿದ್ದರೆ, ಇನ್ನೊಂದರಲ್ಲಿ ಸಾಂಪ್ರದಾಯಿಕವಾಗಿ ಕಾದಾಡುತ್ತಾ ಬಂದಿರುವ ಬುಡಕಟ್ಟುಗಳಿವೆ. ಇವೆರಡೂ ಪುರಾತನವಾದವು ಮತ್ತು ಆಳವಾಗಿ ಬೇರುಬಿಟ್ಟಂತವು. ಎರಡೂ ಕಡೆ ಶಿಷ್ಟ-ಪರಿಶಿಷ್ಟಗಳ ಸಂಘರ್ಷವಿದೆ; ಅದು ಪರಂಪರಾಗತವಾಗಿರಬಹುದು ಅಥವಾ ಶಿಕ್ಷಣ, ಅಂತಸ್ತು, ಪಾಶ್ಚಾತ್ಯ ಜೀವನಶೈಲಿಯಿಂದ ಬಂದಿರುವಂತಹದ್ದಾಗಿರಬಹುದು. ಎರಡೂ ದೇಶಗಳು ಬಿಳಿಯರ ಆಡಳಿತದಲ್ಲಿ ನಲುಗಿ, ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದವುಗಳು. ಭಾರತದಲ್ಲಿ ಅಸ್ಪೃಶ್ಯತೆ ಶತಮಾನಗಳಿಂದ ಇದ್ದರೆ, ದಕ್ಷಿಣ ಆಫ್ರಿಕಾದಲ್ಲಿ ವಿದೇಶದಿಂದ ಬಂದ, ಮುಖ್ಯವಾಗಿ ಇಂಗ್ಲಿಷ್ ಮತ್ತು ಡಚ್ ಬಿಳಿಯರು ಹೇರಿದಂತಹದ್ದು. ಭಾರತದಲ್ಲಿ ಇದು ಅದೃಶ್ಯವಾಗಿ ಜನರನ್ನು ವಿಭಜಿಸಿದರೆ, ದಕ್ಷಿಣ ಆಫ್ರಿಕಾದಲ್ಲಿ ರಾಜಾರೋಷವಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕ ಭಾರತ ಅನುಭವಿಸಿದ ಬಡತನ, ಸಂಪತ್ತಿನ ಹಂಚಿಕೆಯ ತಾರತಮ್ಯ, ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ಸಮಸ್ಯೆಗಳನ್ನು ದಕ್ಷಿಣ ಆಫ್ರಿಕಾ ಕೂಡಾ ಅನುಭವಿಸುತ್ತಿದೆ. ಎರಡೂ ಕಡೆ ಭಯಾನಕ ಆರ್ಥಿಕ, ಸಾಮಾಜಿಕ ಅಸಮಾನತೆಗಳಿವೆ. ಈ ಹಿನ್ನೆಲೆಯಲ್ಲಿಯೇ- ಇತ್ತೀಚೆಗೆ ನಿಧನರಾದ ನೊಬೆಲ್ ಪ್ರಶಸ್ತಿ ವಿಜೇತ ಧಾರ್ಮಿಕ, ಸಾಮಾಜಿಕ ನಾಯಕ ಡೆಸ್ಮಂಡ್ ಟುಟು ಅವರ ವ್ಯಕ್ತಿತ್ವವನ್ನು ನೋಡೋಣ.

ಈ ನಿಟ್ಟಿನಲ್ಲಿ ಡಿಸೆಂಬರ್ 26ರಂದು ನಿಧನರಾದ ದಕ್ಷಿಣ ಆಫ್ರಿಕಾದ ಮೊತ್ತಮೊದಲ- ಆಂಗ್ಲಿಕನ್ ಚರ್ಚಿನ ಕರಿಯ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರ ವ್ಯಕ್ತಿತ್ವ, ಜೀವನ ಮತ್ತು ಹೋರಾಟದಿಂದ ನಾವೀಗ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಭಾರತೀಯರು, ಅದರಲ್ಲೂ ಮುಖ್ಯವಾಗಿ ದಲಿತರು, ಹಿಂದುಳಿದವರು, ಮುಸ್ಲಿಮರು ಮತ್ತು ಇದೀಗ ಹಠಾತ್ ದಾಳಿಗೆ ಗುರಿಯಾಗುತ್ತಿರುವ ಕ್ರೈಸ್ತರು ಕಲಿಯಬೇಕಾದುದು ಬಹಳಷ್ಟಿದೆ. ಹಲವಾರು ಪುಸ್ತಕಗಳಲ್ಲಿ ಬರೆಯಲು ಸಾಧ್ಯವಾಗದ ಮಹಾನುಭಾವರ ಜೀವನವನ್ನು ಪತ್ರಿಕಾ ಬರಹದ ಮಿತಿಯಲ್ಲಿ ಬಣ್ಣಿಸುವುದು ಕಷ್ಟವಾದರೂ, ಅವರ ಜೀವನವನ್ನೊಂದಿಷ್ಟು ಚುಟುಕಾಗಿ ವಿವರಿಸಬೇಕು.

ಟುಟು ಹಿನ್ನೆಲೆ

ಡೆಸ್ಮಂಡ್ ಟುಟು ಅವರು ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲ್ ಪ್ರಾಂತದ ಕ್ಲರ್ಕ್ಸ್‌ಡೋರ್ಪ್ ಎಂಬಲ್ಲಿ 1931ರಲ್ಲಿ ಹುಟ್ಟಿದರು. ಅವರ ತಂದೆ ಕರಿಯರ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಅವರು ಸ್ವತಃ ಜೊಹಾನ್ಸ್‌ಬರ್ಗ್ ಬಂಟು ಹೈಸ್ಕೂಲಿನಲ್ಲಿ ಕಲಿತರು. ನಂತರ ಶಿಕ್ಷಕರಾಗಲು ಪ್ರಿಟೋರಿಯಾ ಬಂಟು ಸಾಮಾನ್ಯ ಕಾಲೇಜಿನಲ್ಲಿ ತರಬೇತಿ ಪಡೆದರು. 1954ರಲ್ಲಿ ದಕ್ಷಿಣ ಆಫ್ರಿಕಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಇದು ಸಾಧ್ಯವಾದುದು ಕ್ರೈಸ್ತ ಮಿಷನರಿಗಳಿಂದ. ಮೂರು ವರ್ಷಗಳ ಕಾಲ ಹೈಸ್ಕೂಲು ಶಿಕ್ಷಕನಾಗಿ, ಆನಂತರದ ಮೂರು ವರ್ಷಗಳ ಕಾಲ ಧರ್ಮಶಾಸ್ತ್ರ ಕಲಿತು, 1960ರಲ್ಲಿ ಆಂಗ್ಲಿಕನ್ ಚರ್ಚಿನ ಪಾದ್ರಿಯಾದರು. 1962ರಿಂದ 66ರ ತನಕ ಲಂಡನ್‌ನಲ್ಲಿ ಕಲಿತು ಧರ್ಮಶಾಸ್ತ್ರದಲ್ಲಿಯೇ ಎಂ.ಎ. ಪದವಿ ಪಡೆದ ಬಳಿಕ 1967ರಿಂದ 1972ರ ತನಕ ದಕ್ಷಿಣ ಆಫ್ರಿಕಾದಲ್ಲಿಯೇ ಧರ್ಮಶಾಸ್ತ್ರ ಕಲಿಸಿದರು. ಆನಂತರ ಇಂಗ್ಲೆಂಡಿಗೆ ಮರಳಿ ಥಿಯಾಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಲಂಡನ್‌ನಲ್ಲಿ ಮೂರು ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 1975ರಲ್ಲಿ ಅವರನ್ನು ಜೊಹಾನ್ಸ್‌ಬರ್ಗ್‌ನ ಸೈಂಟ್ ಮೇರಿಸ್ ಕೆಥೆಡ್ರಲ್‌ನ ಮೊದಲ ಕರಿಯ ಡೀನ್ ಆಗಿ ನೇಮಿಸಲಾಯಿತು. ವರ್ಣಭೇದ ನೀತಿಯೇ ಕಾನೂನಾಗಿದ್ದ ಆ ಕಾಲದಲ್ಲಿ ಇದು ಬ್ರಾಹ್ಮಣ ಮಠಕ್ಕೆ ದಲಿತನೊಬ್ಬ ಪೀಠಾಧಿಪತಿಯಾದಂತಹ ಕ್ರಾಂತಿಕಾರಕ ಸಾಧನೆ! 1976ರಿಂದ 1978ರ ವರೆಗೆ ಅವರು ಲೆಸೆಥೋದ ಬಿಷಪ್ ಆಗಿದ್ದರು. 1978ರಲ್ಲಿ ಅವರು ದಕ್ಷಿಣ ಆಫ್ರಿಕಾದ ಚರ್ಚುಗಳ ಮಂಡಳಿಯ ಪ್ರಪ್ರಥಮ ಕರಿಯ ಪ್ರಧಾನ ಕಾರ್ಯದರ್ಶಿಯಾದರು. ಅವರಿಗೆ ಯುಎಸ್‌ಎ, ಇಂಗ್ಲೆಂಡ್ ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ನೀಡಿದ್ದು, ಸಿಕ್ಕಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

ಅಪಾರ್ಥೀಡ್ ವಿರುದ್ಧ ಹೋರಾಟ
ಟುಟು ಅವರ ಜೀವನವನ್ನು ಸಾಮಾನ್ಯವಾಗಿ ಎರಡು ಭಾಗವಾಗಿ ನೋಡಲಾಗುತ್ತದೆ. ಒಂದು: ವರ್ಣಭೇದ ನೀತಿಯ ವಿರುದ್ಧ ಹೋರಾಟ (ಅದಕ್ಕಾಗಿ ಅವರಿಗೆ 1884ರಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿತು). ಎರಡು: ಸ್ವಾತಂತ್ರ್ಯದ ನಂತರ, ತನ್ನ ಸಂಗಾತಿ ಮತ್ತು ಗೆಳೆಯ ನೆಲ್ಸನ್ ಮಂಡೇಲಾ ಅವರು ಅಷ್ಟು ಭಾವನಾತ್ಮಕವಾಗಿ ಹೇಳುತ್ತಿದ್ದ ‘:ಕಾಮನಬಿಲ್ಲಿನ ದೇಶ’’ದ ಆದರ್ಶದ ಮೇಲೆ ದೇಶ, ಸಮಾಜವನ್ನು ಜೊತೆಗೂಡಿಸಿ ಕಟ್ಟುವುದಕ್ಕೆ ನಡೆಸಿದ ಸಂಘರ್ಷ. ಮೊದಲನೆಯದ್ದಕ್ಕಾಗಿ ಅವರು ಜನರ ಕಣ್ಮಣಿಯಾಗಿದ್ದರೆ, ಎರಡನೆಯದರಲ್ಲಿ ಅವರು ಸ್ವಲ್ಪಮಟ್ಟಿಗೆ ವಿವಾದಾತ್ಮಕರಾಗಿದ್ದರು. ಕಾರಣಗಳು ಮುಂದೆ ಸ್ಪಷ್ಟವಾಗುತ್ತವೆ. ಆದರೆ, ಟುಟು ಒಂದು ವ್ಯಕ್ತಿತ್ವವಾಗಿ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯಕ್ಕೆ ಮೊದಲು ಹೇಗಿದ್ದರೋ, ಆನಂತರವೂ ಕೊನೆಯ ತನಕ ಹಾಗೆಯೇ ಇದ್ದರು.

ಅವರು ನಿಜವಾಗಿಯೂ ಪ್ರಸಿದ್ಧಿಗೆ ಬಂದುದು 1978ರಲ್ಲಿ. ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದ ಸೌತ್ ಆಫ್ರಿಕನ್ ಕೌನ್ಸಿಲ್ ಆಫ್ ಚರ್ಚಸ್- ದೇಶದ ವಿಮೋಚನಾ ಹೋರಾಟದಲ್ಲಿ ಮಹತ್ವದ; ಬಹುಶಃ ನಿರ್ಣಾಯಕವಾದ ಸ್ಥಾನಕ್ಕೆ ಏರಿತ್ತು. ಹಲವಾರು ಬುಡಕಟ್ಟುಗಳನ್ನು ಒಂದು ಧರ್ಮ ಛತ್ರದ ಅಡಿಯಲ್ಲಿ ಮಾತ್ರ ಜೊತೆ ಸೇರಿಸಲು ಸಾಧ್ಯವಿತ್ತು. ಹೋರಾಟದ ನಾಯಕ ನೆಲ್ಸನ್ ಮಂಡೇಲಾ ಅವರು ಜೀವನದ ಬಹುಪಾಲು ರೋಬೆನ್ ದ್ವೀಪದ ಜೈಲಿನಲ್ಲಿ ಕಳೆದಾಗ, ಅವರ ಪತ್ನಿ ವಿನ್ನಿ ಮಂಡೇಲಾ ನೇತೃತ್ವದಲ್ಲಿ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ (ಎಎನ್‌ಸಿ) ಹೋರಾಟದ ಮುಂಚೂಣಿಯಲ್ಲಿತ್ತು. ಅದನ್ನು ಭಾರತದ ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸಿಗೆ ಹೋಲಿಸಬಹುದು. ಇಲ್ಲಿ ಮೇಲ್ಜಾತಿ ಜಮೀನ್ದಾರರು, ಉದಾರವಾದಿಗಳು, ಜನಸಾಮಾನ್ಯರು, ಸಮಾಜವಾದಿಗಳು, ಕಮ್ಯುನಿಸ್ಟರು, ಬಲಪಂಥೀಯರು, ಸಶಸ್ತ್ರ ಕ್ರಾಂತಿಯ ಪ್ರತಿಪಾದಕರು ತಮ್ಮತಮ್ಮ ಹಿತಾಸಕ್ತಿಗಳನ್ನು ಒಳಗಿಟ್ಟುಕೊಂಡು, ಸಮಾನ ಹಿತಾಸಕ್ತಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದಂತೆ ಅಲ್ಲಿಯೂ ಬಹುತೇಕರು ಎಎನ್‌ಸಿ ಛತ್ರದಡಿ ಸೇರಿದ್ದರು. ಆದರೆ, ಬಿಳಿಯರಿಂದ ಸ್ವತಃ ಕೀಳಾಗಿ ಕಾಣಲ್ಪಡುತ್ತಿದ್ದರೂ, ತಾವು ಇತರ ಕರಿಯರಿಗಿಂತ ಬೇರೆ ಎಂದು ಭಾವಿಸಿದ್ದ ಕೆಲವು ಬುಡಕಟ್ಟುಗಳು ಬುಥೆಲ್ಜಿಯ ನೇತೃತ್ವದಲ್ಲಿ ಎಎನ್‌ಸಿಯ ಮೇಲೆಯೇ ದಾಳಿ ನಡೆಸುತ್ತಿದ್ದವು. ಇಲ್ಲಿ ಸ್ವತಃ ಬ್ರಿಟಿಷರ ಚಾಕರಿ ಮಾಡುತ್ತಿದ್ದರೂ ಸ್ವಾತಂತ್ರ್ಯಾನಂತರ ಅಧಿಕಾರದ ಬಹುಪಾಲು ಕಬಳಿಸಿದ ಮೇಲ್ವರ್ಗವನ್ನು ನೆನಪಿಸಬಹುದು. ಟುಟು ಸಹಜವಾಗಿಯೇ ಬಹುಜನರನ್ನು ಹೊಂದಿದ್ದ ಎಎನ್‌ಸಿಯನ್ನೇ ಬೆಂಬಲಿಸಿದರು. ಹಾಗೆ ನೋಡಿದರೆ, ಅದಕ್ಕೆ ಬಹುತೇಕ ಕರಿಯರ ಮತ್ತು ಸಾವಿರಾರು ಬಿಳಿಯರ ಬೆಂಬಲ ದೊರಕಿಸಿಕೊಟ್ಟದ್ದು ಟುಟು ನೇತೃತ್ವದ ಚರ್ಚ್ ಎಂದೇ ಹೇಳಬಹುದು. ಎಎನ್‌ಸಿ ಹೋರಾಟ ಭಾರತದ ಸ್ವಾತಂತ್ರ್ಯ ಹೋರಾಟದಂತೆ ಅಹಿಂಸಾತ್ಮಕವಾಗಿರಲಿಲ್ಲ. ಸರಕಾರಿ ಪೊಲೀಸರು ಮತ್ತು ಅವರ ಸಂಪೂರ್ಣ ಬೆಂಬಲವಿದ್ದ ಸಶಸ್ತ್ರ ಬಿಳಿಯರ ಕ್ರೂರ ದಮನಗಳಿಗೆ ಎಎನ್‌ಸಿ ಕಾರ್ಯಕರ್ತರು ಬಲಿಯಾಗಬೇಕಾಯಿತು. ಭಾರತದಲ್ಲಿಯೂ ಇದೀಗ ಇದೇ ಮಾದರಿಯನ್ನು ಅನುಸರಿಸಲು ಹೊರಡುತ್ತಿರುವ ಸೂಚನೆಗಳು ಇತ್ತೀಚಿನ ಹಿಂದೂ ಧರ್ಮ ಸಂಸತ್ತಿನ ಭಾಷಣಗಳಲ್ಲಿ ಸಿಗುತ್ತದೆ. ಎಎನ್‌ಸಿ ಕೂಡಾ ಒಂದು ಸಶಸ್ತ್ರ ಗೆರಿಲ್ಲಾ ಗುಂಪನ್ನು ಹೊಂದಿತ್ತು.

ಇಂತಹ ಸಂದರ್ಭಗಳಲ್ಲಿ ಅವರು ಪ್ರತಿಭಟನಾ ಮೆರವಣಿಗೆ, ಸಭೆ, ಬಹಿಷ್ಕಾರ ಸಭೆಗಳಲ್ಲಿ ಭಾಗವಹಿಸುವುದು ಮಾತವಲ್ಲ; ಆಫ್ರಿಕಾದ ಆ ರಕ್ತಸಿಕ್ತ ಕಾಲದಲ್ಲಿ ನೂರಾರು ಶವಯಾತ್ರೆಗಳಲ್ಲೂ ಭಾಗವಹಿಸಿ, ಶಾಂತಿ ಬೋಧನೆಯ ಜೊತೆಗೆ ದೃಢ ಸಂಕಲ್ಪದ ಹೋರಾಟದ ಕರೆಯನ್ನೂ ನೀಡುತ್ತಿದ್ದರು. ‘‘ಶೋಷಣೆಯು ಶೋಷಿತನಿಗಿಂತ ಹೆಚ್ಚಲ್ಲದಿದ್ದರೂ ಶೋಷಕನನ್ನೂ ಅಮಾನವೀಯಗೊಳಿಸುತ್ತದೆ. ನಿಜವಾಗಿಯೂ ಸ್ವತಂತ್ರರಾಗಲು, ಮನುಷ್ಯರಾಗಲು, ಶೋಷಿತ ಮತ್ತು ಶೋಷಕರಿಗೆ ಪರಸ್ಪರರ ಅಗತ್ಯವಿದೆ. ನಾವು ಸಹಬಾಳ್ವೆಯಿಂದ ಮಾತ್ರವೇ, ಸಮುದಾಯವಾಗಿ ಮಾತ್ರವೇ, ಶಾಂತಿಯಿಂದ ಮಾತ್ರವೇ ುನುಷ್ಯರಾಗಲು, ಮನುಷ್ಯರಾಗಿ ಉಳಿಯಲು ಸಾಧ್ಯ’’ ಎಂದವರು ಸಾರುತ್ತಿದ್ದರು. ನೊಬೆಲ್ ಪ್ರಶಸ್ತಿ ಮತ್ತು 1986ರಲ್ಲಿ ಅವರು ಕೇಪ್‌ಟೌನಿನಲ್ಲಿ ಆಫ್ರಿಕಾದ ಮೊದಲ ಕರಿಯ ಆರ್ಚ್ ಬಿಷಪ್ ಆದ ಬಳಿಕ ಅವರ ಹೋರಾಟಕ್ಕೆ ಇನ್ನಷ್ಟು ಬಲಬಂತು.

ಸ್ವಾತಂತ್ರ್ಯದ ನಂತರದ ತಳಮಳ
ಸ್ವಾತಂತ್ರ್ಯ ಸಿಕ್ಕಿ, ಚುನಾವಣೆಗಳು ನಡೆದು, ಎಎನ್‌ಸಿ ಗೆದ್ದು ನೆಲ್ಸನ್ ಮಂಡೇಲಾ ಅಧ್ಯಕ್ಷರಾಗಿ ಒಂದು ವರ್ಷದ ಬಳಿಕ, ಅಂದರೆ, 1995ರಲ್ಲಿ ಅವರಿಗೆ ಮೇಲೆ ಹೇಳಿದ ಮಾತುಗಳನ್ನು ವಾಸ್ತವದಲ್ಲಿ ಪರೀಕ್ಷೆಗೆ ಒಳಪಡಿಸುವ ಅವಕಾಶ ಸಿಕ್ಕಿತು. ಹೊಸದಾಗಿ ನೇಮಕವಾದ ಟ್ರೂತ್ ಆ್ಯಂಡ್ ರಿಕನ್ಸೈಲೇಷನ್ ಕಮಿಟಿ (ಟಿಆರ್‌ಸಿ)ಯ ಅಧ್ಯಕ್ಷರಾಗಿ ಟುಟು ನೇಮಕಗೊಂಡರು. ಆದ ಐತಿಹಾಸಿಕ ಗಾಯಗಳನ್ನು ಗುಣಪಡಿಸುವ ಮತ್ತು ‘‘ಕಾಮನಬಿಲ್ಲು ದೇಶ’’ದ ಏಳು ಬಣ್ಣಗಳನ್ನು ಜೊತೆಗೆ ತರುವ ಕೆಲಸ. ಅವರ ಕೆಲಸವು ಟೀಕೆಗೆ ಒಳಗಾದುದು ಹೀಗೆಯೇ. ಅವರು ಶಾಂತಿಗೆ ಹೆಚ್ಚು ಒತ್ತುಕೊಟ್ಟು ಪ್ರತೀಕಾರವನ್ನು ಕಡೆಗಣಿಸುತ್ತಿದ್ದಾರೆ ಎಂಬುದೇ ಅವರ ಮೇಲಿದ್ದ ಆರೋಪ. ಇದೇ ಆರೋಪವನ್ನು ಭಾರತೀಯ ಬಲಪಂಥೀಯರು ಮಾಡಿ ಗಾಂಧಿಯನ್ನು ಕೊಂದದ್ದನ್ನು ಇಲ್ಲಿ ನೆನಪಿಸುವುದು ಅಪ್ರಸ್ತುತವೇನಲ್ಲ. ವಿಶೇಷವೆಂದರೆ, ವರ್ಣಭೇದ ಕಾಲದಲ್ಲಿ ಹಿಂಸಾಚಾರದ ಸರಣಿಯನ್ನೇ ನಡೆಸಿದ್ದ ಬಿಳಿಯ ತೀವ್ರ ಬಲಪಂಥೀಯರನೇಕರಿಗೆ, ಸಮಿತಿಯ ಶಿಫಾರಸಿನ ಹೊರತಾಗಿಯೂ ಎಎನ್‌ಸಿ ಸರಕಾರವೇ ಇದ್ದರೂ ಇನ್ನೂ ಶಿಕ್ಷೆ ಆಗಿಲ್ಲ ಎಂಬುದು.

ಸ್ವಾತಂತ್ರ್ಯದ ಬಳಿಕ, ಭಾರತಕ್ಕೆ ಆದದ್ದೇ ದಕ್ಷಿಣ ಆಫ್ರಿಕಾಕ್ಕೆ ಅಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಜೊತೆಯಾಗಿದ್ದ ಹಿತಾಸಕ್ತಿ ಗುಂಪುಗಳು ದೂರದೂರಕ್ಕೆ ಸರಿಯಲು ಆರಂಭಿಸಿದವು. ಭಾರತದಲ್ಲಿ ಇಂದು ಇರುವ ಎಲ್ಲಾ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರೋಗಗಳು ದಕ್ಷಿಣ ಆಫ್ರಿಕಾದಲ್ಲಿಯೂ ಕಾಣಿಸಿಕೊಂಡು, ಜನರನ್ನು ಭ್ರಮನಿರಸನಗೊಳಿಸುತ್ತಾ ಬಂದಿವೆ. ಭಾರತದಲ್ಲಿ ಆದುದನ್ನು ನೋಡಲು ಗಾಂಧಿಯವರು ಬದುಕಿರಲಿಲ್ಲ. ಸ್ವಾತಂತ್ರ್ಯ ಬಂದ ಎರಡೂವರೆ ತಿಂಗಳಲ್ಲೇ ಅವರನ್ನು ಕೊಲ್ಲಲಾಯಿತು. ಆದರೆ, ಮಂಡೇಲಾ ಸಾವಿನ ಬಳಿಕ ಕಾಮನಬಿಲ್ಲಿನ ಬಣ್ಣಗಳು ಕರಗುತ್ತಾ ಬರುವುದನ್ನು ಟುಟು ಹಲವು ವರ್ಷಗಳ ಕಾಲ ನೋಡುತ್ತಾ ಇರಬೇಕಾಯಿತು. ಆದರೆ ಅವರು ಸುಮ್ಮನೇ ಕುಳಿತುಕೊಳ್ಳುವ ಜಾಯಮಾನದವರಲ್ಲ.

‘‘ದಕ್ಷಿಣ ಆಫ್ರಿಕಾದಲ್ಲಿ ಶಾಂತಿಯಿಲ್ಲ. ಅಲ್ಲಿ ಶಾಂತಿಯಿಲ್ಲವೇಕೆಂದರೆ, ಅಲ್ಲಿ ನ್ಯಾಯವಿಲ್ಲ. ಈ ಸುಂದರ ನಾಡಿನ ಎಲ್ಲಾ ನಿವಾಸಿಗಳಿಗೆ ಮೊದಲಿಗೆ ನ್ಯಾಯ ಸಿಗುವ ತನಕ ಶಾಂತಿ ಮತ್ತು ಭದ್ರತೆ ಸಾಧ್ಯವಿಲ್ಲ’’ ಎಂದು ಅವರು ನೊಬೆಲ್ ಪ್ರಶಸ್ತಿ ಸ್ವೀಕರಿಸುತ್ತಾ ಹೇಳಿದ್ದರು. ತನ್ನ ಈ ಕನಸು ಸ್ವಾತಂತ್ರ್ಯದ ಬಳಿಕವೂ ನನಸಾಗದೆ ಇರುವುದನ್ನು ನೋಡಿ ಅವರಿಗೆ ಬೇಸರವಾಗಿರಬಹುದು. ಆದರೆ, ಅವರು 1990ರ ದಶಕದ ಮಧ್ಯ ಭಾಗದಿಂದಲೂ ದಣಿವರಿಯದಂತೆ ಟೀಕಿಸುತ್ತಾ, ಇನ್ನೂ ಚೆನ್ನಾಗಿ ಮಾಡಿ ಎಂದು ಹುರಿದುಂಬಿಸುತ್ತಾ ಬಂದಿದ್ದಾರೆ. ನೆಲ್ಸನ್ ಮಂಡೇಲಾ ಅವರನ್ನೂ ಟುಟು ಟೀಕಿಸದೇ ಬಿಟ್ಟಿರಲಿಲ್ಲ. ‘‘ನಾನು ಬಾಯಿ ಮುಚ್ಚಿಕೊಂಡಿರಬೇಕು ಎಂದು ಬಯಸುತ್ತೇನೆ. ಆದರೆ, ನನಗದಾಗದು ಮತ್ತು ನಾನು ಬಾಯಿ ಮುಚ್ಚುವುದೂ ಇಲ್ಲ!’’ ಎಂದವರು ಹೇಳುತ್ತಿದ್ದರು.

ವಿಘಟನೆಗೊಳ್ಳುತ್ತಿರುವ ದೇಶವೊಂದರಲ್ಲಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಭಾರತದಲ್ಲಿ ಇಂದು ಎಲ್ಲದಕ್ಕೂ ಗಾಂಧಿ, ನೆಹರೂರನ್ನು ಕೃತಘ್ನವಾಗಿ ದೂಷಿಸುವ ಜನರನ್ನು ನೋಡುತ್ತಿದ್ದೇವೆ. ಟುಟು ಆಡಳಿತವನ್ನು ಟೀಕಿಸುತ್ತಾರೆ ಎಂದು ಕೆಲವರು, ಅವರು ಆಡಳಿತದ ವಿರುದ್ಧ ಮಾತನಾಡುತ್ತಿಲ್ಲ ಎಂದು ಕೆಲವರಿಗೆ ಅಸಮಾಧಾನವಿತ್ತು. ಅವರ ರಾಜಿ, ಶಾಂತಿ, ಮಾತುಕತೆಯ ಮಂತ್ರ ತೀವ್ರವಾದಿಗಳಿಗೆ, ಪ್ರತೀಕಾರವಾದಿಗಳಿಗೆ ಅಡ್ಡಿಯಾಗುತ್ತಿತ್ತು. ಇಷ್ಟು ಮಾತ್ರವಲ್ಲದೆ ಅವರು ಯಾವತ್ತೂ ಸಂಪ್ರದಾಯವಾದಿ ಕ್ರೈಸ್ತರಾಗಿರಲಿಲ್ಲ. 2010ರಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತರಾದರೂ, ಕೊನೆಯವರೆಗೆ ಸಕ್ರಿಯರಾಗಿದ್ದರು. 2013ರಲ್ಲಿ ಅವರು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಸಲಿಂಗಿಗಳ ಅಂತರ್‌ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿದ್ದರು. ದಯಾ ಮರಣಕ್ಕೆ ಒಪ್ಪಿಗೆ ನೀಡಬೇಕೆಂದು ಅವರು ಬ್ರಿಟಿಷ್ ಸಂಸತ್ತನ್ನು ಒತ್ತಾಯಿಸಿದ್ದರು. ಇದು ಚರ್ಚ್ ಮಟ್ಟಿಗೆ ತೀರಾ ಅಸಾಂಪ್ರದಾಯಿಕ. ಫೆಲೆಸ್ತೀನ್ ಸೇರಿದಂತೆ ವಿಶ್ವದ ದಮನಿತರ ಪರ ಅವರು ಧ್ವನಿ ಎತ್ತಿದ್ದರು.
2021 ಅಕ್ಟೋಬರ್ 7ರಂದು ಕೇಪ್‌ಟೌನ್‌ನ ಸೈಂಟ್ ಜಾರ್ಜ್ ಕೆಥೆಡ್ರಲ್‌ನಲ್ಲಿ ನಡೆದ ತನ್ನ 90ನೇ ಹುಟ್ಟುಹಬ್ಬ ಆಚರಣೆಯಲ್ಲಿ ಗಾಲಿಕುರ್ಚಿಯಲ್ಲಿ ಕುಳಿತೇ ಭಾಗವಹಿಸಿದ್ದರು. ಡಿಸೆಂಬರ್ 26ರಂದು ಮಾತು ಮುಗಿಸಿದರು. ಆದರೆ, ಅವರ ಮಾತುಗಳ ಧ್ವನಿ ಅವರ ಇಚ್ಛೆಯಂತೆ ಕೇಳಿಸುತ್ತಲೇ ಇರುವುದು. ಈ ಹಿನ್ನೆಲೆಯಲ್ಲಿ, ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿ ಮತ್ತು ಮೇಲುಕೀಳಿನ ಧರ್ಮರಾಜಕಾರಣದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಡೆಸ್ಮಂಡ್ ಟುಟು ಅವರ ವಿಚಾರಗಳನ್ನು, ದಮನದ ವಿರುದ್ಧದ ಅವರ ಹೋರಾಟಗಳನ್ನು ನಾವು ನೋಡಬೇಕಾಗಿದೆ.


ಟುಟು, ಗಾಂಧಿ, ಅಹಿಂಸೆ...
ತಾವು ಗಾಂಧಿಯವರ ವಿಚಾರಗಳಿಂದ ಪ್ರಭಾವಿತರಾಗಿರುವುದಾಗಿ ನೆಲ್ಸನ್ ಮಂಡೇಲಾರಂತೆ ಡೆಸ್ಮಂಡ್ ಟುಟು ಕೂಡಾ ಹೇಳುತ್ತಾ ಬಂದಿದ್ದಾರೆ. ಟುಟು ಕೂಡಾ ಅಹಿಂಸೆಯ ಪ್ರತಿಪಾದಕರೇ ಆಗಿದ್ದರು. ಆದರೆ, ಇವರಿಬ್ಬರನ್ನು ಹೋಲಿಸಿದರೆ ಕೆಲವು ಕುತೂಹಲಕಾರಿ ವಿಷಯಗಳು ವೈರುಧ್ಯಗಳು ಬೆಳಕಿಗೆ ಬರುತ್ತವೆ.
ಗಾಂಧಿ ಜಾತಿಭೇದವನ್ನು ಒಪ್ಪುವ ಹಿಂದೂ ವೈಶ್ಯ ಕುಟುಂಬದಲ್ಲಿ ಹುಟ್ಟಿದರೆ, ಟುಟು ಎರಡು ಬುಡಕಟ್ಟುಗಳ ನಡುವಿನ, ಒಂದು ರೀತಿಯ ಅಂತರ್ಜಾತೀಯ ವಿವಾಹವಾದ ಕುಟುಂಬದಲ್ಲಿ ಹುಟ್ಟಿದವರು. ಗಾಂಧೀಜಿ ಸಮಾನತೆಯುಳ್ಳ ವರ್ಣಾಶ್ರಮ ಧರ್ಮವನ್ನು ಸಮರ್ಥಿಸುವಾಗ, ಟುಟು ಎಲ್ಲರೂ ಸಮಾನವಾಗಿರುವ, ಕರಿಯ-ಬಿಳಿಯರ ಸಹಬಾಳ್ವೆಯ ‘ಕಾಮನಬಿಲ್ಲು ದೇಶ’ದ ಪ್ರತಿಪಾದನೆ ಮಾಡಿದುದಕ್ಕೆ ಈ ಹಿನ್ನೆಲೆ ಕಾರಣವಿರಲೂ ಬಹುದು.
ಇಬ್ಬರೂ ಇಂಗ್ಲೆಂಡಿನಲ್ಲಿ ಉನ್ನತ ಶಿಕ್ಷಣ ಪಡೆದು, ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ಅಲ್ಲಿಯೇ ಅನುಭವಿಸಿ ಕಲಿತವರು. ಗಾಂಧಿಯವರು ಧಾರ್ಮಿಕರಾಗಿದ್ದರೂ ಅವರ ಅಹಿಂಸಾ ತತ್ವವು ಧರ್ಮದಿಂದ ಬಂದಿರದೆ, ಆತ್ಮಾವಲೋಕನದಿಂದ ಬಂದಿತ್ತು. ಟುಟು ಅವರ ಧರ್ಮವೇ ಅಹಿಂಸೆಯನ್ನು ಪ್ರತಿಪಾದಿಸುತ್ತಿತ್ತು. ವಿಪರ್ಯಾಸವೆಂದರೆ ಆಫ್ರಿಕಾದಲ್ಲಿ ಶೋಷಕ ಬಿಳಿಯರೂ ಕ್ರೈಸ್ತರೇ ಆಗಿದ್ದುದು. ಧರ್ಮವು ಅವರಲ್ಲಿ ಸಮಾನತೆಯನ್ನಾಗಲೀ, ಅಹಿಂಸೆಯನ್ನಾಗಲೀ ಪ್ರೇರೇಪಿಸಲಿಲ್ಲ.
ಭಾರತದಲ್ಲಿ ಯುದ್ಧದ, ಸಶಸ್ತ್ರ ದಂಗೆಗಳ ಇತಿಹಾಸವೇ ಇದ್ದರೂ, ಬಹುದೊಡ್ಡ ಸಂಖ್ಯೆಯಲ್ಲಿ ದಮನಿತರು, ಶತಮಾನಗಳಿಂದ ಸಹಿಷ್ಣುತೆ ಅಭ್ಯಾಸವಾದವರು, ಹಿಂಸೆಯ ಹಿನ್ನೆಲೆಯಿಲ್ಲದ ಶಾಂತಿಪ್ರಿಯ ಜನರಿದ್ದುದು ಗಾಂಧಿಯವರಿಗೆ ತಮ್ಮ ಅಹಿಂಸಾತ್ಮಕ ಹೋರಾಟವನ್ನು ಮುಂದುವರಿಸುವುದಕ್ಕೆ ಅನುಕೂಲವಾಯಿತು. ಆದರೆ, ಬುಡಕಟ್ಟುಗಳ ಸಂಪ್ರದಾಯಗಳು, ಮೂಢ ನಂಬಿಕೆಗಳು, ಅತ್ಯಂತ ಹಿಂಸಾತ್ಮಕ ಕಾದಾಟಗಳ ಹಿನ್ನೆಲೆ ಇರುವ ಆಫ್ರಿಕಾದಲ್ಲಿ ಎಎನ್‌ಸಿಗೆ ಅಹಿಂಸಾತ್ಮಕ ಹೋರಾಟ ನಡೆಸುವುದು ಸುಲಭವಾಗಿರಲಿಲ್ಲ ಮತ್ತು ಅದು ಅತ್ಯಂತ ದೊಡ್ಡ ಮಾನವ ಹತ್ಯಾಕಾಂಡವಾಗಿಯೂ ಬದಲಾಗುತ್ತಿತ್ತು. ಆದರೆ, ಅಹಿಂಸೆ ಮತ್ತು ಶಾಂತಿ ಪ್ರತಿಪಾದನೆಯ ಧರ್ಮದ ಮೂಲಕ ಟುಟು ಅವರು ಎಎನ್‌ಸಿ ಹಿಂಸಾತ್ಮಕವಾಗುವುದನ್ನು ತಡೆದರು ಎಂದರೆ, ತಪ್ಪೇನಿಲ್ಲ.

ಟುಟು ಅಹಿಂಸೆಯ ಪ್ರತಿಪಾದಕರಾಗಿದ್ದರೂ, ಎಎನ್‌ಸಿ ಗೆರಿಲ್ಲಾಗಳು ಸಾವಿಗೀಡಾದಾಗ, ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ, ಅಹಿಂಸೆಯನ್ನೇ ಪ್ರತಿಪಾದಿಸುತ್ತಿದ್ದರು. ಆದರೆ, ಗಾಂಧಿ ಭಗತ್ ಸಿಂಗ್ ಮತ್ತಿತರರು ಗಲ್ಲಿಗೇರಿದಾಗಲೂ ಅಹಿಂಸೆಯ ಕಠಿಣ ಹೃದಯಿಯಾಗಿ ಅವರ ಪರವಾಗಿ ಬ್ರಿಟಿಷರಲ್ಲಿ ಮಾತನಾಡದವರಾಗಿದ್ದರು. ಇಲ್ಲಿ ಟುಟು ಅವರ ಒಂದು ಮಾತನ್ನು ನಾವು ನೆನಪಿಸಬೇಕು: ‘‘ಶಾಂತಿ ಬೇಕೆಂದರೆ, ಗೆಳೆಯರ ಜೊತೆ ಅಲ್ಲ; ಶತ್ರುವಿನ ಜೊತೆ ಮಾತಾಡಬೇಕು.’’ ಈ ಕುರಿತು ನಾವೂ ಚಿಂತಿಸಬೇಕು


‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)