varthabharthi


ಸಂಪಾದಕೀಯ

​ಜಾತಿವಾದಿ ಕೊರೋನ

ವಾರ್ತಾ ಭಾರತಿ : 3 Jan, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೊರೋನ ದೇಶಾದ್ಯಂತ ಜನಸಾಮಾನ್ಯರ ಬದುಕನ್ನು ಹೈರಾಣಿಗಿಸಿರುವ ಹೊತ್ತಿನಲ್ಲಿ ಜಮ್ಮುವಿನ ಪ್ರಸಿದ್ಧ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 12 ಮಂದಿ ಮೃತರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸಂತ್ರಸ್ತರ ನೋವಿಗೆ ತಕ್ಷಣ ಸ್ಪಂದಿಸಿರುವ ಸರಕಾರ, ಮೃತರ ಕುಟುಂಬಕ್ಕೆ ಪರಿಹಾರವನ್ನು ಘೋಷಿಸಿದೆ. ಭಾರತದಲ್ಲಿ ಧರ್ಮ, ಜಾತಿ ಮತ್ತು ಕಾಲ್ತುಳಿತಗಳ ನಡುವೆ ಅವಿನಾಭಾವ ಸಂಬಂಧವಿದೆ. ಜಾತಿ, ಧರ್ಮದ ಹೆಸರಿನಲ್ಲಿ ದೇಶಾದ್ಯಂತ ಪ್ರತಿ ದಿನ ತಳಸ್ತರದ ಜನರನ್ನು ತುಳಿಯುವ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ತಲೆಯಿಂದ ಮತ್ತು ತೋಳಿನಿಂದ ಹುಟ್ಟಿದವರು ಕಾಲಿನಿಂದ ಹುಟ್ಟಿದವರನ್ನು ತುಳಿಯುವುದು ದೇವರೇ ನೀಡಿದ ಹಕ್ಕು ಎಂದು ನಂಬಿದವರ ಸಂಖ್ಯೆ ಈ ದೇಶದಲ್ಲಿ ದೊಡ್ಡದಿದೆ. ಈ ತುಳಿತಕ್ಕೆ ಸಿಕ್ಕು ಸಂತ್ರಸ್ತರಾದವರಿಗೆ ಸರಕಾರದ ಪರಿಹಾರ ಭಾಗ್ಯವಿರುವುದಿಲ್ಲ ಅಷ್ಟೇ.ಇದೇ ಸಂದರ್ಭದಲ್ಲಿ, ದೇಶದ ಹಲವು ಜಾತ್ರೆ, ಉತ್ಸವಗಳು ಕಾಲ್ತುಳಿತಗಳಲ್ಲಿ ಅಂತ್ಯವಾಗುವ ದುರಂತಗಳು ಪ್ರತಿ ವರ್ಷ ವರದಿಯಾಗುತ್ತವೆ. ದೇವಸ್ಥಾನಗಳ ಮಂಡಳಿಗಳು ಸೂಕ್ತ ಮುಂಜಾಗ್ರತೆಯಿಲ್ಲದೆ ಜನರನ್ವು ಸೇರಿಸುವುದರ ಪರಿಣಾಮವಾಗಿ ಈ ದುರಂತಗಳು ಸಂಭವಿಸುತ್ತವೆ.

ವಿಪರ್ಯಾಸವೆಂದರೆ, ಇದು ಕೊರೋನ ವಿಜೃಂಭಿಸುತ್ತಿರುವ ಕಾಲ. ಮದುವೆಯಲ್ಲಿ, ಮಾಲ್‌ಗಳಲ್ಲಿ ಜನ ಸೇರುವುದರ ಕುರಿತಂತೆ ಕಟ್ಟು ನಿಟ್ಟಿನ ಕಾನೂನನ್ನು ಸರಕಾರ ಜಾರಿಗೊಳಿಸುತ್ತಿದೆ. ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ಸರಕಾರ ಕಡಿವಾಣ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ವೈಷ್ಣೋದೇವಿ ಮಂದಿರದಲ್ಲಿ ಅಷ್ಟೊಂದು ಜನರು ನೆರೆಯಲು ಸರಕಾರ ಹೇಗೆ ಅನುಮತಿಸಿತು ಎನ್ನುವುದು ನಮ್ಮ ಮುಂದೆ ಇರುವ ಪ್ರಶ್ನೆಯಾಗಿದೆ. ಸರಕಾರದ ಮೂಗಿನ ಕೆಳಗೇ ನಡೆದಿರುವ ದುರಂತ ಇದಾಗಿರುವುದರಿಂದ, ಈ ಕಾಲ್ತುಳಿತಕ್ಕೆ ನಾವು ಸರಕಾರವನ್ನೇ ಹೊಣೆ ಮಾಡಬೇಕಾಗುತ್ತದೆ. ಕಾಲ್ತುಳಿತ ಸಂಭವಿಸದೇ ಇದ್ದಿದ್ದರೆ ವೈಷ್ಣೋದೇವಿಯ ಜನಸಂದಣಿ ಯಾರ ಅರಿವಿಗೂ ಬರುತ್ತಿರಲಿಲ್ಲ. ಕೊರೋನ ಕಾಲದಲ್ಲಿ ಇಷ್ಟೊಂದು ಜನರು ಒಂದೆಡೆ ಸೇರಲು ಸರಕಾರ ಹೇಗೆ ಅನುಮತಿ ನೀಡಿತು ಎನ್ನುವ ಪ್ರಶ್ನೆಯೂ ಮಹತ್ವದ್ದಾಗಿದೆ. ಕೊರೋನ ಕುರಿತಂತೆ ಸರಕಾರದ ದ್ವಂದ್ವ ನೀತಿ ಇದರಿಂದಾಗಿ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ, ಮುಖ್ಯಮಂತ್ರಿ ಬೊಮ್ಮಾಯಿಯವರು ‘ನಿರ್ಲಕ್ಷ ವಹಿಸಿದರೆ ಲಾಕ್‌ಡೌನ್ ಹೇರುತ್ತೇವೆ’ ಎಂದು ಬೆದರಿಕೆಯನ್ನು ಒಡ್ಡಿದ್ದಾರೆ. ಈಗಾಗಲೇ ರಾತ್ರಿ ಹತ್ತುಗಂಟೆಯ ಬಳಿಕ ರಾಜ್ಯದಲ್ಲಿ ಕರ್ಫ್ಯೂವನ್ನು ಹೇರಲಾಗಿದೆ. ಬೆಳಗ್ಗಿನಿಂದ ರಾತ್ರಿ ಹತ್ತು ಗಂಟೆಯವರೆಗೆ ಓಡಾಡಿದಾಗ ಇಲ್ಲದ ಕೊರೋನ, ರಾತ್ರಿ ಹತ್ತುಗಂಟೆಯ ಬಳಿಕ ಏಕಾಏಕಿ ಕಾಣಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗೆ ಸರಕಾರದ ಬಳಿಯೂ ಉತ್ತರವಿಲ್ಲ. ರಾತ್ರಿ ಕರ್ಫ್ಯೂ ಹೇರಿಕೆ ಅವೈಜ್ಞಾನಿಕ ಎಂದು ಈಗಾಗಲೇ ವಿಜ್ಞಾನಿಗಳು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದರೂ, ಸರಕಾರ ಕಿವುಡಾಗಿದೆ. ಇಂದಿಗೂ ನಾಡಿನ ಖ್ಯಾತ, ಶ್ರೀಮಂತ ಪುಣ್ಯ ಕ್ಷೇತ್ರಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವುದಕ್ಕೆ ಯಾವುದೇ ಅಡ್ಡಿಯಿಲ್ಲ. ರಾಜಕಾರಣಿಗಳ ಎಲ್ಲ ಕಾರ್ಯಕ್ರಮಗಳೂ ಸಾಂಗವಾಗಿ ನಡೆಯುತ್ತಿವೆ. ಬಳಿಕ ಅದೇ ಸರಕಾರ, ‘ನಿರ್ಲಕ್ಷ ವಹಿಸಿದರೆ ಲಾಕ್‌ಡೌನ್ ಹೇರುತ್ತೇವೆ’ ಎಂದು ಮತ್ತೆ ಜನಸಾಮಾನ್ಯರಿಗೆ ಬೆದರಿಕೆ ಒಡ್ಡುತ್ತದೆ.

ಜನಸಾಮಾನ್ಯರು ನಾಡಿನ ಗಣ್ಯರನ್ನು ತಮ್ಮ ಚಟುವಟಿಕೆಗಳಿಗೆ ಮಾದರಿಯಾಗಿಟ್ಟುಕೊಳ್ಳುತ್ತಾರೆ ಎನ್ನುವುದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮರೆತಂತಿದೆ. ಚುನಾವಣೆಯ ಕಾರ್ಯಕ್ರಮಗಳ ಹೆಸರಿನಲ್ಲಿ ರಾಜಕಾರಣಿಗಳು ಜನ ಸೇರಿಸುವುದರಿಂದ ಯಾವುದೇ ತೊಂದರೆ ಇಲ್ಲ ಎಂದಾದರೆ, ನಮ್ಮ ದೈನಂದಿನ ಬದುಕಿನ ಕಾರ್ಯಕ್ರಮಗಳಲ್ಲಿ ಯಾಕೆ ಜನ ಸೇರಿಸಬಾರದು ಎಂದು ಜನರು ತಮಗೆ ತಾವೇ ಕೇಳಿಕೊಂಡರೆ ಅದಕ್ಕೆ ಯಾರು ಹೊಣೆ? ಅವರನ್ನು ದಾರಿ ತಪ್ಪಿಸುತ್ತಿರುವವರು, ನಾಡಿನ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು. ಇವರಿಗೆ ಸರಕಾರ ಬೆದರಿಕೆ ಹಾಕಬೇಕಾಗಿದೆ. ಇವರ ನಿರ್ಲಕ್ಷಕ್ಕಾಗಿ ಜನಸಾಮಾನ್ಯರಿಗೆ ಲಾಕ್‌ಡೌನ್ ನ ಶಿಕ್ಷೆ ನೀಡುವುದು ಎಷ್ಟರಮಟ್ಟಿಗೆ ಸರಿ? ಈ ದೇಶದ ಬೃಹತ್ ಪುಣ್ಯ ಕ್ಷೇತ್ರಗಳಲ್ಲಿ ವ್ಯವಹಾರಗಳು ಎಂದಿನಂತೆಯೇ ನಡೆಯುತ್ತಿರುವಾಗ, ಮಾಲ್‌ಗಳಲ್ಲಿ, ಚಿತ್ರಮಂದಿರಗಳಲ್ಲಿ ಯಾಕೆ ವ್ಯವಹಾರಗಳು ನಡೆಯಬಾರದು? ಹೊಸ ವರ್ಷದ ಹೆಸರಿನಲ್ಲಿ ಶ್ರೀಮಂತ ಕುಳಗಳು ಬೃಹತ್ ಹಾಲ್‌ಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಸುತ್ತಿರುವಾಗ ಅದಕ್ಕೆ ತಕರಾರು ತೆಗೆಯದ ಸರಕಾರ, ಕೊರಗರ ಕಾಲನಿಗೆ ನುಗ್ಗಿ, ಅಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಸುತ್ತಿರುವ ಜನರ ಮೇಲೆ ಏಕಾಏಕಿ ಲಾಠಿ ಚಾರ್ಜ್ ನಡೆಸುವುದು ಯಾವ ನ್ಯಾಯ?

ವೈಷ್ಣೋದೇವಿ ಮಂದಿರದ ಕಾಲ್ತುಳಿತಕ್ಕೆ ರಾಜಕಾರಣಿಗಳು ಸೇರಿದಂತೆ ಇಡೀ ದೇಶ ಮರುಗಿದೆ. ಆದರೆ ಇದೇ ಸಂದರ್ಭದಲ್ಲಿ, ಕೊರಗರ ಕಾಲನಿಯಲ್ಲಿ ಪೊಲೀಸರ ಕಾಲ್ತುಳಿತಕ್ಕೆ ಸಿಲುಕಿದವರ ಬಗ್ಗೆ ಯಾರಿಗೂ ಅನುಕಂಪವಿಲ್ಲ. ಇಲ್ಲಿ ಸಂತ್ರಸ್ತರ ಮೇಲೆಯೇ ಮೊಕದ್ದಮೆ ದಾಖಲಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರವನ್ನು ಒಂದೆಡೆ ಘೋಷಿಸುತ್ತಾ, ಮಗದೊಂದೆಡೆ ತನಿಖೆಗೂ ಗೃಹ ಸಚಿವರು ಆದೇಶ ನೀಡುತ್ತಾರೆ. ಸರಕಾರವೇ ಪೊಲೀಸ್ ದಾಳಿಗೆ ಈಡಾದವರನ್ನು ಸಂತ್ರಸ್ತರೆಂದು ಘೋಷಿಸಿ ಅವರಿಗೆ ಪರಿಹಾರ ನೀಡಿದ ಬಳಿಕ, ಮತ್ತೆ ಯಾವುದರ ಕುರಿತಂತೆ ತನಿಖೆ ನಡೆಸಲು ಆದೇಶಿಸಿದೆ? ಒಂದೆಡೆ ಸಂತ್ರಸ್ತರ ಮೇಲೆ ಎಫ್‌ಐಆರ್ ದಾಖಲಿಸುವುದು, ಮಗದೊಂದೆಡೆ ಪರಿಹಾರ ಘೋಷಿಸುವುದು ಈ ದ್ವಂದ್ವ ಯಾಕೆ? ಇಂದು ಕೊರಗ ಸಂಘಟನೆಗಳು ‘ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಿ’ ಎಂದು ಒತ್ತಾಯಿಸುವ ಬದಲು ‘ಕೊರಗರ ಮೇಲಿನ ಎಫ್‌ಐಆರ್ ವಜಾಗೊಳಿಸಿ’ ಎಂದು ಒತ್ತಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸರಕಾರ ಕೊರಗರನ್ನು ಸಂಪೂರ್ಣವಾಗಿ ನಿರಪರಾಧಿಗಳು ಎಂದು ಒಪ್ಪಿಕೊಂಡಿಲ್ಲ. ಪರಿಹಾರವನ್ನು ನೀಡಿದಂತೆ ಮಾಡಿ, ಅವರನ್ನು ತಾತ್ಕಾಲಿಕವಾಗಿ ಬಾಯಿ ಮುಚ್ಚಿಸಿದೆ ಅಷ್ಟೇ. ಒಟ್ಟಿನಲ್ಲಿ ಕೊರೋನ ಕೂಡ ಜಾತಿವಾದಿ ಎನ್ನುವುದು ಸಾಬೀತಾಗಿದೆ. ಮೇಲ್‌ವರ್ಣೀಯರ ದೇವಸ್ಥಾನಗಳಲ್ಲಿ, ಅವರ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ಕೊರೋನ ಬಡವರ, ಶೋಷಿತ ಸಮುದಾಯದವರ ಸಮಾರಂಭಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ರಾಜಕಾರಣಿಗಳಿಗೆ, ಧಾರ್ಮಿಕ ಮುಖಂಡರಿಗೆ ವಿನಾಯಿತಿಯನ್ನು ನೀಡಿ, ಶ್ರೀಸಾಮಾನ್ಯರ ಮೇಲಷ್ಟೇ ಎರಗುವ ಕೊರೋನ, ಭಾರತದಲ್ಲಿ ಅತ್ಯಂತ ಭೀಕರವಾಗಿ ರೂಪಾಂತರ ಮಾತ್ರವಲ್ಲ, ಮತಾಂತರಗೊಂಡಿದೆ. ಮೊದಲು ತಬ್ಬೀಗಿ ಪಂಥವನ್ನು ಸ್ವೀಕರಿಸಿದ್ದ ಈ ಕೊರೋನ ಈಗ ಹಿಂದುತ್ವವಾದಿಗಳ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾ, ಮಾತೃ ಧರ್ಮಕ್ಕೆ ಮತಾಂತರಗೊಂಡಿದೆ ಮತ್ತು ಅದು ಈಗ ಬಡವರನ್ನು, ಶೋಷಿತ ಸಮುದಾಯವನ್ನು ತನ್ನ ಕಾಲ ಕೆಳಗೆ ಹಾಕಿ ತುಳಿಯುತ್ತಿದೆೆ. ಆದುದರಿಂದ, ಕೊರೋನದ ವಿರುದ್ಧ ಜಾತಿ ದೌರ್ಜನ್ಯ ಕಾಯ್ದೆಯನ್ನು ಹೇಗೆ ಪರಿಣಾಮಕಾರಿಯಾಗಿ ಅಳವಡಿಸಬಹುದು ಎನ್ನುವುದರ ಬಗ್ಗೆ ಸಂವಿಧಾನ ತಜ್ಞರು ಯೋಚನೆ ಮಾಡಬೇಕಾಗಿದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)